ರೈತರ ಅಸ್ತಿತ್ವವನ್ನೇ ಬೇರು ಸಮೇತ ಕಿತ್ತುಹಾಕುವ ಮೂರು ಜನದ್ರೋಹಿ ಕಾನೂನುಗಳನ್ನು ಜಾರಿಗೊಳಿಸಿ ದೇಶದ ಅನ್ನದಾತನಿಗೆ ಘೋರ ಅನ್ಯಾಯವೆಸಗಲಾಗಿದೆ. ಒಕ್ಕೂಟ ಸರ್ಕಾರ ಯಾವುದೇ ಸಬೂಬು ಹೇಳದೇ ಮೂರೂ ಕಾನೂನುಗಳನ್ನು ತಕ್ಷಣ ಹಿಂದಕ್ಕೆ ಪಡೆದು ರೈತರ ಹೋರಾಟಕ್ಕೆ ಶರಣಾಗಬೇಕು. ಅದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ, ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾಗಿರುವ ಟಿ ಎ ನಾರಾಯಣ ಗೌಡ ಅವರು ಹೇಳಿದ್ದಾರೆ.
“ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸರಿಯಾದ ಚರ್ಚೆಗೂ ಅವಕಾಶ ನೀಡದೇ, ವಿರೋಧಪಕ್ಷಗಳ ಹಕ್ಕುಗಳನ್ನು ಮೊಟಕುಗೊಳಿಸಿ ಅಸಾಂವಿಧಾನಿಕವಾಗಿ ಜಾರಿಗೊಳಿಸಿತು. ಹೀಗೆ ಕಾನೂನುಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸಿದ್ದು ದೇಶದ ಇತಿಹಾಸದಲ್ಲೇ ಇದೇ ಮೊದಲು. ದೇಶದ ರೈತರು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯಿಂದಾಗಿ. ಆದರೆ ಎಪಿಎಂಸಿಗಳನ್ನು ಕೇಂದ್ರ ಸರ್ಕಾರ ನಗಣ್ಯಗೊಳಿಸುವ, ಅದರ ಮೂಲಕ ನಾಶಪಡಿಸುವ ಉದ್ದೇಶ ಹೊಂದಿದೆ. ಖಾಸಗಿ ಮಂಡಿಗಳನ್ನು ತಂದು, ರೈತರನ್ನು ಮೊದಮೊದಲು ಆಕರ್ಷಿಸಿ ನಂತರ ಪಾತಾಳಕ್ಕೆ ತಳ್ಳುವ ಕಾಯ್ದೆಯಿದು,” ಎಂದು ಕೇಂದ್ರದ ನಿರ್ಧಾರವನ್ನು ಕರವೇ ಖಂಡಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಕ್ಕೂಟದ ರಾಜ್ಯ ಸರ್ಕಾರಗಳು ಎಪಿಎಂಸಿಗಳ ಮೂಲಕವೇ ರೈತರು ಬೆಳೆದ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುತ್ತಿದ್ದವು. ದೇಶದ ಬಡವರಿಗೆ ಆಹಾರ ಭದ್ರತಾ ಕಾಯ್ದೆಯಡಿ ಇದೇ ಬೆಳೆಯನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ನೀಡಲಾಗುತ್ತಿತ್ತು. ಹೊಸ ಕಾನೂನಿನಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ. ಇದರಿಂದ ಆಹಾರ ಭದ್ರತಾ ಕಾಯ್ದೆಯ ಮೂಲ ಉದ್ದೇಶವೇ ತಲೆಕೆಳಗಾಗಲಿದೆ. ಎಪಿಎಂಸಿಗಳು ರಾಜ್ಯ ಸರ್ಕಾರಗಳ ಅಧೀನದಲ್ಲಿದ್ದವು. ಬೆಳೆಗಾರರಿಗೆ ಮತ್ತು ವರ್ತಕರಿಗೆ ಸೆಸ್ ವಿಧಿಸುವ ಅಧಿಕಾರವೂ ರಾಜ್ಯ ಸರ್ಕಾರಗಳ ಬಳಿ ಇತ್ತು. ಖಾಸಗಿ ಮಂಡಿಗಳಿಗೆ ಚಾಲನೆ ನೀಡುವ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗುವುದು. ಒಕ್ಕೂಟ ವ್ಯವಸ್ಥೆಯನ್ನು ಇದು ಇನ್ನಷ್ಟು ಶಿಥಿಲಗೊಳಿಸಲಿದೆ, ಎಂದು ಅವರು ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಇನ್ನೊಂದು ಮರಣ ಶಾಸನ ಕಾಂಟ್ರಾಕ್ಟ್ ಫಾರ್ಮಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ. ಇದು ಅಕ್ಷರಶಃ ರೈತರ ಅಸ್ತಿತ್ವ, ಸ್ವಾಭಿಮಾನ ಮತ್ತು ಬದುಕನ್ನೇ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುವ ಕಾನೂನು. ತಮ್ಮ ನೆಲದಲ್ಲೇ ತಾವೇ ಯಾವುದೋ ಕಂಪೆನಿಗಳಿಗಾಗಿ ಕೆಲಸ ಮಾಡುವ ಕ್ರೂರ ವ್ಯವಸ್ಥೆಯನ್ನು ಇದು ಜಾರಿಗೊಳಿಸುತ್ತದೆ. ರೈತರ ಹಿಡುವಳಿಗಳನ್ನು ಅತಿದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆ ನೀಡುವ ಈ ಕಾನೂನು ರೈತರನ್ನು ಅಂಬಾನಿ, ಅದಾನಿಯಂಥ ಕುಳಗಳ ಜೀತದಾಳುಗಳಂತೆ ಮಾಡುತ್ತದೆ. ರೈತನಿಗೆ ಬೆಳೆ ಬೆಳೆಯಲು ಸಹಾಯ ನೀಡುವ ಸೋಗಿನಲ್ಲಿ, ಆತನ ಮೂಲಭೂತ ಹಕ್ಕುಗಳನ್ನು ದಮನಗೊಳಿಸುವ, ಅತಂತ್ರಗೊಳಿಸುವ ಕಾನೂನು ಇದು, ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸುವ, ಮಾರ್ಪಾಡುಗೊಳಿಸುವ ಹೊಣೆ ಮತ್ತು ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು. ಒಕ್ಕೂಟ ಸರ್ಕಾರ ಇದರಲ್ಲಿ ಮೂಗು ತೂರಿಸಿ, ಒಕ್ಕೂಟ ವ್ಯವಸ್ಥೆಯ ಹಂದರವನ್ನು ಹಾಳು ಮಾಡಬಾರದು. ಎಲ್ಲ ಅಧಿಕಾರಗಳನ್ನು ತಾನೇ ಕೇಂದ್ರೀಕರಣಗೊಳಿಸಿಕೊಳ್ಳುವ ಕೆಟ್ಟ ಸಂಪ್ರದಾಯವನ್ನು ಒಕ್ಕೂಟ ಸರ್ಕಾರ ಕೈಬಿಡಬೇಕು, ಎಂದು ನಾರಾಯಣ ಗೌಡ ಅವರು ಆಗ್ರಹಿಸಿದ್ದಾರೆ.