ಬೆಂಗಳೂರು: ಸೆಪ್ಟೆಂಬರ್ ಮೊದಲ ವಾರದಲ್ಲೇ ಬೆಂಗಳೂರಿನ ನಾನ್‌ವೆಜ್ ಪ್ರಿಯರಿಗೆ ಶಾಕ್ ಎದುರಾಗಲಿದೆ. ಮಾಂಸದ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಸೆಪ್ಟೆಂಬರ್ 3 ಮತ್ತು 4ರಂದು ಚಿಕನ್ ಅಂಗಡಿಗಳ ಬಂದ್‌ಗೆ ಕರೆ ನೀಡಿದೆ.
ಸಂಘದ ನಿರ್ಧಾರದಂತೆ ಸೆಪ್ಟೆಂಬರ್ 3ರಂದು ನಗರದ ಚಿಕನ್ ಅಂಗಡಿಗಳನ್ನು ಬಂದ್ ಮಾಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಸೆಪ್ಟೆಂಬರ್ 4ರಂದು ಬೆಂಗಳೂರಿನಾದ್ಯಂತ ಚಿಕನ್ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸುಮಾರು 6ರಿಂದ 7 ಸಾವಿರ ಚಿಕನ್ ಅಂಗಡಿಗಳಿದ್ದು, ಎರಡು ದಿನಗಳ ಬಂದ್‌ನಿಂದ ಮಾಂಸ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಥಳೀಯ ಅಂಗಡಿಗಳು ಬಂದ್ ಆಗುವುದರಿಂದ ಆನ್‌ಲೈನ್ ಮೂಲಕ ಮಾಂಸ ವಿತರಿಸುವ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಾಂಸದ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ ₹5 ಶುಲ್ಕ ನಿಗದಿ ಮಾಡಿರುವುದನ್ನು ಪೌಲ್ಟ್ರಿ ವ್ಯಾಪಾರಿಗಳು ವಿರೋಧಿಸುತ್ತಿದ್ದಾರೆ.
ಸಂಘದ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 7 ಲಕ್ಷ ಕೆಜಿ ಚಿಕನ್ ಮಾರಾಟವಾಗುತ್ತಿದ್ದು, ಇದರಿಂದ ಪ್ರತಿನಿತ್ಯ ಸುಮಾರು 2ರಿಂದ 3 ಲಕ್ಷ ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಪ್ರತಿಯೊಂದು ಚಿಕನ್ ಅಂಗಡಿಯಿಂದ ದಿನಕ್ಕೆ ಸುಮಾರು 25ರಿಂದ 30 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ಸಂಘಟನೆ ಹೇಳಿದೆ.ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಿದರೆ, ಒಂದು ಅಂಗಡಿಯ ಮಾಲೀಕರು ದಿನಕ್ಕೆ ಸುಮಾರು ₹125ರಿಂದ ₹150 ಹಾಗೂ ತಿಂಗಳಿಗೆ ಸುಮಾರು ₹3,750ರಿಂದ ₹4,500ರವರೆಗೆ ಪಾವತಿಸಬೇಕಾಗುತ್ತದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಸಂಘಟನೆ ಆಕ್ಷೇಪಿಸಿದೆ.

ಮಾಂಸದ ತ್ಯಾಜ್ಯ ಸಂಪೂರ್ಣವಾಗಿ ಅನುಪಯುಕ್ತವಲ್ಲ. ಇದನ್ನು ಸಾಕುಪ್ರಾಣಿಗಳ ಆಹಾರ ಹಾಗೂ ಸಾವಯವ ಗೊಬ್ಬರ ಸೇರಿದಂತೆ ವಿವಿಧ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.ತ್ಯಾಜ್ಯವನ್ನು ಸಂಗ್ರಹಿಸಿ ಬಳಸುವ ಖಾಸಗಿ ಕಂಪನಿಗಳು ಇದರಿಂದ ವಾಣಿಜ್ಯ ಲಾಭ ಪಡೆಯುತ್ತಿರುವಾಗ, ವ್ಯಾಪಾರಿಗಳಿಂದಲೇ ಪ್ರತಿ ಕೆಜಿಗೆ ₹5 ಸಂಗ್ರಹಣಾ ಶುಲ್ಕ ವಸೂಲಿ ಮಾಡುವುದು ಎಷ್ಟು ಸರಿ ಎಂದು ಪೌಲ್ಟ್ರಿ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
ಮಾಂಸದ ತ್ಯಾಜ್ಯಕ್ಕೆ ವಾಣಿಜ್ಯ ಮೌಲ್ಯವಿರುವುದರಿಂದ, ಅದರ ಸಂಗ್ರಹಣೆ ಮತ್ತು ವಿಲೇವಾರಿಗೆ ವ್ಯಾಪಾರಿಗಳಿಂದ ಶುಲ್ಕ ಪಡೆಯುವ ಬದಲು ಸಂಬಂಧಿಸಿದ ಕಂಪನಿಗಳೇ ವ್ಯಾಪಾರಿಗಳಿಗೆ ಹಣ ಪಾವತಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.






