ಬೆಂಗಳೂರು, ಆಗಸ್ಟ್ 7: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಹೊಸ ತಿರುವು ಸಿಕ್ಕಿದ್ದು, ಅವರನ್ನು ಒತ್ತಡ ಹೇರಿ ಹಾಗೂ ದಬಾಯಿಸಿ ರಾಜೀನಾಮೆ ಕೊಡಿಸಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದ ಸಭಾಪತಿಯವರಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ. ಇದು ವಿಧಾನಪರಿಷತ್ ನಿಯಮಾವಳಿಗಳಿಗೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.
ರಾಜೀನಾಮೆ ಕುರಿತು ವಿಚಾರಿಸಿದಾಗ, “ನನಗೆ ಬೇರೆ ದಾರಿಯೇ ಇರಲಿಲ್ಲ. ಸುಮಾರು 20ರಿಂದ 25 ಮಂದಿ ಶಾಸಕರು ಬಂದು ನಿರಂತರ ಒತ್ತಡ ಹೇರಿದರು. ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ತರಿಸಿ, ಅದನ್ನು ಟೈಪ್ ಮಾಡಿಸಿ ನನ್ನಿಂದ ಸಹಿ ಹಾಕಿಸಿಕೊಂಡರು” ಎಂದು ಹೊರಟ್ಟಿ ತಮ್ಮ ಬಳಿ ನೋವು ವ್ಯಕ್ತಪಡಿಸಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ಅಲ್ಲದೆ, ಕೆಪಿಸಿಸಿ ಅಧ್ಯಕ್ಷರು, ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಕಚೇರಿಗೆ ಬಂದು ನಿರಂತರ ಒತ್ತಡ ತಂದ ಪರಿಣಾಮ ತಮಗೆ ರಾಜೀನಾಮೆ ನೀಡುವುದನ್ನು ಬಿಟ್ಟರೆ ಬೇರೆ ಮಾರ್ಗ ಉಳಿದಿರಲಿಲ್ಲ ಎಂದು ಹೊರಟ್ಟಿ ಹೇಳಿದ್ದಾಗಿ ಅವರು ಹೇಳಿದರು.
ಹೊರಟ್ಟಿ ಅವರು ಮತ್ತೊಬ್ಬರ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ಎರಡು ಗಂಟೆಗಳ ಕಾಲ ಅವರ ಕಚೇರಿಯಲ್ಲಿ ಒತ್ತಡದ ವಾತಾವರಣ ನಿರ್ಮಿಸಿ ಸಹಿ ಪಡೆಯಲಾಗಿದೆ ಎಂದು ಆರೋಪಿಸಿದ ಅವರು, ಇದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಬಯಲಿಗೆಳೆಯುತ್ತದೆ ಎಂದರು.
“ಹಿಂದೆ ಬೀದಿಗಳಲ್ಲಿದ್ದ ಗೂಂಡಾಗಿರಿ ಈಗ ವಿಧಾನಸೌಧವನ್ನೇ ಪ್ರವೇಶಿಸಿದೆ. ಸಭಾಪತಿಯವರ ಕೊಠಡಿವರೆಗೂ ಇಂತಹ ಒತ್ತಡದ ರಾಜಕಾರಣ ತಲುಪಿರುವುದು ರಾಜ್ಯದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ” ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಈ ಘಟನೆ ಕೇವಲ ಬಸವರಾಜ ಹೊರಟ್ಟಿ ಅವರಿಗೆ ನಡೆದ ಅವಮಾನವಲ್ಲ; ಇಡೀ ವಿಧಾನಪರಿಷತ್ ಹಾಗೂ ಅದರ ಸದಸ್ಯರಿಗೆ ಮಾಡಿದ ಅಪಮಾನವಾಗಿದೆ. ಈ ವಿಚಾರವನ್ನು ಬಿಜೆಪಿ ಇಲ್ಲಿಗೇ ಬಿಡುವುದಿಲ್ಲ. ಕಾಂಗ್ರೆಸ್‌ಗೆ ತಕ್ಕ ಉತ್ತರ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು.





