ಉಪ ಚುನಾವಣೆ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಮಾತುಗಳು ಜೋರಾಗುತ್ತಿವೆ. ಮೈತ್ರಿ ವಿಚಾರದಲ್ಲಿ ಜೆಡಿಎಸ್ ಪಕ್ಷಕ್ಕಿಂತ ಕಾಂಗ್ರೆಸ್ಸೇ ಹೆಚ್ಚು ಆಸಕ್ತಿ, ಒಲವು ತೋರಿಸುತ್ತಿದೆ. ಈ ಮಾತುಕತೆ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉರುಳಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿದೆ ಎಂಬ ಅಭಿಪ್ರಾಯವನ್ನು ಜನರ ಮೇಲೆ ಹೇರಲು ಉಭಯ ಪಕ್ಷಗಳ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಇದರ ನಡುವೆಯೇ ಮೈತ್ರಿ ಕುರಿತು ಮಾತನಾಡುತ್ತಿರುವ ಕಾಂಗ್ರೆಸ್ ಬಣದ ಮುಂಚೂಣಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರಸ್ಪರ ಭೇಟಿಯಾಗಿ ಮಾತಕತೆ ನಡೆಸಿದ್ದಕ್ಕೆ ರೋಚಕ ಬಣ್ಣಗಳನ್ನು ಕಟ್ಟಿ ಹಲವು ರೀತಿಯ ಊಹಾಪೋಹಗಳನ್ನು ಹೊರಬಿಡಲಾಗುತ್ತಿದೆ. ಮತ್ತೊಂದೆಡೆ ಇದುವರೆಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಮುಳುಗಿ ಕರ್ನಾಟಕದ ಉಪ ಚುನಾವಣೆ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದಿದ್ದ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುವ ಖರ್ಗೆ ಅವರೂ ರಾಜ್ಯಕ್ಕೆ ವಾಪಸಾಗಿ ಮತ್ತೆ ಜೆಡಿಎಸ್ ಜತೆ ಮೈತ್ರಿ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
ಆದರೆ, ಮುಂದೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವವರು ಯಾರು? ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆ ನೀಡಿದರೆ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಒಪ್ಪುವರೇ? ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಎಂದು ಒಪ್ಪಂದವಾದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿ ಮತ್ತು ದೇವೇಗೌಡರು ಸಮ್ಮತಿಸುವರೇ? ಸಿದ್ದರಾಮಯ್ಯ ಹೊರತಾಗಿ ಕಾಂಗ್ರೆಸ್ ಪಕ್ಷದಲ್ಲಿ ಬೇರೆಯವರನ್ನು ಈ ಸ್ಥಾನದಲ್ಲಿ ಕುಳ್ಳಿರಿಸಲು ಮುಂದಾದರೆ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಸುಮ್ಮನಿರುವರೇ? ಈ ಸರ್ಕಾರ ಮುಂದುವರಿಯಲು ಸಹಕಾರ ಕೊಡುವರೇ? ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟರೆ ಈ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನ ಇತರೆ ನಾಯಕರು ಸರ್ಕಾರವನ್ನು ಹೆಚ್ಚು ಕಾಲ ಬಾಳಲು ಬಿಡುವರೇ? ಹೀಗೆ ಪ್ರಶ್ನೆಗಳ ಸರಮಾಲೆಯೇ ಸೃಷ್ಟಿಯಾಗುತ್ತಿದೆ. ಇದಕ್ಕೆ ಉತ್ತರವೂ ಸಿಗುತ್ತಿಲ್ಲ, ಸಿಗುವ ಲಕ್ಷಣವೂ ಕಾಣಿಸುತ್ತಿಲ್ಲ.
ಏಕೆಂದರೆ, ಕಾಂಗ್ರೆಸ್ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಮಾತು ಆರಂಭಿಸಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಅದುವರೆಗೆ ಸಿದ್ದರಾಮಯ್ಯ ಅವರು ಮೈತ್ರಿ ವಿಚಾರ ಬಂದಾಗೆಲ್ಲಾ ಕೆಂಡವಾಗುತ್ತಿದ್ದರು. ಯಾವಾಗ ದೇವೇಗೌಡರು ಮರು ಮೈತ್ರಿ ಬಗ್ಗೆ ಮಾತನಾಡಿದರೋ ಸಿದ್ದರಾಮಯ್ಯ ಬಗ್ಗೆ ಅಸಮಧಾನ ಹೊಂದಿರುವ ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ ಹೀಗೆ ಹಲವರು ದೇವೇಗೌಡರ ಮಾತಿಗೆ ದನಿಗೂಡಿಸಿದರು. ಇತ್ತ ಸಿದ್ದರಾಮಯ್ಯ ಬಗ್ಗೆ ಕಿಡಿ ಕಾರುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಕೂಡ ಮರುಮೈತ್ರಿ ಬಗ್ಗೆ ಒಲವು ತೋರಿಸಲಾರಂಭಿಸಿದರು.
ಈ ಕುರಿತ ಚರ್ಚೆ ಮುನ್ನಲೆಗೆ ಬಂದು ತೀವ್ರಗೊಳ್ಳುತ್ತಿದ್ದಂತೆ ದೇವೇಗೌಡರು ಹೊಸ ಬಾಂಬ್ ಸಿಡಿಸಿದರು. ಈಗಾಗಲೇ ಕಾಂಗ್ರೆಸ್ ಜತೆ ಮೈತ3 ಮಾಡಿಕೊಂಡು ಅನುಭವಿಸಿದ್ದು ಸಾಕಾಗಿದೆ. ಹೀಗಾಗಿ ಮತ್ತೆ ಮೈತ್ರಿ ಮುಂದುವರಿಸುವ ಪ್ರಶ್ನೆಯೇ ಇಲ್ಲ. ಈಗಿರುವ ಸರ್ಕಾರವೇ ಮುಂದುವರಿಯಲಿ ಎಂದುಬಿಟ್ಟರು. ಆದರೂ ಕಾಂಗ್ರೆಸ್ ನಾಯಕರಲ್ಲಿ ಮರುಮೈತ್ರಿಯ ಆಸೆ ಕಮರಿಲ್ಲ. ಹೇಗಾದರೂ ಮಾಡಿ ದೇವೇಗೌಡರ ಮನವೊಲಿಸಬಹುದು ಎಂದು ಉಪ ಚುನಾವಣೆ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ವಿರುದ್ಧವಾಗಿ ಬರಲಿ ಎಂದು ಕಾಯುತ್ತಿದ್ದಾರೆ.
ಆದರೆ, ಈ ಮೈತ್ರಿ ಸಾಧ್ಯವೇ ಮರುಮೈತ್ರಿಯಾದರೆ ಮುಖ್ಯಮಂತ್ರಿ ಸ್ಥಾನ ಯಾವ ಪಕ್ಷಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಶಾಸಕರು ಒಪ್ಪುವರೇ? 2018ರಲ್ಲಿ ಕಡಿಮೆ ಸ್ಥಾನ ಗಳಿಸಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಾಗಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೆಚ್ಚಾಗಿತ್ತು. ಮೈತ್ರಿ ಸರ್ಕಾರ ಉರುಳಲು ಈ ಅಂಶವೂ ಕಾರಣವಾಗಿತ್ತು. ಹೀಗಿರುವಾಗ ಮತ್ತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಅನೇಕ ಶಾಸಕರು ಒಪ್ಪಲಿಕ್ಕಿಲ್ಲ. ಅದರಲ್ಲೂ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗ ಶಾಸಕರು ಯಾವುದೇ ಕಾರಣಕ್ಕೂ ಇದಕ್ಕೆ ಸಮ್ಮತಿಸುವ ಸಾಧ್ಯತೆಗಳು ಇಲ್ಲ. ಒಂದೊಮ್ಮೆ ಮೈತ್ರಿಯಾದರೂ ಮತ್ತೆ ಕಾಂಗ್ರೆಸ್ ಶಾಸಕರ ರಾಜೀನಾಮೆ ಮುಂದುವರಿಯಬಹುದು.
ಇನ್ನು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟರೆ ಮೊದಲು ಬರುವ ಹೆಸರು ಸಿದ್ದರಾಮಯ್ಯ ಅವರದ್ದು. ಮೈತ್ರಿ ಸರ್ಕಾರ ಉರುಳಲು ಅವರೇ ಕಾರಣ ಎನ್ನುವ ಜೆಡಿಎಸ್ ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಇನ್ನು ಸಿದ್ದರಾಮಯ್ಯ ಹೊರತಾಗಿ ಬೇರೆಯವರನ್ನು ಮುಖ್ಯಮಂತ್ರಿ ಮಾಡಿದರೆ ಸಿದ್ದರಾಮಯ್ಯ ಸೇರಿದಂತೆ ಅವರ ಬೆಂಬಲಿಗ ಶಾಸಕರು ಆಕ್ಷೇಪ ವ್ಯಕ್ತಪಡಿಸುವುದು ಖಂಡಿತ. ಇದು ಪಕ್ಷ ಒಡೆಯುವ ಮಟ್ಟಕ್ಕೂ ಹೋಗಬಹುದು.
ಜೆಡಿಎಸ್ ನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಯಾರೇ ಮುಖ್ಯಮಂತ್ರಿಯಾಗಲಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಶಾಸಕರು ವಿರೋಧ ವ್ಯಕ್ತಪಡಿಸುತ್ತಾರೆ. ಏಕೆಂದರೆ, 2004ರಿಂದ ಕಾಂಗ್ರೆಸ್ ಜತೆ ಸೇರಿದಾಗಲೆಲ್ಲಾ ಜೆಡಿಎಸ್ ತನ್ನ ಶಕ್ತಿ ಕಳೆದುಕೊಂಡಿದೆ. ಆ ಪಕ್ಷದ ಅನೇಕ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇನ್ನು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದಾಗ ಪಕ್ಷಕ್ಕೂ ಯಾವುದೇ ಸಮಸ್ಯೆಯಾಗಿರಲಿಲ್ಲ, ಶಾಸಕರಿಗೂ ತೊಂದರೆಯಾಗಿರಲಿಲ್ಲ. ಹೀಗಾಗಿ ಜೆಡಿಎಸ್ ಶಾಸಕರ ಪೈಕಿ ಬಹುತೇಕರು ಕಾಂಗ್ರೆಸ್ ಬದಲು ಬಿಜೆಪಿ ಜತೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಒಂದೊಮ್ಮೆ ಬಿಜೆಪಿ ಸರ್ಕಾರ ಉರುಳಿಸಿ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಜೆಡಿಎಸ್ ಹಿರಿಯ ನಾಯಕರು ಮುಂದಾದಲ್ಲಿ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಕೂಡ ಹಿಂದೇಟು ಹಾಕುವುದಿಲ್ಲ.
ಈ ಮಧ್ಯೆ ಮತ್ತೆ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾದರೆ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕುವುದು ಖಂಡಿತ. ಆಗ ಮತ್ತೆ ಎರಡೂ ಪಕ್ಷಗಳ ಮತ್ತಷ್ಟು ಶಾಸಕರು ರಾಜೀನಾಮೆ ನೀಡಬಹುದು. ಈ ರೀತಿಯ ಪ್ರಸಂಗ ಎದುರಾದರೆ ಭವಿಷ್ಯದಲ್ಲಿ ಎರಡೂ ಪಕ್ಷಗಳು ತೊಂದರೆಗೆ ಸಿಲುಕಬಹುದು. ಅದರ ಬದಲು ಬಿಜೆಪಿ ಅಧಿಕಾರ ನಡೆಸಲು ಬಿಟ್ಟು ಬಾಕಿ ಉಳಿದಿರುವ ಮೂರೂವರೆ ವರ್ಷದಲ್ಲಿ ಪಕ್ಷವನ್ನು ಬಲಪಡಿಸಿದರೆ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಕಷ್ಟವೇನೂ ಆಗಲಾರದು.
ಪ್ರಸ್ತುತ ಮೈತ್ರಿ ಬಗ್ಗೆ ಮಾತನಾಡುತ್ತಿರುವ ಎಲ್ಲಾ ನಾಯಕರಿಗೂ ಇದು ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಆದರೂ ಮೈತ್ರಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ, ಮತದಾರರಲ್ಲಿ ಗೊಂದಲ ಮೂಡಿಸುವುದು ಮತ್ತು ಆಡಳಿತಾರೂಢ ಬಿಜೆಪಿಗೆ ಆತಂಕ ತಂದೊಡ್ಡುವುದು. ಇದರ ಜತೆಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕಾರ್ಯಕರ್ತರಲ್ಲಿ ಆಸೆ ಮೂಡಿಸಿ ಉಪ ಚುನಾವಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು. ಇದು ಗೊತ್ತಿದ್ದೇ ಬಿಜೆಪಿ ಮರು ಮೈತ್ರಿ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಪ್ರಚಾರದಲ್ಲಿ ನಿರತವಾಗಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮೈತ್ರಿಯೆಂಬ ಕನಸಿನ ಗೋಪುರ ನಿರ್ಮಾಣದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.