ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮತ್ತು ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ವಾಟಾಳ್ ಹೋರಾಟಕ್ಕೂ ಬರುವ ಮುನ್ನವೇ ಅವರನ್ನು ಮನೆಯಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರಂಭದಲ್ಲೇ ಬಂದ್‌ಗೆ ಪೂರ್ಣ ಬೆಂಬಲ ಸಿಗದೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳು, ಕೆಲವು ರೈತ ಸಂಘಟನೆಗಳು ಬೆಂಬಲಿಸಿವೆ. ಮಂಡ್ಯ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಬಳ್ಳಾರಿ ಮುಂತಾದ ಕೆಲವು ಜಿಲ್ಲೆಗಳಲ್ಲಿ ಬಲವಾದ ಬೆಂಬಲ ನಿರೀಕ್ಷಿಸಲಾಗಿದೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಹಲವು ಆಟೋ-ಟ್ಯಾಕ್ಸಿ ಒಕ್ಕೂಟಗಳು, ಹೋಟೆಲ್ ಸಂಘಟನೆಗಳು ಮತ್ತು ಶಾಲಾ ನಿರ್ವಹಣಾ ಸಂಘಗಳು (KAMS) ಪೂರ್ಣ ಬೆಂಬಲ ನೀಡಿಲ್ಲ, ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿವೆ.
ಆದರೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಹೋರಾಟ ಆರಂಭವಾಗುವ ರೂಪುರೇಷೆ ಹಾಕಿಕೊಳ್ಳಲಾಗಿತ್ತು. ವಾಟಾಳ್ ನಾಗರಾಜ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿರುವ ಪರಿಣಾಮ ಬಂದ್ ಮೇಲೆ ಸಾಕಷ್ಟು ಬೀರುವ ಸಾಧ್ಯತೆಗಳಿವೆ. ವಾಟಾಳ್ ನಾಗರಾಜ್ ಬೀದಿಗೆ ಇಳಿದಿದ್ದರೆ ಹೋರಾಟ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿತ್ತು. ಆದರೆ ಸದ್ಯ ಅವರನ್ನು ಬಂಧಿಸಿರುವ ಪೊಲೀಸರು ಬಂದ್ ಮೇಲೆ ಹೆಚ್ಚಿನ ನಿಗಾವಹಿಸಿದ್ದಾರೆ.
ಮೆಜೆಸ್ಟಿಕ್‌ಗೆ ತೆರಳಲು ಸಜ್ಜಾಗಿದ್ದ ವಾಟಾಳ್..
ಮೆಜೆಸ್ಟಿಕ್ ಗೆ ಪ್ರತಿಭಟನೆ ನಡೆಸಲು ತೆರಳಲು ಸಜ್ಜಾಗಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು ಎನ್ನಲಾಗಿದೆ. ಬಾಯಿಗೆ ಟೇಪ್ ಅಂಟಿಸಿಕೊಂಡು ಮೌನವಾಗಿ ಪ್ರತಿಭಟನೆ ನಡೆಸಲು ವಾಟಾಳ್ ರೆಡಿಯಾಗಿದ್ದರು. ಸದಾಶಿವನಗರ ಠಾಣೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಭಟನೆಗೆ ತೆರಳುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಮನೆಯಿಂದ ಹೊರಬರುತ್ತಿದ್ದಂತೆಯೇ ವಶಕ್ಕೆ ಪಡೆದಿದ್ದಾರೆ. ವಾಟಾಳ್ ನಾಗರಾಜ್ ಅವರ ವಶಕ್ಕೆ ಪಡೆದಿರುವ ಕ್ರಮದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.






