ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಪಬ್ಲಿಕ್ ಅಫೇರ್ಸ್ ಸೆಂಟರ್, ಶುಕ್ರವಾರ ಬಿಡುಗಡೆ ಮಾಡಿದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ -2020 (Public Affairs Index-2020) ವರದಿಯ ಪ್ರಕಾರ, ಕೇರಳ ದೇಶದ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದಿದ್ದು, ದೊಡ್ಡ ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.
ಈಕ್ವಿಟಿ, ಬೆಳವಣಿಗೆ ಮತ್ತು ಸುಸ್ಥಿರತೆ ಎಂಬ ಮೂರು ಮಾನದಂಡಗಳ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಡಳಿತವನ್ನು ಮೌಲ್ಯಮಾಪನ ಮಾಡಿದ ವರದಿಯು ತಮಿಳುನಾಡು ಮತ್ತು ಆಂಧ್ರಪ್ರದೇಶವನ್ನು ದೊಡ್ಡ ರಾಜ್ಯಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವುದಾಗಿ ಹೇಳಿದೆ. ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ಬಿಹಾರ ಮತ್ತು ಒಡಿಶಾ ಕೊನೆಯ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆದ ಇತರ ಎರಡು ರಾಜ್ಯಗಳಾಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನ ಅಲಂಕರಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಚಂಢೀಗಢ ಮೊದಲ ಸ್ಥಾನ ಪಡೆದಿದೆ.
ಕಳೆದ ವರ್ಷವೂ ಅಗ್ರಸ್ಥಾನದಲ್ಲಿದ್ದ ಕೇರಳ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ 1.011 ಇದ್ದ ಅಂಕವು ಈ ಬಾರಿ 1.3989 ಗೆ ಏರಿದೆ. 18 ದೊಡ್ಡ ರಾಜ್ಯಗಳ ಪೈಕಿ 9 ರಾಜ್ಯಗಳು ನಕರಾತ್ಮಕ ಅಂಕ ಪಡೆದಿದೆ. ಉತ್ತರಪ್ರದೇಶವು -1.462 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಸಣ್ಣ ರಾಜ್ಯಗಳಲ್ಲಿ ಗೋವಾ (1.746), ಮೇಘಾಲಯ (0.797) ಮತ್ತು ಹಿಮಾಚಲ ಪ್ರದೇಶ (0.725) ಅಂಕ ಪಡೆದರೆ, ಮಣಿಪುರ (-0.364) ಮತ್ತು ದೆಹಲಿ (-0.364) ಅಂಕ ಪಡೆದು ಕೊನೆ ಸ್ಥಾನದಲ್ಲಿವೆ.

ಸುಸ್ಥಿರ ಅಭಿವೃದ್ಧಿ ಮಾನದಂಡದ ಆಧಾರದಲ್ಲಿ ಈ ಸೂಚ್ಯಂಕದಲ್ಲಿ ರ್ಯಾಂಕ್ ನೀಡಲಾಗಿದೆ ಎಂದು ಪಟ್ಟಿ ಬಿಡುಗಡೆ ಮಾಡಿರುವ ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ರೋದ ಮಾಜಿ ಮುಖ್ಯಸ್ಥ ಕೆ ಕಸ್ತೂರಿ ರಂಗನ್ ಹೇಳಿದ್ದಾರೆ.
ವಿಶೇಷವೆಂದರೆ ಎರಡು ಕೋಟಿಗಿಂತ ಅಧಿಕ ಜನಸಂಖ್ಯೆಯಿರುವ ದೊಡ್ಡ ರಾಜ್ಯಗಳ ಪೈಕಿ ಮೊದಲ ನಾಲ್ಕೂ ಸ್ಥಾನವನ್ನು ದಕ್ಷಿಣದ ಭಾರತದ ರಾಜ್ಯಗಳು ಪಡೆದಿವೆ. ತೆಲಂಗಾಣ ಆರನೇ ಸ್ಥಾನ ಪಡೆದಿದೆ. ಎರಡು ಕೋಟಿಗೂ ಕಡಿಮೆ ಜನಸಂಖ್ಯೆಯಿರುವ ರಾಜ್ಯಗಳ ಪೈಕಿ ಗೋವಾ ಪ್ರಥಮ ಸ್ಥಾನ ಪಡೆದಿದೆ.










