ಆ ರಾತ್ರಿ ಇಡೀ ನಗರವೇ ನೆಮ್ಮದಿಯಿಂದ ನಿದ್ದೆಗೆ ಜಾರಿತ್ತು. ಹೀಗೊಂದು ಅವಘಡ ಸಂಭವಿಸಬಹುದೆಂಬ ಸಣ್ಣ ಸುಳಿವೂ ಇರಲಿಲ್ಲ ಆ ನಗರದ ಮುಗ್ಧ ಜನತೆಗೆ. ಕೇವಲ ಒಂದು ಅನಿಲ ಎಷ್ಟೋ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ನಮ್ಮ ದೇಶದಲ್ಲಿ ಸಂಭವಿಸಿರುವ ದೊಡ್ಡ ದೊಡ್ಡ ದುರಂತಗಳ ಸಾಲಿಗೆ ಭೂಪಾಲ್ ತನ್ನ ಹೆಸರನ್ನು ಅಂದು ರಾತ್ರಿ ಲಗತ್ತಿಸುವಂತೆ ಮಾಡಿತ್ತು ದುರ್ವಿಧಿ.
ಸುಮಾರು 36 ವರ್ಷಗಳ ಹಿಂದೆ ನಡೆದಿದ್ದ, ಭಾರತೀಯರು ಯಾವುದನ್ನ ಮರೆಯಬೇಕೆಂದು ಕೊಂಡಿದ್ದರೋ ಅದೇ ಘಟನೆಯನ್ನು ಇಂದಿನ ವಿಶಾಖಪಟ್ಟಣಂ ವಿಷಾನಿಲ ದುರಂತ ನೆನಪಿಸುತ್ತಿರುವುದು ವಿಪರ್ಯಾಸ. ಇತಿಹಾಸ ಎಂಬುದು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ ಎಂಬ ನಾಸ್ಟ್ರಡಾಮಸ್ ಮಾತಿಗೆ ಪುಷ್ಠಿ ನೀಡುವಂತಿದೆ ಇಂದಿನ ವಿಶಾಖಪಟ್ಟಂ ಘಟನೆ.
ಅಸಲಿಗೆ ವಿಶಾಖಪಟ್ಟಣಂನಲ್ಲಿ ಆಗಿದ್ದೇನು?
ಕರೋನಾ ಕಾರಣದಿಂದಾಗಿ ಇಡೀ ದೇಶವನ್ನು ಕಳೆದ 47 ದಿನಗಳಿಂದ ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ‘LG ಪಾಲಿಮರ್ಸ್ ಇಂಡಸ್ಟ್ರಿ’ ಎಂಬ ರಾಸಾಯನಿಕ ಕಾರ್ಖಾನೆಯನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ, ಲಾಕ್ಡೌನ್ ಗೆ ಮುಂಚಿತವಾಗಿ ಮಾರ್ಚ್ ತಿಂಗಳಿಂದಲೇ ಇಲ್ಲಿನ 5,000 ಟನ್ ಟ್ಯಾಂಕ್ ಗಳಲ್ಲಿ ಅನಿಲ ಸೋರಿಕೆ ಉಂಟಾಗಿದೆ. ಆದರೆ, ಕಾರ್ಖಾನೆ ಮಾಲೀಕರು ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ.
ಪರಿಣಾಮ ಇಂದು ಅನಿಲ ಸೋರಿಕೆ ಅಧಿಕವಾಗಿದೆ. ವಿಷಾನಿಲ ಸೋರಿಕೆಯಾದ ಕಾರಣ ಸುತ್ತಮುತ್ತಲಿನ ಮನೆಗಳಿಗೂ ವಿಷಾನಿಲ ಹರಡಿದೆ. ಇದರಿಂದ ಮುಂಜಾನೆ ವಾಕಿಂಗ್ ಗೆ ಹೊರಗೆ ಬಂದಿದ್ದ ಸಾಕಷ್ಟು ಜನರು ಅಸ್ವಸ್ಥರಾಗಿ ಉಸಿರುಗಟ್ಟಿ ರಸ್ತೆಯಲ್ಲೇ ಬಿದ್ದಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಜನ ಸಾವನ್ನಪ್ಪಿದ್ದರೆ, ಸಾವಿರಕ್ಕೂ ಅಧಿಕ ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವಿಷಾನಿಲ ದುರಂತವನ್ನು ಈ ದಶಕದ ʼಅತ್ಯಂತ ದೊಡ್ಡ ವಿಷಾನಿಲ ದುರಂತʼ ಎಂದು ಪರಿಗಣಿಸಲಾಗಿದೆ. ಪರಿಣಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ಕೇಂದ್ರ ಮಾನವ ಹಕ್ಕು ಆಯೋಗ ನೊಟೀಸ್ ನೀಡಿದೆ. ಆದರೆ, ಭಾರತದಲ್ಲಿ ನಡೆದ ಮೊದಲ ವಿಷಾನಿಲ ದುರಂತ ಇದಲ್ಲ ಮತ್ತು ಭೋಪಾಲ್ ದುರಂತವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಭೂಪಾಲ್ ಅನಿಲ ದುರಂತ:
ಭೂಪಾಲ್ ಅನಿಲ ದುರಂತ, ಇಂದಿಗೂ ಭೂಪಾಲ್ ಜನರ ಹಾಗೂ ಇಡೀ ದೇಶದ ಜನರ ಎದೆ ಝಲ್ ಎನಿಸುವಂತಹ ಭೀಕರವಾದ ದುರಂತ. ಭೂಪಾಲ್ ದುರಂತ ಸಂಭವಿಸಿ ಮೂರು ದಶಕಗಳೇ ಕಳೆದಿವೆ, ಆದರೂ ಭೂಪಾಲ್ ನ ಜನರಿಗೆ ಇನ್ನೂ ಅದರ ಕೆಟ್ಟ ನೆನಪು ಮರೆಯಲಾಗದಂತೆ ಮನಸ್ಸಿನ ಪುಟದಲ್ಲಿ ಕುಳಿತು ತನ್ನ ಅಟ್ಟಹಾಸದ ದಿನಗಳನ್ನು ಪದೇ ಪದೇ ನೆನಪಿಸುತ್ತಿದೆ ಎಂದರೆ ತಪ್ಪಾಗಲಾರದು.
ಆ ರಾಕ್ಷಸನ ಹೆಸರು ಮೀಥೈಲ್ ಐಸೋಸಯನೇಟ್. ಆ ರಾಕ್ಷಸನ ಹಸಿವಿಗೆ ಅದೆಷ್ಟೋ ಮುಗ್ಧ ಜನರು ಆಹಾರವಾಗಿಬಿಟ್ಟರು. ಭೂಪಾಲ್ ಅನಿಲ ದುರಂತಕ್ಕೆ ಇದೀಗ 36 ವರ್ಷ. ಭೂಪಾಲ್ ಮಧ್ಯಪ್ರದೇಶ ರಾಜ್ಯದ ರಾಜಧಾನಿ ಹಾಗೂ ಭೂಪಾಲ್ ಜಿಲ್ಲೆಯ ಆಡಳಿತ ಕೇಂದ್ರ. ಇಂತಹ ನಗರದಲ್ಲಿ 1984ನೇ ಇಸವಿ ಡಿಸಂಬರ್ ನಲ್ಲಿ ನಡೆದ ದುರಂತಕ್ಕೆ ತುತ್ತಾದವರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚು. ಮಧ್ಯಪ್ರದೇಶ ಸರ್ಕಾರ ಮೃತರ ಸಂಖ್ಯೆ 3,787 ಎಂದು ದೃಢಪಡಿಸಿತ್ತು. ಇದಲ್ಲದೇ ಇತರ ಮೂಲಗಳ ಪ್ರಕಾರ ಅನಿಲದ ದುಷ್ಪರಿಣಾಮದಿಂದ ಎರಡು ವಾರದಲ್ಲಿ 8000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ಆದರೆ, ಒಂದು ಅಂದಾಜಿನ ಪ್ರಕಾರ ಭೂಪಾಲ್ ವಿಷಾನಿಲ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 25,000 ಎನ್ನಲಾಗುತ್ತಿದೆ. ಆ ಕಾಲದಲ್ಲಿ ಭೂಪಾಲ್ ಅನಿಲ ದುರಂತಕ್ಕೆ ಮೂಲ ಕಾರಣಗಳೇನು ಎಂಬುದು ದೊಡ್ಡ ಚರ್ಚೆಗೊಳಗಾದ ವಿಷಯ. ನಿರ್ವಹಣೆಯಲ್ಲಿನ ಬೇಜವಾಬ್ದಾರಿಯೇ ದುರಂತಕ್ಕೆ ಮೂಲ ಕಾರಣ ಎಂದು ಭಾರತ ಸರ್ಕಾರ ಹಾಗೂ ಸ್ಥಳೀಯ ಕೆಲವು ಸಂಘಟನೆಗಳ ವಾದ.
ಭೂಪಾಲ್ ದುರಂತದಲ್ಲಿ ಅಪರಾಧಿ ಯಾರು?
ಆ ಕಂಪೆನಿಯ ಹೆಸರು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್(UCIL – Union Carbide India Limited). UCIL ಎಂಬ ಅಮೆರಿಕ ಮೂಲದ ಈ ಕಂಪೆನಿ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತದೆ. ಸೆವಿನ್ ಎಂಬ ಕೀಟನಾಶಕವನ್ನು ಉತ್ಪಾದಿಸುವ ಸಲುವಾಗಿ 1969ರಲ್ಲಿ UCIL ಕಾರ್ಖಾನೆಯನ್ನು ಸ್ಥಾಪಿಸಲಾಗಿತ್ತು.
ಈ ಸೆವಿನ್ ಕೀಟನಾಶಕವನ್ನು ತಯಾರಿಸಲು ಮೀಥೈಲ್ ಐಸೊಸೈನೇಟ್ (Methyl Isocyanate – MIC) ರಾಸಾಯನಿಕ ವಸ್ತುವಿನ ಅವಶ್ಯಕತೆ ಇತ್ತು. ಇದರ ಸಲುವಾಗಿ 1979ರಲ್ಲಿ MIC ಉತ್ಪಾದನಾ ಸ್ಥಾವರವನ್ನು ಭೂಪಾಲ್ ನಲ್ಲಿ ಸ್ಥಾಪಿಸಲಾಗಿತ್ತು. ಮೀಥೈಲಮೈನ್ (Methylamine) ಹಾಗೂ ಫೋಸ್ಗೀನ್ (Phosgene) ಜೊತೆಗೆ ರಾಸಾಯನಿಕ ಕ್ರಿಯೆಯಿಂದ MIC ಉತ್ಪತ್ತಿಯಾಗುತ್ತಿತ್ತು. ಹೀಗೆ ಬಂದ MIC, ನಂತರ 1-ನ್ಯಾಪ್ತಾಲ್(1- naphthol) ರಾಸಾಯನಿಕದೊಂದಿಗೆ ಪ್ರತಿಕ್ರಿಯಿಸಿದ ನಂತರ ಕಾರ್ಬರೈಲ್(Carbaryl) ಎಂಬ ಕ್ರಿಮಿನಾಶಕ ಉತ್ಪತ್ತಿಯಾಗುತ್ತಿತ್ತು.
ಈ ಕ್ರಿಮಿನಾಶಕವನ್ನು ಸೆವಿನ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟಮಾಡಲಾಗುತ್ತದೆ. ಮೀಥೈಲ್ ಐಸೊಸೈನೇಟ್ ವಿಷಕಾರಿ ಅನಿಲ. ಗಾಳಿಯಲ್ಲಿ ಸುಲಭವಾಗಿ ಅವಿಯಾಗಿಬಿಡುವ ಶಕ್ತಿಯನ್ನು ಈ ಅನಿಲ ಹೊಂದಿದೆ.
ಭೂಪಾಲ್ ನಲ್ಲಿ ಸ್ಥಾಪಿಸಲಾಗಿದ್ದ MIC ಸ್ಥಾವರದಲ್ಲಿ ಈ ಅನಿಲವನ್ನು ಭೂಮಿಯ ಒಳಗಡೆ ದ್ರವ ರೂಪದಲ್ಲಿ ಸಂಗ್ರಹಿಸಿಡಲಾಗಿತ್ತು. ಅಳತೆಗೂ ಮೀರಿ ಅಧಿಕವಾಗಿ ಸಂಗ್ರಹಿಸಿಟ್ಟಿದ್ದೇ ಈ ದುರಂತಕ್ಕೆ ಕಾರಣವಾಯಿತೆಂಬ ಮಾಹಿತಿ ಘಟನೆಯ ತರುವಾಯ ಬೆಳಕಿಗೆ ಬಂದ ವಿಷಯ. ಯೂನಿಯನ್ ಕಾರ್ಬೈಡ್ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವಾರನ್ ಆ್ಯಂಡರ್ಸನ್.
ವಾರನ್ ಆ್ಯಂಡರ್ಸನ್ ನನ್ನು ಈ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು. ಆತನನ್ನು ಸೆರೆ ಹಿಡಿಯಲು ವಿಶೇಷ ತಂಡವನ್ನೂ ರಚಿಸಲಾಗಿತ್ತು. ಆದರೆ, ಘಟನೆ ನಡೆದ ತಕ್ಷಣ ಈತನನ್ನು ಸುರಕ್ಷಿತವಾಗಿ ದೇಶದಿಂದ ಪಲಾಯನ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು ಎಂದೂ ಟೀಕಿಸಲಾಗುತ್ತದೆ.
ಆನಂತರ ಸತತ 30 ವರ್ಷ ಈತನನ್ನು ಹುಡುಕುವ ದೊಡ್ಡ ನಾಟಕವೇ ಸರ್ಕಾರಿಂದ ನಡೆದಿದ್ದು ಇತಿಹಾಸ. ಆದರೆ, ಭಾರತದಲ್ಲಿ ಅತಿದೊಡ್ಡ ವಿಷಾನಿಲ ದುರಂತಕ್ಕೆ ಕಾರಣವಾದ ಈತ ಕೊನೆಗೆ ವಯೋ ಸಹಜ ಖಾಯಿಲೆಯಿಂದ ಅಮೆರಿಕದಲ್ಲಿ ಮೃತಪಟ್ಟ ಎಂಬುದು ವಾಸ್ತವ ಹಾಗೂ ಅಸಂಖ್ಯಾತ ಭಾರತೀಯರ ಸಾವಿಗೆ ಕೊನೆಗೂ ನ್ಯಾಯ ದೊರಕದ್ದು ಅದಕ್ಕಿಂತ ದೊಡ್ಡ ವಾಸ್ತವ ಹಾಗೂ ಭಾರತದ ರಾಜಕೀಯ ಲಾಭಕೋರತನಕ್ಕೆ ಹಿಡಿದ ಕನ್ನಡಿ.
ಭೂಪಾಲ್- ಆ ದುರಂತದ ಚಿತ್ರಣ!
ಅದು 1984ನೇ ಡಿಸಂಬರ್ ಸಮಯ 12 ಘಂಟೆ 05 ನಿಮಿಷ. MIC ಸ್ಥಾವರದಲ್ಲಿ ಸೋರಿಕೆ ಕಂಡುಬಂದಿತ್ತು. ಈ ವಿಷಯ ಕಂಟ್ರೋಲ್ ರೂಮ್ ನಲ್ಲಿದ್ದ ಸಿಬ್ಬಂದಿ ವರ್ಗದವರಿಗೆ ತಿಳಿದಿತ್ತು. ಈ ವೇಳೆ ಸಣ್ಣ ಪ್ರಮಾಣದ ಸೋರಿಕೆ ಇರಬಹುದು ಎಂದು ತಿಳಿದು ಒತ್ತಡ ಮಾಪನವನ್ನು ಪರೀಕ್ಷಿಸಲಾಗಿತ್ತು. ಅಷ್ಟೇನು ಏರು ಪೇರನ್ನು ಕಾಣದ ಸಿಬ್ಬಂದಿಗಳು ಕೊನೆಗೆ ಸುಮ್ಮನಾಗಿದ್ದರು.
ಕೆಲವು ಸಿಬ್ಬಂದಿಯನ್ನು ಸೋರಿಕೆಯ ಮೂಲವನ್ನು ಹುಡುಕಲು ಕಳುಹಿಸಿ, ಉಳಿದ ಸಿಬ್ಬಂದಿಗಳು ʼಒಂದು ಟೀ ಬ್ರೇಕ್ʼ ನಂತರ ಪರೀಕ್ಷಿಸಿದರಾಯಿತು ಎಂದುಕೊಂಡು ಟೀ ಕುಡಿಯಲು ತೆರಳಿದ್ದರು. MIC ಸ್ಥಾವರಕ್ಕೆ ಹೊಂದಿಕೊಂಡಿದ್ದ ಹಲವಾರು ಪೈಪ್ ಗಳ ದುರಸ್ತಿ ಕಾರ್ಯ ನಡೆಯುತ್ತಿದ್ದ ಸಂದರ್ಭ ಅದು. ದುರಸ್ತಿಯಲ್ಲಿದ್ದ ಪೈಪ್ ನ ಮೂಲಕ ಅಧಿಕ ಪ್ರಮಾಣದ ನೀರು 40 ಟನ್ MIC ದ್ರಾವಣವ ಸಂಗ್ರಹಿಸಿಟ್ಟಿದ್ದ E610 ಟ್ಯಾಂಕ್ ಒಳಗೆ ಪ್ರವೇಶಿಸಿದೆ.
ಮೊದಲೇ ಅಧಿಕ ಒತ್ತಡವನ್ನು ತಡೆಯಲಾಗದ ಪರಿಸ್ಥಿತಿಯಲ್ಲಿದ್ದ E610 ಟ್ಯಾಂಕ್ನ ಒಳಗೆ ಅಧಿಕ ಪ್ರಮಾಣದ ನೀರು ಒಳಹೊಕ್ಕಿದ್ದು ದೊಡ್ಡ ದುರಂತಕ್ಕೆ ಮೂಲ ಕಾರಣ. MIC ದ್ರಾವಣದ ಜೊತೆ ನೀರು ಸೇರಿದ ಕಾರಣ ಹಾಗೂ ಪೈಪ್ ನಲ್ಲಿದ್ದ ಕಬ್ಬಿಣದ ಅಂಶದಿಂದಾಗಿ ಸ್ಥಾವರದೊಳಗೆ ಬಹಿರುಷ್ಣಕ (Exothermic Reaction)) ಕ್ರಿಯೆ ಪ್ರಾರಂಭವಾಗಿ ಬಿಡುತ್ತದೆ.
ಸಮಯ 12 ಘಂಟೆ 30 ನಿಮಿಷ. ಕಂಟ್ರೋಲ್ ರೂಮ್ ನ ಸಿಬ್ಬಂದಿಗಳಿಗೆ ವಿಚಿತ್ರವಾದ ಶಬ್ಧ ಹಾಗೂ ಅನಿಲದ ವಾಸನೆಯ ಅನುಭವವಾಗುತ್ತದೆ. ಅದಾಗಲೇ ಪರಿಸ್ಥಿತಿ ಹೆಚ್ಚುಕಡಿಮೆ ಸಂಪೂರ್ಣವಾಗಿ ಕೈಮೀರಿಹೋಗಿತ್ತು. E610 ಸ್ಥಾವರದೊಳಗೆ ಅಧಿಕವಾದ ತಾಪಮಾನ ಹಾಗೂ ಒತ್ತಡ ಉಂಟಾಗಿತ್ತು. ಟ್ಯಾಂಕ್ ನ ಸಿಮೆಂಟ್ ಪದರದಲ್ಲಿ ಬಿರುಕುಗಳು ಬರಲಾರಂಭಿಸಿದವು.
ಅಧಿಕ ಒತ್ತಡದಿಂದಾಗಿ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವ ಸಲುವಾಗಿ ಟ್ಯಾಂಕ್ ಗೆ ಹೊಂದಿಕೊಂಡಿದ್ದ ಕವಾಟವೊಂದು ಸ್ವಯಂಚಾಲಿತವಾಗಿ ತೆರೆದುಕೊಂಡಿತು. ಟ್ಯಾಂಕ್ ನಲ್ಲಿದ್ದ MIC ದ್ರಾವಣ ವಿಷಾನಿಲವಾಗಿ ಕವಾಟದ ಮೂಲಕ ಗಾಳಿಗೆ ಸೇರಿಕೊಳ್ಳಲು ಆರಂಭಿಸಿತು. ದುರಂತವೆಂದರೆ ವಾತಾವರಣದೊಂದಿಗೆ ವಿಷಾನಿಲವನ್ನು ಸೇರಿಕೊಳ್ಳದಂತೆ ತಡೆಗಟ್ಟಬಲ್ಲ ಮೂರೂ ಸುರಕ್ಷತಾ ಸಾಧನಗಳು ಅಂದು ಕೆಟ್ಟುಹೋಗಿದ್ದವು.
ನೋಡನೋಡುತ್ತಿಂದತೆಯೇ 8 ಕಿಲೋಮೀಟರ್ ಗಳಷ್ಟು ವ್ಯಾಪ್ತಿಯನ್ನು ಆವರಿಸಿದ ವಿಷಾನಿಲ ಭೂಪಾಲ್ ಜನರ ಜೀವಕ್ಕಾಗಿ ಹಪಹಪಿಸುತ್ತಿತ್ತು. ನಿದ್ದೆಗೆ ಜಾರಿದ್ದ ಜನಕ್ಕೆ ವಿಚಿತ್ರವಾದ ಅನುಭವ ಉಂಟಾಗಿ ಏನಾಗುತ್ತಿದೆ ಎಂಬುದೇ ತಿಳಿಯದಂತಾಗಿತ್ತು. ಮಕ್ಕಳ ಕಣ್ಣುಗಳಲ್ಲಿ ವಿಚಿತ್ರವಾದ ನೋವು ಹಾಗೂ ಉಸಿರಾಟದಲ್ಲಿ ತೊಂದರೆಗಳು ಕಂಡು ಬರಲಾರಂಭಿಸಿತು.
ಕೆಮ್ಮು, ಕಣ್ಣುರಿ, ಉಸಿರಾಟದ ತೊಂದರೆ ಹೀಗೆ ಹಲವಾರು ವಿಚಿತ್ರ ಅನುಭವಗಳು. ಏನಾಗುತ್ತಿದೆ ಎಂದು ತಿಳಿಯಲಾಗದೆ ಭೂಪಾಲ್ ನ ಜನ ಆಸ್ಪತ್ರೆಯತ್ತ ಧಾವಿಸಲಾರಂಭಿಸಿದರು. ವೈದ್ಯರಿಗೂ ಏನಾಗುತ್ತಿದೆ ಎಂಬುದನ್ನು ತಿಳಿಯುವುದೇ ಕಷ್ಟಸಾಧ್ಯವಾಯಿತು. ಮೊದಲಿಗೆ ಬಹುಶಃ ಅಮೋನಿಯಾ ಇರಬಹುದೆಂದು ತಿಳಿದಿದ್ದ ವೈದ್ಯರಿಗೆ ಆಘಾತದಂತೆ ಬಂದೆರಗಿದ ಸುದ್ದಿ ಎಂದರೆ ಇದು ವಿಷಕಾರಿ ಅನಿಲ ʼಮೀಥೈಲ್ ಐಸೊಸೈನೇಟ್ʼ ಎಂದು.
ಆದರೆ, ಈ ಸತ್ಯ ತಿಳಿಯುವುದರ ಒಳಗಾಗಿ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಜನ ಸಾವಿಗೀಡಾಗಿದ್ದರು. ತಾವು ಏಕೆ ಸಾಯುತ್ತಿದ್ದೇವೆ? ಎಂದು ತಿಳಿಯದೆಯೇ ಜನ ದಾರಿಯಲ್ಲಿ ಮಡಿದು ಮಲಗಿದ್ದರು. ಅಸಂಖ್ಯಾತ ಪ್ರಾಣಿ ಪಕ್ಷಿಗಳ ಮಾರಣ ಹೋಮವೂ ನಡೆದಿತ್ತು.
ಅದ್ಯಾರೋ ಗೊತ್ತಿಲ್ಲದ ವ್ಯಕ್ತಿಯ ಬೊಕ್ಕಸ ತುಂಬಿಸಲು ಸ್ಥಾಪಿಸಿದ ಕಾರ್ಖಾನೆಗೆ ಮುಗ್ಧ ಜೀವಗಳು ಬಲಿಯಾದವು. ಭೂಪಾಲ್ನ ಜನರು ಘಟನೆ ನಡೆದು ಮೂರು ದಶಕಗಳು ಕಳೆದರೂ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಲೇ ಇದ್ದಾರೆ. ಭಾರತ ಕಂಡ ಅತ್ಯಂತ ದೊಡ್ಡ ಕೈಗಾರಿಕಾ ದುರಂತಕ್ಕೆ ಈಗ 36 ವರ್ಷ ಸಂದಿದೆ.
ಆದರೆ, ಭೂಪಾಲ್ ನೆನಪು ಮಾಸುವ ಮುನ್ನವೇ ಇದೇ ರೀತಿಯ ಮತ್ತೊಂದು ಘಟನೆ ವಿಶಾಖಪಟ್ಟಣಂ ನಲ್ಲಿ ಇಂದು ಜರುಗಿರುವುದು ದುರಾದೃಷ್ಟಕರ. ಆದರೆ, ತಮ್ಮದಲ್ಲದ ತಪ್ಪಿಗೆ ಸಾವಿಗೀಡಾದ ವಿಶಾಖಪಟ್ಟಣಂ ಜನರ ಸಾವಿಗಾದರೂ ನ್ಯಾಯ ದೊರಕಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂಬುದೇ ಎಲ್ಲರ ಆಶಯ ಮತ್ತು ಒತ್ತಾಯವೂ ಹೌದು…!