ರಾಜ್ಯಾದ್ಯಂತ ಇಂದು ‘ರಾಜಕಾರಣಿ’ ಎಂಬ ಕಾಲರ್ ಏರಿಸಿಕೊಳ್ಳುವ ಮೊದಲ ಮೆಟ್ಟಿಲು ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಲೋಕಲ್ ಫೈಟ್ ನಲ್ಲಿ ಗೆದ್ದವರು ಬೀಗಿದರೆ, ಸೋತವರು ಬಾಗಿದ ವರದಿಗಳು ಎಲ್ಲೆಡೆಯಿಂದ ಬರುತ್ತಿವೆ. ಸೋಲು-ಗೆಲುವಿನ ಹತಾಶೆ- ಸಂಭ್ರಮಗಳ ನಡುವೆ ಸಂಭ್ರಮಾಚರಣೆ, ಮಾರಾಮಾರಿಗಳೂ ವರದಿಯಾಗುತ್ತಿವೆ. ಹಳ್ಳಿ ಹೈದರ ನೇರ ಹಣಾಹಣಿಯ ಈ ಚುನಾವಣೆಯಲ್ಲಿ ಇಂತಹ ಪ್ರತಿಷ್ಠೆ- ಪ್ರಲಾಪಗಳು ಸಹಜವೇ.
ಆದರೆ, ಈ ಬಾರಿ ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಈ ಲೋಕಲ್ ಫೈಟ್ ಹಲವು ಕಾರಣಗಳಿಂದಾಗಿ ಹಿಂದೆಂದಿಗಿಂತಲೂ ಭಿನ್ನ. ಪಕ್ಷಾತೀತ ಚುನಾವಣೆ ಎಂಬ ನಿಯಮವಿದ್ದರೂ, ರೀತಿ-ರಿವಾಜುಗಳನ್ನು ಮೀರಿ ಈ ಬಾರಿ ಹಿಂದಿಗಿಂತ ಹೆಚ್ಚು ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು. ಬ್ಯಾಲೆಟ್ ಪ್ರತಿಯಲ್ಲಿ ನೇರ ಪಕ್ಷದ ಚಿಹ್ನೆ ಬಳಕೆಯಾಗಲಿಲ್ಲ ಎಂಬುದೊಂದು ಹೊರತುಪಡಿಸಿ ಉಳಿದಂತೆ ಬಹುತೇಕ ಅಭ್ಯರ್ಥಿಗಳು ಪ್ರಚಾರದುದ್ದಕ್ಕೂ ಆಯಾ ಪಕ್ಷಗಳ ಎಲ್ಲಾ ರೀತಿಯ ಪ್ರಭಾವವನ್ನೂ ಬಳಸಿಕೊಳ್ಳಲಾಗಿತ್ತು. ಅಧಿಕಾರದಲ್ಲಿರುವ ಪಕ್ಷವಂತೂ ಕಣದಲ್ಲಿರುವ ತನ್ನ ಪಕ್ಷದ ಕಾರ್ಯಕರ್ತರಿಗೆ ವಿಧಾನಸಭಾ ಚುನಾವಣೆಯಲ್ಲಿ ನೀಡುವಂತೆ ಪಾರ್ಟಿ ಫಂಡ್ ನೀಡಿದೆ ಎಂಬ ಮಾತುಗಳು ಗುಟ್ಟೇನಾಗಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಹಣ, ಹೆಂಡ, ಮಾಂಸವಷ್ಟೇ ಅಲ್ಲದೆ, ಈ ಬಾರಿಯ ವಿಶೇಷವೆಂದರೆ ಭಾರೀ ಪ್ರಮಾಣದಲ್ಲಿ ಚಿನ್ನಾಭರಣ, ಪಾತ್ರೆ, ಕುಕ್ಕರ್, ಸೀರೆ ಮುಂತಾದ ವಸ್ತುಗಳು ಹಂಚಿಕೆಯಾಗಿವೆ. ಪ್ರಮುಖವಾಗಿ ತೀವ್ರ ಹಣಾಹಣಿಯ ಕ್ಷೇತ್ರಗಳಲ್ಲಿ ವಾರಗಟ್ಟಲೆ ನಿತ್ಯ ಚಿಕನ್ ಅಥವಾ ಮಟನ್ ಮನೆಮನೆಗೆ ಸರಬರಾಜಾಗಿದೆ. ಇಲ್ಲವೇ ಚಿನ್ನದ ಮೂಗುಬೊಟ್ಟು, ಉಂಗುರಗಳನ್ನು ನೀಡಲಾಗಿದೆ. ಮತ್ತೆ ಕೆಲವರು ಚಿನ್ನವನ್ನೇ ಕೊಡದಿದ್ದರೂ, ಕುಕ್ಕರ್, ಸ್ಟವ್, ಮಿಕ್ಸಿ ಮುಂತಾದ ಸರಕು, ಸೀರೆ- ಪ್ಯಾಂಟು ಮುಂತಾದ ವಸ್ತ್ರಗಳನ್ನೂ ನೀಡಿ ಮತದಾರರ ಆರ್ಶೀವಾದ ಪಡೆದಿದ್ದಾರೆ!
ಕೆಲವು ಕ್ಷೇತ್ರಗಳಲ್ಲಿ ಹಣ ಹಂಚಿಕೆಯ ವಿಷಯದಲ್ಲಿ ಪರಸ್ಪರ ಪೈಪೋಟಿಗೆ ಬಿದ್ದು, ಅಭ್ಯರ್ಥಿಗಳು ಪ್ರತಿ ಮತಕ್ಕೆ ಎರಡು ಸಾವಿರದಿಂದ ಐದು ಸಾವಿರ ರೂಪಾಯಿವರೆಗೆ ಹಂಚಿದ ಪ್ರಕರಣಗಳೂ ಇವೆ. ಅದರಲ್ಲೂ ಪಕ್ಷದ ಕಡೆಯಿಂದ ಪಾರ್ಟಿ ಫಂಡ್ ಪಡೆದ ಅಭ್ಯರ್ಥಿಗಳು ಮತ್ತು ಅವರ ಎದುರಾಳಿಗಳ ನಡುವಿನ ತೀವ್ರ ಹಣಾಹಣಿಯ ಕ್ಷೇತ್ರಗಳಲ್ಲಂತೂ ಇಂತಹ ಮೇಲಾಟ ಜೋರಾಗಿಯೇ ನಡೆದಿದೆ. ಜೊತೆಗೆ ಎದುರಾಳಿ ಅಭ್ಯರ್ಥಿ ಮೂಗುಬೊಟ್ಟು ನೀಡಿ ಮಹಿಳಾ ಮತದಾರರಿಗೆ ಆಮಿಷವೊಡ್ಡಿದರೆ, ಅವರ ಮನೆಯ ಗಂಡಸರಿಗೆ ಉಂಗುರದ ಪ್ರತಿ-ಆಮಿಷವೊಡ್ಡಿ ಹೆಂಗಸರ ಮೇಲೆ ಗಂಡಸರ ಪ್ರಭಾವ ಬೀರಿಸುವ ಕುತೂಹಕರ ಪ್ರಯತ್ನಗಳೂ ನಡೆದಿವೆ.
ಹಾಗೇ ಒಬ್ಬರು ಕುಕ್ಕರ್, ಸ್ಟವ್, ಮಿಕ್ಸಿ ನೀಡಿ ಮನೆಯ ಮಹಿಳಾ ಮತದಾರರ ಕೆಲಸ ಕಡಿಮೆ ಮಾಡಿಸುವ ಮೂಲಕ ಅವರ ಮತ ಬುಟ್ಟಿಗೆ ಹಾಕಿಕೊಳ್ಳುವ ತಂತ್ರ ಹೂಡಿದರೆ, ಅದಕ್ಕೆ ಪ್ರತಿಯಾಗಿ ಮತ್ತೊಬ್ಬ ಅಭ್ಯರ್ಥಿ ಗಂಡಸರಿಗೆ ವಾರಗಟ್ಟಲೆ ನಿತ್ಯ ಮಾಂಸದೂಟ, ಕಬಾಬ್ಗೆ ಚಿಕನ್ ಪ್ಯಾಕೆಟ್ ಸರಬರಾಜು ಮಾಡಿದ ಪ್ರಸಂಗಗಳೂ ಇವೆ. ಹಾಗೇ ಮಗದೊಬ್ಬ ಅಭ್ಯರ್ಥಿ ‘ಊಟ ನಿಮ್ದು, ಎಣ್ಣೆ ನಮ್ದು’ ಎಂದು ಕುರಿ ಮಾಂಸ, ಕಬಾಬ್ ಕೋಳಿಗೆ ಕಾಂಬಿನೇಷನ್ ‘ಕ್ವಾಟರ್’ ಸರಬರಾಜು ಮಾಡಿರುವುದೂ ಉಂಟು!
ಈ ಮಾಂಸ, ಎಣ್ಣೆ, ಮೂಗುತಿ, ಸೀರೆ, ಕುಕ್ಕರುಗಳ ವಹಿವಾಟಿಗೆ ಸಾಕ್ಷಿಗಳಾಗಿ ‘ಮಂಜುನಾಥ’ನ ಆಣೆ ಪ್ರಮಾಣ, ಅಗ್ನಿದಿವ್ಯಗಳಿಗೂ ಬರವೇನಿಲ್ಲ. ಮೂಗುತಿಯೊಂದಿಗೆ ದೇವರ ಪಟವನ್ನೂ ಹಿಡಿದುಬಂದು ‘ಮೂಗುತಿ ಕೊಟ್ಟವರಿಗೇ ಮತ’ ಎಂಬ ‘ಪದಗ್ರಹಣ’ವನ್ನೂ ಮಾಡಿಸಿಕೊಂಡಿದ್ದಾರೆ. ಕೊಟ್ಟ ಮೂಗುತಿ ಮತ್ತು ಉಂಗುರಗಳ ಅಸಲೀತನ ಪರೀಕ್ಷೆಗೊಳಗಾಗುವ ಮುನ್ನವೇ ಮತದಾನ ಮುಗಿದಿರಬೇಕು ಎಂಬ ಲೆಕ್ಕಾಚಾರದಲ್ಲಿ ಬಹಳಷ್ಟು ಅಭ್ಯರ್ಥಿಗಳು, ಮತದಾನದ ಹಿಂದಿನ ದಿನ ರಾತ್ರಿ ಕಾರ್ಯಾಚರಣೆಯವರೆಗೆ ಕಾದು, ಕೊನೇ ಕ್ಷಣದಲ್ಲಿ ಮತದಾರರಿಗೆ ಮೂಗುತಿ, ಉಂಗುರದ ಆಮಿಷ ತೊಡಿಸಿದ್ದಾರೆ! ಆದರೆ, ಹಣ-ಹೆಂಡ- ಮಾಂಸದ ವಿಷಯದಲ್ಲಿ ಇಂತಹ ಲೆಕ್ಕಾಚಾರಗಳು ನಡೆದಿಲ್ಲ. ಬದಲಾಗಿ ಆದಷ್ಟು ಮುಂಚಿತವಾಗಿ ಆ ಆಮಿಷಗಳನ್ನು ಒಡ್ಡಿ ಅಡ್ವಾನ್ಸ್ ಬುಕಿಂಗ್ ನಡೆದಿದೆ. ವಾರದ ಮುಂಚೆಯೇ ಮತಕ್ಕೆ ಐದು ನೂರರ ಗಾಂಧಿ ನೋಟು ನೀಡಿ ಬುಕಿಂಗ್ ಮಾಡಿ, ಚುನಾವಣಾ ಮುನ್ನಾ ದಿನ ಎದುರಾಳಿಯ ತಾಕತ್ತಿನ ಮೇಲೆ, ಅವನ ನೆಟ್ ವರ್ಕಿನ ಅಂದಾಜಿನ ಮೇಲೆ ಮತ್ತೆ ಹೆಚ್ಚುವರಿಯಾಗಿ ಐದು ನೂರು, ಸಾವಿರದ ಗರಿಗರಿ ನೋಟುಗಳನ್ನು ಚಲಾಯಿಸಲಾಗಿದೆ.

ಇಷ್ಟೆಲ್ಲಾ ಹಂಚಿದ ಮೇಲೆ, ಅಡ್ವಾನ್ಸ್ ಬುಕಿಂಗ್ ಮಾಡಿದ ಮೇಲೆ ಹಂಚಿದವರು ಸುಮ್ಮನೇ ಕೂರಲಾದೀತೆ? ಅದಕ್ಕಾಗಿ ಪಕ್ಕಾ ನಿಗದಿಯಾಗದೆ, ‘ಆರು ಕೊಟ್ಟರೆ ಅಕ್ಕನ ಕಡೆ, ಮೂರು ಕೊಟ್ಟರೆ ತಂಗಿ ಕಡೆ’ ಎಂಬ ಸ್ಥಿತಿಯಲ್ಲಿರುವ ಬೇಲಿ ಮೇಲಿನ ಮತಗಳನ್ನು ಕಾಯಲು ಕಾವಲು ಪಡೆಗಳನ್ನೂ ಕೆಲವರು ರಚಿಸಿ ಕಣ್ಗಾವಲಿಗೆ ಬಿಟ್ಟಿದ್ದರು. ತಮ್ಮಿಂದ ಹಣ, ಹೆಂಡ, ಮಾಂಸ, ಒಡವೆ-ವಸ್ತ್ರ ಪಡೆದೂ ಯಾವುದೇ ಕ್ಷಣದಲ್ಲಿ ‘ಪಕ್ಷಾಂತರ’ ಮಾಡಬಹುದು ಎಂಬ ‘ಅನುಮಾನಾಸ್ಪದ ಮತ’ಗಳನ್ನು ಕಾಯುವುದೇ ಆ ಕಣ್ಗಾವಲು ಪಡೆಗಳ ಕೆಲಸ. ನಾಲ್ಕಾರು ಹುಡುಗರ ತಂಡಗಳು ಅಂತಹ ಅನುಮಾನದ ಮತದಾರರ ಮನೆಗಳ ಮೇಲೆ ಹಗಲೂ ರಾತ್ರಿ ಕಣ್ಣಿಟ್ಟು, ಅವರ ಮನೆಗೆ ಮತ್ಯಾವ ಅಭ್ಯರ್ಥಿ- ಆತನ ಕಡೆಯುವರು ಹೋಗಿ ಬರುತ್ತಾರೆ? ಏನು ಮಾತುಕತೆ ನಡೆಯುತ್ತದೆ ಎಂಬುದನ್ನು ಅಂತಹ ಎದುರಾಳಿಗಳ ಪಡೆಯೊಳಗೇ ಸೇರಿಕೊಂಡ ‘ಕುರಿಮಂದೆಯೊಳಗಿನ ತೋಳಗಳು’ ಗೂಢಚಾರಿಕೆ ಮಾಡುತ್ತಿದ್ದವು!
ಮುಖ್ಯವಾಗಿ ಕರೋನಾ ಎಫೆಕ್ಟ್ ಕೂಡ ಈ ಬಾರಿಯ ಗ್ರಾಮ ಪಂಚಾಯ್ತಿ ಫೈಟ್ ಗೆ ಹೊಸ ಕಳೆ ತಂದಿತ್ತು. ದುಡಿಯಲು ಬೆಂಗಳೂರು, ಮುಂಬೈ, ಹೈದರಾಬಾದ್, ಮಂಗಳೂರು ಮುಂತಾದ ಕಡೆ ಹೋದವರು ಕಳೆದ ಲಾಕ್ ಡೌನ್ ವೇಳೆ ಹಳ್ಳಿಗಳಿಗೆ ವಾಪಸ್ಸಾಗಿದ್ದಾರೆ. ಹಾಗೆ ಬಂದವರ ಪೈಕಿ ಬಹುತೇಕರು ಹಳ್ಳಿಗಳಲ್ಲೇ ಬದುಕು ಕಂಡುಕೊಳ್ಳುವ ನಿರ್ಧಾರದೊಂದಿಗೆ ಕೃಷಿಯಲ್ಲಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಿದ್ದಾರೆ. ಹಾಗೇ ಪಂಚಾಯ್ತಿ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿಯೂ ಅಂಥವರು ಬಹಳಷ್ಟು ಮಂದಿ ಹಣ ಮತ್ತು ವ್ಯವಹಾರ ಪ್ರಜ್ಞೆಯ ಬಲದ ಮೇಲೆ ಕಣಕ್ಕೂ ಇಳಿದಿದ್ದರು. ಆ ಕಾರಣದಿಂದಲೂ ಈ ಬಾರಿಯ ಲೋಕಲ್ ಫೈಟ್ ಹಿಂದೆಂದಿಗಿಂತಲೂ ಹೆಚ್ಚು ರಂಗೇರಿತ್ತು.
ಜೊತೆಗೆ ಆಡಳಿತ ಪಕ್ಷ ಬಿಜೆಪಿ ಈ ಬಾರಿಯ ಪಂಚಾಯ್ತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿತ್ತು. ಪಕ್ಷದ ಹೈಕಮಾಂಡಿನಿಂದಲೇ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸಂಪೂರ್ಣ ಜಯಭೇರಿ ಭಾರಿಸುವಂತೆ ನೋಡಿಕೊಳ್ಳುವಂತೆ ಆರು ತಿಂಗಳ ಹಿಂದೆಯೇ ಹುಕುಂ ಬಂದಿತ್ತು. ಹಾಗಾಗಿ ಬಹುತೇಕ ಆರು ತಿಂಗಳಿಂದಲೇ ಬೂತ್ ಮಟ್ಟದ ವೀಕ್ಷಕರು, ಚುನಾವಣಾ ತಂತ್ರಗಾರರ ತಂಡಗಳು ಸಕ್ರಿಯವಾಗಿದ್ದವು. ಪ್ರತಿ ಮತದಾರರವಾರು ಪಟ್ಟಿ ಮಾಡಿಕೊಂಡು, ಅವರ ಒಲವು ನಿಲುವುಗಳೇನು? ಆ ಮತ ಸೆಳೆಯಲು ಯಾವ ಅಸ್ತ್ರ ಪರಿಣಾಮಕಾರಿ ಎಂಬ ವಿಶ್ಲೇಷಣೆಗಳು ನಡೆದಿದ್ದವು. ಆ ಪ್ರಕಾರವೇ ಗೆಲ್ಲುವ ಸಾಧ್ಯತೆ ಇರುವ ಆದರೆ, ಎದುರಾಳಿಗಳ ಪೈಪೋಟಿ ತೀವ್ರ ಇರುವ ಕಡೆ ಪಾರ್ಟಿ ಫಂಡ್ ಕೂಡ ನೀಡಿ ದೊಡ್ಡ ಮಟ್ಟದ ಹಣದ ಹೊಳೆಯನ್ನೇ ಹರಿಸಲಾಗಿತ್ತು. ಸಹಜವಾಗೇ ಇದು ಪ್ರತಿಪಕ್ಷ ಬೆಂಬಲಿತ ಅಭ್ಯರ್ಥಿಗಳೂ ಹಣ ಚೆಲ್ಲದೇ ಗೆಲ್ಲಲಾಗದು ಎಂಬ ಭಾವನೆ ಮೂಡಿಸಿತ್ತು. ಹಾಗಾಗಿ ಅವರೂ ಪಕ್ಷದ ಬೆಂಬಲದೊಂದಿಗೆ, ಇಲ್ಲವೇ ತಮ್ಮದೇ ಕೈಯಿಂದ ಕರ್ಚು ಮಾಡಿ ಪೈಪೋಟಿ ನೀಡಿದ್ದಾರೆ.
ಮತ್ತೊಂದು ವಿಶೇಷವೆಂದರೆ; ಈ ಬಾರಿ ಪಂಚಾಯ್ತಿ ಚುನಾವಣಾ ಕಣದಲ್ಲಿ ಭಾರೀ ಸಂಖ್ಯೆಯಲ್ಲಿ ಯುವಕರು ಕಣಕ್ಕಿಳಿದಿರುವುದು. ಇತ್ತೀಚಿನ ವರ್ಷಗಳಲ್ಲಿ ರಾಜಕಾರಣ ಹಿರೀ ತಲೆಮಾರುಗಳಿಂದ ಕ್ರಮೇಣವಾಗಿ ಯುವ ಸಮೂಹಕ್ಕೆ ವರ್ಗಾವಣೆಯಾಗಿದ್ದು, ಅದರ ಪರಿಣಾಮವಾಗಿ ಗ್ರಾಮ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ 20-30 ವರ್ಷ ವಯೋಮಾನದ ಯುವ ಕಟ್ಟಾಳುಗಳು ದೊಡ್ಡ ಸದ್ದು ಮಾಡಿದ್ದಾರೆ. ದಶಕದ ಹಿಂದೆ ರಾಜಕಾರಣದಿಂದ ದೂರವೇ ಉಳಿಯಲು ಬಯಸುತ್ತಿದ್ದ ಬಹುತೇಕ ಯುವ ಸಮೂಹ, ಹೀಗೆ ದಿಢೀರನೇ ಸಕ್ರಿಯ ರಾಜಕಾರಣಕ್ಕೆ ಧುಮುಕಲು ಸಾಮಾಜಿಕ ಜಾಲತಾಣಗಳ ಕೊಡುಗೆ ದೊಡ್ಡದಿದೆ. ವಾಟ್ಸಪ್ ಮತ್ತು ಫೇಸ್ಬುಕ್ ಬಳಸಿಕೊಂಡು ರಾಜಕೀಯ ಪಕ್ಷಗಳು ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ತಯಾರಿಗಾಗಿ ಕಟ್ಟುವ ಸಾಮಾಜಿಕ ಜಾಲತಾಣ ಗುಂಪುಗಳು ಮತ್ತು ಆ ಗುಂಪುಗಳಲ್ಲಿ ನಡೆಯುವ ರಾಜಕೀಯ ಚರ್ಚೆಗಳು ಯುವ ಸಮೂಹದಲ್ಲಿ ರಾಜಕಾರಣದಲ್ಲಿ ಮೂಡಿಸಿರುವ ಅತಿ ಆಸಕ್ತಿಯ ಫಲಶೃತಿ ಇದು ಎಂದರೆ ತಪ್ಪಾಗಲಾರದು! ಆದರೆ, ಇಂತಹ ರಾಜಕೀಯ ಆಸಕ್ತಿ ಯುವ ಸಮೂಹ ಎಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲಿದೆ? ಗ್ರಾಮ ಸ್ವರಾಜ್ಯ ಕಟ್ಟುವ ನಿಟ್ಟಿನಲ್ಲಿ ಎಂತಹ ಪ್ರಯತ್ನ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಒಟ್ಟಾರೆ, ರಾಜ್ಯದ ಸುಮಾರು 72 ಸಾವಿರಕ್ಕೂ ಅಧಿಕ ಹಳ್ಳಿಗಳ ಬರೋಬ್ಬರಿ 6,004 ಗ್ರಾಮ ಪಂಚಾಯ್ತಿಗಳ ಪೈಕಿ 5,728 ಗ್ರಾಮ ಪಂಚಾಯ್ತಿಗಳ 82,616 ಸ್ಥಾನಗಳಿಗೆ ನಡೆದ ಎರಡು ಹಂತದ ಚುನಾವಣೆ, ಪಂಚಾಯ್ತಿ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೂರೂವರೆ ದಶಕಗಳಲ್ಲೇ ಕಾಣದ ರೀತಿಯಲ್ಲೇ ರಂಗೇರಿತ್ತು. ಇದೀಗ ರಾಜ್ಯಾದ್ಯಂತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವ ವರದಿಗಳು ಬರುತ್ತಿವೆ. ಅದು ಸಹಜ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಾತೀತವಾಗಿ ಚುನಾವಣೆ ನಡೆದರೂ, ಫಲಿತಾಂಶ ಹೊರಬೀಳುತ್ತಿದ್ದಂತೆ ಆಡಳಿತ ಪಕ್ಷದೊಂದಿಗೆ ಕೆಲವೊಮ್ಮೆ ತಾವಾಗಿಯೇ, ಮತ್ತೆ ಕೆಲವೊಮ್ಮೆ ಆಮಿಷ, ಒತ್ತಡಗಳಿಗೆ ಮಣಿದು ಗುರುತಿಸಿಕೊಳ್ಳುವುದು ಸಹಜ. ಹಾಗೇ ಆಡಳಿತ ಪಕ್ಷ ಕೂಡ ಗೆದ್ದೆತ್ತಿನ ಬಾಲ ಹಿಡಿದು ‘ಇದು ನಮ್ಮದೇ ಹೋರಿ’ ಎಂದು ಬೀಗುವುದು ಸಹಜ.