ದೇಶದ ಭರ್ಜರಿ ಜನಾದೇಶದ ಸರ್ಕಾರ ಮತ್ತು ಅತ್ಯಂತ ಜನಪ್ರಿಯ ಪ್ರಧಾನಮಂತ್ರಿಯ ಆಡಳಿತದ ವಿರುದ್ಧ ಒಂದು ಕಡೆ ಜನಸಾಮಾನ್ಯರಲ್ಲಿ ಭ್ರಮನಿರಸನ ಮತ್ತು ಆಕ್ರೋಶ ಹೆಪ್ಪುಗಟ್ಟತೊಡಗಿದ್ದರೆ, ಮತ್ತೊಂದು ಕಡೆ ಮೋದಿಯವರ ನಾಯಕತ್ವವನ್ನೇ ಹಾಡಿಹೊಗಳಿ ಚುನಾವಣೆ ಗೆದ್ದಿದ್ದ ಮಿತ್ರಪಕ್ಷಗಳೇ ಒಂದೊಂದಾಗಿ ಅವರ ಆಡಳಿತದ ವಿರುದ್ಧ ಬಹಿರಂಗ ಆಕ್ರೋಶ ಸ್ಫೋಟಿಸತೊಡಗಿವೆ. ಬಿಜೆಪಿಯ ದಶಕಗಳ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಇದೀಗ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳ ವಿಷಯದಲ್ಲಿ ಸಿಡಿದೆದ್ದು ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಿರುವುದು ಅಂತಹ ಒಂದು ನೇರಾನೇರ ಆಕ್ರೋಶದ ನಿದರ್ಶನ.
ನೂತನ ಎಪಿಎಂಸಿ, ಗುತ್ತಿಗೆ ಕೃಷಿ ಮತ್ತು ಅಗತ್ಯ ವಸ್ತುಗಳ ಕಾಯ್ದೆಗಳಿಗೆ ಮಹತ್ವದ ತಿದ್ದುಪಡಿ ಮಸೂದೆಗಳನ್ನು ಮಂಡಿಸಿ, ಲೋಕಸಭೆಯಲ್ಲಿ ಅನುಮೋದನೆಯನ್ನೂ ಪಡೆದಿರುವ ಬಿಜೆಪಿ, ಆ ಮೂಲಕ ದೇಶದ ರೈತರ ಮೇಲೆ ಖಾಸಗೀ ಕಾರ್ಪೊರೇಟ್ ಕುಳಗಳ ದಬ್ಬಾಳಿಕೆಗೆ, ಕೃಷಿ ಭೂಮಿಯನ್ನು ಕಾರ್ಪೊರೇಟ್ ಸಂಸ್ಥೆಗಳ ಕೈವಶ ಮಾಡಲು ಮತ್ತು ಎಪಿಎಂಸಿ ಮಾರುಕಟ್ಟೆಯನ್ನು ದುರ್ಬಲಗೊಳಿಸುವ ಮೂಲಕ ರೈತರನ್ನು ಬೃಹತ್ ವ್ಯಾಪಾರಿಗಳ ಕೈಗೊಂಬೆಯಾಗಿಸಲು ಪ್ರಯತ್ನಿಸಿದೆ. ಈ ಮೂರೂ ತಿದ್ದುಪಡಿ ಮಸೂದೆಗಳು ರಾಜ್ಯಸಭೆಯಲ್ಲಿಯೂ ಅನುಮೋದನೆಗೊಂಡು ಕಾಯ್ದೆಯಾಗಿ ಜಾರಿಗೆ ಬಂದಲ್ಲಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸರ್ವನಾಶಕ್ಕೆ ದಾರಿಯಾಗಲಿದೆ. ಅಷ್ಟೇ ಅಲ್ಲ; ಎಪಿಎಂಸಿ ಮತ್ತು ಅಗತ್ಯ ವಸ್ತು ಕಾಯ್ದೆಗಳ ತಿದ್ದುಪಡಿಯಂತೂ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದ್ದು, ಆ ವ್ಯವಸ್ಥೆಯಡಿ ಬರುವ ದಲ್ಲಾಲರು ಮತ್ತು ವ್ಯಾಪಾರಿಗಳ ಬದುಕು ಕೂಡ ಬೀದಿಗೆ ಬೀಳಲಿದೆ ಎಂಬುದು ಈ ಮೂರೂ ಮಸೂದೆಗಳ ಬಗ್ಗೆ ಇರುವ ಪ್ರಮುಖ ಆಕ್ಷೇಪಗಳು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನೆಲೆಯಲ್ಲಿಯೇ ಕೃಷಿಯೇ ಪ್ರಧಾನವಾಗಿರುವ ಮತ್ತು ರೈತ ಸಂಘಟ ನೆಗಳು ಪ್ರಬಲವಾಗಿರುವ ಪಂಜಾಬ್, ಹರ್ಯಾಣ ರಾಜ್ಯಗಳಿಗೆ ಬಿಜೆಪಿಯ ಈ ರೈತ ವಿರೋಧಿ, ಕೃಷಿ ವಿರೋಧಿ ತಿದ್ದುಪಡಿಗಳ ವಿರುದ್ಧ ಹಲವು ತಿಂಗಳುಗಳಿಂದ ದೊಡ್ಡಮಟ್ಟದ ನಿರಂತರ ಹೋರಾಟ ಬಿರುಸುಗೊಂಡಿದೆ. ಆ ಹಿನ್ನೆಲೆಯಲ್ಲಿ, ಹೇಳಿಕೇಳೀ ರೈತ ಸಮುದಾಯವನ್ನೇ ತನ್ನ ಓಟ್ ಬ್ಯಾಂಕ್ ಮಾಡಿಕೊಂಡಿರುವ ಶಿರೋಮಣಿ ಅಕಾಲಿದಳ(ಎಸ್ ಎಡಿ), ಈ ಮೂರೂ ಮಸೂದೆಗಳು ಕರೋನಾ ಲಾಕ್ ಡೌನ್ ನೆಪದಲ್ಲಿ ಸುಗ್ರೀವಾಜ್ಞೆಗಳಾಗಿ ಜಾರಿಗೆ ಬಂದಂದಿನಿಂದ ಇಕ್ಕಟ್ಟಿಗೆ ಸಿಲುಕಿತ್ತು. ಒಂದು ಕಡೆ ಈ ರೈತ ವಿರೋಧಿ ಮಸೂದೆಗಳನ್ನೇ ಮುಂದಿಟ್ಟುಕೊಂಡು ಪಂಜಾಬಿನ ಪ್ರಭಾವಿ ನಾಯಕ ಹಾಗೂ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್, ಎಸ್ ಎಡಿ ವಿರುದ್ಧ ದೊಡ್ಡ ಮಟ್ಟದ ರಾಜಕೀಯ ಅಭಿಯಾನವನ್ನೇ ನಡೆಸಿದ್ದರು. ಈಗಾಗಲೇ ಬಣ ಬಿಕ್ಕಟ್ಟು ಮತ್ತು ಹಿಂದಿನ ತನ್ನ ಆಡಳಿತ ಜನವಿರೋಧಿ ನಡೆಗಳಿಂದಾಗಿ ಸೋತು ಸುಣ್ಣವಾಗಿದ್ದ ಎಸ್ ಎಡಿಗೆ ಇದು ಮಾಡು ಇಲ್ಲವೇ ಮಡಿ ಎಂಬ ನಿರ್ಣಾಯಕ ಸಂದಿಗ್ಧತೆಗೆ ತಳ್ಳಿತ್ತು.
ಹಾಗಾಗಿಯೇ ತೀರಾ ಮೊನ್ನೆಮೊನೆಯವರೆಗೆ ಮಸೂದೆಗಳನ್ನು ಸಾರ್ಜನಿಕಕವಾಗಿ ಸಮರ್ಥಿಸಿಕೊಳ್ಳುತ್ತಲೇ ಇದ್ದ ಎಸ್ ಎಡಿ ನಾಯಕ ಸುಖ್ಬೀರ್ ಸಿಂಗ್ ಬಾದಲ್, ಯಾವಾಗ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಮಂಡನೆಯಾಯಿತೋ, ಕೂಡಲೇ ಮಸೂದೆಯ ವಿರುದ್ಧ ತಿರುಗಿಬಿದ್ದರು. ಜೊತೆಗೆ ಮಸೂದೆಯ ವಿರುದ್ದ ಮತ ಚಲಾಯಿಸುವಂತೆ ತಮ್ಮ ಪಕ್ಷದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ವಿಪ್ ಕೂಡ ನೀಡಿದ್ದರು. ಆ ಹಿನ್ನೆಲೆಯಲ್ಲಿಯೇ ಗುರುವಾರ ಅವರ ಪತ್ನಿ ಮತ್ತು ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ರಾಜೀನಾಮೆಯ ಅಂಗೀಕಾರವೂ ಆಗಿದೆ.
2017ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಬರೋಬ್ಬರಿ ಹತ್ತು ವರ್ಷಗಳ ಕಾಲ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಎಸ್ ಎಡಿ- ಬಿಜೆಪಿ ಮೈತ್ರಿಕೂಟ, ಆ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಕಾಂಗ್ರೆಸ್, ಎಎಪಿ ನಂತರ ಮೂರನೇ ಸ್ಥಾನಕ್ಕೆ ಕುಸಿದಿತ್ತು. 117 ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿದರೆ, 20 ಸ್ಥಾನಗಳೊಂದಿಗೆ ಎಎಪಿ ಪ್ರಮುಖ ಪ್ರತಿಪಕ್ಷವಾಗಿತ್ತು ಮತ್ತು ಒಂದು ದಶಕ ಅಧಿಕಾರ ನಡೆಸಿದ್ದ ಎಸ್ ಎಡಿ-ಬಿಜೆಪಿ ಮೈತ್ರಿ ಕೇವಲ 18 ಸ್ಥಾನ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಪ್ರಮುಖವಾಗಿ ಆಡಳಿತಾವಧಿಯಲ್ಲಿ ಸಿಎಂ ಬಾದಲ್ ಮತ್ತು ಅವರ ಹಿಂಬಾಲಕರ ಜನ ವಿರೊಧಿ ನೀತಿಗಳು, ಪವಿತ್ರ ಗುರು ಗ್ರಂಥ್ ಸಾಹೀಬ್ ಗ್ರಂಥದ ಸರಣಿ ಅಪಮಾನ ಘಟನೆಗಳ ವಿಷಯದಲ್ಲಿ ದೇರಾ ಸಚ್ಚಾ ಸೌದಾದ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಇರುವುದು ಸಿಖ್ ಸಮದಾಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಆಡಳಿತ ವಿರೋಧಿ ಅಲೆಯೂ ಸೇರಿ ಪಕ್ಷ ಮೂಲೆಗುಂಪಾಗಿತ್ತು.
ಈ ನಡುವೆ ಚುನಾವಣೆಯ ಬಳಿಕ, ಮಾಜಿ ಸಿಎಂ ಮತ್ತು ಪಕ್ಷದ ಅಧ್ಯಕ್ಷ ಬಾದಲ್ ಅವರ ಕುರಿತ ಜನವಿರೋಧದ ಅಲೆಯ ಹಿನ್ನೆಲೆಯಲ್ಲಿ ಬಿಜೆಪಿ ಬಾದಲ್ ರಹಿತ ಶಿರೋಮಣಿ ಅಕಾಲಿದಳ ಹುಟ್ಟುಹಾಕುವ ರಾಜಕೀಯ ತಂತ್ರಗಾರಿಕೆ ಹೆಣೆದು ಅಕಾಲಿದಳ ಒಡೆದು ಮೂರು ಹೋಳಾಗುವಂತೆ ಮಾಡಿದೆ. ಹಾಗಾಗಿ 2018ರ ಅಕ್ಟೋಬರಿನಲ್ಲಿ ಪಕ್ಷದ ಹಲವು ಹಿರಿಯ ನಾಯಕರು ಬಾದಲ್ ಮತ್ತು ಅವರ ಬಾವಮೈದುನ ಬ್ರಿಕಮ್ ಸಿಂಗ್ ಮಜಿತಿಯಾ ವಿರುದ್ಧ ಸಿಡಿದು, ತಮ್ಮದೇ ಪ್ರತ್ಯೇಕ ಶಿರೋಮಣಿ ಅಕಾಲಿದಳ(ತಕ್ಸಾಲಿ) ಕಟ್ಟಿದರು. ಪರಿಣಾಮವಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 13 ಸ್ಥಾನಗಳ ಪೈಕಿ, ಎಸ್ ಎಡಿ ಎರಡು ಸ್ಥಾನ(ಬಾದಲ್ ಮತ್ತು ಅವರ ಪತ್ನಿ) ಹಾಗೂ ಬಿಜೆಪಿ ಎರಡು ಸ್ಥಾನಕ್ಕೆ ಸೀಮೀತವಾದವು. ಅದಾದ ಬಳಿಕ ಮತ್ತೊಬ್ಬ ಪ್ರಭಾವಿ ನಾಯಕ ಸುಖದೇವ್ ಸಿಂಗ್ ದಿಂಡ್ಸಾ ಕೂಡ ತಮ್ಮ ಪುತ್ರ ಪರ್ಮಿಂದರ್ ಸಿಂಗ್ ದಿಂಡ್ಸಾ ಜೊತೆ ಪಕ್ಷದಿಂದ ಹೊರನಡೆದು ಪ್ರತ್ಯೇಕ ಶಿರೋಮಣಿ ಅಕಾಲಿದಳ(ಡೆಮಾಕ್ರಟಿಕ್) ಕಟ್ಟಿದರು. ಈ ಎರಡೂ ಬಣಗಳ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬುದು ಪಂಜಾಬ್ ರಾಜಕಾರಣದಲ್ಲಿ ಜನಜನಿತ ಗುಟ್ಟು.
ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡಲ್ಲೂ ಪಂಜಾಬಿನ ಸಿಖ್ ಮತ್ತು ಜಾಟ್ ಸಮುದಾಯಗಳು ಬಾದಲ್ ಅವರ ಅಕಾಲಿದಳವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ರೈತ ವರ್ಗವೇ ಬಹುಸಂಖ್ಯಾತರಾಗಿರುವ ಆ ಎರಡೂ ಸಮುದಾಯಗಳು ಈ ಹಿಂದೆ ದಶಕಗಳ ಕಾಲ ಪ್ರಕಾಶ್ ಸಿಂಗ್ ಬಾದಲ್ ಕಾಲದಿಂದಲೂ ಆ ಪಕ್ಷದ ಬೆನ್ನುಲುಬಾಗಿದ್ದವು. ಹಾಗಾಗಿ ಈಗ ಬಾದಲ್ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ತಮ್ಮ ಬಹುಕಾಲದ ಮಿತ್ರಪಕ್ಷ ಬಿಜೆಪಿಯ ನಂಟು ಕಳೆದುಕೊಳ್ಳುವ ಬೆಲೆ ತೆತ್ತಾದರೂ ತಮ್ಮ ಓಟ್ ಬ್ಯಾಂಕ್ ಉಳಿಸಿಕೊಳ್ಳಬೇಕಾಗಿದೆ. ಅಂತಹ ಪಣದ ಭಾಗವಾಗಿಯೇ ಈಗ ಹರ್ ಸಿಮ್ರತ್ ಕೌರ್ ಸಚಿವೆ ಸ್ಥಾನವನ್ನೇ ತಳ್ಳಿಹಾಕಿ, ರೈತ ನಾಯಕರ ಕಣ್ಣಲ್ಲಿ ಮಹಾನ್ ರೈತ ಪರ ನಾಯಕಿಯಾಗಿ ಬಿಂಬಿತರಾಗಲು ಯತ್ನಿಸಿದ್ದಾರೆ. ರೈತರ ಸಮುದಾಯ ಮತ್ತೆ ಬಾದಲ್ ಮತ್ತು ಅವರ ಪಕ್ಷವನ್ನು ಅಪ್ಪಿಕೊಳ್ಳುವುದೇ? ಅಥವಾ ಮತ್ತೊಂದು ಕಡೆ ಆ ಬಲಕ್ಕಾಗಿ, ದಶಕಗಳ ತನ್ನ ಬಿಜೆಪಿ ಮೈತ್ರಿಯ ಬೆಂಬಲವನ್ನೂ ತಳ್ಳಿಹಾಕುವುದೇ ಎಂಬುದು ಕುತೂಹಲ ಮೂಡಿಸಿದೆ.
ಇದೆಲ್ಲಾ ಪಂಜಾಬ್ ರಾಜಕಾರಣ ಮತ್ತು ಬಾದಲ್ ಕುಟುಂಬದ ರಾಜಕೀಯ ಭವಿಷ್ಯದ ಪ್ರಶ್ನೆಯಾಯಿತು. ಆದರೆ, ನಿಜವಾಗಿಯೂ ರಾಷ್ಟ್ರರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ಸಂಗತಿ, ಇದಕ್ಕಿಂತ ಗಹನವಾದುದು ಎಂಬುದು ವಿಶೇಷ.
ಪಕ್ಷದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ 302 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ (ಎನ್ ಡಿಎ 353) ಭಾರೀ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಒಂದು ಪಕ್ಷ ಮತ್ತು ಪ್ರಶ್ನಾತೀತ, ಟೀಕಾತೀತ ನಾಯಕ, ಅವತಾರ ಪುರುಷ, ವಿಶ್ವಗುರು ಎಂಬಂತಹ ಬಹಳ ಪ್ರಜ್ಞಾಪೂರ್ವಕವಾಗಿ ಪಿಆರ್ ಸರ್ಕಸ್ಸುಗಳ ಮೂಲಕ ಕಟ್ಟಿದ ವರ್ಚಸ್ಸಿನ ನಾಯಕರ ವಿರುದ್ಧ ಹೀಗೆ ಕೇವಲ ಇಬ್ಬರು ಲೋಕಸಭಾ ಸದಸ್ಯರನ್ನು ಹೊಂದಿರುವ ಒಂದು ಪ್ರಾದೇಶಿಕ ಪಕ್ಷ ಸಿಡಿದೇಳುವುದು ಈಗ ಹಲವು ಆಯಾಮದಲ್ಲಿ ಮಹತ್ವ ಪಡೆದಿದೆ. ಮೊದಲ ಅವಧಿಯ ಐದು ವರ್ಷಗಳ ಆಡಳಿತದಲ್ಲಿ ದೇಶದ ಪ್ರಗತಿಗೆ ಕೊಟ್ಟ ಕೊಡುಗೆಗಿಂತ ನೋಟು ರದ್ದತಿ, ಜಿಎಸ್ ಟಿ, ಖಾಸಗೀಕರಣದಂತಹ ಪ್ರಯತ್ನಗಳ ಮೂಲಕ ಜನಸಾಮಾನ್ಯರ ಹಿತ ಬಲಿಕೊಟ್ಟು ತಮ್ಮದೇ ಆಪ್ತ ಕಾರ್ಪರೇಟ್ ಕುಳಗಳ ಸಂಪತ್ತು ವೃದ್ಧಿಗೆ ಶ್ರಮಿಸಿದ ಮೋದಿಯವರಿಗೆ, ಜನ ಎರಡನೇ ಬಾರಿಗೆ ಅವಕಾಶ ನೀಡಿದ್ದು ಅವರ ಅದೇ ಭರವಸೆಯ ಮಾತುಗಳಿಗೆ ಮಾರುಹೋಗಿ ಮತ್ತು ಗಡಿಯಲ್ಲಿ ಚುನಾವಣೆ ಹೊತ್ತಿಗೆ ನಡೆದ ಬೆಳವಣಿಗೆಯನ್ನು ಭಾವನಾತ್ಮಕ ವಿಷಯವಾಗಿ ಚುನಾವಣೆಯಲ್ಲಿ ಚಲಾವಣೆಗೆ ತಂದ ತಂತ್ರಗಾರಿಕೆಗೆ ಮಾರುಹೋಗಿ ಎಂಬುದು ಗೊತ್ತಿರುವ ಸಂಗತಿ. ಈಗ ಕರೋನಾ ಲಾಕ್ ಡೌನ್ ಮತ್ತು ಆ ಹಿಂದಿನ ಕಳೆದ ಕೆಲವು ವರ್ಷಗಳ ನಿರಂತರ ಆರ್ಥಿಕ ಕುಸಿತದ ಪರಿಣಾಮವಾಗಿ ದೇಶ ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉದ್ಯಮ-ವಹಿವಾಟುಗಳು ನೆಲಕಚ್ಚಿವೆ. ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಬಡವರು, ಕೆಳ ಮಧ್ಯಮವರ್ಗಗಳಷ್ಟೇ ಅಲ್ಲದೆ, ಮೇಲ್ಮಧ್ಯಮವರ್ಗ ಮತ್ತು ಸಾಮಾನ್ಯ ಉದ್ಯಮಿಗಳು ಬದುಕಿನ ಭರವಸೆಯನ್ನೇ ಕಳೆದುಕೊಂಡು ಹತಾಶರಾಗಿದ್ದಾರೆ.
ಈ ಹತಾಶೆ ಮತ್ತು ಇಂತಹ ಸ್ಥಿತಿಯಲ್ಲೂ ಕೈಕಟ್ಟಿ ಕೂತಿರುವ ವ್ಯವಸ್ಥೆಯ ವಿರುದ್ಧದ ಆಕ್ರೋಶ ಇದೀಗ ಬಗೆಬಗೆಯಲ್ಲಿ ಸ್ಫೋಟಗೊಳ್ಳತೊಡಗಿದೆ. ಪ್ರಧಾನಿ ಮೋದಿಯವರ ಇತ್ತೀಚಿನ ಮನ್ ಕೀ ಬಾತ್ ಕಾರ್ಯಕ್ರಮ, ಕ್ರೀಡಾ ದಿನದ ಹಿನ್ನೆಲೆಯಲ್ಲಿ ಮಾಡಿದ ಭಾಷಣ ಮತ್ತು ಗುರುವಾರ ತಮ್ಮ ಹುಟ್ಟುಹುಬ್ಬದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಿಗೆ ದೇಶದ ಜನತೆ ಪ್ರತಿಕ್ರಿಯಿಸಿದ ರೀತಿ ಇದಕ್ಕೆ ಒಂದು ನಿದರ್ಶನ. ಈವರೆಗೆ ಜಗತ್ತಿನ ಅತಿ ಜನಪ್ರಿಯ ನಾಯಕ ಎಂದೂ ಬಿಂಬಿತವಾಗಿದ್ದ ಮೋದಿಯವರ ಮಾತು, ಕಾರ್ಯಕ್ರಮಗಳಿಗೆ ಈಗ ಮೆಚ್ಚುಗೆಯ ನಾಲ್ಕಾರು ಪಟ್ಟು ತಿರಸ್ಕಾರ, ಟೀಕೆ, ಅಸಮಾಧಾನಗಳು ಸಾಮೂಹಿಕವಾಗಿ ವ್ಯಕ್ತವಾಗುತ್ತಿವೆ. ಗುರುವಾರ ಕೂಡ ಅವರ ಹುಟ್ಟುಹುಬ್ಬವನ್ನು ನಿರುದ್ಯೋಗಿಗಳ ದಿನವನ್ನಾಗಿ ಆಚರಿಸಲು ಜನ ತೋರಿದ ಉತ್ಸಾಹ ಮತ್ತು ಅಭೂತಪೂರ್ವ ಬೆಂಬಲ ದೇಶದ ಯುವಕರು, ಜನಸಾಮಾನ್ಯರು ಪ್ರಧಾನಿ ಮೋದಿ ಮತ್ತು ಅವರ ಆಡಳಿತದ ಬಗ್ಗೆ ಎಷ್ಟು ಆಕ್ರೋಶಗೊಂಡಿದ್ದಾರೆ ಎಂಬುದಕ್ಕೆ ಉದಾಹರಣೆ.
ಇದೀಗ ಬಾದಲ್ ಅವರ ಅಕಾಲಿದಳ ಪ್ರತಿಭಟನೆ ಕೂಡ, ಕುಗ್ಗುತ್ತಿರುವ ಪ್ರಧಾನಿಯ ಜನಪ್ರಿಯತೆ ಮತ್ತು ಆಡಳಿತ ವಿರೋಧಿ ಜನಾಕ್ರೋಶದ ಉಬ್ಬರದ ಅಲೆಯ ಮೇಲೇ ವ್ಯಕ್ತವಾದ ಪ್ರತಿಕ್ರಿಯೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಬಾದಲ್ ಅವರಿಗೆ ತಮ್ಮ ಓಟ್ ಬ್ಯಾಂಕ್ ಸಮದಾಯದಲ್ಲಿ ಇರುವ ತೀವ್ರ ವಿರೋಧವನ್ನೇ ದಾಳವಾಗಿಟ್ಟುಕೊಂಡು ಕೆಲವು ತಿಂಗಳ ಹಿಂದೆ ಬಣ ರಾಜಕಾರಣಕ್ಕೆ ಕುಮ್ಮಕ್ಕು ನೀಡಿ ಬಾದಲ್ ರಹಿತ ಅಕಾಲಿದಳದೊಂದಿಗೆ 18 ತಿಂಗಳ ನಂತರ ಬರಲಿರುವ ಚುನಾವಣೆಗೆ ತಯಾರಿ ನಡೆಸಿತ್ತು. ಈಗ ಅದೇ ಪಾತ್ರ ಅದಲುಬದಲಾಗಿದೆ. ಮೋದಿ ಮತ್ತು ಅವರ ಆಡಳಿತವನ್ನೇ ನೆಚ್ಚಿಕೊಂಡು ಮುಂದಿನ ಚುನಾವಣೆಗೆ ಹೋದರೆ ತಮಗೆ ಉಳಿಗಾಲವಿಲ್ಲ ಎಂದು ಬಾದಲ್ ಜಾಗ್ರತೆ ವಹಿಸಿ, ಈಗಲೇ ಸಂಬಂಧ ಕಡಿದುಕೊಂಡು, ರೈತಪರ ಎಂಬ ತಮ್ಮ ಸಾಂಪ್ರದಾಯಿಕ ಟ್ಯಾಗ್ ಗಟ್ಟಿಮಾಡಿಕೊಳ್ಳಲು ರಾಜೀನಾಮೆಯ ದಾಳ ಉರುಳಿಸಿದ್ದಾರೆ.
ಅಂದರೆ; ಮೋದಿ ಮತ್ತು ಅವರ ವರ್ಚಸ್ಸು ಇನ್ನು ತಮಗೆ ಚುನಾವಣಾ ಯಶಸ್ಸು ತಂದುಕೊಡಲಾರದು ಎಂದು ಪಂಜಾಬಿನಲ್ಲಿಯೇ ಸೋತು ಸುಣ್ಣವಾಗಿರುವ ಅಕಾಲಿದಳದಂತಹ ಪಕ್ಷಕ್ಕೇ ಅನಿಸುವ ಮಟ್ಟಿಗೆ ಪಿಆರ್ ಪಡೆ ಕಟ್ಟಿದ ಮೋದಿ ವರ್ಚಸ್ಸು ಕಳಚಿಬಿದ್ದಿದೆ!