ಸ್ಥಳೀಯ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷದ ಆಟಗಾರ ಮೃತಪಟ್ಟಿರುವ ದುರ್ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಸೋಫ್ವಾನ್ ಅವೆ ಮೃತ ಆಟಗಾರನಾಗಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರೀ ಮಳೆಯ ನಡುವೆಯೂ ಪಂದ್ಯ ನಡೆಯುತ್ತಿದ್ದಾಗ ಏಕಾಏಕಿ ಸಿಡಿಲು ಮೈದಾನಕ್ಕೆ ಬಡಿದಿದೆ. ಇದರ ಪರಿಣಾಮ ಸೋಫ್ವಾನ್ ಸೇರಿದಂತೆ ಸುಮಾರು 12 ಮಂದಿ ಆಟಗಾರರು ಗಾಯಗೊಂಡಿದ್ದಾರೆ. ಆದರೆ ಸ್ಥಳದಲ್ಲೇ ಕುಸಿದು ಬಿದ್ದಿದ್ದ ಸೋಫ್ವಾನ್ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನೆಯ ವಿಡಿಯೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಳೆ ಹೆಚ್ಚಾಗುತ್ತಿದ್ದರೂ ಪಂದ್ಯವನ್ನು ನಿಲ್ಲಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹವಾಮಾನ ಪರಿಸ್ಥಿತಿ ಗಮನಿಸಿ ಪಂದ್ಯ ಸ್ಥಗಿತಗೊಳಿಸಿದ್ದರೆ ಈ ದುರಂತ ತಪ್ಪಿಸಬಹುದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.







