ಹಿಂದಿನ ಕಾಂಗ್ರೆಸ್ ನೇತೃತತ್ವದ ಯುಪಿಎ ಸರ್ಕಾರ ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ ) ಜಾರಿಗೊಳಿಸಲು ಮುಂದಾಗಿದ್ದಾಗ ಅದನ್ನು ಬಲವಾಗಿ ವಿರೋಧಿಸಿದ್ದ ಬಿಜೆಪಿ ನಂತರ 2017 ರಲ್ಲಿ ಅದೇ ಜಿಎಸ್ಟಿ ಯನ್ನು ತರಾತುರಿಯಲ್ಲಿ ದೇಶಾದ್ಯಂತ ಜಾರಿಗೊಳಿಸಿತು. ಇದರಿಂದಾಗಿ ದೇಶದ ಆರ್ಥಿಕ ಹಿನ್ನಡೆಗೆ ಕಾರಣ ಆಯಿತಲ್ಲದೆ ಲಕ್ಷಾಂತರ ಉದ್ಯೋಗಗಳ ನಷ್ಟ ಜತೆಗೇ ಜನಸಾಮಾನ್ಯರಿಗೂ ಹೊರೆ ಆಯಿತು. ಜಿಎಸ್ಟಿ ಜಾರಿಗೊಳಿಸುವಾಗ ಸರ್ಕಾರ ನಿರೀಕ್ಷಿಸಿದ್ದು ವರ್ಷಕ್ಕೆ ಕನಿಷ್ಟ 15 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹವನ್ನು . ಅದರೆ ಜಿಎಸ್ಟಿ ಜಾರಿಗೊಳಿಸಿದ ಎರಡು ವರ್ಷಗಳ ನಂತರವೂ ತೆರಿಗೆ ಸಂಗ್ರಹಾತಿ 13 ಲಕ್ಷ ಕೋಟಿ ರೂಪಾಯಿಗಳನ್ನೂ ದಾಟುತ್ತಿಲ್ಲ.
ಕೆಲವೊಂದು ಪ್ರಕರಣಗಳಲ್ಲಿ ಧೂರ್ತ ವ್ಯಾಪಾರಿಗಳು ಕೋಟ್ಯಾಂತರ ರೂಪಾಯಿಯ ಜಿಎಸ್ಟಿ ತೆರಿಗೆ ವಂಚನೆ ನಡೆಸಿದ್ದೂ ಬೆಳಕಿಗೆ ಬಂದಿದೆ. ಜಿಎಸ್ಟಿ ಜಾರಿಯಿಂದಾಗಿ ನೋಟು ನಿಷೇಧದ ಕಾರಣದಿಂದಾಗಿ ಮೊದಲೇ ಹಿಂಜರಿತ ಅನುಭವಿಸುತಿದ್ದ ಉತ್ಪಾದನಾ ರಂಗ ಇನ್ನಷ್ಟು ಹೊರೆ ಅನುಭವಿಸುತ್ತಿರುವ ಕಾರಣದಿಂದಾಗಿಯೇ ಜಿಎಸ್ಟಿಯ ತೆರಿಗೆ ಸಂಗ್ರಹಾತಿ ನಿರೀಕ್ಷಿತ ಗುರಿ ಮುಟ್ಟುತ್ತಿಲ್ಲ. ಕೆಲವೊಂದು ಸರಕುಗಳಿಗೆ ಜಿಎಸ್ಟಿಯಲ್ಲಿ ತೆರಿಗೆ ಕಡಿತ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಪುನಃ ಸರಕುಗಳ ಮೇಲೆ ತೆರಿಗೆ ಹೆಚ್ಚಿಸಲು ಆಲೋಚಿಸುತ್ತಿದೆ.
ಕಳೆದ ನವೆಂಬರ್ 27ರಂದು ದೇಶದ ಎಲ್ಲ ರಾಜ್ಯಗಳಿಗೂ ಪತ್ರ ಬರೆದಿರುವ ಜಿಎಸ್ಟಿ ಮಂಡಳಿಯು ಜಿಎಸ್ಟಿ ತೆರಿಗೆ ಸಂಗ್ರಹಾತಿ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಕೋರಿದೆ. ಈಗ ಜಿಎಸ್ಟಿ ತೆರಿಗೆಯಿಂದ ,ಲೆವಿಯಿಂದ ಹಾಗೂ ಪರಿಹಾರಾತ್ಮಕ ಸೆಸ್ ನಿಂದ ವಿನಾಯ್ತಿ ನೀಡಿರುವ ಸರಕುಗಳಿಗೆ ತೆರಿಗೆ ವಿಧಿಸುವ ಕುರಿತು ಪುನರ್ವಿಮರ್ಶೆ ನಡೆಸುವಂತೆ ಕೋರಿದೆ. ಈ ಪತ್ರದಲ್ಲಿ ದೇಶದ ಜಿಎಸ್ಟಿ ತಿಂಗಳ ಸಂಗ್ರಹಾತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕುಸಿತ ದಾಖಲಿಸುತ್ತಿರುವ ಅಂಶವನ್ನು ಒತ್ತಿ ಹೇಳಲಾಗಿದೆ . 2017 ರ ಜುಲೈ ನಲ್ಲಿ ದೇಶಾದ್ಯಂತ ಜಾರಿಗೆ ತಂದ ನಂತರ ಜಿಎಸ್ಟಿ ಮಂಡಳಿ ಪ್ರತೀ ಬಾರಿಯೂ ಹತ್ತಾರು ಸರಕುಗಳಿಗೆ ತರಿಗೆ ಕಡಿತ ಮಾಡಿದೆ. ಈ ತೆರಿಗೆ ಕಡಿತದ ಮೂಲಕ ವಿವಿಧ ರಂಗಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವುದೂ ಜತೆಗೇ ಗ್ರಾಹಕರ ಹೊರೆ ಕಡಿಮೆ ಮಾಡುವ ಗುರಿ ಹೊಂದಿತ್ತು. ಇದೀಗ ಜಿಎಸ್ಟಿ ಮಂಡಳಿ ತನ್ನ ಹಿಂದಿನ ಕ್ರಮಗಳಿಗೆ ವಿರುದ್ದವಾಗಿ ತೆರಿಗೆ ದರ ಹೆಚ್ಚಿಸಲು ಅಲೋಚಿಸುತ್ತಿರುವುದು ಸರ್ಕಾರದ ಹಣಕಾಸು ವ್ಯವಸ್ಥೆ ಮೇಲಿನ ಒತ್ತಡವನ್ನು ಸ್ಪಷ್ಟಪಡಿಸುತ್ತಿದೆ.
ಈ ತಿಂಗಳ ಕೊನೆಯಲ್ಲಿ ಜಿಎಸ್ಟಿ ಮಂಡಳಿ ಸಭೆ ನಡೆಯಲಿದ್ದು ಯಾವುದೇ ಸರಕಿನ ಮೇಲೆ ತೆರಿಗೆ ಅಥವಾ ತೆರಿಗೆ ಹೆಚ್ಚಳ ಮಾಡಿದಲ್ಲಿ ಅದು ಹಣದುಬ್ಬರಕ್ಕೂ ಕಾರಣವಾಗಲಿದೆ ಎಂದು ಅರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ. ಈಗ ದೇಶದ ಹಣದುಬ್ಬರ ಶೇಕಡಾ 4 ನ್ನು ಮೀರಿದ್ದು ಜಿಎಸ್ಟಿ ಆದಾಯ ಏರಿಕೆ ಅಗಿಲ್ಲ. ಕಾರ್ಪೊರೇಟ್ ತೆರಿಗೆ ಸಂಗ್ರಹಾತಿ ಗಣನೀಯ ಕುಸಿತ ದಾಖಲಿಸುತ್ತಿದೆ. ಸರ್ಕಾರ 2019-20 ನೇ ಸಾಲಿನ ವಿತ್ತೀಯ ಕೊರತೆ ಗುರಿಯಾದ ಶೇಕಡಾ 3.3 ರಷ್ಟ ನ್ನು ತಗ್ಗಿಸಲು ಪ್ರಯತ್ನ ಪಡುತ್ತಿದೆ. ಕೇಂದ್ರ ತೆರಿಗೆ ಸಂಗ್ರಹಾತಿಯಲ್ಲಿ ಕುಸಿತ ದಾಖಲಿಸಿರುವಂತೆಯೇ ಕಾಂಪನ್ ಸೇಷನ್ ಸೆಸ್ ಸಂಗ್ರಹಾತಿಯಲ್ಲೂ ಹೆಚ್ಚಿನ ಕುಸಿತ ದಾಖಲಾಗಿದೆ. ಇದನ್ನು ಕೇಂದ್ರ ಸರ್ಕಾರ ಸಂಗ್ರಹಿಸುತಿದ್ದು ನಂತರ ರಾಜ್ಯಗಳೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕಾಂಪನ್ ಸೇಷನ್ ಸೆಸ್ ನ್ನು ಕಳೆದ ನವೆಂಬರ್ ಅಂತ್ಯದವರೆಗೆ ಕೇವಲ 63,194 ಕೋಟಿ ರೂಪಾಯಿಗಳಷ್ಟನ್ನು ಸಂಗ್ರಹಿಸಿದ್ದು ಒಟ್ಟು ಗುರಿ 1.09 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಈತನಕ ಶೇಕಡಾ 58 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ.
ಇದಲ್ಲದೆ ನೇರ ತೆರಿಗೆ ಸಂಗ್ರಹಾತಿಯಡಿಯಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹಾತಿಯಲ್ಲೂ ಕುಸಿತ ದಾಖಲಾಗಿದ್ದು ಕಳೆದ ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ ಸರ್ಕಾರ ಒಟ್ಟು 2.73 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಮಾಡಿದ್ದು , ಈ ಹಣಕಾಸು ವರ್ಷದ ಒಟ್ಟು ಗುರಿ 7.66 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಇದರಲ್ಲಿಯೂ ಶೇಕಡಾ 36 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ.
ದೇಶಾದ್ಯಂತ ಜಿಎಸ್ಟಿ ಜಾರಿಗೊಳಿಸುವಾಗ ರಾಜ್ಯಗಳಿಗೆ ತೆರಿಗೆ ಸಂಗ್ರಹಾತಿಯಲ್ಲಿ ಕುಸಿತ ಅಥವಾ ಆದಾಯ ಕೊರತೆ ಉಂಟಾದಲ್ಲಿ ಕಾಂಪನ್ ಸೇಷನ್ ಸೆಸ್ ನಿಂದ ಮುಂದಿನ ೫ ವರ್ಷಗಳ ವರೆಗೆ ತುಂಬಿಕೊಡಲಾಗುವುದೆಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಈ ತುಂಬಿಕೊಡುವಿಕೆಯನ್ನು ಎರಡು ತಿಂಗಳಿಗೊಮ್ಮೆ ಮಾಡಬೇಕಿದೆ. ಈ ಸೆಸ್ ನ್ನು ಐಷಾರಾಮಿ ವಸ್ತುಗಳು , ಸಿಗರೇಟ್ , ದುಬಾರಿ ಪಾನೀಯಗಳು ಅಲ್ಲದೆ ಪ್ರಸ್ತುತ ಶೇಕಡಾ 28 ಕ್ಕೂ ಅಧಿಕ ದರ ವಿರುವ ವಸ್ತುಗಳ ಮೇಲೆ ವಿಧಿಸಲಾಗುತ್ತಿದೆ.
ಈಗ ರಾಜ್ಯಗಳಿಗೆ ಕಾನೂನಿನ ಪ್ರಕಾರ ನೀಡಬೇಕಾದ ಪಾಲನ್ನೂ ಕಳೆದ ನಾಲ್ಕು ತಿಂಗಳಿನಿಂದ ನೀಡಿಲ್ಲ ಎಂದು ರಾಜ್ಯಗಳು ದೂರಿಕೊಂಡಿವೆ. ಕೇರಳ ರಾಜ್ಯದ ಹಣಕಾಸು ಸಚಿವ ಟ್ವೀಟ್ ಮೂಲಕ ಜಿಎಸ್ಟಿ ಮಂಡಳಿ ಸಭೆ ಬೇಗನೆ ಕರೆಯುವಂತೆ ಒತ್ತಾಯಿಸಿದ್ದಾರೆ. ಹಿಂದೆ ಭರವಸೆ ನೀಡಿದ್ದಂತೆ ಪ್ರತೀ ಎರಡು ತಿಂಗಳಿಗೊಮ್ಮೆ ಸಂಗ್ರಹಿಸಲಾದ ಸೆಸ್ ನ್ನು ರಾಜ್ಯಗಳಿಗೆ ನೀಡಬೇಕಿದ್ದು ಇದೀಗ ನಾಲ್ಕು ತಿಂಗಳಾದರೂ ನಯಾ ಪೈಸೆಯನ್ನೂ ನೀಡದೆ ಕೇಂದ್ರ ಸರ್ಕಾರ ಸುಸ್ತಿದಾರ ಆಗಿದೆ ಎಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪಂಜಾಬ್ ಮುಖ್ಯ ಮಂತ್ರಿ ಕ್ಪಾಪ್ಟನ್ ಅಮರಿಂದರ್ ಸಿಂಗ್ ಅವರೂ ಈ ಕುರಿತು ಟ್ವೀಟ್ ಮಾಡಿದ್ದು ರಾಜ್ಯಕ್ಕೆ ಜಿಎಸ್ಟಿ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದ ವಿಳಂಬವನ್ನು ಟೀಕಿಸಿದ್ದಾರೆ. ಪಂಜಾಬ್ ಗೆ ತನ್ನ ಪಾಲಿನ 4100 ಕೋಟಿ ರೂಪಾಯಿಗಳನ್ನು ನೀಡುವಲ್ಲಿ ವಿಳಂಬವಾಗಿರುವುದಕ್ಕೆ ಪ್ರಧಾನ ಮಂತ್ರಿ ನರೇಂಧ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಅವರು ಟ್ವೀಟ್ ನಲ್ಲಿ ಒತ್ತಾಯಿಸಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರವು ವಿವಿಧ ಸರಕುಗಳಿಗೆ ಇನ್ನಷ್ಟು ತೆರಿಗೆ ಹೆಚ್ಚಳ ಅಥವಾ ಈಗ ಶೂನ್ಯ ತೆರಿಗೆ ಇರುವ ವಸ್ತುಗಳಿಗೆ ಹೊಸ ತೆರಿಗೆ ವಿಧಿಸಲು ಮುಂದಾದರೆ ಆರ್ಥಿಕತೆ ಹಿಂಜರಿತ ಮತ್ತೂ ಬಿಗಿಯಾಗಲಿದೆ. ಈಗಾಗಲೇ ತೆರಿಗೆಗಳ ಹೊರೆಯಿಂದ ಬಸವಳಿದಿರುವ ಜನಸಾಮಾನ್ಯರು ಇನ್ನಷ್ಟು ತೆರಿಗೆ ಹೊರೆ ಹೊರಲು ಸಿದ್ದರಾಗಬೇಕಾಗುತ್ತದೆ.