ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಬೇರೆ ನಾಯಕರನ್ನು ಕುಳ್ಳಿರಿಸಲು ಕಾಂಗ್ರೆಸ್ ಹೈಕಮಾಂಡ್ ಹಿಂದೇಟು ಹಾಕಿದೆ. ಬಿಜೆಪಿ ವಿರುದ್ಧ ಹೋರಾಡಲು ಪ್ರಬಲ ಅಸ್ತ್ರಗಳು ಸಿಕ್ಕಿರುವಾಗ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬದಲಿಸಿ ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ವರಿಷ್ಠರು ಬಂದಂತಿದೆ. ಆದರೆ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡುವಂತಹ ಸ್ವಲ್ಪ ಆಕ್ರಮಣಕಾರಿ ಮನೋಭಾವದವರನ್ನು ನೇಮಿಸುವ ಬಗ್ಗೆ ಯೋಚನೆ ಮಾಡಿದೆ.
ಉಪ ಚುನಾವಣೆ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಎರಡೂ ಹುದ್ದೆಗಳಿಗೆ ಬೇರೆಯವರನ್ನು ನೇಮಕ ಮಾಡಬೇಕು ಎಂಬ ಒತ್ತಾಯ ಪಕ್ಷದ ಒಂದು ವಲಯದಿಂದ ಕೇಳಿಬಂದಿತ್ತು. ಆದರೆ, ಇನ್ನೊಂದು ಬಣ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಒತ್ತಾಯ ಮಾಡಿತ್ತು. ಹೀಗಾಗಿ ಪಕ್ಷದ ಸ್ಥಳೀಯ ಮುಖಂಡರು, ಶಾಸಕರು, ಹಿರಿಯ ನಾಯಕರ ಅಭಿಪ್ರಾಯ ಪಡೆಯಲು ಎಐಸಿಸಿ ಮಧುಸೂಧನ್ ಮಿಸ್ತ್ರಿ ಮತ್ತು ಭಕ್ತ ಚರಣದಾಸ್ ಅವರನ್ನು ಪ್ರತಿನಿಧಿಗಳಾಗಿ ಕರ್ನಾಟಕ್ಕೆ ಕಳುಹಿಸಿಕೊಟ್ಟಿತ್ತು.
ಈ ಇಬ್ಬರು ನಾಯಕರು ಪಕ್ಷದ ಶಾಸಕರು, ಮುಖಂಡರು ಮತ್ತು ಹಿರಿಯ ನಾಯಕರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು, ಸಿದ್ದರಾಮಯ್ಯ ಅವರನ್ನು ಶಾಸಕಾಂಗ ನಾಯಕ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಹೆಚ್ಚಿನ ಮಂದಿ ಈ ನಾಯಕರ ಮುಂದೆ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣಗಳನ್ನೂ ಕೊಟ್ಟಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಹೇಳುತ್ತಿದ್ದವರು ಅದಕ್ಕೆ ಸರಿಯಾದ ಕಾರಣಗಳನ್ನು ಹೇಳಲಿಲ್ಲ. ಕೇವಲ ವಿಧಾನಸಭೆ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಮತ್ತು ಸೋಲಿನ ವಿಚಾರವನ್ನು ಮಾತ್ರ ಮುಂದಿಟ್ಟು ಸಿದ್ದರಾಮಯ್ಯ ಅವರ ಬದಲಾವಣೆಗೆ ಒತ್ತಾಯಿಸಿದ್ದರು.
ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೀಡಿದ ರಾಜೀನಾಮೆ ಅಂಗೀಕರಿಸಿ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವಂತೆ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ದಿನೇಶ್ ಗುಂಡೂರಾವ್ ಅವರು ಬಿಜೆಪಿ ಮತ್ತು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುವ ಭರದಲ್ಲಿ ಪಕ್ಷವನ್ನು ಮುಜುಗರಕ್ಕೀಡುಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಕಾದ ಆಕ್ರಮಣಕಾರಿ ಮತ್ತು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಮನಸ್ಥಿತಿ ಅವರಲ್ಲಿಲ್ಲ. ಮೇಲಾಗಿ ಪ್ರಬಲ ಸಮುದಾಯಕ್ಕೂ ಸೇರಿದವರಲ್ಲ. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದರಿಂದ ಪಕ್ಷಕ್ಕೆ ಹೆಚ್ಚಿನ ಲಾಭ ಆಗುವುದಿಲ್ಲ ಎಂದು ಎಐಸಿಸಿ ಪ್ರತಿನಿಧಿಗಳ ಮುಂದೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ.
ಈ ಎಲ್ಲಾ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಸಬೇಕು ಎಂಬ ನಿಲುವನ್ನು ಎಐಸಿಸಿಯಿಂದ ಬಂದಿದ್ದ ಮಧುಸೂಧನ್ ಮಿಸ್ತ್ರಿ ಮತ್ತು ಭಕ್ತ ಚರಣದಾಸ್ ಹೊಂದಿದ್ದಾರೆ. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯ ಅವರು ಏಕೆ ಈ ಸ್ಥಾನದಲ್ಲಿ ಮುಂದುವರಿಸಬೇಕು ಹಾಗೂ ದಿನೇಶ್ ಗುಂಡೂರಾವ್ ಬದಲಾವಣೆ ಏಕಾಗಬೇಕು ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
ಸಿದ್ದರಾಮಯ್ಯ ಮುಂದುವರಿಯಲು ಕಾರಣಗಳು
ಶಾಸಕಾಂಗ ಪಕ್ಷದ ನಾಯಕರಾಗುವವರಿಗೆ ಹೆಚ್ಚು ಶಾಸಕರ ಬೆಂಬಲ ಇರಬೇಕು. ಪ್ರಸ್ತುತ ಕಾಂಗ್ರೆಸ್ ನ 68 ಶಾಸಕರ ಪೈಕಿ ಸಿದ್ದರಾಮಯ್ಯ ಪರವಾಗಿ 45ಕ್ಕೂ ಹೆಚ್ಚು ಶಾಸಕರಿದ್ದಾರೆ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕರಾಗಿದ್ದಾಗ ಉತ್ತಮವಾಗಿ ಕೆಲಸ ಮಾಡಿದ್ದಾರೆ. 2008-2013ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ವಿಧಾನಸಭೆಯ ಒಳಗೆ ಮತ್ತು ಹೊರಗೆ ಆಡಳಿತಾರೂಢ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿ 2013ರಲ್ಲಿ ಅಧಿಕಾರಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವಾಗಿ ಸಿಕ್ಕಿದ್ದು, ಅದನ್ನು ಸಿದ್ದರಾಮಯ್ಯ ಸಮರ್ಥವಾಗಿ ಬಳಸಿಕೊಂಡಿದ್ದರು.
ಪ್ರಸ್ತುತ ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲ, ನೆರೆ ಪರಿಹಾರದಲ್ಲಿ ಸರ್ಕಾರದ ವೈಫಲ್ಯ ಮುಂತಾದ ವಿಚಾರಗಳು ಇವೆ. ಸದ್ಯದ ಪರಿಸ್ಥಿತಿಯಲ್ಲಿ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಿದ್ದರಾಮಯ್ಯ ಅವರಿಗಿಂತ ಉತ್ತಮ ನಾಯಕತ್ವ ಸಿಗುವುದು ಕಷ್ಟಸಾಧ್ಯ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಕ್ಕಿದ ಸ್ವಲ್ಪವೇ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಸಿದ್ದರಾಮಯ್ಯ ಅವರು ಮಾತನಾಡಲು ನಿಂತರೆ ಶಾಸಕರೂ ಅವರ ಬೆನ್ನಿಗೆ ನಿಲ್ಲುತ್ತಾರೆ. ಅಂಕಿ ಅಂಶಗಳ ಸಹಿತ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ.
ಪ್ರತಿಪಕ್ಷ ನಾಯಕ ಸ್ಥಾನವೂ ಸಿದ್ದರಾಮಯ್ಯಗೆ?
ಇದೆಲ್ಲದರ ಜತೆ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ನಾಯಕರಿಗೆ ಸಿದ್ದರಾಮಯ್ಯ ಅವರ ಕಾರ್ಯಕ್ಷಮತೆ ಬಗ್ಗೆ ಯಾವುದೇ ತಕರಾರಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಸುತ್ತಲಿದ್ದವರ ಮಾತುಗಳನ್ನಷ್ಟೇ ಕೇಳುತ್ತಾರೆ ಎಂಬುದಷ್ಟೇ ಅವರ ಪ್ರಮುಖ ಆರೋಪ. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ಧೋರಣೆಯನ್ನು ಸ್ವಲ್ಪ ಮಟ್ಟಿಗೆ ಬದಲಿಸಿಕೊಂಡು ಹಿರಿಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಅವರನ್ನೇ ಮುಂದುವರಿಸುವುದು ಸೂಕ್ತ ಎಂಬುದು ಎಐಸಿಸಿ ಪ್ರತಿನಿಧಿಗಳ ವಾದವಾಗಿದೆ.
ಒಂದೊಮ್ಮೆ ಈ ವಾದವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇತರೆ ಹಿರಿಯ ನಾಯಕರು ಒಪ್ಪಿಕೊಂಡರೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಜತೆಗೆ ಪತಿಪಕ್ಷ ನಾಯಕ ಸ್ಥಾನದಲ್ಲೂ ಸಿದ್ದರಾಮಯ್ಯ ಮುಂದುವರಿಯುವ ಸಾಧ್ಯತೆ ಇದೆ. ಏಕೆಂದರೆ, ಶಾಸಕಾಂಗ ಪಕ್ಷದ ನಾಯಕನಾದವನೇ ಪ್ರತಿಪಕ್ಷ ನಾಯಕನಾಗಿದ್ದರೆ ವಿಧಾನಸಭೆಯಲ್ಲಿ ಇನ್ನಷ್ಟು ಸಮರ್ಥವಾಗಿ ಸರ್ಕಾರವನ್ನು ಎದುರಿಸಿ ನಿಲ್ಲಬಹುದು.
ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರನ್ನು ಮುಂದುವರಿಸಿ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವುದಾದರೆ ಸಿದ್ದರಾಮಯ್ಯ ಅವರು ಹೇಳಿದ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಹೊಂದಾಣಿಕೆ ಸಮಸ್ಯೆ ಎದುರಾಗಿ ಪಕ್ಷ ಮುಜುಗರ ಎದುರಿಸಬೇಕಾಗುತ್ತದೆ. ಹೀಗಿರುವಾಗ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ಪ್ರತ್ಯೇಕಿಸುವ ಬದಲು ಒಬ್ಬರಿಗೇ ಆ ಹುದ್ದೆಗಳನ್ನು ನೀಡುವುದು ಸೂಕ್ತ ಎಂಬುದು ಎಐಸಿಸಿ ಪ್ರತಿನಿಧಿಗಳ ಅಭಿಪ್ರಾಯ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಮುಂಚೂಣಿಯಲ್ಲಿ
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ದಿನೇಶ್ ಗುಂಡೂರಾವ್ ಬದಲು ಬೇರೆಯವರಿಗೆ ನೀಡಬೇಕು ಎಂಬ ಅಭಿಪ್ರಾಯ ಬಹುತೇಕರಿಂದ ವ್ಯಕ್ತವಾಗಿದೆ. ಅವರ ಬದಲಾಗಿ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಹೀಗೆ ನಾನಾ ಹೆಸರುಗಳು ಕೇಳಿಬರುತ್ತಿದೆಯಾದರೂ ಡಿ.ಕೆ.ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ.
ಪ್ರಸ್ತುತ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು, ಅವರು ಬಿಜೆಪಿಯಲ್ಲಿ ಇರುವವರೆಗೆ ಲಿಂಗಾಯತ ಸಮುದಾಯದವರು ಕಾಂಗ್ರೆಸ್ ಪಕ್ಷದತ್ತ ಬರುವುದಿಲ್ಲ. ದಲಿತ ಸಮುದಾಯದವರು ಕಾಂಗ್ರೆಸ್ ಜತೆಗೆ ಇದ್ದಾರಾದರೂ ಆ ಸಮುದಾಯಕ್ಕೆ ಸೇರಿದ ಕೆ.ಎಚ್.ಮುನಿಯಪ್ಪ ಅವರಿಗೆ ಎಲ್ಲರನ್ನೂ ಜತೆ ಸೇರಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಕಷ್ಟ. ಹೀಗಾಗಿ ಲಿಂಗಾಯತ ಸಮುದಾಯದಂತೆ ರಾಜಕೀಯವಾಗಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅನುಕೂಲವಾಗುತ್ತದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದು, ಬಿಜೆಪಿ ಈ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಸಮುದಾಯ ಒಟ್ಟಾಗಿ ಕಾಂಗ್ರೆಸ್ ಕಡೆ ಬರಬಹುದು ಎಂಬ ಕಾರಣಕ್ಕೆ ಅವರ ಹೆಸರು ಮುಂಚೂಣಿಯಲ್ಲಿದೆ.
ಆದರೆ, ಕಾಂಗ್ರೆಸ್ ವರಿಷ್ಠರು ಇಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾತಿ, ಜನ ಬೆಂಬಲದ ಜತೆಗೆ ಇನ್ನೂ ಅನೇಕ ವಿಚಾರಗಳನ್ನು ಪರಿಗಣಿಸುತ್ತದೆ. ಹೀಗಾಗಿ ನಾಯಕತ್ವ ಬದಲಾವಣೆ ಕುರಿತಂತೆ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.