ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರಿಗಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟ ಕಾದಿದೆ. ಖಾಸಗಿ ಕಂಪನಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಬೆಲೆಗೆ ಮಾರಿ ಜನರ ಸುಲಿಗೆಗೆ ಇಳಿಯಲಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎಪಿಎಂಸಿ ಸೇರಿದಂತೆ ಕೃಷಿ ಸಂಬಂಧಿತ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ವಿಪಕ್ಷಗಳು ಕೂಡಾ ಸರ್ಕಾರದ ನೂತನ ತಿದ್ದುಪಡಿಗಳನ್ನು ವಿರೋಧಿಸುತ್ತಿವೆ.
ರಾಜ್ಯ ಸರ್ಕಾರ ನಿಜವಾಗಿ ರೈತರು, ಕಾರ್ಮಿಕರು, ಬಡವರ ಪರವಾಗಿದ್ದರೆ ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ತಪ್ಪನ್ನು ಮಾಡುತ್ತಲೇ ಇರಲಿಲ್ಲ ಎಂದ ಸಿದ್ದರಾಮಯ್ಯ ಯಡಿಯೂರಪ್ಪ ಹಸಿರು ಶಾಲು ಹೊದ್ದಿರುವ ಒಬ್ಬ “ಢೋಂಗಿ ರೈತನಾಯಕ” ಎಂದು ಬಣ್ಣಿಸಿದ್ದಾರೆ.
ಉಳುವವನನ್ನು ಭೂಮಿಯ ಒಡೆಯನಾಗಿಸಿದ್ದು ದೇವರಾಜ ಅರಸು ಅವರ ನಾಯಕತ್ವದ ಕಾಂಗ್ರೆಸ್ ಸರ್ಕಾರ. ಈಗ ಬಡವರ ಭೂಮಿಯನ್ನು ಉಳ್ಳವರ ಪಾಲು ಮಾಡಲು ಹೊರಟಿರುವುದು ಬಿಜೆಪಿ ಸರ್ಕಾರ. ಹಾಗಾದರೆ ನಿಜವಾಗಿ ಯಾರು ರೈತರ ಪರ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಕೃಷಿಕನಲ್ಲದವನು ಕೃಷಿ ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮ ಹೋಗಿ, ಧನಿಕರು ಕೂಡ ಕೃಷಿ ಭೂಮಿ ಖರೀದಿ ಮಾಡಲಿದ್ದಾರೆ. ನಂತರ ಆ ಭೂಮಿಯಲ್ಲಿ ಫಾರ್ಮ್ಹೌಸ್ಗಳು, ಕಾರ್ಖಾನೆಗಳು ತಲೆಯೆತ್ತಲಿವೆ. ಅಲ್ಲಿಗೆ ಕೃಷಿ ಕ್ಷೇತ್ರ ಸರ್ವನಾಶವಾಗಲಿದೆ. ದೇಶದ ಒಟ್ಟು ರೈತರಲ್ಲಿ ಸಣ್ಣ ಹಿಡುವಳಿದಾರರ ಪ್ರಮಾಣ ಶೇ.86 ಇದೆ. ಈ ರೈತರೆಲ್ಲಾ ಧನಿಕರಿಗೆ ತಮ್ಮ ಭೂಮಿ ಮಾರಿ, ದುಡಿಮೆಗಾಗಿ ಪಟ್ಟಣ ಸೇರುತ್ತಾರೆ. ಕೃಷಿ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ ಅಮಾಯಕ ಮಂದಿ ನಗರಗಳಲ್ಲಿ ಕೂಲಿ ಮಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಸಿದ್ದರಾಮಯ್ಯ ಈ ಕಾಯಿದೆಗಳ ಜಾರಿ ಹಿಂದೆ ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆಯಿದೆ. ಆತ್ಮಸಾಕ್ಷಿ ಇಲ್ಲದ ಯಡಿಯೂರಪ್ಪ ಅವರು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ನಾಡನ್ನು ಗುಲಾಮಗಿರಿಗೆ ತಳ್ಳಲು ಹೊರಟಿದ್ದಾರೆ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದಿದ್ದಾರೆ.
Also Read: ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ರೈತರನ್ನು ಗೊಂದಲಕ್ಕೆ ದೂಡಬೇಡಿ -ಯಡಿಯೂರಪ್ಪ