ಖಾಯಂ ನೇಮಕಾತಿಯ ಬೇಡಿಕೆ ಇಟ್ಟು KSRTC ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಮುಂಜಾನೆಯಿಂದ ಯಾವುದೇ ಸರ್ಕಾರಿ ಬಸ್ಗಳು ರಸ್ತೆಗಿಳಿಯಲಿಲ್ಲ. ಬಸ್ಸಿಗಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರು ನಂತರ ರೈಲ್ವೇಸ್ಟೇಷನ್ಗಳ ಕಡೆಗೆ ಮುಖಮಾಡಿದ್ದರು.
ಈ ವೇಳೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಶಿವಮೊಗ್ಗ ಮೂಲದ ಪ್ರಯಾಣಿಕರೊಬ್ಬರು, ತುರ್ತಾಗಿ ಊರಿಗೆ ಹೋಗಬೇಕಾಗಿದ್ದರೂ ಬಸ್ಸಿಲ್ಲದೇ ಸಾಕಷ್ಟು ಪರದಾಡುವಂತಾಗಿದೆ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಧ್ಯಾಹ್ನದ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಾರಿಗೆ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯೂ ನಡೆದಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಇತರ ನೌಕರರು, ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ.
ಶನಿವಾರ ಅಪರಾಹ್ನ ಮುಷ್ಕರದ ಕುರಿತು ಮಾತನಾಡಿರುವ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಭಾನುವಾರದಿಂದ ಖಾಸಗಿ ವಾಹನಗಳ ವ್ಯವಸ್ಥೆಯನ್ನು ಸರ್ಕಾರಿ ಬಸ್ಗಳ ಟಿಕೆಟ್ ದರದಲ್ಲಿ ಮಾಡಲಾಗುವುದು ಎಂದು ಹೇಳಿದ್ದಾರೆ.
“ಮುಷ್ಕರ ನಿರತ ನೌಕರರೊಂದಿಗೆ ಶನಿವಾರ ರಾತ್ರಿ 12 ಗಂಟೆಯವರೆಗೂ ಮಾತುಕತೆ ನಡೆಸಲು ಸಿದ್ದರಿದ್ದೇವೆ. ಮೊದಲು ಕೆಲಸಕ್ಕೆ ಹಾಜರಾಗಿ ನಂತರ ಮಾತುಕತೆಗೆ ಬರಲಿ. ನಿಮ್ಮ ಸಮಸ್ಯೆಗಳನ್ನು ಸರ್ಕಾರ ಸಹಾನಿಭೂತಿಯಿಂದ ಪರಿಗಣಿಸಲಿದೆ,” ಎಂದು ನೌಕರರಿಗೆ ಸಂದೇಶ ರವಾನಿಸಿದ್ದಾರೆ.
ಇನ್ನು ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕುರಿತು ಮಾತನಾಡಿರುವ ಸವದಿ ಅವರು, ಮುಖ್ಯಮಂತ್ರಿ ಸ್ಥಾನದ ಆಸೆಯಿಂದ ಎಲ್ಲಿ ಪ್ರತಿಭಟನೆ ನಡೆದರೂ ಹೋಗುತ್ತಿದ್ದಾರೆ. ಅವರು ರಾಜಕಾರಣ ಮಾಡುತ್ತಿರಲಿ. ನಾವು ಜನರ ಸಮಸ್ಯೆಗಳ ಕುರಿತು ಗಮನ ಹರಿಸುತ್ತೇವೆ,” ಎಂದು ಹೇಳಿದ್ದಾರೆ.