ರಾಜ್ಯದಲ್ಲಿ ವಿದ್ಯಾಗಮ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಪ್ರಮುಖವಾಗಿ ವಿದ್ಯಾಗಮನ ಯೋಜನೆಯ ಭಾಗವಾಗಿ ಮಕ್ಕಳ ಚಿಕ್ಕಚಿಕ್ಕ ಗುಂಪುಗಳಲ್ಲಿ ಪಾಠ ಮಾಡುವ ಕ್ರಮದಿಂದಾಗಿ ಶಿಕ್ಷಕರು ಮತ್ತು ಮಕ್ಕಳು ಕರೋನಾ ವೈರಾಣೂ ಸೋಂಕಿತರಾಗುತ್ತಿದ್ದಾರೆ. ಈಗಾಗಲೇ ಹಲವು ಶಿಕ್ಷಕರು ಜೀವ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮಕ್ಕಳ ಜೀವಕ್ಕೂ ಅಪಾಯಕಾರಿ ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ವಿದ್ಯಾಗಮ ಯೋಜನೆ ಸ್ಥಗಿತಗೊಳಿಸಿರುವುದಾಗಿ ಹೇಳಿದೆ.
ಕೋವಿಡ್ ಸೋಂಕು ತಡೆಯುವ ಕ್ರಮವಾಗಿ ಬಹುತೇಕ ಕಳೆದ ಆರು ತಿಂಗಳುಗಳಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು, ದೇಶಾದ್ಯಂತ ವಿದ್ಯಾರ್ಥಿಗಳ ಅರ್ಧ ವರ್ಷದ ಕಲಿಕೆ ಬಹುತೇಕ ನಿಂತುಹೋಗಿದೆ. ಮಕ್ಕಳ ಕಲಿಕೆಯ ಈ ನಷ್ಟ, ಅವರ ಕಲಿಕಾ ಆಸಕ್ತಿ, ಕಲಿಕಾ ಪ್ರಗತಿ, ವಿಷಯ ಪರಿಣತಿ ಮತ್ತಿತರ ಶೈಕ್ಷಣಿಕ ಸಂಗತಿಗಳಷ್ಟೇ ಅಲ್ಲದೆ, ಅವರ ಭವಿಷ್ಯದ ದುಡಿಮೆ ಮತ್ತು ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕು ಅನಿರೀಕ್ಷಿತ ತಿರುವುಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ವ್ಯಕ್ತಿಗತ ಮತ್ತು ಕೌಟುಂಬಿಕವಾದ ಈ ನಷ್ಟ ಮತ್ತು ಹಿನ್ನಡೆಗಳು ಕೇವಲ ಅಷ್ಟಕ್ಕೇ ಸೀಮಿತವಾಗದೆ, ಇಡೀ ದೇಶದ ಪ್ರಗತಿಗೆ ಕೂಡ ಪೆಟ್ಟು ಕೊಡಲಿವೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಕ್ಕಳಿಗೆ ಕನಿಷ್ಟ ಕಲಿಕೆಯನ್ನು ಖಾತರಿಪಡಿಸಲು ಮತ್ತು ಈಗಾಗಲೇ ಕಲಿತಿರುವುದು ಮರೆಯದಂತೆ ತಿಳಿವನ್ನು ಚಾಲ್ತಿಯಲ್ಲಿಡಲು ಆನ್ ಲೈನ್ ಶಿಕ್ಷಣ, ದೂರ ಶಿಕ್ಷಣ, ವಿದ್ಯಾಗಮನದಂತಹ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಅಂತಹ ಪರ್ಯಾಯ ಕಲಿಕೆಯ ಕ್ರಮಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಫಲ ಕೊಡುತ್ತಿಲ್ಲ ಮತ್ತು ಅವುಗಳಿಗೂ ಹತ್ತಾರು ತೊಡಕುಗಳು ಎದುರಾಗುತ್ತಿವೆ. ಆ ಹಿನ್ನೆಲೆಯಲ್ಲಿ ಬರೋಬ್ಬರಿ ಆರು ತಿಂಗಳ ಲಾಕ್ ಡೌನ್ ಅವಧಿಯ ಬಳಿಕವೂ ಈಗಲೂ, ಕೋವಿಡ್ ಸಂಕಷ್ಟದ ನಡುವೆ ಶಿಕ್ಷಣವನ್ನು ಮುಂದುವರಿಸುವ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗೋಪಾಯಗಳು ಕಾಣುತ್ತಿಲ್ಲ. ದೇಶದ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸೋಂಕುರೋಗ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಈ ವಿಷಯದಲ್ಲಿ ಒಂದು ಸುರಕ್ಷಿತ ಪರ್ಯಾಯ ಕಂಡುಕೊಳ್ಳುವಲ್ಲಿ ಬಹುತೇಕ ವಿಫಲರಾಗಿದ್ದಾರೆ. ಇನ್ನು ನಮ್ಮ ಸರ್ಕಾರಗಳಂತೂ ಇತರ ಎಲ್ಲಾ ಕ್ಷೇತ್ರಗಳಂತೆಯೇ ಶಿಕ್ಷಣ ಕ್ಷೇತ್ರದ ಸದ್ಯದ ಸವಾಲು ಮತ್ತು ಭವಿಷ್ಯದ ಆತಂಕದ ಬಗ್ಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ತಜ್ಞರು ಮತ್ತು ಅನುಭವಿಗಳ ಸಮಿತಿಗಳನ್ನು ನೇಮಿಸಿ ಸಲಹೆ-ಮಾರ್ಗದರ್ಶನ ಪಡೆಯುವ ಪ್ರಯತ್ನಗಳನ್ನು ಮಾಡಿದ್ದು ವಿರಳ.
Also Read: ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ: ಶುರುವಾಯಿತು ಪರ-ವಿರೋಧ ಚರ್ಚೆ
ಹಾಗಾಗಿ ಇಂದಿಗೂ ಭವಿಷ್ಯದ ಪ್ರಜೆಗಳ ಶಿಕ್ಷಣದ ಭವಿಷ್ಯದ ಬಗ್ಗೆ ಮಂಕು ಕವಿದ ಸ್ಥಿತಿಯೇ ಮುಂದುವರಿದಿದೆ. ಗೊಂದಲ ಮತ್ತು ಆತಂಕದ ನಡುವೆ ಹೆಳವನ ಮೇಲೆ ಕುರುಡನ ಸವಾರಿಯಂತೆ ತಾತ್ಕಾಲಿಕ ಕಲಿಕಾ ಕ್ರಮಗಳು ಮುಂದುವರಿದಿವೆ.
ಈ ನಡುವೆ, ಹೀಗೆ ಬರೋಬ್ಬರಿ ಅರ್ಧವರ್ಷವೇ ಮಕ್ಕಳು ಶಾಲೆಯಿಂದ, ಕಲಿಕೆಯಿಂದ ಹೊರಗುಳಿದರೆ, ಅದರಿಂದಾಗಿ ದೇಶದ ಒಟ್ಟಾರೆ ಪ್ರಗತಿಗೆ ಬೀಳುವ ಪೆಟ್ಟು ಮತ್ತು ಆರ್ಥಿಕ ನಷ್ಟ ಅಗಾಧ ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ.
‘ಬೀಟನ್ ಆರ್ ಬ್ರೋಕನ್: ಇನ್ಫಾರ್ಮಲಿಟಿ ಅಂಡ್ ಕೋವಿಡ್-19’ ಎಂಬ ದಕ್ಷಿಣ ಏಷ್ಯಾ ಕುರಿತ ತನ್ನ ಇತ್ತೀಚಿನ ವರದಿಯಲ್ಲಿ ವಿಶ್ವಬ್ಯಾಂಕ್ ಈ ವಿಷಯ ಪ್ರಸ್ತಾಪಿಸಿದ್ದು, ಇಡೀ ದಕ್ಷಿಣ ಏಷ್ಯಾದಲ್ಲೇ ಈ ಕೋವಿಡ್-19ರಿಂದಾಗಿ ಅತಿ ಹೆಚ್ಚು ಮಕ್ಕಳು ಶಾಲೆಯಿಂದ, ಕಲಿಕೆಯಿಂದ ಹೊರಗುಳಿದಿರುವುದು ಭಾರತದಲ್ಲಿ. ಹಾಗಾಗಿ ಇದರ ಒಟ್ಟಾರೆ ಪರಿಣಾಮವಾಗಿ ಭಾರತಕ್ಕೆ ಭವಿಷ್ಯದಲ್ಲಿ ಸುಮಾರು 30ರಿಂದ 45 ಲಕ್ಷ ಕೋಟಿ ರೂಗಳಷ್ಟು ಆರ್ಥಿಕ ನಷ್ಟವಾಗಬಹುದು. ಇದು ದೇಶದ ಜಿಡಿಪಿ ದರದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಕೋವಿಡ್ ನಿಂದಾಗಿ ದೇಶದ ಸುಮಾರು 39 ಕೋಟಿಯಷ್ಟು ಮಕ್ಕಳು ಕಳೆದ ಆರು ತಿಂಗಳುಗಳಿಂದ ಶಾಲಾ- ಕಾಲೇಜು ಶಿಕ್ಷಣದಿಂದ ಹೊರಗುಳಿದಿದ್ದಾರೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಬಹುತೇಕ ಇಡಿಯಾಗಿ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳು ಮುಚ್ಚಿರುವ ಈ ಹೊತ್ತಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ನಡೆಸುತ್ತಿರುವ ಪರ್ಯಾಯ ಕಲಿಕಾ ಪ್ರಯತ್ನಗಳು ದೊಡ್ಡ ಸವಾಲಾಗಿದ್ದು, ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಹಾಗಾಗಿ ಕಲಿಕೆಯಲ್ಲಿ ಹಿಂದುಳಿಯುವಿಕೆ, ಕಲಿತದ್ದು ಮರೆತುಹೋಗುವುದು, ಭವಿಷ್ಯದ ದೃಷ್ಟಿಯಿಂದ ಕಲಿಕೆಯ ನಷ್ಟರ ಒಟ್ಟಾರೆ ಪರಿಣಾಮದಂತಹ ಸಾಮಾನ್ಯ ಪರಿಣಾಮಗಳ ಜೊತೆಗೆ, ಆನ್ ಲೈನ್ ಮತ್ತಿತರ ಪರ್ಯಾಯ ಶಿಕ್ಷಣ ಕ್ರಮಗಳು ಈಗಾಗಲೇ ಭಾರತೀಯ ಶೈಕ್ಷಣಿಕ ರಂಗದಲ್ಲಿರುವ ಸಾಮಾಜಿಕ (ಜಾತಿ- ಧರ್ಮ), ಆರ್ಥಿಕ (ಬಡವರು ಮತ್ತು ಉಳ್ಳುವರು) ಮತ್ತು ಭೌಗೋಳಿಕ(ಗ್ರಾಮೀಣ ಮತ್ತು ನಗರ) ಮುಂತಾದ ತಾರತಮ್ಯದ ಕಂದಕವನ್ನು ಇನ್ನಷ್ಟು ಹಿಗ್ಗಿಸಿದೆ ಎಂಬುದನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
Also Read: ವಿದ್ಯಾಗಮ ಯೋಜನೆ ತಾತ್ಕಾಲಿಕವಾಗಿ ಸ್ಥಗಿತ
ಈ ನಡುವೆ, ಈ ಅರ್ಧ ವರ್ಷದ ಕಲಿಕೆಯ ನಷ್ಟ ಸದ್ಯದ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿಯ ಮೇಲಷ್ಟೇ ಅಲ್ಲದೆ, ಈ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ, ಉದ್ಯೋಗ, ಪರಿಣತಿ, ಕಾರ್ಯಕ್ಷಮತೆ ಮತ್ತು ಗಳಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಶಿಕ್ಷಣದ ಈ ತೊಡಕು ಅವರಲ್ಲಿ ಬಹುತೇಕರಿಗೆ ಅವರವರ ಉದ್ಯೋಗ ವಲಯಕ್ಕೆ ಅಗತ್ಯ ಪರಿಣತಿಯ ಮೇಲೆಯೂ ಪರಿಣಾಮ ಬೀರಲಿದೆ. ಅದು ಅಂತಿಮವಾಗಿ ಅವರ ಉದ್ಯೋಗ, ಕಾರ್ಯಕ್ಷಮತೆ ಮತ್ತು ಅವರ ಒಟ್ಟಾರೆ ಗಳಿಕೆ, ಅವರ ಸಾಮಾಜಿಕ ಮತ್ತು ಆರ್ಥಿಕ ಜೀವನ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ. ಅಂದರೆ; ಇಡೀ ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಬದುಕಿನ ಮೇಲೆಯೂ ಈ ಶೈಕ್ಷಣಿಕ ನಷ್ಟ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಕೇವಲ ಹಣಕಾಸಿನ ಮಾನದಂಡದಲ್ಲಿ ನೋಡಿದರೂ, ಆ ನಷ್ಟ ಭಾರತದ ಮಟ್ಟಿಗೆ ಸುಮಾರು 30ರಿಂದ 45 ಲಕ್ಷ ಕೋಟಿ ರೂಗಳಷ್ಟು ದುಬಾರಿಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ಟಾರೆಯಾಗಿ ಆರು ತಿಂಗಳ ಅವಧಿಯ ಈ ಶಾಲಾ-ಕಾಲೇಜು ಸ್ಥಗಿತ ದೇಶದ ಭವಿಷ್ಯದ ಮಾನವ ಸಂಪನ್ಮೂಲ ಮತ್ತು ದುಡಿಯುವ ವರ್ಗದ ಪರಿಣತಿಯ ಮೇಲೆ ದೊಡ್ಡ ಮಟ್ಟದ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಈಗಾಗಲೇ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ದೇಶದ ಭವಿಷ್ಯದ ಬಿಕ್ಕಟ್ಟು ಇನ್ನಷ್ಟು ಅಪಾಯಕಾರಿಯಾಗಬಹುದು ಎಂದು ವರದಿಯಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಸದ್ಯ ಈವರೆಗಿನ ಆರು ತಿಂಗಳ ಶೈಕ್ಷಣಿಕ ನಷ್ಟದ ಪರಿಣಾಮ ಇದು ಎಂದು ನಿರೀಕ್ಷಿಸಲಾಗಿದ್ದು, ಇದೇ ಪರಿಸ್ಥಿತಿ ಇನ್ನಷ್ಟು ತಿಂಗಳು ಮುಂದುವರಿದರೆ ಆಗ ಅಂತಹ ನಷ್ಟ ಮತ್ತು ಪರಿಣಾಮಗಳು ಇನ್ನಷ್ಟು ಭೀಕರ ಎಂದೂ ಎಚ್ಚರಿಕೆ ನೀಡಲಾಗಿದೆ.
Also Read: ಶಾಲಾ ಮಧ್ಯಂತರ ರಜೆ ರದ್ದು: ಸರ್ಕಾರದ ನಡೆಗೆ HD ಕುಮಾರಸ್ವಾಮಿ ಖಂಡನೆ
ಆದರೆ, ಭವಿಷ್ಯದ ತಲೆಮಾರಿನ ನಷ್ಟ ಮತ್ತು ಸಂಕಷ್ಟದ ಕುರಿತ ಇಂತಹ ವರದಿಗಳು ಒಂದೆಡೆಯಾದರೆ, ಮತ್ತೊಂದೆಡೆ ಅದೇ ತಲೆಮಾರನ್ನು ಸೋಂಕಿನಿಂದ ಸುರಕ್ಷಿತವಾಗಿಟ್ಟು ಅವರ ಜೀವ ರಕ್ಷಿಸುವ ಸವಾಲು ಕೂಡ ಸರ್ಕಾರಗಳ ಮುಂದಿದೆ. ವಿದ್ಯಾರ್ಥಿಗಳ ವಯೋಮಾನ ಮತ್ತು ರೋಗ ನಿರೋಧಕ ಶಕ್ತಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರಗಳು ಹಿಂಜರಿಯುತ್ತಿರುವುದು ಸಮಂಜಸವಲ್ಲ, ಸೋಂಕಿನ ವಿರುದ್ಧ ಸಾಮೂಹಿಕ ರೋಗ ನಿರೋಧಕ ಶಕ್ತಿ ದೇಶದಲ್ಲಿ ಬೆಳೆಯಬೇಕು ಎಂದರೆ ಶಾಲಾ ಕಾಲೇಜು ಆರಂಭಿಸುವು ಸೂಕ್ತ ಎಂಬ ಸಲಹೆಗಳೂ ಇವೆ. ಆದರೆ, ಕರೋನಾದಂತಹ ಹಿಂದೆಂದೂ ಕಂಡರಿಯದ ಒಂದು ಜೀವಕಂಟಕ ಸೋಂಕಿನ ವಿಷಯದಲ್ಲಿ ಹಿಂದಿನ ಅನುಭವಗಳಾಗಲೀ, ವೈಜ್ಞಾನಿಕ ಅಧ್ಯಯನಗಳಾಗಲೀ ಸರ್ಕಾರದ ನೆರವಿಗೆ ಬರುವ ಸಾಧ್ಯತೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಗಳೇನು, ಶಾಲಾ ಕಾಲೇಜು ತೆರೆಯುವುದರಿಂದ ಆಗುವ ಅನುಕೂಲ- ಅನಾನುಕೂಲಗಳೇನು ಎಂಬ ಕುರಿತು ಯಾವುದೇ ಅಧಿಕೃತ ಸರ್ಕಾರಿ ನಿಯೋಜಿತ ವೈಜ್ಞಾನಿಕ ಅಧ್ಯಯನಗಳೂ ಈವರೆಗೆ ನಡೆದಿರುವ ಮಾಹಿತಿ ಇಲ್ಲ. ಹಾಗಾಗಿ, ಭವಿಷ್ಯದ ಆತಂಕ ಮತ್ತು ಸದ್ಯದ ಸಂಕಷ್ಟದ ನಡುವೆ ಶಾಲಾ-ಕಾಲೇಜು ತೆರೆಯುವ ವಿಷಯದಲ್ಲಿ ಗೊಂದಲ ಮತ್ತು ಭಯ ಮುಂದುವರಿದಿದೆ.