ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರ ‘ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದೆ. ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಎರಡು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿಟಿಲೈಟ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ಪ್ರತಿ ಬಾರಿ ಜಾನಪದ, ಬುಡಕಟ್ಟು ಹಾಡುಗಳಿಗೆ ಹೊಸ ರೂಪ ಕೊಟ್ಟು ಪ್ರೇಕ್ಷಕರ ಮುಂದಿಡುವ ದುನಿಯಾ ವಿಜಯ್, ಈ ಬಾರಿ ಮಾದಪ್ಪನ ಜಾನಪದ ಹಾಡುಗಳ ಸಾಲುಗಳನ್ನ ಬಳಸಿಕೊಂಡು ಈಗಿನ ಟ್ರೆಂಡ್ ಗೆ ತಕ್ಕಂತೆ ಹೊಸ ಸಾಂಗ್ ರಿಲೀಸ್ ಮಾಡಿದ್ದಾರೆ.

ಅದೇ ಕೆಂಡದೋಕುಳಿ ಗಂಡನಾ ಹಾಡನ್ನು ಜಾನಪದ ಕಲಾವಿದ ಕಂಸಾಳೆ ಧನುಷ್ ಹಾಡಿದ್ದಾರೆ. ಇನ್ನು ಹಾಡಲ್ಲಿ ಬರುವ ರ್ಯಾಪ್ ಸಾಲುಗಳನ್ನ ಅಮೋಘ್ ಬಾಲಾಜಿ ಹಾಡಿದ್ದಾರೆ…ಸಿಟಿಲೈಟ್ಸ್ ಸಿನಿಮಾಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕುಮಾರ್ ಅವರ ಕಿರಿಯ ಮಗಳು ಮೋನಿಷಾ ವಿಜಯ್ ಕುಮಾರ್ ಸ್ಯಾಂಡಲ್ ವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಸಾಂಗ್ ರಿಲೀಸ್ ನಲ್ಲಿ ಮಾತನಾಡಿದ ವಿನಯ್ ರಾಜ್‌ಕುಮಾರ್, “ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾವಸ್ತು, ಇನ್ನು ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.ತಮ್ಮ ಚೊಚ್ಚಲ ಅಭಿನಯದ ಕುರಿತು ಹಂಚಿಕೊಂಡ ಮೊನಿಷಾ, “ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ” ಎಂದರು.

ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ವಿಜಯ್ ಕುಮಾರ್, “ನಾನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ”ಎಂದಿದ್ದಾರೆ.

‘ಸಲಗ’ ಮತ್ತು ‘ಭೀಮ’ ಚಿತ್ರಗಳಲ್ಲಿ ಹಿಟ್ ಜೋಡಿಯಾಗಿದ್ದ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಸಂಭಾಷಣೆಗಾರ ಮಾಸ್ತಿ ಈ ಚಿತ್ರದಲ್ಲೂ ಒಂದಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಕಂದಮ್ಮ’ ಮತ್ತು ‘ಬಾವ ಬಾವ’ (ರ್ಯಾಪ್) ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ವಿಜಯ್ ಕುಮಾರ್ ಮತ್ತು ವಿಕ್ರಮ್ ಆರ್ಯ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.. ಇನ್ನು ‘ಕೆಡಿ’, ‘ಜನನಾಯಗನ್’ ಹಾಗೂ ‘ಟಾಕ್ಸಿಕ್’ ನಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘ಸಿಟಿ ಲೈಟ್ಸ್’ ಚಿತ್ರವನ್ನು ವಿತರಣೆ ಮಾಡುತ್ತಿದೆ.






