ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಫೇಸ್ ಬುಕ್ ಪೇಜ್ ಅಡ್ಮಿನ್ ವಿರುದ್ಧ ಅಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲಿಸ್ ಅಧಿಕಾರಿಗಳಿಗೆ ಹೈಕೋರ್ಟ್ 1 ಲಕ್ಷ ದಂಡ ವಿಧಿಸಿ, ತನಿಖೆಗೊಳಪಡಿಸಬೇಕೆಂದು ಪೋಲಿಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.
ಏನಿದು ಪ್ರಕರಣ?
ಫೇಸ್ ಬುಕ್ ನ ಟ್ರೋಲ್ ಮಗಾ ಎಂಬ ಫೇಜ್ ನಲ್ಲಿ ಜೈಕಾಂತ್ ಎಂಬುವರು ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್ ಪಿ “ಜೈಕಾಂತ್ ಅವರು ಫೇಸ್ ಬುಕ್ ಟ್ರೋಲ್ ಮಗಾ ಎಂಬ ಪೇಜ್ ನಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾನಹಾನಿಯಂತಹ ಪೋಸ್ಟ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ” ಎಂದು 26.05.2019ರಂದು ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ (ಎಫ್ಐಆರ್ ಸಂಖ್ಯೆ: 91/2019) ದಾಖಲಿಸಿದರು.
ಈ ಕುರಿತು ಟ್ರೋಲ್ ಮಗ ಪೇಜ್ ಅಡ್ಮಿನ್ ಜೈಕಾಂತ್, ಸಿವಿಲ್ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಜೂನ್ 10, 2019ರಂದು ಸಿವಿಲ್ ಕೋರ್ಟ್ ನ್ಯಾಯಾಧೀಶರು (City Civil and Sessions Judge) ನಿರೀಕ್ಷಣಾ ಜಾಮೀನು ನೀಡಿದ್ದರು. ಅಲ್ಲದೆ, ಒಂದು ವಾರದೊಳಗೆ ಪೋಲಿಸರ ಮುಂದೆ ಶರಣಾಗಲು ತಿಳಿಸಿದರು. 17 ಜೂನ್ 2019ರಂದು ಜೈಕಾಂತ್ ಪೋಲಿಸ್ ಠಾಣೆಗೆ ಭೇಟಿ ನೀಡಿದರು. ಆ ಕ್ಷಣದಲ್ಲಿ ಪೋಲಿಸ್ ಅಧಿಕಾರಿಗಳು ಈತನನ್ನು ಗಮನಿಸದೆ ಮರುದಿನ ಬರುವುದಾಗಿ ಹೇಳಿದರು. ಅಂತೆಯೇ, 18 ಜೂನ್ 2019ರಂದು ಜೈಕಾಂತ್ ತಮ್ಮ ವಕೀಲರ ಜೊತೆಗೆ ಪೋಲಿಸ್ ಠಾಣೆಗೆ ಭೇಟಿ ಕೊಟ್ಟಾಗ, ಪೋಲಿಸ್ ಅಧಿಕಾರಿಗಳು ನೇರವಾಗಿ ಜೈಕಾಂತ್ ಗೆ “ನೀವು ಜಾಮೀನು ನಿಯಮವನ್ನು ಉಲ್ಲಂಘಿಸಿದ್ದೀರಿ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿಲ್ಲ” ಎಂದು ಮತ್ತೊಂದು ನೋಟಿಸ್ ನೀಡುತ್ತಾರೆ. ತದನಂತರ 23 ಜೂನ್ 2019ರಂದು ಪೋಲಿಸರು ನಂ.99/2019 ಎರಡನೇ ಎಫ್ಐಆರ್ ದಾಖಲಿಸಿಕೊಂಡು ಮತ್ತೆ ಅರ್ಜಿದಾರರನ್ನು ಅವರ ನಿವಾಸದಿಂದಲೇ ಎತ್ತಿಕೊಂಡು ಹೋಗುತ್ತಾರೆ.
ಇದಕ್ಕೂ ಮೊದಲು ಅರ್ಜಿದಾರರ ಜಾಮೀನು ಸಂಬಂಧಿತ ಬಾಂಡ್ ವಿಷಯದಲ್ಲಿ ವಿಳಂಬ ಪ್ರಶ್ನಿಸಿ ಸಿವಿಲ್ ನ್ಯಾಯಾಲಯ ನೊಟಿಸ್ ನೀಡಿದಾಗ ಶ್ರೀರಾಂಪುರ ಪೊಲೀಸರು ಒಂದು ಅಫಿಡವಿಟ್ ಸಲ್ಲಿಸುತ್ತಾರೆ. ಜೂನ್ 24, 2019ರಂದು ತನಿಖಾಧಿಕಾರಿ ನ್ಯಾಯಾಲಯದ ಮುಂದೆ ದಾಖಲೆಯನ್ನು ಸಲ್ಲಿಸುತ್ತಾರೆ. “17 ಜೂನ್ 2019ರಂದು ಅರ್ಜಿದಾರರು ಪೋಲಿಸ್ ಠಾಣೆಗೆ ಭೇಟಿ ನೀಡಿದ್ದರು, ಆದರೆ ಬಾಂಡ್ ತಂದಿರಲಿಲ್ಲ. ಅಲ್ಲದೆ, ತಾನು ವಿಶೇಷ ಕರ್ತವ್ಯದಲ್ಲಿದ್ದೆ. ಮರುದಿನ, ಅಂದರೆ 18 ಜೂನ್ 2019ರಂದು ನ್ಯಾಯಾಲಯದ ಆದೇಶಗಳೊಂದಿಗೆ ನನ್ನ ಮುಂದೆ ಹಾಜರಾದರು. ನಾನು ಅವರಿಂದ ಮತ್ತಷ್ಟು ದಾಖಲೆಗಳನ್ನು ಕೇಳಿದ್ದೆ. ಆದರೆ ಅರ್ಜಿದಾರರು ನನ್ನ ವಿರುದ್ಧವೇ ಆರೋಪ ಮಾಡಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಅಗೌರವ ಸಲ್ಲಿಸುವುದು ನನ್ನ ಉದ್ದೇಶವಲ್ಲ” ಎಂದು ಹೇಳುತ್ತಾರೆ. ಆದರೆ, ಎರಡನೇ ಎಫ್ಐಆರ್ ಬಗ್ಗೆ ತನಿಖಾಧಿಕಾರಿ ಏನನ್ನೂ ಹೇಳುವುದಿಲ್ಲ.
ಅರ್ಜಿದಾರ ಪರ ವಕೀಲರಾದ ಅರುಣ್ ಶ್ಯಾಮ್, “ತಮ್ಮ ಅರ್ಜಿದಾರರು ವೃತ್ತಿಯಲ್ಲಿ ಇಂಜಿನಿಯರ್. ಗೌರವಾನ್ವಿತ ಕುಟುಂಬದಿಂದ ಬಂದವರು. ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಪೋಲಿಸರು ಅರ್ಜಿದಾರರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ. ಮೊದಲು ನೀಡಿದ ಜಾಮೀನಿನ ಆದೇಶವನ್ನು ವಿಫಲಗೊಳಿಸಿ, ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಎರಡನೇ ಎಫ್ಐಆರ್ ದಾಖಲಿಸಿದ್ದಾರೆ” ಎಂದು ಪ್ರತಿಕ್ರಿಯಿಸುತ್ತಾರೆ.
ಹೈ ಕೋರ್ಟ್ ನಲ್ಲಿ ವಾದ ವಿವಾದ
ಎರಡನೇ ಎಫ್ಐಆರ್ ನಲ್ಲಿ ಜೈಕಾಂತ್ ಬಂಧನವಾದಾಗ ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. 11 ಜುಲೈ 2019ರಲ್ಲಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅಧಿಕಾರಿಗಳ ಪರವಾಗಿ ಹೈ ಕೋರ್ಟ್ ನಲ್ಲಿ ವಾದ ಮಂಡಿಸುತ್ತಾರೆ. “ಅರ್ಜಿದಾರರನ್ನು ಪ್ರತ್ಯೇಕ ಅಪರಾಧದಲ್ಲಿ ಬಂಧಿಸಲಾಗಿದೆ ಎಂದು ಪೋಲಿಸರು ಸ್ಪಷ್ಟನೆ ನೀಡಿದ್ದಾರೆ. 91/2019 ಮತ್ತು 99/2019 ಎರಡು ಎಫ್ಐಆರ್ ವಿಭಿನ್ನವಾದದ್ದು. ಅಲ್ಲದೆ, ಅರ್ಜಿದಾರನು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾನೆ. 91/2019ರ ಮೊದಲ ಎಫ್‌ಐಆರ್ ನಲ್ಲಿ ಐಪಿಸಿ 504, 507 ಮತ್ತು 153ಎ ಅಡಿಯ ಶಿಕ್ಷಾರ್ಹ ಅಪರಾಧದಲ್ಲಿ ನೋಂದಾಯಿಸಲಾಗಿದೆ ಮತ್ತು 99/2019ರ ಎರಡನೇ ಎಫ್ಐಆರ್ ನಲ್ಲಿ 153ಎ, 295ಎ, 504, 506, 354(ಡಿ) ಮತ್ತು 298 ಅಡಿಯ ಶಿಕ್ಷಾರ್ಹ ಅಪರಾಧದಲ್ಲಿ ಬಂಧಿಸಲಾಗಿದೆ” ಎಂದು ಹೇಳುತ್ತಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ “26 ಮೇ 2019ರಂದು ಜೆಡಿಎಸ್ ರಾಜ್ಯ ಪ್ರಧಾನಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್ ಪಿ, ‘ಟ್ರೋಲ್ ಮಗಾ’ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಮಾನಹಾನಿಕರ ಪೋಸ್ಟ್ ಗಳನ್ನು ಹಾಕಿದ್ದಾರೆ ಎಂದು ಮೊದಲು ದೂರನ್ನು ನೀಡಿದ್ದಾರೆ ಮತ್ತು 23 ಜೂನ್ 2019ರಂದು ಜೆಡಿಎಸ್ ನ ಐಟಿ ಸೆಲ್ ವಿಭಾಗದ ಬಿ.ರವಿರಾಜ್ ‘ಟ್ರೋಲ್ ಮಗಾ ಎಂಬ ಫೇಸ್ ಬುಕ್ ಪೇಜ್ ನಲ್ಲಿ ದ್ವೇಷ ಉಂಟು ಮಾಡುವ ಹಾಗೂ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷ ಉಂಟುಮಾಡುವ ಪೋಸ್ಟ್ ಗಳನ್ನು ಹಾಕಿಲಾಗಿದೆ ಎಂದು ಎರಡನೇ ಬಾರಿ ದೂರನ್ನು ನೀಡಿದ್ದಾರೆ. 91/2019 ಮತ್ತು 99 / 2019 ಎರಡೂ ಎಫ್‌ಐಆರ್ ಗಳು ‘ಟ್ರೋಲ್ ಮಗಾ’ ಎಂದು ಕರೆಯಲ್ಪಡುವ ‘ಫೇಸ್‌ಬುಕ್’ ಪೋಸ್ಟಗಳಿಗೆ ಸಂಬಂಧಿಸಿರುವುದು” ಎಂದು ಸ್ಪಷ್ಟೀಕರಣ ನೀಡುತ್ತಾರೆ
ಅಲ್ಲದೆ, ವಕೀಲ ಅರುಣ್ ಶ್ಯಾಮ್, ಸೆಷನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಹಾಗೂ 17 ಜೂನ್ 2019ರಂದು ಅರ್ಜಿದಾರರು ಪೋಲಿಸ್ ಠಾಣೆಗೆ ಬಂದ ವಿಚಾರವನ್ನು ಸ್ವತಃ ಪೋಲಿಸ್ ಅಧಿಕಾರಿಗಳು ಒಪ್ಪಿಕೊಂಡಿರುವುದಾಗಿ ಹೈಕೋರ್ಟ್ ನ್ಯಾಯಾಧೀಶರಿಗೆ ತಿಳಿಸುತ್ತಾರೆ.
ಹೈ ಕೋರ್ಟ್ ಆದೇಶ
ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ 70 ವರ್ಷಗಳ ಹಿಂದಿನ ಇಂಗ್ಲೆಂಡ್ ನ ನ್ಯಾಯಾಲಯವು ಹೊರಡಿಸಿದ ಆದೇಶವೊಂದನ್ನು ನೆನಪಿಸಿಕೊಳ್ಳುತ್ತದೆ. “ಸುಸಂಸ್ಕೃತ ಸಮಾಜದಲ್ಲಿ ನಾಗರಿಕರ ಸ್ವಾತಂತ್ರ್ಯವು ಪವಿತ್ರವಾದದ್ದು. ಎಂದಿಗೂ ನಾಗರಿಕ ಹಕ್ಕುಗಳು ಮೇಲುಗೈ ಸಾಧಿಸಬೇಕು. ಪ್ರತಿಯೊಬ್ಬರ ನಾಗರೀಕರ ಸ್ವಾತಂತ್ರ್ಯ ಮುಖ್ಯವಾದದ್ದು”.
“ಮೇ ತಿಂಗಳಲ್ಲಿ ದಾಖಲಾದ ಸಂಗತಿಗಳು ಮತ್ತು ಎರಡನೇ ದೂರಿನಲ್ಲಿ ದಾಖಲಾದ ಆರೋಪಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಪೊಲೀಸರು ಅರ್ಜಿದಾರರನ್ನು ಹೇಗಾದರೂ ಮಾಡಿ ಉದ್ದೇಶ ಪೂರ್ವಕವಾಗಿ ಬಂಧಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಮೊದಲ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್, ಜಾಮೀನು ನೀಡಿದರೂ, ಎರಡನೇ ಪ್ರಕರದಲ್ಲಿ ಜೈಕಾಂತ್ ನನ್ನು ಪೋಲಿಸ್ ಕಸ್ಟಡಿಗೆ ಕಳುಹಿಸುವುದಾಗಿ ಆದೇಶ ಕೊಟ್ಟಿರುವುದು ದುರದೃಷ್ಟಕರ” ಎಂದು ಹೇಳಿತು.
ಹೀಗಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಅಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ 1ಲಕ್ಷ ರೂ ದಂಡ ವಿಧಿಸಿ, ಪೊಲೀಸರನ್ನು ಸಹ ತನಿಖೆಗೊಳಪಡಿಸಲು ಆದೇಶಿಸಿದೆ. “ಅರ್ಜಿದಾರರ ವಿರುದ್ಧ ಪೊಲೀಸ್ ಕ್ರಮವು ಕಾನೂನುಬಾಹಿರವಾಗಿದೆ. ಒಂದು ತಿಂಗಳಲ್ಲಿ ಅರ್ಜಿದಾರರಿಗೆ ದಂಡದ ಮೊತ್ತ ಪಾವತಿಸಬೇಕು. ದಂಡದ ಹಣವನ್ನು ತಪ್ಪಿತಸ್ಥ ಪೊಲೀಸರ ವೇತನದಿಂದ ವಸೂಲು ಮಾಡಬೇಕು ಮತ್ತು ಪೊಲೀಸ್ ಮಹಾನಿರ್ದೇಶಕರು ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ವರದಿ ಸಲ್ಲಿಸಬೇಕು’ ಎಂದು ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ಆದೇಶ ನೀಡಿದೆ.