ಕರೋನಾ ಭಯದಲ್ಲಿ ಜನರೆಲ್ಲಾ ಮನೆ ಸೇರಿಕೊಂಡಿದ್ದಾರೆ. ಪ್ರಾಣಿಗಳೆಲ್ಲಾ ಸ್ವಚ್ಛಂಧವಾಗಿ ಓಡಾಡುತ್ತಿವೆ ಎಂದು ಕೆಲವರು ಪರಿಶೀಲಿಸದ ವಿಡಿಯೋ ತುಣುಕುಗಳನ್ನ ಶೇರ್ ಮಾಡಿಕೊಂಡು ಬೀಗುವುದನ್ನ ನೋಡಿದ್ದೇವೆ. ಆ ವಿಡಿಯೋಗಳ ಅಸಲಿಯತ್ತು ಎಷ್ಟೋ ಗೊತ್ತಿಲ್ಲ..! ನಮ್ಮ ದೇಶದಲ್ಲಿ ಜನರು ಓಡಾಡುವ ಪ್ರದೇಶದಲ್ಲೆಡೆ ತಕ್ಷಣ ವ್ಯಾಪಿಸಿಬಿಡುವ ಪ್ರಾಣಿಗಳಿವಿಯೋ ಇಲ್ಲವೋ..! ಆದರೆ ಕಳ್ಳ ಬೇಟೆಗೆ ಬಲಿಯಾಗುತ್ತಿರುವ ಪ್ರಾಣಿಗಳನ್ನ ಸಂಖ್ಯೆ ನೋಡಿದರೆ ಕರೋನಾ ವೈರಸ್ನ್ನ ಶಪಿಸಲೇಬೇಕಾಗುತ್ತೆ.
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಣೆ ಮಾಡಿದ ಮಾರನೇ ದಿನವೇ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ಐಎಂ ನಾಗಾರಾಜ್, ನಾಲ್ವರನ್ನ ಕಚೇರಿಗೆ ತಂದು ವಿಚಾರಣೆ ನಡೆಸಿದ್ದರು. ಮಾಧ್ಯಮಗಳ ಜೊತೆ ಮಾತನಾಡಿ, ಇವರೆಲ್ಲಾ ಕರೋನಾ ಸಮಯಸಾಧಕರು, ಲಾಕ್ಡೌನ್ ಸಮಯ ನೋಡಿ ಅಮೂಲ್ಯವಾದ ಮರಗಳನ್ನ ಕಡಿದು ಸಾಗಿಸಿದ್ದಾರೆ ಎಂದು ಹೇಳಿದರು. ಕರ್ಫ್ಯೂ ವಿಧಿ ಅನ್ವಯವಾಗಿದ್ದು ಎಲ್ಲರೂ ಕರೋನಾ ಮಹಾಮಾರಿಯನ್ನ ಶಪಿಸಿ ಮನೆಯೊಳಗೆ ಸೇರುತ್ತಿದ್ದರೆ ಕಳ್ಳರ ತಲೆಯಲ್ಲಿ ದುಷ್ಟ ಯೋಚನೆಗಳು ಓಡಾಡುತ್ತಿದ್ದವು. ಇತ್ತ ಅರಣ್ಯ ಅಧಿಕಾರಿಗಳೂ ಸಹ ಕರೋನಾ ಗುಮ್ಮಕ್ಕೆ ಹೆದರಿ ಮನೆ ಸೇರಿಕೊಂಡರು. ಕಳೆದ ತಿಂಗಳ ಕೊನೆ ವಾರದಲ್ಲಿ ಕಾಡು ಪ್ರಾಣಿ ವಧೆಯ ಎಂಟು ಪ್ರಕರಣಗಳು ಪತ್ತೆಯಾದವು. ಏಪ್ರಿಲ್ ಮೊದಲ ವಾರದಲ್ಲಿ ಇದು ದುಪ್ಪಟ್ಟಾಯ್ತು. ಅರಣ್ಯ ಇಲಾಖೆ ವರ್ಷವಿಡೀ ಊಹಿಸಬಹುದಾದ ಮೊತ್ತದಷ್ಟು ಒಂದೇ ವಾರದಲ್ಲಾಯ್ತು. ಇವೆಲ್ಲಾ ಬೆಳಕಿಗೆ ಬಂದ ಪ್ರಕರಣಗಳು, ಇನ್ನೆಷ್ಟು ಅವಶೇಷಗಳು ಕಾಡಿನಲ್ಲಿ ಒರಗಿವೆಯೋ, ಕಟುಕರ ಮನೆಯ ಸೂರಿನಲ್ಲಿ ನೇತಾಡುತ್ತಿವೆಯೋ ಗೊತ್ತಿಲ್ಲ..!

ನಾಗರಹೊಳೆ, ಬಂಡೀಪುರ ಅಭಯಾರಣ್ಯ, ದಾಂಡೇಲಿ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರತಿದಿನ ವನ್ಯಜೀವಿಗಳ ಮಾರಣ ಹೋಮ ನಡೆಯುತ್ತಿದೆ. ಮಾರ್ಚ್ ಕೊನೆಯ ವಾರ ಚಿಕ್ಕಮಗಳೂರಿನ ಕಡೂರಿನಲ್ಲಿ ಅರಣ್ಯ ಅಧಿಕಾರಿಗಳು ಲಗೇಜ್ ಆಟೋವನ್ನ ವಶಕ್ಕೆ ಪಡೆಯುತ್ತಾರೆ. ಅದರಲ್ಲಿ 80 ಕೆ.ಜಿ ಜಿಂಕೆ ಮಾಂಸವಿತ್ತು. ಆದರೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮೂವರನ್ನ ವಶಕ್ಕೆ ಪಡೆದು ಬಂಡಿಪುರ ಅಭಯಾರಣ್ಯದ ಬಫರ್ಝೋನ್ನಲ್ಲಿ ಬೇಟೆಯಾಡಿದ ಮೊಲಗಳು ಹಾಗೂ ಜಿಂಕೆಮರಿಗಳನ್ನ ವಶಕ್ಕೆ ಪಡೆದರು. ಕೊಡಗಿನಲ್ಲಿ ಓರ್ವನನ್ನ ಸೆರೆಹಿಡಿದರು. ಶಿವಮೊಗ್ಗದ ಕುಂಸಿ ಬಳಿಯ ಕೆಂಪಿನಕೊಪ್ಪ ಗ್ರಾಮದಲ್ಲಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಯ್ತು. ಪಕ್ಕದಲ್ಲಿದ್ದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದಾಗ ಮಟನ್ಸ್ಟಾಲ್ ತರಹ ಜಿಂಕೆಗಳ ಕೊಂಬು, ತಲೆ, ಕೋಡುಗಳನ್ನ ತೂಗು ಹಾಕಲಾಗಿತ್ತು. ಓರ್ವನನ್ನ ವಶಪಡಿಸಿಕೊಂಡು ಮೃತ ಪ್ರಾಣಿಗಳ ಭಾಗಗಳನ್ನ ವಶಕ್ಕೆ ಪಡೆದರು. ಕರೋನಾ ವೈರಸ್ ದಾಳಿಗೆ ಪಟ್ಟಣಗಳು ಖಾಲಿ, ಮಾಂಸ-ಮೀನು ಅಂಗಡಿಗಳಿಗೆ ನಿರ್ಬಂಧ, ಅರಣ್ಯ ಅಧಿಕಾರಿಗಳು ಮನೆಯಲ್ಲಿ ಕೂತಿರಬಹುದು ಎಂಬ ಅದಮ್ಯ ನಂಬಿಕೆ ಈ ಕಳ್ಳರದ್ದು. ಹಾಗಾಗಿಯೇ ನಿಷೇಧಿತ, ಸಂರಕ್ಷಿತ ಅರಣ್ಯಗಳಿಗೆಲ್ಲಾ ದಾಳಿ ಇಡುತ್ತಿದ್ದಾರೆ.
ಕರೋನಾ ಮುಳುವಾಗಿದ್ದು ಕೇವಲ ಕಾಡು ಪ್ರಾಣಿಗಳಿಗಷ್ಟೇ ಅಲ್ಲ, ಅರಣ್ಯ ನಾಶಕ್ಕೂ ಎಡೆಮಾಡಿದಂತಿದೆ. ಕೆಲವು ಪರಿಸರವಾದಿಗಳು ರಸ್ತೆಯ ಮೇಲೆ ಕಾಡುಪ್ರಾಣಿಗಳು ಓಡಾಡಿವೆ, ಲಾಕ್ಡೌನ್ನಿಂದ ಜನರ ಉಪಟಳ ಇಲ್ಲ, ಕಾಡ್ಗಿಚ್ಚು ಕಡಿಮೆ ಎನ್ನುತ್ತಾರೆ.

ವಾಸ್ತವದಲ್ಲಿ ಕಾಡಿಗೆ ಬೆಂಕಿ ಇಡುವ ಕೆಲಸ ನಿಧಾನವಾಗಿ ನಡೆಯುತ್ತಿದೆ. ಸಾಕಷ್ಟು ಕಡೆಯಲ್ಲಿ ಕಾಡಿಗೆ ಕೊಳ್ಳಿಇಡುವ ಕೆಲಸ ಸಾಗಿದೆ. ಒತ್ತುವರಿಯೂ ಎಗ್ಗಿಲ್ಲದೇ ನಡೆಯುತ್ತಿದೆ. ಹೆದ್ದಾರಿ ಅಕ್ಕಪಕ್ಕದಲ್ಲಿ ಇದ್ಯಾವುದೂ ನಡೆಯುತ್ತಿಲ್ಲ. ಹಳ್ಳಿಗಳಲ್ಲಿ ಸಾಕಷ್ಟು ಕೆಲಸ ಲಾಕ್ಡೌನ್ ಸಮಯದಲ್ಲೇ ಮುಗಿಸಿದ್ದಾರೆ. ಉರುವಲಿಗಾಗಿ ಸೌಧೆಯ ಅಗತ್ಯತೆಯೂ ಎದುರಾಗಿದೆ. ಕೃಷಿ ಚಟುವಟಿಕೆಗಳಿಗೆ ಭೂಮಿ ಸಿದ್ಧಪಡಿಸುವ ಭರಾಟೆಯಲ್ಲಿ ಇಟ್ಟ ಬೆಂಕಿ ಕಾಡುಗಳಲ್ಲಿ ಆವರಿಸಿದೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಲಾಕ್ಡೌನ್ ಸಮಯದ ಅಗತ್ಯ ಸೇವೆಗಳಲ್ಲಿ ಅರಣ್ಯ ಇಲಾಖೆಯನ್ನೂ ಸೇರಿಸಬೇಕಿತ್ತು. ಆಗ ಅರಣ್ಯ ಇಲಾಖೆ ಕೂಡ ಜಾಗೃತವಾಗಿರುತ್ತಿತ್ತು.






