1975. ಆಗ ದೇಶ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಯಿಂದ ಕೆರಳಿ ಹೋಗಿತ್ತು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು ಎಂದು ಆ ಸರ್ಕಾರದ ವಿರುದ್ಧ ಜನಸಂಘ ಸೇರಿದಂತೆ ಮತ್ತಿತರೆ ಪ್ರತಿಪಕ್ಷಗಳು ಸರ್ಕಾರ ಮತ್ತು ಇಂದಿರಾಗಾಂಧಿ ವಿರುದ್ಧ ಕಿಡಿಕಾರಿದ್ದವು. 2019-20 ಕಾಶ್ಮೀರದ ಸ್ಥಿತಿಯನ್ನು ಗಮನಿಸಿದರೆ 1975 ರ ತುರ್ತುಪರಿಸ್ಥಿತಿಗಿಂತಲೂ ಭೀಕರತೆಯ ಮತ್ತೊಂದು ಮುಖವನ್ನು ತೋರಿಸುತ್ತಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಕಾಯ್ದೆಯನ್ನು ರದ್ದು ಮಾಡಿದ್ದರಿಂದ ಅಲ್ಲಿ ಘರ್ಷಣೆ, ಹಿಂಸಾಚಾರ ನಡೆಯಬಹುದು ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಇಂಟರ್ನೆಟ್, ದೂರವಾಣಿ, ಮೊಬೈಲ್ ಸೇರಿದಂತೆ ಬಹುತೇಕ ಎಲ್ಲಾ ಸಂಪರ್ಕ ಸೌಲಭ್ಯಗಳನ್ನು ಬಂದ್ ಮಾಡಿತ್ತು. ಆದರೆ, ಹೆಚ್ಚಿನ ಪ್ರತಿಭಟನೆಗಳು, ಘರ್ಷಣೆಗಳು ನಡೆಯಲಿಲ್ಲ. ಆದಾಗ್ಯೂ, ಈ ಸೌಲಭ್ಯಗಳನ್ನು ಪುನರ್ ಸ್ಥಾಪಿಸಲು ಮಾತ್ರ ಮೋದಿ ಸರ್ಕಾರ ಮನಸ್ಸು ಮಾಡಲೇ ಇಲ್ಲ.
ಅಂತಿಮವಾಗಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು. ಇಂಟರ್ನೆಟ್ ಎಂಬುದು ಜನರ ಮೂಲಭೂತ ಹಕ್ಕಾಗಿದೆ. ಅದನ್ನು ಮೊಟಕುಗೊಳಿಸುವಂತಿಲ್ಲ. ಕೂಡಲೇ ಆ ರಾಜ್ಯದ ಜನರಿಗೆ ಇಂಟರ್ನೆಟ್, ಮೊಬೈಲ್ ಸೇವೆಗಳನ್ನು ಪುನರ್ ಸ್ಥಾಪಿಸುವಂತೆ ಆದೇಶ ನೀಡಿತು. ಆದರೆ, ಕೇಂದ್ರ ಸರ್ಕಾರಕ್ಕೆ ಈ ಸೇವೆಗಳನ್ನು ಪುನರ್ ಸ್ಥಾಪಿಸುವ ಮನಸ್ಸಿಲ್ಲದಿದ್ದರೂ ಸುಪ್ರೀಂಕೋರ್ಟು ನೀಡಿರುವ ಆದೇಶವನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿಂದ ಪುನರ್ ಸ್ಥಾಪಿಸಲು ಹೊರಟಿದೆ.
ಇಲ್ಲಿಯೂ ಕೂಡ ಕೇಂದ್ರ ಸರ್ಕಾರ ತನ್ನ ಬುದ್ಧಿವಂತಿಕೆ ಉಪಯೋಗಿಸಿದೆ. ಇಂಟರ್ನೆಟ್ ಸೌಲಭ್ಯವನ್ನು 168 ದಿನಗಳ ನಂತರ ಪುನರ್ ಸ್ಥಾಪಿಸಿದ್ದರೂ ಕೇವಲ ಸೀಮಿತ ವೆಬ್ ಸೈಟ್ ಗಳನ್ನು ಅಕ್ಸೆಸ್ ಮಾಡುವ ಅವಕಾಶವನ್ನು ಕಲ್ಪಿಸಿದೆ. ಅಂದರೆ ಇತರೆ ರಾಜ್ಯಗಳ ಜನರು ಅಕ್ಸೆಸ್ ಮಾಡಿದ ರೀತಿಯಲ್ಲಿ ಕಾಶ್ಮೀರದ ಜನತೆ ಎಲ್ಲಾ ವೆಬ್ ಸೈಟ್ ಗಳನ್ನು ಬ್ರೌಸ್ ಮಾಡಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಕಾಶ್ಮೀರ ಕಣಿವೆಯ ಜನರು 153 ವೆಬ್ ಸೈಟ್ ಗಳನ್ನು ಮಾತ್ರ ಅಕ್ಸೆಸ್ ಮಾಡಲು ಸಾಧ್ಯ. ಇಷ್ಟೇ ಅಲ್ಲ. ಪ್ರತಿಯೊಬ್ಬರು ಇಂಟರ್ನೆಟ್ ನಲ್ಲಿ ನಡೆಸುವ ವ್ಯವಹರಿಸುವ ಎಲ್ಲಾ ಚಟುವಟಿಕೆಗಳ ಮೇಲೆ ಕೇಂದ್ರ ಸರ್ಕಾರದ ಕಣ್ಗಾವಲು ಇರುತ್ತದೆ.
ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ ಇದೇ ಮೊದಲ ಬಾರಿಗೆ ಜನತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಅವರು ಹೇಳಿದ್ದನ್ನು ಮಾಡಬೇಕು, ಮಾಡಬೇಡ ಎಂದರೆ ಮಾಡುವಂತಿಲ್ಲ ಎನ್ನುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಕಾಶ್ಮೀರ ಜನತೆಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿ ಮತ್ತು ಶಾ ಬಿತ್ತರವಾಗುವ ಸುದ್ದಿಗಳು ಮತ್ತು ಅಭಿಪ್ರಾಯಗಳ ಮೇಲೆ ಕಣ್ಣಿಟ್ಟು, ಅವರಿಗೆ ವಿರುದ್ಧವಾಗಿರುವಂತಹವುಗಳನ್ನು ಬ್ಲಾಕ್ ಮಾಡುವಷ್ಟರ ಮಟ್ಟಿಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಕಾಶ್ಮೀರದ ವಿಚಾರಗಳು ಡಿಜಿಟಲ್ ಮಾಧ್ಯಮದ ಮೂಲಕ ಕಾಶ್ಮೀರದಿಂದ ಹೊರ ಹೋಗದಂತೆ ತಡೆಯುತ್ತಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದ ನಂತರ ಇಂಟರ್ನೆಟ್ ಸೇವೆಗಳನ್ನು ಪುನರ್ ಸ್ಥಾಪಿಸುತ್ತಿದೆ. ಇಂಟರ್ನೆಟ್ ಈಗ ಜನರ, ವ್ಯಾಪಾರಸ್ಥರ ಜೀವನಾಡಿಯಾಗಿದೆ. ಇಂತಹ ಜೀವನಾಡಿಯನ್ನೇ ಸ್ಥಗಿತಗೊಳಿಸಿದರೆ ಅವರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯಗಳನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿತ್ತು.
ಸುಪ್ರೀಂಕೋರ್ಟ್ ನೀಡಿದ್ದ ಒಂದು ವಾರದ ಗಡುವಿನಲ್ಲಿ ಪರಿಶೀಲನೆ ನಡೆಸಿರುವ ಕೇಂದ್ರ ಸರ್ಕಾರ, ಕೇವಲ ಕೆಲವೇ ಕೆಲವು ವೆಬ್ ಸೈಟ್ ಅಕ್ಸೆಸ್ ಮಾಡಲು ಅವಕಾಶ ನೀಡಿದೆ. ಅದೂ ಕೂಡ ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕಗಳಿಗೆ 2ಜಿ ಸ್ಪೀಡ್ ನಲ್ಲಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈಗ ಅವಕಾಶ ಮಾಡಿಕೊಟ್ಟಿರುವ ವೆಬ್ ಸೈಟ್ ಗಳ ಪೈಕಿ ಒಂದೇ ಒಂದು ನ್ಯೂಸ್ ಸೈಟ್ ಗಳಾಗಲೀ ಅಥವಾ ಸಾಮಾಜಿಕ ಮಾಧ್ಯಮ ತಾಣಗಳಾಗಲೀ ಇಲ್ಲ. ಈ ಮೂಲಕ ಮೋದಿ ಸರ್ಕಾರ ಕಾಶ್ಮೀರ ಜನತೆ ಮೇಲೆ ಸವಾರಿ ಮಾಡುತ್ತಿದೆ.
ಹಿಂಸಾಚಾರಗಳು ನಡೆಯುತ್ತವೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡು ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರ ಆಗಸ್ಟ್ 4 ರಿಂದ ಇಲ್ಲಿವರೆಗೆ ಇಂಟರ್ನೆಟ್ ಅನ್ನು ಬ್ಯಾನ್ ಮಾಡಿದೆ. ಆದರೆ, ಈ ಬ್ಯಾನ್ ಮಾಡಿದ ವಿಚಾರಕ್ಕೆ ಸರ್ಕಾರ ಎಲ್ಲಿಯೂ ಲಿಖಿತ ಆದೇಶಗಳನ್ನು ಹೊರಡಿಸಿಲ್ಲ ಅಥವಾ ಸುತ್ತೋಲೆಯನ್ನೂ ಕೊಟ್ಟಿಲ್ಲ. ಆದಾಗ್ಯೂ, ರಾಜ್ಯದ ಎಲ್ಲಾ ಲೀಸ್ಡ್ ಲೈನ್ ಗಳು, ಬ್ರಾಡ್ ಬ್ಯಾಂಡ್ ಸಂಪರ್ಕಗಳು, ಎಲ್ಲಾ ಮೊಬೈಲ್ ದೂರವಾಣಿ ಸಂಪರ್ಕಗಳ ವಾಯ್ಸ್, ಮೆಸೇಜ್ ಮತ್ತು ಡೇಟಾ ಹಾಗೂ ಲ್ಯಾಂಡ್ ಲೈನ್ ನ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು.
ಹೀಗೆ ಕಾಶ್ಮೀರದಲ್ಲಷ್ಟೇ ಅಲ್ಲ, ಭಾರತದಲ್ಲಿ ಇಡೀ ದೂರಸಂಪರ್ಕ ಸೇವೆಯನ್ನು ಸ್ಥಗಿತಗೊಳಿಸಿರುವುದು ಇದೇ ಮೊದಲು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಲ್ಯಾಂಡ್ ಲೈನ್ ಟೆಲಿಫೋನ್ ಗಳನ್ನು ಬ್ಯಾನ್ ಮಾಡಿರಲಿಲ್ಲ. ಐದು ವಾರಗಳ ನಂತರ ಲ್ಯಾಂಡ್ ಲೈನ್ ಸೇವೆಯನ್ನು ಪುನಾರಂಭಿಸಲಾಗಿತ್ತು, 2019 ರ ಅಕ್ಟೋಬರ್ ನಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ, ಪ್ರೀಪೇಯ್ಡ್ ಸಂಪರ್ಕಗಳನ್ನು ಇನ್ನೂ ಪುನಾರಂಭಿಸಲಾಗಿಲ್ಲ. ಕುಪ್ವಾರ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಜನವರಿ 18 ರಿಂದ 153 ಅನುಮೋದಿತ ವೆಬ್ ಸೈಟ್ ಗಳ ಅಕ್ಸೆಸ್ ಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ, ಕಾಶ್ಮೀರದಾದ್ಯಂತ ಸಣ್ಣಪುಟ್ಟ ವಿನಾಯ್ತಿಗಳನ್ನು ಹೊರತುಪಡಿಸಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಯ ಸ್ಥಗಿತ ಮುಂದುವರಿದಿದೆ. ಅಂದರೆ, ಸಾಫ್ಟ್ ವೇರ್ ಸೇವೆಗಳನ್ನು ಒದಗಿಸುತ್ತಿರುವ ಕಂಪನಿಗಳಿಗೆ ಮಾತ್ರ ಬ್ಯಾಡ್ ಬ್ಯಾಂಡ್ ಸೇವೆಯನ್ನು ನೀಡಲಾಗುತ್ತಿದೆ.
ಕೇಂದ್ರ ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯಿಂದ ಕಾಶ್ಮೀರ ಕಣಿವೆಯಲ್ಲಿರುವ ಬಹಳಷ್ಟು ವಿದ್ಯಾರ್ಥಿ ಸಮುದಾಯ ಇಂಟರ್ನೆಟ್ ಸೇವೆ ಇಲ್ಲದೇ ಶಿಕ್ಷಣ, ವಿವಿಧ ಕೋರ್ಸುಗಳಿಗೆ ಮತ್ತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ದುಸ್ಥರವಾಗಿದೆ. ಇದಲ್ಲದೇ, ಜನಸಾಮಾನ್ಯರು ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗಿನ ಸಂಪರ್ಕವನ್ನೇ ಕಡಿದುಕೊಳ್ಳುವಂತಾಗಿದೆ. ಇಂಟರ್ನೆಟ್ ಮೇಲೆ ಅವಲಂಬಿತವಾಗಿದ್ದ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದು ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದ್ದು, 10-20 ವರ್ಷಗಳ ಹಿಂದೆ ಬೀಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಕೃಪೆ: ದಿ ವೈರ್