ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು “ಭಾರತದ ಎಲ್ಲಾ ಪ್ರಜೆಗಳಿಗೂ ಆರೋಗ್ಯ” ಘೋಷಣೆಯ ಅಡಿಯಲ್ಲಿ ಅನುಷ್ಠಾನಗೊಂಡ ಆಶಾ ಕಾರ್ಯಕ್ರಮವು, ಗ್ರಾಮೀಣ ಜನರ ಆರೋಗ್ಯ ಸುಧಾರಣೆಯನ್ನು ಖಾತರಿಗೊಳಿಸುವಡೆಗೆ ಇಟ್ಟ ಒಂದು ಹೆಜ್ಜೆಯಾಗಿದೆ. ತಾಯಿ, ಮಗು ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ. ಗ್ರಾಮೀಣ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಇವರು ಶುಚಿತ್ವ, ನೈರ್ಮಲ್ಯ, ಪೌಷ್ಠಿಕತೆಯನ್ನು ಹೆಚ್ಚಿಸುವುದು, ಗರ್ಭಿಣಿ ಮಹಿಳೆಯರ ನೋಂದಣಿಯ ಮೂಲಕ ಮಾತೃ ಮರಣದರವನ್ನು ತಗ್ಗಿಸುವುದು, ಮಗುವಿನ ಜನನಪೂರ್ವ ಕಾಳಜಿ ಮೂಲಕ ಶಿಶು ಮರಣ ದರವನ್ನು ಕಡಿಮೆಗೊಳಿಸುವುದು, ಸಾಂಸ್ಥಿಕ ಹೆರಿಗೆಗಳಿಗೆ ಪ್ರೋತ್ಸಾಹ ಇತ್ಯಾದಿ ವಿಷಯಗಳ ಅಗತ್ಯ ತಿಳುವಳಿಕೆಯನ್ನು ಗ್ರಾಮೀಣರಿಗೆ ಮೂಡಿಸುವ ಮೂಲಕ ಮೊದಲು ಸಂಭವಿಸುತ್ತಿದ್ದ ತಾಯಿ ಮತ್ತು ಮಕ್ಕಳ ಮರಣದರವನ್ನು ಗಣನೀಯವಾಗಿ ತಗ್ಗಿಸುವುದರ ಜೊತೆಗೆ, ಗ್ರಾಮೀಣ ಆರೋಗ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಕಂಡುಬಂದಿದೆ. ಗ್ರಾಮೀಣ ಭಾರತದ ಆರೋಗ್ಯ ಇತಿಹಾಸದಲ್ಲಿ ಈ ಯೋಜನೆ ಹೊಸ ಮೈಲಿಗಲ್ಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಸಮುದಾಯ ಮತ್ತು ಆರೋಗ್ಯ ಇಲಾಖೆಯ ಮಧ್ಯೆ ಸುವರ್ಣ ಸೇತುವೆಯ ಕೊಂಡಿಯಾಗಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರು ಜನಕಲ್ಯಾಣದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಆಶಾ ಎಂದರೆ (ASHA) A-Accredited S-Social H- Health A-Activists, ಕೇಂದ್ರ ಸರ್ಕಾರವು 2005-2012 ರವೆರೆಗೆ “ಎಲ್ಲರಿಗೂ ಆರೋಗ್ಯ” ಎಂದು ಘೋಷಣೆಯನ್ನು ಹೊರಡಿಸಿ ಆರಂಭಿಸಿದ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಪ್ರತಿ 1000 ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ರಾಜ್ಯದಲ್ಲಿ 2007-08ರಲ್ಲಿ ಅನುಷ್ಠಾನಕ್ಕೆ ಬಂದಿತು.
ಸಮುದಾಯದ ಆರೋಗ್ಯ ಸೇವೆಯಲ್ಲಿ ತೊಡಗಿರುವ ಈ ಆರೋಗ್ಯ ಕಾರ್ಯಕರ್ತೆಯರು ಪ್ರತಿಯೊಂದು ಹಳ್ಳಿಗಳಿಗೂ ಮಹತ್ವದ ಆರೋಗ್ಯ ಸೇವೆಯ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸಾಮುದಾಯಿಕ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಸಮುದಾಯದ ಬೆಂಬಲ, ಅಗತ್ಯ ಹಣಕಾಸು ವ್ಯವಸ್ಥೆ, ಸೂಕ್ತ ಯೋಜನೆ, ಸರ್ಕಾರದ ಕ್ರಿಯಾಶೀಲ ಮುಂದಾಳತ್ವ ಮತ್ತು ಪ್ರೋತ್ಸಾಹವಿದ್ದರೆ ಸಮರ್ಥವಾಗಿ ಆರೋಗ್ಯಾಭಿವೃದ್ಧಿ ಕಾರ್ಯ ಸಾಧಿಸಲು ಸಹಾಯಕವಾಗುತ್ತದೆ. ಇಲ್ಲವಾದರೆ ಯಾವುದೇ ರಾಷ್ಟ್ರ ಸಾಮುದಾಯಿಕ ಆರೋಗ್ಯ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಲಾರದು.
ಪ್ರಸ್ತುತ ರಾಜ್ಯದಲ್ಲಿ 40000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ವಿವಿಧ ಭಾಗಗಳಲ್ಲಿ ಆರೋಗ್ಯ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ 2005 ರ ಅನ್ವಯ ಆಶಾ ಕಾರ್ಯಕರ್ತೆಯರ ಸೇವೆಯನ್ನು 7 ವರ್ಷಗಳ ಮಟ್ಟಿಗೆ (2017 ರವರೆಗೆ) ಸದುಪಯೋಗಪಡಿಸಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಸಂಕೀರ್ಣ ಮತ್ತು ವೈವಿದ್ಯಮಯವಾಗಿರುವ ಭಾರತೀಯ ಸಾಮಾಜಿಕ ಪರಿಸರದಲ್ಲಿ ಆಶಾ ಕಾರ್ಯಕರ್ತೆಯರು ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಆಶಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರಿಂದಾಗಿ, ಭಾರತದ ಗ್ರಾಮೀಣ ಆರೋಗ್ಯಾಭಿವೃದ್ಧಿ ದೃಷ್ಟಿಯಿಂದ, ಈ ಯೋಜನೆಯನ್ನು 2012 ರಿಂದ 2017 ರವರೆಗೆ ಮುಂದುವರಿಸುವ ನಿರ್ಧಾರವನ್ನು ಭಾರತ ಸರ್ಕಾರ ಕೈಗೊಂಡಿದ್ದರಿಂದಾಗಿ ಪ್ರಸ್ತುತವೂ ಆಶಾ ಕಾರ್ಯಕರ್ತೆಯರ ವ್ಯವಸ್ಥಿತ ಯೋಜನೆಯು ಮುಂದುವರಿದಿದೆ.
2009 ರಿಂದ 2018 ರವರೆಗೆ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಸಾಧಿಸಿದ ಪ್ರಗತಿ
ಆಶಾ ಕಾರ್ಯಕರ್ತೆಯು ಮನೆಭೇಟಿ, ಗ್ರಾಮ/ನಗರ ಆರೋಗ್ಯ ಮತ್ತು ಪೌಷ್ಠಿಕ ದಿನಾಚರಣೆಗೆ ಹಾಜರಾಗುವುದು, ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡುವುದು, ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಜಾಗೃತಿ ಸಭೆಗಳನ್ನು ಸಂಘಟಿಸುವುದು, ಆರೋಗ್ಯ ದಾಖಲೆಗಳನ್ನು ನಿರ್ವಹಿಸುವ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು, ಸಮುದಾಯಕ್ಕೆ ಪೌಷ್ಠಿಕಾಂಶ, ಮೂಲಭೂತ ನೈರ್ಮಲ್ಯ ಮತ್ತು ಆರೋಗ್ಯಕರ ಪದ್ಧತಿಗಳು, ಆರೋಗ್ಯಕರ ಜೀವನ, ಪ್ರಸ್ತುತ ಲಭ್ಯವಿರುವ ಆರೋಗ್ಯ ಸೇವೆಗಳು ಮತ್ತು ಇವುಗಳ ಸದುಪಯೋಗದಂತಹ ವಿಷಯಗಳ ಬಗ್ಗೆ ಅರಿವು ಮೂಡಿಸುವುದು. ಹೆರಿಗೆಯ ಸಿದ್ಧತೆ, ಸುರಕ್ಷಿತ ಹೆರಿಗೆಯ ಪ್ರಾಮುಖ್ಯತೆ, ಸ್ತನ್ಯಪಾನದ ಪ್ರಾಮುಖ್ಯತೆ, ಲಸಿಕೆ, ಗರ್ಭನಿರೋಧಕಗಳ ಮಹತ್ವ, ಲೈಂಗಿಕ ಸೋಂಕುಗಳನ್ನು ತಡೆಗಟ್ಟುವಿಕೆಯ ಬಗ್ಗೆ ಮಹಿಳೆಯರು ಮತ್ತು ಕುಟುಂಬದವರಿಗೆ ಆಪ್ತ ಸಮಾಲೋಚನೆ ನಡೆಸುವುದು. ಗ್ರಾಮೀಣ ಪ್ರದೇಶದ ಮಹಿಳಾ ಆರೋಗ್ಯ, ನೈರ್ಮಲ್ಯ ಮತ್ತು ಪೋಷಣೆಯ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿಯೂ ಮತ್ತು ನಗರ ಪ್ರದೇಶದ ಮಹಿಳಾ ಆರೋಗ್ಯ ಸಮಿತಿಗೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೇಲ್ಲಾ ಸೇವೆ ಸಲ್ಲಿಸುವ ಇವರು ತಾವು ಸೇವೆಯನ್ನು ನೀಡುವಾಗ ಹಲವಾರು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವುಗಳೆಂದರೆ,
ಕುಟುಂಬದ ವಿರೋಧ, ಸೇವೆ ನೀಡುವಾಗ ಜನಾಂಗೀಯ ಸಮಸ್ಯೆ, ಸಮರ್ಪಕ ತರಬೇತಿ ನೀಡದಿರುವುದು, ಮೇಲಾಧಿಕಾರಿಗಳಿಂದ ಶೋ಼ಷಣೆ, ಲೈಂಗೀಕ ಶಿಕ್ಷಣ ನೀಡುವಾಗ ಸಮಾಜದಿಂದ ಮುಜುಗರಕ್ಕೊಳಗಾಗುವುದು, ನಿರ್ದಿಷ್ಠ ವೇತನವಿಲ್ಲದಿರುವುದು, ಆಶಾ ಕಾರ್ಯಕರ್ತೆಯರಿಗೆ ಬರುವ ಪ್ರೋತ್ಸಾಹಧನ ಅತ್ಯಲ್ಪವಾದ್ದರಿಂದ ಅದರಲ್ಲಿಯೇ ಕುಟುಂಬದ ಜವಬ್ದಾರಿಗಳನ್ನು, ಮನೆಯ ದಿನನಿತ್ಯದ ವೆಚ್ಚಗಳನ್ನು ಸರಿದೂಗಿಸುವುದು ಬಹಳ ಕಷ್ಟಕರವಾಗಿದೆ. ಸರ್ಕಾರದ ನೌಕರರೆಂದು ಪರಿಗಣಿಸದಿರುವುದು, ಪೂರಕ ಸೌಕರ್ಯಗಳನ್ನು ಒದಗಿಸದಿರುವುದು.ಫಲಿತಾಂಶದ ಆಧಾರದ ಗೌರವಧನ ರಚನೆ, ಕೆಳಮಟ್ಟದ ಸಾಂಸ್ಥಿಕ ಬೆಂಬಲ, ಆರೋಗ್ಯ ವ್ಯವಸ್ಥೆಯ ಕಠಿಣ ಶ್ರೇಣೀಕೃತ ರಚನೆ, ಸಮುದಾಯದಲ್ಲಿನ ಕೆಳಮಟ್ಟದ ಭಾಗವಹಿಸುವಿಕೆ ದರ ಇತ್ಯಾದಿಗಳು ಕಾರ್ಯಕರ್ತೆಯರ ಸಾಂಸ್ಕೃತಿಕ ಮಿತಿಯಾಗಿವೆ. ಆಶಾ ಕಾರ್ಯಕರ್ತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 34 ಚಟುವಟಿಕೆಗಳಡಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವುಗಳನ್ನು ಸವಾಲಿನಂತೆ ಸ್ವೀಕರಿಸಿ ಧೈರ್ಯದಿಂದ ತಮ್ಮ ದುಡಿಮೆಯ ಸ್ಥಳಗಳಲ್ಲಿ ಅತ್ಯಂತ ಯಶಸ್ವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಆರೋಗ್ಯ ಎನ್ನುವುದು ಸಮುದಾಯದ ಹಕ್ಕು, ಆರೋಗ್ಯದ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಜವಾಬ್ದಾರಿ, ಪಾರ್ಲಿಮೆಂಟ್ ಸಮಿತಿಯ 11 ನೇ ವರದಿ ಪ್ರಕಾರ “ Empowerment of woman on the working conditions Asha” ರಾಜ್ಯ ಸಭಾ ಮತ್ತು ಲೋಕಸಭೆಯು ಸೆಪ್ಟಂಬರ್ 7, 2011 ರ ವರದಿಯಲ್ಲಿ, ಆಶಾ ಕಾರ್ಯಕ್ರಮವು ಕಷ್ಟಕರವಾಗಿದ್ದು, ಹೆಚ್ಚು ಹೆಚ್ಚು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇವರು ಕೇವಲ 3 ರಿಂದ 4ಗಂಟೆಯವರೆಗೆ ಮಾತ್ರ ಕೆಲಸ ಮಾಡುತ್ತಾರೆ ಎಂದುಕೊಂಡಿತ್ತು. ಆದರೆ ಈ ಸಮಿತಿಯ ತನಿಖೆಯಿಂದ ಸರ್ಕಾರ ಕೊಡುತ್ತಿರುವ ಪ್ರೋತ್ಸಾಹಧನಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ ಎಂದು ತಿಳಿದುಬಂದಿದೆ. ಇವರ ಕೆಲಸದ ಅವಧಿಯನ್ನು ವಾರದಲ್ಲಿ 8 ರಿಂದ 12 ಗಂಟೆಗಳಿಗೆ ನಿಗಧಿಗೊಳಿಸಬೇಕು. ಉತ್ತಮವಾದ ಗೌರವಧನವನ್ನು ಕೊಡಬೇಕು. ಕೇವಲ ಅವರು ಮಾಡುವ ಕೆಲಸದ ಆಧಾರದ ಮೇಲೆ ಪ್ರೋತ್ಸಾಹಧನ ಕೊಡುವುದು ಸರಿಯಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರ ಹೆಚ್ಚು ವೇತನ ಮತ್ತು ಸೌಲಭ್ಯ ನೀಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇವರನ್ನು “ಕಾರ್ಯಕರ್ತೆ ಅಥವಾ ಸ್ವಯಂ ಸೇವಕರು” ಎಂಬುದನ್ನು ಹೇಳಿರುವುದರಿಂದ, ಅವರು ನಿಗಧಿತ ಸಂಭಾವನೆ ಮತ್ತು ಸರ್ಕಾರದ ಇತರೆ ಪಡೆದುಕೊಳ್ಳವಲ್ಲಿ ವಿಫಲವಾಗುತ್ತಿದ್ದಾರೆ ಎಂದು ತಿಳಿಸಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಶಾ ಕಾರ್ಯಕರ್ತೆಯರು ತಮ್ಮ ವೇತನ ನಿಗದಿ ಮತ್ತು ಯೋಜನೆಯ ಖಾಯಂಗಾಗಿ ಒತ್ತಾಯಿಸಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ತಮ್ಮ ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ. ಈ ಹೋರಾಟ ಇಂದು ಕೂಡ ನಡೆಯುತ್ತಿದೆ. ಸೆಪ್ಟಂಬರ್ 5, 2011 ರಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಒಕ್ಕೂಟವು ನಿಗದಿತ ವೇತನ ಮತ್ತು ಉದ್ಯೋಗ ಖಾಯಮಾತಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟವನ್ನು ನಡೆಸಿದರು. ಇದರ ಜೊತೆಗೆ ಪ್ರಯಾಣಭತ್ಯೆ, ಪ್ರೋತ್ಸಾಹಧನ ನೀಡುದಿರುವುದರ ಬಗ್ಗೆ ಮತ್ತು ಸಾಮಾಜಿಕ ಭದ್ರತೆ ಹಾಗೂ ಪ್ರಾವಿಡೆಂಟ್ ಫಂಡ್ನ ಬೇಡಿಕೆಗಾಗಿ ಈ ಚಳುವಳಿಯನ್ನು ನಡೆಸಿದರು. ಪ್ರಸ್ತುತ ಅವರು ಕೋವಿಡ್ 19 ಹಿನ್ನಲೆಯಲ್ಲಿ ಸೋಂಕಿತರ ಪತ್ತೆ ಸೇರಿದಂತೆ ವಿವಿಧ ಅಪಾಯಕಾರಿ ಕಾರ್ಯದಲ್ಲಿ ಅವರು ಕೊರೋನಾ ವಾರಯರ್ಸ್ಗಳಾಗಿ ನಿರತರಾಗಿದ್ದಾರೆ.
ಸಂವಿಧಾನದ 47ನೇ ಅನುಚ್ಛೇದವು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯ ಎಂದಿದೆ. ಗ್ರಾಮೀಣ ಜನರ ಆರೋಗ್ಯ ಸುಧಾರಣೆಯನ್ನು ತರುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಕೋರಾನಾ ಹಿನ್ನಲೆಯಲ್ಲಿ ಮುಖಗವಸು, ಸ್ಯಾನಿಟೈಸರ್ ಸೇರಿದಂತೆ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಒದಗಿಸುವುದು, ಕೋವಿಡ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಪ್ರೋತ್ಸಾಹಕ 3 ಸಾವಿರ ಪರಿಹಾರ ಹಣವನ್ನು ಹೆಚ್ಚಿಸಿ ಎಲ್ಲರಿಗೂ ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳುವುದು. ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಎರಡು ಸರ್ಕಾರಗಳೂ ಸೇರಿ 12,000 ವೇತನ ಜಾರಿಗೊಳಿಸಿ, ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಿ ಕೆಲಸ ಕಾಯಂ ಮಾಡುವುದು. ಸಣ್ಣ ಪುಟ್ಟ ಖಾಯಿಲೆಗಳಿಗೆ ಆಶಾ ಕಾರ್ಯಕರ್ತೆಯರೇ ಚಿಕಿತ್ಸೆ ಕೊಡುವುದು. ಇದಕ್ಕಾಗಿ ಔಷಧಿ ಮತ್ತು ಮಾತ್ರೆಗಳ ಬಗ್ಗೆ ಅವರಿಗಿರುವ ಅರಿವು ಹೆಚ್ಚಿಸುವುದು. ಸಾಮಾನ್ಯ ರೋಗಗಳಿಗೆ ಹಾಗೂ ತುರ್ತು ಸಂದರ್ಭಗಳಿಗೆ ಅನುಕೂಲವಾಗುವ ಉಪಕರಣ ಹಾಗೂ ಔಷಧಿಗಳನ್ನು ಒಳಗೊಂಡ ಔಷಧಿ ಕಿಟ್ ಸೌಲಭ್ಯವನ್ನು ಒದಗಿಸುವುದು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಮರಣ ಪರಿಹಾರ ಮತ್ತು ತೀವ್ರ ಕಾಯಿಲೆಗಳಿಗೆ ಸಹಾಯಧನ ನೀಡುವುದು.
ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಶಾಸನಬದ್ಧ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮುಕ್ತ ಶಾಲೆಯ ಸಹಯೋಗದೊಂದಿಗೆ ಸರ್ಟಿಫಿಕೇಷನ್ ಪ್ರಕ್ರಿಯೆಯನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ಕೈಗೆತ್ತಿಕೊಂಡಿದ್ದು, ಈ ಮೂಲಕ ಆಶಾ ಕಾರ್ಯಕರ್ತೆಯರಿಗೆ ಸರ್ಟಿಪಿಕೇಟ್ ಕೊಡಿಸಬೇಕು. 10 ದಿನಗಳ ಪುನರ್ ಮನನ ತರಬೇತಿ, ಆಂತರೀಕ ಮೌಲ್ಯಮಾಪನ, ಪ್ರಾಯೋಗಿಕ ಮತ್ತು ತಾತ್ವಿಕ ಪರೀಕ್ಷೆಯ ಮೂಲಕ ಉತ್ತೀರ್ಣತೆ ಪಡೆದವರಿಗೆ ಖಾಯಮಾತಿ ನೀಡಬೇಕು. ಕಾರ್ಯಕರ್ತೆಯರ ಕಾರ್ಯವೈಖರಿಯನ್ನು ಆಗಿಂದಾಗ್ಗೆ ಮೇಲ್ವಿಚಾರಣೆ ಮಾಡುವ ಮೂಲಕ ಅವರ ಕಾರ್ಯದಲ್ಲಿ ತೊಡಕುಗಳೇನಾದರೂ ಕಂಡುಬಂದಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿ ಅವರ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕು. ಗ್ರಾಮೀಣ ಜನರು ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಲು ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ಫೋನ್ ನೀಡಬೇಕು. ಸಾಂಸ್ಥಿಕ ಆರೋಗ್ಯ ಕೇಂದ್ರ ಭೇಟಿ ಹಾಗೂ ಕ್ಷೇತ್ರ ಕಾರ್ಯಗಳ ಸಂದರ್ಭಗಳಲ್ಲಿ ಇವರಿಗೆ ಪ್ರಯಾಣ ವೆಚ್ಚ ನೀಡಬೇಕು, ಸರ್ಕಾರದ ವಸತಿ ಇತ್ಯಾದಿ ಸೌಕರ್ಯ ನೀಡುವಾಗ ಇವರಿಗೆ ಆದ್ಯತೆ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಕ ಧನ ವಿತರಿಸಲು ರಾಜ್ಯ ಸರ್ಕಾರ ಅಳವಡಿಸಿರುವ ‘ಆಶಾ ಸಾಫ್ಟ್’ ತಂತ್ರಾಂಶ ಸರಿಪಡಿಸಬೇಕು.
ಆರೋಗ್ಯವು ಮಾನವ ಅಭಿವೃದ್ಧಿಯ ಪ್ರಮುಖವಾದ ಒಂದು ಸೂಚಕವಾಗಿದ್ದು. ರಾಜ್ಯದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿರೀಕ್ಷಿತ ಆರೋಗ್ಯ ಮಟ್ಟವನ್ನು ಸಾಧಿಸುವ ಹಾಗೂ ಅದನ್ನು ಕಾಪಾಡುಕೊಂಡು ಹೋಗುವುದೊಂದೆ ಆರೋಗ್ಯ ನೀತಿ ತಂತ್ರದ ಒಂದು ಅತ್ಯಾವಶ್ಯಕ ಆಯಾಮ. ಆರೋಗ್ಯ ನೀತಿಕ್ರಮಗಳ ಗಮನವು ಕಾಯಿಲೆಗಳನ್ನು ಪತ್ತೆಹಚ್ಚುವುದು. ಕಾಯಿಲೆ ಮತ್ತು ಗಾಯಗಳನ್ನು ಗುಣಪಡಿಸುವುದು ಮತ್ತು ಪ್ರಕರಣಗಳನ್ನು ಕಣ್ಗಾವಲು ವ್ಯವಸ್ಥೆಯ ಮೂಲಕ ಪತ್ತೆ ಹಚ್ಚಿ, ಆರೋಗ್ಯ ಸುಧಾರಿಸುವ ಸಲುವಾಗಿ ಪೂರಕ ವಾತವರಣ ನಿರ್ಮಾಣ ಮಾಡುವ ಮೂಲಕ ಸಮುದಾಯಗಳ ಮನೋಬಲ ಮತ್ತು ಪರಿಸರ ಗುಣಮಟ್ಟ ಸುಧಾರಿಸಿ ಸಾಮಾಜಿಕ/ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ದಿಸೆಯಲ್ಲಿ ತಳಸಮುದಾಯಗಳ ಕುಟುಂಬಕ್ಕೆ ಸೇರಿದ, ವಿಧವೆಯರು, ಪತಿಯ ಮರಣಾ ನಂತರ ಮಕ್ಕಳ ಜವಾಬ್ದಾರಿ ಹೊತ್ತ ತಾಯಂದಿರು, 5-6 ಜನ ಸದಸ್ಯರಿರುವ ಸಂಸಾರದ ನೊಗ ಹೊತ್ತ ಮಹಿಳೆಯರು, ಗಂಡ ತೊರೆದು ಹೋದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತಿಯಲ್ಲಿದ್ದಾರೆ. ರಾಜ್ಯವು ಆಶಾ ಕಾರ್ಯಕರ್ತರಂತಹ ಮುಂಚೂಣಿ ನೌಕರರಿಗೆ ಹೆಚ್ಚಿನ ಆದ್ಯತೆ ನೀಡಿ “ಎಲ್ಲರಿಗೂ ಆರೋಗ್ಯ” ಘೋಷಣೆ ಸಾಕಾರಗೊಳಿಸಬೇಕಿದೆ.