ಭಾರತ ಲಾಕ್ಡೌನ್ ಆಗಿದ್ದರೂ ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಬಹುದು ಎಂದು ಕೇಂದ್ರ ಗೃಹ ಇಲಾಕೆ ಆದೇಶ ಹೊರಡಿಸಿದೆ. ರೈಲು ಸೇವೆ ಬೇಕಿದ್ದರೆ ಕೊಡುತ್ತೇವೆ ಎಂದಿರುವ ಕೇಂದ್ರ ಸರ್ಕಾರ ಕಾರ್ಮಿಕರ ಪಟ್ಟಿ ಪಡೆದು ಕರೆದೊಯ್ಯುವ ಕೆಲಸ ಮಾಡುತ್ತಿದೆ. ಮೇ 3 ರಂದು ಒಡಿಶಾದ ಭುವನೇಶ್ವರಕ್ಕೆ ಸಾವಿರಕ್ಕೂ ಅಧಿಕ ಜನರನ್ನು ಹೊತ್ತ ರೈಲು ಬಂಡಿ ತೆರಳಿತ್ತು. ಅದೇ ರೀತಿ ಮೇ 4 ರಂದು ಸಾವಿರಾರು ಜನ ಬಿಹಾರ ಮೂಲದ ಕಾರ್ಮಿಕರು ತಮ್ಮ ಹುಟ್ಟೂರಿಗೆ ಹೊರಟು ನಿಂತಿದ್ದರು. ಆದರೆ ಸರ್ಕಾರಕ್ಕೆ ಮಾತ್ರ ಬಿಹಾರ ಉತ್ತರ ಪ್ರದೇಶ ಕಾರ್ಮಿಕರನ್ನು ವಾಪಸ್ ಕಳುಹಿಸಲು ಸುತಾರಾಂ ಇಷ್ಟವಿಲ್ಲ. ಹಾಗಾಗಿ ಮನವೊಲಿಕೆ ಮಾಡಲು ಮುಂದಾಗಿದ್ದಾಗ ಕಾರ್ಮಿಕರು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ತಲೆಗೆ ಪೆಟ್ಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುದ್ದಿಗೋಷ್ಟಿಗೂ ಮುನ್ನ ಕಾರ್ಮಿಕರು ವಾಪಸ್ ಹೋಗ್ತಿರೋ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಿದ್ರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ. ಕಂದಾಯ ಸಚಿವ ಆರ್ ಆಶೋಕ್, ಸಚಿವ ಸುರೇಶ್ ಕುಮಾರ್, ಶಾಸಕ ಎಸ್ ಆರ್ ವಿಶ್ವನಾಥ್, ಕಮೀಷನರ್ ಭಾಸ್ಕರ್ ರಾವ್ ಭಾಗಿಯಾಗಿದ್ದರು. ಸಭೆ ಬಳಿಕ ಕಾರ್ಮಿಕರ ಮನವೊಲಿಕೆಗೆ ತೆರಳುವ ಮುನ್ನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರಾದ ಆರ್ ಆಶೋಕ್ ಹಾಗೂ ಸುರೇಶ್ ಕುಮಾರ್ ಜಂಟಿ ಸುದ್ದಿಗೋಷ್ಟಿ ನಡೆಸಿ, ವಲಸೆ ಕಾರ್ಮಿಕರನ್ನ ಈಗಾಗಲೇ ಅವರ ರಾಜ್ಯಗಳಿಗೆ ಕಳಿಸಲಾಗ್ತಿದೆ. ಬೆಂಗಳೂರಲ್ಲಿ ವಾಸ ಮಾಡೋ ಕೂಲಿ ಕಾರ್ಮಿಕರು ತಮ್ಮ ಊರಿಗೆ ಹೋಗಲು ಮನವಿ ಮಾಡಿದ್ದರು. ಬೇರೆ ರಾಜ್ಯ ಸರ್ಕಾರಗಳಿಗೆ ನಾವು ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಆದ್ರೆ ಅಲ್ಲಿನ ರಾಜ್ಯ ಸರ್ಕಾರ ಇನ್ನು ಪ್ರತಿಕ್ರಿಯೆ ಕೊಟ್ಟಿಲ್ಲ. ಪ್ರತಿಕ್ರಿಯೆ ಬಂದ ನಂತರ ಕಳುಹಿಸುವ ಪ್ರಕ್ರಿಯೆ ಆಗುತ್ತೆ. ಇದರ ಮದ್ಯೆ ನಾಳೆ ಮೆಟ್ರೋ ಕಾರ್ಪೊರೇಷನ್ ಕೆಲಸ ನಡೆಸುವಂತೆ ಸೂಚನೆ ಕೊಟ್ಟಿದ್ದೇನೆ. ಕೆಲಸದ ವೇಳೆ ಅವರಿಗೆ ಉಚಿತ ಊಟ ಕೊಡುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇವೆ. ಇವಾಗ ನಾವು ಮಾದಾವರ ಬಳಿ ಹೋಗಿ ಅವರನ್ನ ಮನವೊಲಿಸೋ ಕೆಲಸ ಮಾಡ್ತಿವಿ. ಅವರ ಬಳಿ ಮಾತನಾಡಿ ಇಲ್ಲೆ ಉಳಿಸುವ ಕೆಲಸ ಮಾಡ್ತಿವಿ ಎಂದು ಸಚಿವ ಆರ್ ಆಶೋಕ್ ಹೇಳಿದರು.
ಮಾಲೀಕರು ಕಾಂಟ್ರಾಕ್ಟರ್ಗಳಿಗೆ ಸಂಬಳ ಕೊಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಕಾರ್ಮಿಕರು ಊರಿಗೆ ಹೋದರೂ ಅವರನ್ನು ಅವರ ರಾಜ್ಯದಲ್ಲಿ ಕ್ವಾರಂಟೈನ್ ಮಾಡುತ್ತಾರೆ. ಆ ವಿಚಾರ ಅವರಿಗೆ ಗೊತ್ತಿಲ್ಲ. ಅದನ್ನ ಅವರಿಗೆ ಮನವರಿಕೆ ಮಾಡಿ ಕೊಡ್ತೇವೆ. ಎಂದು ತಿಳಿಸಿದ ಸಚಿವರು ಹೊರ ರಾಜ್ಯದ ಕಾರ್ಮಿಕರು ಇರುವ ಮಾದಾವಾರಕ್ಕೆ ಭೇಟಿ ನೀಡಿದ್ದರು. ಮಾದಾವಾರ ವಸ್ತು ಪ್ರದರ್ಶನ ಕೇಂದ್ರದಲ್ಲಿರುವ ಸುಮಾರು ಏಳು ಸಾವಿರಕ್ಕೂ ಬಿಹಾರ ಮೂಲದ ಕಾರ್ಮಿಕರನ್ನು ಭೇಟಿ ಮಾಡಿದ ಸಚಿವ ಆರ್ ಆಶೋಕ್ ಮತ್ತು ಸುರೇಶ್ ಕುಮಾರ್ ಮನವೊಲಿಕೆ ಪ್ರಯತ್ನ ನಡೆಸಿದ್ರು.
ಮನವೊಲಿಕೆ ಮಾಡಲು ಮುಂದಾಗ್ತಿದ್ದಂತೆ ಕುಪಿತರಾದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಿದರು. ರೈಲು ನಿಲ್ದಾಣದ ಬಳಿ ಸೇರಿದ್ದ ಬಿಹಾರ ಮೂಲದ ಕಾರ್ಮಿಕರನ್ನು ಬಸ್ಗಳಲ್ಲಿ ತುಂಬಿ ಬಿಇಎಸಿ ಮೈದಾನಕ್ಕೆ ಕರೆತರಲಾಗಿತ್ತು. ಊರಿಗೆ ತೆರಳಲು ಸಾಧ್ಯವಾಗದೆ ಬಿಹಾರಿಗಳು ಗಲಾಟೆ ಶುರು ಮಾಡಿದ್ದರು. ಕಲ್ಲು ತೂರಿದ್ದರಿಂದ ಪೀಣ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುದ್ದುರಾಜ್ಗೆ ಕಲ್ಲೇಟು ಬಿದ್ದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಕೊಡಿಸಲಾಗಿದೆ.

ನಿಮ್ಮ ರಾಜ್ಯಗಳಲ್ಲಿ ಇನ್ನೂ ಅನುಮತಿ ನೀಡಿಲ್ಲ. ನಿಮ್ಮ ರಾಜ್ಯದಿಂದ ಅನುಮತಿ ನೀಡಿದ ಕೂಡಲೇ ನಿಮ್ಮನ್ನ ಕಳುಹಿಸುತ್ತೇವೆ ಎನ್ನುತ್ತ ಸಚಿವರು ಕಾರ್ಮಿಕರ ಮನವೊಲಿಕೆ ಯತ್ನ ನಡೆಸಿದ್ದಾರೆ. ಕಾರ್ಮಿಕರು ತೆರಳದಂತೆ ಮನವೊಲಿಸಲು ಯತ್ನ ಮಾಡಿದ್ರು. ಬಿಹಾರಿ ಕಾರ್ಮಿಕರನ್ನ ಮತ್ತೆ ನಗರದೊಳಗೆ ಕರೆ ತರಲು ಪೊಲೀಸರ ಯತ್ನ ನಡೆಸಿದ್ರು. ಈಗ ನಿಮ್ಮನ್ನ ಕಳುಹಿಸಿದರೆ ನಿಮ್ಮನ್ನ ಅಲ್ಲಿ ಕ್ವಾರಂಟೈನ್ ಮಾಡುತ್ತಾರೆ ಎಂದು ಮನವೊಲಿಸಲು ಯತ್ನಿಸಿದರು. ಈ ವೇಳೆ ಇನ್ನೂ ಎರಡು ದಿನ ಇಲ್ಲೆ ಇರಲು ಉತ್ತರ ಭಾರತೀಯ ವಲಸೆ ಕಾರ್ಮಿಕರು ಒಪ್ಪಿಕೊಂಡರು. ಬಿಹಾರದಿಂದ ಅನುಮತಿ ಪತ್ರಕ್ಕೆ ಮನವಿ ಮಾಡಲಾಗುವುದು. ಅನುಮತಿ ಪತ್ರ ಬಂದ ಕೂಡಲೆ ಇವರನ್ನೆಲ್ಲ ಕಳುಹಿಸಿಕೊಡಲಾಗುವುದು. ಅಲ್ಲಿಯವರೆಗೂ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಬಿಐಇಸಿ ಮೈದಾನದಲ್ಲೇ ಬಿಬಿಎಂಪಿಯಿಂದ ಮೂರು ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುವುದು. ಕೆಲವರು ಬೆಂಗಳೂರಿನ ತಮ್ಮ ನಿವಾಸಗಳಿಗೆ ತೆರಳುತ್ತೇವೆ ಎಂದಿದ್ದಾರೆ. ನಿವಾಸಗಳಿಗೆ ಹೋಗುತ್ತೇವೆ ಎಂದವರಿಗೆ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.
ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೊರಟರೆ ಈಗಾಗಲೇ ಶುರುವಾಗಿರುವ ಕಾಮಗಾರಿಗಳು ಸ್ಥಗಿತಗೊಳ್ಳುವ ಆತಂಕದಲ್ಲಿ ರಾಜ್ಯ ಸರ್ಕಾರವಿದೆ ಎನ್ನಲಾಗಿದೆ. ಈಗಾಗಲೇ ಮೆಟ್ರೋ ಸೇರಿ ಇತರ ಕಾಮಗಾರಿಗಳ ಕೆಲಸಕ್ಕೆ ಅಡಚಣೆ ಎದುರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮ ಸ್ವಂತ ಊರುಗಳಿಗೆ ಕಾರ್ಮಿಕರು ಹೊರಟಿದ್ದಾರೆ. ನಮ್ಮ ರಾಜ್ಯ ಹಾಗೂ ಇತರ ರಾಜ್ಯಗಳ ಕಾರ್ಮಿಕರು ತಮ್ಮ ಹುಟ್ಟೂರುಗಳತ್ತ ವಾಪಸ್ ತೆರಳುತ್ತಿದ್ದು, ಕಾರ್ಮಿಕರು ವಾಪಸ್ ಹೋದ್ರೆ ನಿರ್ಮಾಣ ಹಂತದ ಕಾಮಗಾರಿಗಳ ಕೆಲಸ ಸ್ಥಗಿತ ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಮಿಕರ ಮನವೊಲಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಉತ್ತರ ಪ್ರದೆಶ ಹಾಗೂ ಬಿಹಾರ ರಾಜ್ಯಗಳು ತಮ್ಮ ರಾಜ್ಯದ ಕಾರ್ಮಿಕರನ್ನು ಬರೆಬೇಡಿ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಯಾಕಂದರೆ ಅವರೆಲ್ಲರೂ ಅಲ್ಲಿನ ನಿವಾಸಿಗಳು. ಇನ್ನೂ ಕಾಮಗಾರಿ ಆಸೆಗಾಗಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿರಬಹುದು. ಅಥವಾ ಆ ರಾಜ್ಯಗಳೊಂದಿಗೆ ಸಮನ್ವಯತೆ ಸಾಧಿಸುವಲ್ಲಿ ವಿಫಲವಾಗಿರಬಹುದು. ಇನ್ನಾದರೂ ಕಾಮಗಾರಿ ಆಸೆಗೆ ಕಾರ್ಮಿಕರನ್ನು ಬಲಿಕೊಡದೆ ವಾಪಸ್ ಕಳುಹಿಸಿಕೊಡಬೇಕಿದೆ. ಬದುಕಿದ್ದರೆ ಅಲ್ಲವೇ ನಿಮ್ಮ ಅಭಿವೃದ್ಧಿ.?






