ನಾ ದಿವಾಕರ : ಹಿರಿಯ ಲೇಖಕರು..
ಆಧುನಿಕತೆಯ ಓಟದಲ್ಲಿ ನಿರ್ಲಕ್ಷಿತ ಜೀವಗಳು
ಬಂಡವಾಳಶಾಹಿ ಸಮಾಜ ಉನ್ನತ ಹಂತವನ್ನು ತಲುಪುತ್ತಿರುವಂತೆಲ್ಲಾ ಆರ್ಥಿಕವಾಗಿ ಮೇಲ್ ಚಲನೆ ಪಡೆಯುವ ವರ್ಗಗಳು ತಮ್ಮ ಸ್ವಾನುಕೂಲದ ಹಿತಾಸಕ್ತಿಗಳಿಗನುಗುಣವಾಗಿ ಸಾರ್ವಜನಿಕ ಮೂಲಸೌಕರ್ಯ-ಸೌಲಭ್ಯ ಹಾಗೂ ಸವಲತ್ತುಗಳನ್ನು ಪುನಾರೂಪಿಸುತ್ತಿರುತ್ತವೆ. ಭಾರತದ ಪ್ರಜಾಪ್ರಭುತ್ವದಲ್ಲಿ ಆರಂಭದಿಂದಲೂ ಈ ವರ್ಗಗಳೇ ಸಾರ್ವಜನಿಕ ನೀತಿಯ ರಚನೆ, ನಿರ್ವಹಣೆ ಮತ್ತು ಪುನಾರಚನೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿವೆ. ವ್ಯವಸ್ಥೆಯ ಎಲ್ಲ ಹಂತಗಳಲ್ಲಿ, ಎಲ್ಲ ಮಗ್ಗುಲುಗಳಲ್ಲಿ ಈ ಹಿತವಲಯದ ಧ್ವನಿಯೇ ಪ್ರಾಬಲ್ಯ ಸಾಧಿಸುವುದರಿಂದ, ಸಾರ್ವಜನಿಕರ ಬದುಕು, ಜೀವನ, ಜೀವನೋಪಾಯ ಹಾಗೂ ದುಡಿಮೆ ಇವೆಲ್ಲವೂ ಹಿತವಲಯದ ನಾಲ್ಕು ಗೋಡೆಗಳ ನಡುವೆಯೇ ನಿರ್ವಚಿಸಲ್ಪಡುತ್ತದೆ. ತತ್ಪರಿಣಾಮವಾಗಿ ಕಟ್ಟಕಡೆಯ ಸಮಾಜ, ವ್ಯಕ್ತಿ ಮತ್ತು ಸಂಕುಲ ಸದಾ ನಿರ್ಲಕ್ಷಿತವಾಗಿಯೇ ಪರಿಗಣಿಸಲ್ಪಡುವುದನ್ನು ಕಾಣಬಹುದು. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಈ ಪ್ರಕ್ರಿಯೆಯನ್ನು ಸಹಜೀಕರಣಗೊಳಿಸಿ (Naturalise) ಸಾರ್ವತ್ರಿಕ ಮಾನ್ಯತೆಯನ್ನೂ ಕಲ್ಪಿಸಿಬಿಡುತ್ತದೆ.

ಈ ದುಷ್ಟ ಪ್ರವೃತ್ತಿಯಲ್ಲೇ ಹುಟ್ಟಿಕೊಂಡಿರುವ ಕ್ರೂರ ವಿಧಾನಗಳು ಎತ್ತಂಗಡಿ ಮತ್ತು ಬುಲ್ಡೋಜರ್ ಎಂಬ ಆಡಳಿತ ಕ್ರಮಗಳು. ಅರಣ್ಯ ವಾಸಿಗಳನ್ನು ಸ್ವಾತಂತ್ರ್ಯದ ಆರಂಭದಿಂದಲೂ ಎತ್ತಂಗಡಿ ಮಾಡುತ್ತಲೇ ಇದ್ದರೂ, ಬಾಹ್ಯ ಸಮಾಜಕ್ಕೆ ಇದರ ಪರಿಣಾಮದ ಅರಿವಾಗತೊಡಗಿದ್ದು ಜಾಗತೀಕರಣ ಆಕ್ರಮಿಸಿದ ನಂತರದಲ್ಲೇ. ನಗರೀಕರಣ ಮತ್ತು ಸುಗಮ ನಗರ ಜೀವನದ ಪರಿಕಲ್ಪನೆಗಳು ಸಮಾಜದ ಹಿತವಲಯವನ್ನು ತೃಪ್ತಿಪಡಿಸುವ ವಿದ್ಯಮಾನಗಳು. ಈ ಪ್ರಕ್ರಿಯೆಯಲ್ಲಿ ಆರ್ಥಿಕವಾಗಿ ಮುಂದುವರೆದ, ಸಾಮಾಜಿಕವಾಗಿ ಮೇಲ್‌ಚಲನೆ ಪಡೆದ ಸಮಾಜಗಳು ಅಧಿಕಾರ ವಲಯಗಳನ್ನು ಆಕ್ರಮಿಸುವುದರ ಮೂಲಕ ನಗರೀಕರಣದ ನೀತಿಗಳನ್ನೂ ನಿಯಂತ್ರಿಸುತ್ತವೆ. ಈ ಹಿತವಲಯ ಸಮಾಜಗಳ ಸುಗಮ ಸಂಚಾರ, ಓಡಾಟ ಮತ್ತು ಮನರಂಜನೆಗೆ ಅಡ್ಡಿಯಾಗುವ ಯಾವುದೇ ವೃತ್ತಿ, ಕುಸುಬು ಕೇಂದ್ರಗಳನ್ನು ಎತ್ತಂಗಡಿ ಮಾಡುವುದು ಆಡಳಿತ ವ್ಯವಸ್ಥೆಯ ಆದ್ಯತೆಯಾಗಿಬಿಡುತ್ತದೆ.
ಬದುಕುವ ಹಕ್ಕು ಮತ್ತು ನ್ಯಾಯಾಂಗ
ಈ ತಾಕಲಾಟದಲ್ಲಿ ತೀವ್ರ ಸಂಕಟಗಳನ್ನು ಅನುಭವಿಸುತ್ತಿರುವವವರು ಬೀದಿಬದಿ -ತಳ್ಳುಗಾಡಿಯ ಸಣ್ಣ ವ್ಯಾಪಾರಿಗಳು ಹಾಗೂ ಪೆಟ್ಟಿಗೆ ಅಂಗಡಿಯಂತಹ ಸಣ್ಣ ಮಳಿಗೆಗಳು. ಪಟ್ಟಣ , ನಗರಗಳಲ್ಲಿ ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ಸುರಕ್ಷಿತವಾಗಿ ನಡೆಯುವ ಹಕ್ಕನ್ನು ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕು ಎಂದು ಘೋಷಿಸಿದೆ. . ಪಾದಚಾರಿ ಮೂಲಸೌಕರ್ಯವು ಕೇವಲ ನಾಗರಿಕ ಸೌಲಭ್ಯವಲ್ಲ, ಅದು ಸಾಂವಿಧಾನಿಕ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಈ ಹಕ್ಕನ್ನು ಅನುಚ್ಛೇದ 19(1)(d) (ಚಲನೆಯ ಸ್ವಾತಂತ್ರ್ಯ) ಮತ್ತು ವಿಧಿ 21 (ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಕ್ಕೆ ಜೋಡಿಸಿ, ಜನಸಾಮಾನ್ಯರ ನಡೆದಾಡುವ ಮಾರ್ಗಗಳು ಸುರಕ್ಷಿತವಾಗಿರಬೇಕು ಎಂದು ಆದೇಶಿಸುತ್ತದೆ. ಈ ಹಿನ್ನೆಲೆಯಲ್ಲೇ ಪಾದಚಾರಿಗಳಿಗೆ ಗೊತ್ತುಪಡಿಸಿದ ಮಾರ್ಗಗಳಲ್ಲಿ ಪಾದಚಾರಿಗಳಿಗೆ ಹಾನಿಯಾಗುವಂತೆ ರಸ್ತೆ ಜಾಗವನ್ನು ಆಕ್ರಮಿಸುವುದು ಅಪರಾಧವಾಗುತ್ತದೆ.
ನ್ಯಾಯಾಂಗದ ಈ ಆದೇಶವನ್ನು ಆಧರಿಸಿ ನಗರ ಪಾಲಿಕೆಗಳು, ನಗರಾಭಿವೃದ್ಧಿ ಸಂಸ್ಥೆಗಳು ಫುಟ್‌ಪಾತ್ ವ್ಯಾಪಾರಿಗಳನ್ನು ಸಾರ್ವಜನಿಕರ ಸುಗಮ ಜೀವನಕ್ಕೆ ಅಡಚಣೆ ಎಂದೇ ಪರಿಗಣಿಸುತ್ತಿದ್ದು, ಎಲ್ಲ ನಗರಗಳಲ್ಲೂ ಈ ತಳಸ್ತರದ ಜನತೆಯನ್ನು ಎತ್ತಂಗಡಿ/ಸ್ಥಳಾಂತರ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ನ್ಯಾಯಾಂಗದ ಆದೇಶ ಬೀದಿಬದಿ ವ್ಯಾಪಾರಿಗಳ ಮೂಲಭೂತ ಹಕ್ಕನ್ನು ಕುರಿತದ್ದು. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಈ ಹಕ್ಕನ್ನು ಅನುಚ್ಛೇದ 19(1) (ಜಿ) ಅಡಿಯಲ್ಲಿ ಎತ್ತಿಹಿಡಿದಿದ್ದು, ಸಾರ್ವಜನಿಕರ ಸುರಕ್ಷತೆ, ನೈರ್ಮಲ್ಯ, ಸಂಚಾರಕ್ಕೆ ಅಡಚಣೆಯಾಗದ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಪಾಲಿಕೆ, ಪುರಸಭೆ, ನಗರಸಭೆಗಳು ಪಟ್ಟಣ/ನಗರ ಮಾರಾಟ ಸಮಿತಿಗಳನ್ನು (TVC), ರಚಿಸಿ, ನಿರ್ದಿಷ್ಟ ಮಾರಾಟದ ಮತ್ತು ಮಾರಾಟಮುಕ್ತ ವಲಯಗಳನ್ನು ನಿಗದಿಪಡಿಸುವಂತೆಯೂ ಆದೇಶಿಸಿದೆ.

ಪಾದಚಾರಿ ಮಾರ್ಗಗಳಲ್ಲಿ ರಸ್ತೆಗಳನ್ನು ಶಾಶ್ವತವಾಗಿ ಆಕ್ರಮಿಸದಿದ್ದರೆ ಮತ್ತು ಪಾದಚಾರಿಗಳ ಅಡಚಣೆಯನ್ನು ತಡೆಯದಿದ್ದರೆ. ಬೀದಿ ವ್ಯಾಪಾರವನ್ನು ನಡೆಸುವುದು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿದೆ ಎಂದು ನ್ಯಾಯಾಲಯವು (ಸೋಡಾನ್ ಸಿಂಗ್ ಪ್ರಕರಣ) ದೃಢಪಡಿಸಿದೆ. ನಗರ-ಪುರಸಭೆಗಳು ಸಕ್ರಿಯ ಮಾರಾಟ ವಲಯಗಳನ್ನು ಗೊತ್ತುಪಡಿಸಬೇಕು ಮತ್ತು ಔಪಚಾರಿಕ ಸಮೀಕ್ಷೆ ಮತ್ತು ಪ್ರಾದೇಶಿಕ ಯೋಜನೆ ಇಲ್ಲದೆಯೇ ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳನ್ನು “ಮಾರಾಟಮುಕ್ತ ವಲಯಗಳು” ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸ್ಥಳೀಯ ಅಧಿಕಾರಿಗಳು ಔಪಚಾರಿಕ 30-ದಿನಗಳ ಸೂಚನೆ ಇಲ್ಲದೆ ಅಥವಾ TVC ನಿರ್ಧರಿಸಿದಂತೆ ಪರ್ಯಾಯ ಸ್ಥಳವನ್ನು ನೀಡದೆ ಪರವಾನಗಿ ಪಡೆದ ಮಾರಾಟಗಾರರನ್ನು ಬಲವಂತವಾಗಿ ಹೊರಹಾಕಲು ಅಥವಾ ಸ್ಥಳಾಂತರಿಸಲು ಸಾಧ್ಯವಿಲ್ಲ. ವ್ಯಾಪಾರಿಗಳ ಎತ್ತಂಗಡಿ ಮತ್ತು ಸ್ಥಳಾಂತರ ಪ್ರಕ್ರಿಯೆಯಲ್ಲಿ ಕನಿಷ್ಠ ಬಲವನ್ನು ಬಳಸಬೇಕು ಎಂದೂ ಆದೇಶಿಸಿದ್ದು, ಅಧಿಕಾರಿಗಳು ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ನಾಶಪಡಿಸುವಂತಹ ಬಲವಂತದ ವಿಧಾನಗಳನ್ನು ಬಳಸಬಾರದು ಎಂದು ಹೇಳಿದೆ.
ಬದುಕು ಕಟ್ಟಿಕೊಳ್ಳುವ ದಾರಿಯಲ್ಲಿ
ಈ ಕಾಯ್ದೆ, ಕಾನೂನು ಮತ್ತು ನ್ಯಾಯಾಂಗ ನಿರ್ದೇಶನದ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಟಗಳನ್ನು ಗಮನಿಸಬೇಕಿದೆ. ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲೂ ಇತ್ತೀಚೆಗೆ ನಗರಪಾಲಿಕೆಗಳು ಈ ವ್ಯಾಪಾರಿಗಳ ಎತ್ತಂಗಡಿ ಕ್ರಮವನ್ನು ಜರುಗಿಸಿದ್ದು, ಕೆಲವೆಡೆ ಜೆಸಿಬಿಗಳನ್ನು ಬಳಸಿ ಪೆಟ್ಟಿಗೆ ಅಂಗಡಿಗಳನ್ನು ಕಿತ್ತುಹಾಕಲಾಗಿದೆ. ಮೈಸೂರು ಬಸ್ ನಿಲ್ದಾಣದ ಸುತ್ತ ಇರುವ ಪಾದಚಾರಿ ರಸ್ತೆಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಎಲ್ಲರನ್ನೂ ಎತ್ತಂಗಡಿ ಮಾಡಿರುವುದನ್ನು ನಗರ ಪಾಲಿಕೆ ಮತ್ತು ಸಮಾಜದ ಒಂದು ವರ್ಗ ಸಂಭ್ರಮಿಸುತ್ತಿದೆ. ಮಂಗಳೂರಿನಲ್ಲಿ ಇದೇ ಕಾರ್ಯಾಚರಣೆ ನಡೆದಿದ್ದು, ಬೀದಿ ಬದಿ ವ್ಯಾಪಾರಿಗಳ ಸಂಘ ಪ್ರತಿಭಟನೆ ನಡೆಸಿದೆ.
ಈ ಸಮಸ್ಯೆಯನ್ನು ಎರಡು ಮಜಲುಗಳಲ್ಲಿ ವಿಶ್ಲೇಷಣೆ ಮಾಡಬಹುದು. ಸಾರ್ವಜನಿಕರಿಗೆ ನಡೆದು ಹೋಗಲೆಂದೇ ನಿರ್ಮಿಸಲಾಗುವ ಪಾದಚಾರಿ ರಸ್ತೆಗಳು ಮುಕ್ತವಾಗಿರಬೇಕು ಎನ್ನುವುದು ನಿರ್ವಿವಾದ ಅಂಶ. ಹೆಜ್ಜೆ ಹೆಜ್ಜೆಗೂ ಮಾರಾಟದ ಸರಕುಗಳನ್ನು ಚೆಲ್ಲಿಕೊಂಡಿರುವ ವ್ಯಾಪಾರಿಗಳು ಕೆಲವೊಮ್ಮೆ ಪಾದಚಾರಿಗಳಿಗೆ ಮುಜುಗರ ಉಂಟುಮಾಡುವುದೂ ವಾಸ್ತವ. ಇದರ ಮತ್ತೊಂದು ಬದಿಯಲ್ಲಿ ತಳ್ಳುಗಾಡಿಗಳಲ್ಲಿ ತರಕಾರಿ, ಹೂವು, ಹಣ್ಣು ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವವರೂ ರಸ್ತೆ ಬದಿಗಳಲ್ಲೇ ನಿಲ್ಲಿಸಿಕೊಂಡಿರುತ್ತಾರೆ. ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಇದು ಸಾಕಷ್ಟು ಅಡಚಣೆ ಉಂಟುಮಾಡುತ್ತದೆ. ಆಡಳಿತ ಸುವ್ಯವಸ್ಥೆ ಮತ್ತು ಸಾಮಾನ್ಯ ನಾಗರಿಕರ ಸುಗಮ ಓಡಾಟದ ದೃಷ್ಟಿಯಿಂದ ಈ ಸಮಸ್ಯೆಗಳನ್ನು ನಿರಾಕರಿಸಲಾಗುವುದಿಲ್ಲ.

ರಸ್ತೆ ನಿರ್ಮಾಣ ಮತ್ತು ದುರಸ್ತಿಯಲ್ಲಿ ಆಡಳಿತ ವ್ಯವಸ್ಥೆಗಳು ನಿರ್ಲಕ್ಷ್ಯ ವಹಿಸುವುದರಿಂದ ದ್ವಿಚಕ್ರ ವಾಹನ ಸಂಚಾರರು ಪಾದಚಾರಿ ರಸ್ತೆಗಳಲ್ಲೇ ಸಾಗಿ ಹೋಗುವುದೂ ಸಹ ಸಾಮಾನ್ಯ ಸಂಗತಿಯಾಗಿದೆ. ಹೆಚ್ಚಿನ ವಾಹನ ದಟ್ಟಣೆ ಇರುವ ರಸ್ತೆಗಳ ಇಕ್ಕೆಲಗಳಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಸಂಚಾರಿಗಳಿಗೆ ಅಡಚಣೆಯಾಗಿ ಸಹ ಕಾಣುತ್ತಾರೆ. ಮಾರುಕಟ್ಟೆಯ ಜನನಿಬಿಡ ವಲಯಗಳಲ್ಲಿ ಪಾದಚಾರಿಗಳಿಗೆ ನಡೆದು ಹೋಗುವುದೂ ಕಷ್ಟವಾಗುವ ಸನ್ನಿವೇಶಗಳೂ ಎದುರಾಗುತ್ತವೆ. ಈ ಸಮಸ್ಯೆಗಳ ನಿವಾರಣೆಗೆಂದೇ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ TVC ಗಳ ಮೂಲಕ ವ್ಯಾಪಾರ ವಲಯಗಳನ್ನು ನಿಗದಿಪಡಿಸಲು ಸೂಚಿಸುತ್ತದೆ. ಈ ವ್ಯಾಪಾರ ವಲಯಗಳಲ್ಲಿ ಶೌಚಾಲಯವೂ ಸೇರಿದಂತೆ, ಸಣ್ಣ ವ್ಯಾಪಾರಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಆಡಳಿತದ ಜವಾಬ್ದಾರಿ. ಈ ನಿಯಮಗಳನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ ?
ರಸ್ತೆ ಬದಿಯ ಜೀವನೋಪಾಯದ ತಾಣಗಳು
ಬೀದಿ ಬದಿ ವ್ಯಾಪಾರಿಗಳನ್ನು ಒಂದು ಸಮಸ್ಯೆ ಎಂಬ ದೃಷ್ಟಿಯಿಂದಲೇ ನೋಡುವ ಹಿತವಲಯದ ಸಮಾಜಕ್ಕೆ ಇವರ ಎತ್ತಂಗಡಿ ಅಥವಾ ಸ್ಥಳಾಂತರ ಸಂಭ್ರಮದ ಕ್ಷಣವಾಗುತ್ತದೆ. ಮೈಸೂರಿನ ಕೆಲವು ಬಡಾವಣೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಾಣುವುದು ದಿನದ ಕೆಲವು ಗಂಟೆಗಳ ಕಾಲ ಮಾತ್ರ. ಉಳಿದಂತೆ ರಸ್ತೆಗಳು ಮುಕ್ತವಾಗಿರುತ್ತವೆ. ಇಂತಹ ಪ್ರದೇಶಗಳಲ್ಲೂ ತಳ್ಳುಗಾಡಿಗಳನ್ನು ದಿನಪೂರ್ತಿ ನಿಷೇಧಿಸುವ ಪಾಲಿಕೆಯ ಉಪಕ್ರಮವನ್ನು ಹೇಗೆ ಭಾವಿಸುವುದು ? ಈ ತಳ್ಳುಗಾಡಿಗಳು ಇರುವುದರಿಂದಲೇ ವಾಹನ ಅಪಘಾತಗಳು ಸಂಭವಿಸುತ್ತವೆ ಎಂಬ ವಿತಂಡ ವಾದವನ್ನೂ ಸಹ ಮುಂದಿಡಲಾಗುತ್ತದೆ. ಈ ಗಾಡಿಗಳು ರಸ್ತೆಯ ನಡುವೆ ನಿಂತಿರುವುದಿಲ್ಲ, ಅಂಚಿನಲ್ಲಿರುತ್ತವೆ, ವಾಹನ ಸಂಚಾರರು ಎಚ್ಚರದಿಂದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆಗಳು ಕಡಿಮೆ.
ಆದರೂ ಈ ಕಾರಣಕ್ಕಾಗಿಯೇ ಹಲವಾರು ದೊಡ್ಡ ವೃತ್ಗಗಳಲ್ಲಿ ತಳ್ಳುಗಾಡಿಗಳನ್ನು ನಿರ್ಬಂಧಿಸಿರುವುದನ್ನು ಕಾಣಬಹುದು. ಈಗ ಬೆಂಗಳೂರು ಮತ್ತು ಮಂಗಳೂರು ಮಹಾನಗರ ಪಾಲಿಕೆಗಳೂ ಇದೇ ಮಾರ್ಗವನ್ನು ಅನುಸರಿಸುತ್ತಿವೆ. ಈ ಉಚ್ಛಾಟಿಸಲ್ಪಟ್ಟ ಸಣ್ಣ ವ್ಯಾಪಾರಿಗಳಿಗೆ ಪರ್ಯಾಯ ಮಾರಾಟ ವಲಯವನ್ನು ನಿಗದಿಪಡಿಸುವ ಜವಾಬ್ದಾರಿ ಪಾಲಿಕೆಯ ಮೇಲಿದ್ದರೂ, ಎತ್ತಂಗಡಿಯನ್ನು ಆಗ್ರಹಿಸುವ, ಸಂಭ್ರಮಿಸುವ ಹಿತವಲಯ ಸಮಾಜಗಳು ಈ ಬಗ್ಗೆ ಯೋಚಿಸುವುದೂ ಇಲ್ಲ. ಈ ಸಮಾಜದ ಗಣ್ಯರಿಗೆ (Elites) ತಮ್ಮ ದೈನಂದಿನ ವ್ಯಾಪಾರವನ್ನೇ ಅವಲಂಬಿಸಿ ಬದುಕುವ ಬಡಜನರು ಮತ್ತು ಅವರ ತಳ್ಳುಗಾಡಿಗಳು, ರಸ್ತೆ ಉಬ್ಬುಗಳಿಗೆ-ಗುಂಡಿಗಳಿಗೆ ಸಮನಾಗಿ ಕಾಣುತ್ತದೆ. ತೆರವುಗೊಳಿಸುವುದಷ್ಟೇ ಮುಖ್ಯವಾಗುತ್ತದೆಯೇ ಹೊರತು, ತದನಂತರದ ಅವರ ಬದುಕು, ಬವಣೆ ಮತ್ತು ಸಂಕಟಗಳು ಗಣನೆಗೇ ಬರುವುದಿಲ್ಲ.
![]()
ಸಾಮಾಜಿಕ ಕ್ರೌರ್ಯ ಇಲ್ಲಿ ಢಾಳಾಗಿ ಕಾಣುತ್ತದೆ. ಯಾವುದೇ ನಗರಗಳಲ್ಲಾದರೂ ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಗಳ ವ್ಯಾಪಾರಿಗಳು ಸಮಾಜದ ಅತ್ಯಂತ ಕೆಳಸ್ತರಿಂದ ಬಂದವರಾಗಿರುತ್ತಾರೆ. ಗಮನವಿಟ್ಟು ನೋಡಿದರೆ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಇರುವುದಿಲ್ಲ. ಗಂಡ ವ್ಯಾಪಾರದಲ್ಲಿದ್ದರೆ ಹೆಂಡತಿ ಮತ್ತೊಂದು ಕಡೆ ದಿನಗೂಲಿಗೆ ಹೋಗಿರುತ್ತಾರೆ. ಅಥವಾ ಅದಲು ಬದಲಾಗಿರುತ್ತದೆ. ಇಬ್ಬರೂ ಸೇರಿ ದುಡಿಯುವ ಹಣದಿಂದ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ದೈನಂದಿನ ಕೂಳು ನಿಭಾಯಿಸಲಾಗುತ್ತದೆ. ವಿದ್ಯಾವಂತರೇ ನಿರ್ವಹಿಸುವ ಮಳಿಗೆ, ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ಕಾಣಬಹುದು, ಆದರೆ ಈ ತಳ್ಳುಗಾಡಿ-ಬೀದಿಬದಿ ವ್ಯಾಪಾರಿಗಳು ತಮ್ಮ ಮಕ್ಕಳನ್ನು ಬಳಸಿಕೊಳ್ಳುವುದನ್ನು ಕಾಣಲಾಗುವುದಿಲ್ಲ. ದಿನವಿಡೀ ನಿಂತು ವ್ಯಾಪಾರ ಮಾಡುವವರ ದೈಹಿಕ ಶ್ರಮವನ್ನೂ ಇಲ್ಲಿ ಗಮನಿಸಬೇಕಾಗುತ್ತದೆ.
ಉದ್ದಿಮೆ ಎನ್ನಲಾಗದ ವ್ಯಾಪಾರ
ನಸುಕಿನಲ್ಲೇ ಮಾರುಕಟ್ಟೆಗೆ ಹೋಗಿ, ದಿನದ ಲೆಕ್ಕದಲ್ಲಿ ಮೀಟರ್ ಬಡ್ಡಿಯ ಮೇಲೆ ಸಾಲ ಪಡೆದು, ಪದಾರ್ಥಗಳನ್ನು ಖರೀದಿಸುವ ಈ ವ್ಯಾಪಾರಿಗಳು ತಮ್ಮ ಅಲ್ಪಸಂಪಾದನೆಯಲ್ಲೇ ಬಡ್ಡಿಯನ್ನೂ ತೀರಿಸಬೇಕಾಗುತ್ತದೆ. ಗಂಡನಿಗೆ ಕುಡಿತದ ಚಟ ಇದ್ದರೆ, ಹೆಂಡತಿಯಾದವಳು ತನ್ನ ಆದಾಯದಲ್ಲೇ ಮಕ್ಕಳನ್ನು ಸಲಹಬೇಕಾಗುತ್ತದೆ. ಹಿತವಲಯದ ಸಮಾಜಕ್ಕೆ ತಾತ್ಕಾಲಿಕವಾಗಿ , ಕೆಲವು ಕ್ಷಣಗಳ ಕಾಲ ಅಡಚಣೆಯಾಗುವ ಈ ವ್ಯಾಪಾರಿಗಳನ್ನು ಸುಗಮ ಸಂಚಾರ, ಅಪಘಾತ ನಿಯಂತ್ರಣದ ನೆಪದಲ್ಲಿ ಏಕಾಏಕಿ ಎತ್ತಂಗಡಿ ಮಾಡುವುದು ಕ್ರೌರ್ಯ ಎನಿಸುವುದಿಲ್ಲವೇ ? ತಾನು ಸಾಲ ಮಾಡಿ ಖರೀದಿಸಿದ ಪದಾರ್ಥಗಳನ್ನು ಮಾರಾಟ ಮಾಡಲೂ ಆಗದೆ, ದಿನದ ಆದಾಯವನ್ನೂ ಕಳೆದುಕೊಳ್ಳುವ ಈ ದುಡಿಮೆಯ ಜನರ ಬದುಕು ಹೇಗೆ ಸಾಗಬೇಕು ?
ಈ ಪ್ರಶ್ನೆಗಳು ಆಡಳಿತ ವ್ಯವಸ್ಥೆಯನ್ನು ಕಾಡುವುದೇ ಇಲ್ಲ. ಪ್ರತ್ಯೇಕ ವ್ಯಾಪಾರ ವಲಯವನ್ನು ನಿಗದಿಪಡಿಸಿದರೂ, ಅಲ್ಲಿ ಹೆಂಗಸರೂ ವ್ಯಾಪಾರ ಮಾಡುತ್ತಾರೆ ಎಂದು ಅರಿತಿದ್ದೂ, ಶೌಚಾಲಯ ವ್ಯವಸ್ಥೆಯನ್ನೇ ಕಲ್ಪಿಸದ ಪಾಲಿಕೆಗಳಿಗೆ ಏನು ಹೇಳುವುದು ? ಬಯಲುಶೌಚ ಮುಕ್ತ ನಗರ ಎಂದು ಘೋಷಿಸುವ ಆಡಳಿತ ವ್ಯವಸ್ಥೆಗೆ ಈ ವ್ಯಾಪಾರಿಗಳು ತಮ್ಮ ಬಹಿರ್ದೆಸೆಗೆ ಏನು ಮಾಡಬೇಕು ಎಂಬ ಯೋಚನೆಯೂ ಇರಬೇಕಲ್ಲವೇ. ಆದರೆ ಇರುವುದಿಲ್ಲ. ಸಂಜೆ ವೇಳೆ ಅತಿ ಹೆಚ್ಚು ಗ್ರಾಹಕರು ಇರುವ ವೇಳೆ ಈ ವ್ಯಾಪಾರ ವಲಯಗಳನ್ನು ಗಮನಿಸಿದರೆ ಈ ಸಮಸ್ಯೆಯನ್ನೂ ಅರ್ಥಮಾಡಿಕೊಳ್ಳಬಹುದು. ತಮ್ಮ ನಿತ್ಯ ಕೈ-ವಸೂಲಿಗಾಗಿ ಬರುವ ಆಡಳಿತ ಪ್ರತಿನಿಧಿಗಳಿಗೆ ಈ ವ್ಯತ್ಯಯಗಳು ಗೋಚರಿಸುವುದೂ ಇಲ್ಲ.

ಬೀದಿಬದಿ-ತಳ್ಳುಗಾಡಿ ವ್ಯಾಪಾರಿಗಳನ್ನು ಒಂದು ಅಡಚಣೆ ಎಂದು ಭಾವಿಸಿ, ಸಂಘಟನೆಗಳ ಮೂಲಕ, ವ್ಯಕ್ತಿಗತವಾಗಿ ದಿನಪತ್ರಿಕೆಗಳ ಮೂಲಕ, ಪಾಲಿಕೆಗಳಿಗೆ ಮನವಿ ಸಲ್ಲಿಸುವ, ಸೌಂದರ್ಯೀಕರಣದ ವಾರಸುದಾರರು, ಸುಗಮ ಸಂಚಾರದ ಪ್ರವರ್ತಕರು, ಈ ಬಡ ದುಡಿಮೆಗಾರರ ಬದುಕಿಗೆ ಪೂರಕವಾದ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವಂತೆ ಆಗ್ರಹಿಸುತ್ತಾರೆಯೇ ? ತಮ್ಮ ವೈಯುಕ್ತಿಕ ವಾಹನ ನಿಲುಗಡೆಗಾಗಿ ರಸ್ತೆ ಬದಿಯಲ್ಲಿ ಜಾಗ ಬಯಸುವ, ಪಾರ್ಕಿಂಗ್ ಶುಲ್ಕ ವಿಧಿಸಿದರೆ ಹುಯಿಲೆಬ್ಬಿಸುವ ಹಿತವಲಯದ ಸಮಾಜಕ್ಕೆ, ಈ ಸಣ್ಣ ವ್ಯಾಪಾರಿಗಳ ದೈನಂದಿನ ಜೀವನೋಪಾಯವೇ ಇಲ್ಲವಾಗುವುದು ಏಕೆ ಕಾಣುವುದಿಲ್ಲ ? ಈ ವ್ಯಾಪಾರಿಗಳ ಪರ ವಹಿಸಿ ಅವರ ಹಕ್ಕುಗಳಿಗೆ ಹೋರಾಡುವವರನ್ನು ಅಪರಾಧಿಗಳಂತೆ ಕಾಣುವ ಸರ್ಕಾರಗಳಿಗೆ, ಇವರ ಅನ್ನ ನೀರನ್ನು ಕಸಿದುಕೊಳ್ಳುವ ಆಡಳಿತ ನೀತಿಯ ಕ್ರೌರ್ಯ ಏಕೆ ಗೋಚರಿಸುವುದಿಲ್ಲ.?
ಬದುಕು ಕಸಿದುಕೊಳ್ಳುವ ಸಮಾಜ
ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು ಗಣ್ಯ ಸಮಾಜಗಳಲ್ಲಿ (Elite Socities) ಕಳೆದುಹೋಗುತ್ತಿರುವ ಸಂಯಮ, ಸಹನೆ ಮತ್ತು ಸಹಾನುಭೂತಿಯನ್ನು. ಬೀದಿಬದಿ ಪೆಟ್ಟಿಗೆ ಅಂಗಡಿಗಳನ್ನು ಜೆಸಿಬಿಗಳು ಧ್ವಂಸ ಮಾಡುತ್ತಿರುವ ಹೊತ್ತಿನಲ್ಲೇ ಅತ್ತ ಆ ಕುಟುಂಬದ ಸದಸ್ಯರಲ್ಲಿ ನಾಳೆಯ ಕನಸುಗಳು ಸುಟ್ಟು ಭಸ್ಮವಾಗಿರುತ್ತವೆ. ಪರ್ಯಾಯ ವ್ಯವಸ್ಥೆಯನ್ನೇ ಕಲ್ಪಿಸದೆ, 30 ದಿನಗಳ ನೋಟಿಸ್ ಕೊಟ್ಟು ಸಮಯ ಪಾಲನೆ ಮಾಡುವ ಆಡಳಿತಗಾರರಿಗೆ (Administrators), ಈ ದುಡಿಮೆಗಾರರ ಹಸಿವು, ಬಡತನ ಮತ್ತು ನಿತ್ಯ ಸಂಕಟಗಳು ಕಾಣಬೇಕಲ್ಲವೇ ? ಸರ್ಕಾರ ಅಥವಾ ಪಾಲಿಕೆ ನೀಡುವ ಗಡುವಿನ ಒಳಗೆ ತಮ್ಮದೇ ಆದ ಪರ್ಯಾಯವನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಎಷ್ಟು ಸಣ್ಣ ವ್ಯಾಪಾರಿಗಳಿಗೆ ಇರುತ್ತದೆ ?
ಈ ದುರಂತದಲ್ಲಿ ಎಷ್ಟೋ ಕುಟುಂಬಗಳು ಹೊಸ ವ್ಯಾಪಾರವನ್ನು ಹುಡುಕಬೇಕಾಗುತ್ತದೆ. ಬ್ಯಾಂಕುಗಳಲ್ಲಿ, ಖಾಸಗಿ ಲೇವಾದೇವಿಗಾರರ ಬಳಿ ಪಡೆದಿರುವ ಸಾಲದ ಮರುಪಾವತಿ ಅಸಾಧ್ಯವಾಗುತ್ತದೆ. ಆಗ ಸಾಲ ಕೊಟ್ಟವರ ಚಿತ್ರಹಿಂಸೆಗೆ ಯಾರು ಹೊಣೆ ? ಮೂಲತಃ ಈ ವ್ಯಾಪಾರಿ ವರ್ಗ ನಿತ್ಯ ಮೀಟರ್ ಬಡ್ಡಿ ಸಾಲವನ್ನು ಅವಲಂಬಿಸಿರುತ್ತದೆ. ಅಥವಾ ಖಾಸಗಿ ಬ್ಯಾಂಕುಗಳ EMI ಬಾಧ್ಯತೆಗಳನ್ನು ಹೊತ್ತಿರುತ್ತದೆ. ಈ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ TVC ಗಳ ರಚನೆ ಮತ್ತು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ. ದುರದೃಷ್ಟವಶಾತ್ ಜೆಸಿಬಿ ಯಂತ್ರದ ಹಾಗೆಯೇ ಸಾಮಾಜಿಕ ಪ್ರಜ್ಞೆಯೇ ಇಲ್ಲದ ಆಡಳಿತ ವ್ಯವಸ್ಥೆಗೆ ನ್ಯಾಯಾಲಯ ಆದೇಶದ ಈ ಮಾನವೀಯ ಅಂಶಗಳು ನೆನಪಾಗುವುವೇ ಇಲ್ಲ.
ದುಡಿಮೆಯ ಜನರ ಬದುಕನ್ನೇ ಮೂರಾಬಟ್ಟೆ ಮಾಡಿ, ನೂರಾರು ಜನರನ್ನು ಕ್ಷಣಮಾತ್ರದಲ್ಲಿ ನಿರ್ಗತಿಕರನ್ನಾಗಿ ಮಾಡುವ ಸರ್ಕಾರಗಳ, ಸ್ಥಳೀಯ ಸಂಸ್ಥೆಗಳ (Local Bodies) ಬುಲ್ಡೋಜರ್ ಕಾರ್ಯಾಚರಣೆ ನಮ್ಮ ನಾಗರಿಕತೆಯನ್ನೇ ಅಣಕಿಸುವಂತೆ ಕಾಣುತ್ತದೆ. ಈ ಧ್ವಂಸವಾಹಕಗಳಿಗೆ ನೀಡುವ ಬಾಡಿಗೆ ಹಣದಲ್ಲಿ ಎಷ್ಟೋ ಸಂಸಾರಗಳು ದಿನಗಳನ್ನು ಸವೆಸಬಹುದು. ಅಕ್ಷರ ಕಲಿಯದ ಜನರಿಗೆ ಉದ್ಯೋಗಾವಕಾಶಗಳೇ ಇಲ್ಲದ ವಾತಾವರಣದಲ್ಲಿ , ಈ ಶ್ರಮಿಕ ವರ್ಗ ತಮ್ಮದೇ ಆದ ಹಾದಿಯನ್ನು ಕಂಡುಕೊಳ್ಳುತ್ತದೆ. ಈ ಹಾದಿಯಲ್ಲೂ ಮುಳ್ಳು ಹಾಸುಗಳನ್ನು ಹರಡುವ ಒಂದು ಪರಿಸರದಲ್ಲಿ ನಾವಿದ್ದೇವೆ. ಇದನ್ನು ಬಯಸುವ, ಆಗ್ರಹಿಸುವ ಸಂಭ್ರಮಿಸುವ ಒಂದು ಸಮಾಜಗಳೂ ನಮ್ಮ ನಡುವೆ ಇದೆ. ಕಿರಿದಾದ ಪೆಟ್ಟಿಗೆಗಳಲ್ಲೇ ತಾವು ಮಾರಾಟ ಮಾಡುವ ಸರಕುಗಳನ್ನು ಹೊಂದಿಸಿಟ್ಟು, ತಳವರ್ಗಗಳಿಗೆ, ಕೆಳಮಧ್ಯಮ ವರ್ಗಗಳಿಗೆ ಅಗ್ಗದ ದರದಲ್ಲಿ ಪದಾರ್ಥಗಳನ್ನು ಪೂರೈಸುವ ಈ ಅಂಗಡಿ-ಮುಗ್ಗಟ್ಟುಗಳು ಗಣ್ಯ ಸಮಾಜಕ್ಕೆ ಬಿಕ್ಕಟ್ಟುಗಳಾಗಿ ಕಾಣುವುದು ನವ ನಾಗರಿಕತೆಯ ದುರಂತ.
/newsfirstprime/media/media_files/2026/02/05/gba-bengaluru-2026-01-06-16-05-45-1-2026-01-23-14-52-53-2026-01-25-15-43-43-2026-01-27-11-05-56-2026-02-03-10-09-24-2026-02-05-15-47-33.webp)
ನಗರ ಪಾಲಿಕೆಗಳು, ಕಾರ್ಪೋರೇಷನ್ ಆಡಳಿತಗಳು ಈ ಮಳಿಗೆಗಳನ್ನು ಎತ್ತಂಗಡಿ ಮಾಡಿ ಪರ್ಯಾಯವಾಗಿ ಮತ್ತೆಲ್ಲೋ ಸ್ಥಳಾವಕಾಶ ಕಲ್ಪಿಸುತ್ತಾರೆ. ಅಲ್ಲಿ ಒದಗಿಸುವ ಹಂದಿಗೂಡುಗಳು ಕುಳಿತು ವ್ಯಾಪಾರ ಮಾಡುವುದು ಸಾಧ್ಯವೇ ಇಲ್ಲದಷ್ಟು ಕಿರಿದಾಗಿರುತ್ತವೆ. 500 ಅಡಿ ದೂರ ಆದರೂ ಈ ಸಣ್ಣ ವ್ಯಾಪಾರಿಗಳು ತಮ್ಮ ನಿತ್ಯ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಬೆಂಕಿಪೆಟ್ಟಿಗೆಯನ್ನೂ ಆನ್‌ಲೈನ್ ಮೂಲಕ ಖರೀದಿಸಬಹುದಾದ ಕಾಲದಲ್ಲಿ ಈ ಸಣ್ಣ ವ್ಯಾಪಾರಿಗಳು ಕ್ರಮೇಣ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಈ ರೀತಿ ಎತ್ತಂಗಡಿಯಾಗುವ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲಗಳು ಇದ್ದರೆ, ಬ್ಯಾಂಕಿನವರು ಮರುಪಾವತಿಯ ಸಮಯವನ್ನೇನೂ ವಿಸ್ತರಿಸುವುದಿಲ್ಲ. ವ್ಯಾಪಾರವೇ ಇಲ್ಲದ ಅವಧಿಯಲ್ಲೂ ಇವರು ಸಾಲದ ಕಂತು ಪಾವತಿಸಬೇಕಾಗುತ್ತದೆ.
ಸಾಂಸ್ಥಿಕ ಜವಾಬ್ದಾರಿ ಮತ್ತು ನೈತಿಕತೆ
ನಗರ ಪಾಲಿಕೆಗಳು ರೂಪಿಸುವ ಹೊಸ ವ್ಯಾಪಾರ ವಲಯಗಳು ಊರಿನ ಹೊರವಲಯದಲ್ಲಿ ಅಥವಾ ವಸತಿ ಬಡಾವಣೆಗಳಿಂದ ದೂರದಲ್ಲಿದ್ದರೆ ಈ ಸಣ್ಣ ವ್ಯಾಪಾರಿಗಳಿಗೆ ಬ್ಲಿಂಕ್‌ಇಟ್, ಬಿಗ್ ಬ್ಯಾಸ್ಕೆಟ್ ಮೊದಲಾದ ಆನ್‌ಲೈನ್ ಮಳಿಗೆಗಳೇ ಪ್ರತಿಸ್ಪರ್ಧಿಗಳಾಗುತ್ತವೆ. ಮನೋವೈಜ್ಞಾನಿಕ ನೆಲೆಯಲ್ಲಿ ನೋಡಿದಾಗ, ಐದರಿಂದ ಹತ್ತು ವರ್ಷಗಳ ಕಾಲ ಒಂದೇ ರೀತಿಯ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗೆ, ಹಠಾತ್ತನೆ ತನ್ನ ವ್ಯಾಪಾರದ ರೂಪ ಬದಲಿಸುವುದು ಕಷ್ಟವಾಗುತ್ತದೆ. ರೂಢಿಗತವಾದ ಪದಾರ್ಥಗಳ ಬದಲಿಗೆ ಯಾವುದೇ ಪದಾರ್ಥಗಳಲ್ಲಿ ಬಂಡವಾಳ ಹೂಡಿದರೂ, ಹೊಸ ವ್ಯಾಪಾರ ವೃದ್ಧಿಸಲು ಸಮಯ ಬೇಕಾಗುತ್ತದೆ. ಸಣ್ಣ ವ್ಯಾಪಾರಿಗಳು, ವಿಶೇಷವಾಗಿ ಪೆಟ್ಟಿಗೆ ಅಂಗಡಿಗಳನ್ನು ಹೊಂದಿರುವವರು, ಬೀದಿ ಬದಿ-ತಳ್ಳುಗಾಡಿ ವ್ಯಾಪಾರಿಗಳು ಸಾಮಾನ್ಯವಾಗಿ ಎದುರಿಸುವ ಸಂಕಟಗಳು ಇವು. ಈ ಹಿನ್ನೆಲೆಯಲ್ಲಿ ಸೃಷ್ಟಿಯಾಗುವ ಜೀವನೋಪಾಯದ ಬಿಕ್ಕಟ್ಟುಗಳನ್ನು ನಿವಾರಿಸುವುದು ಯಾರು ?
ಈ ನಿವಾರಣೆಯ ಪ್ರಶ್ನೆಗೆ ನ್ಯಾಯಾಂಗದಲ್ಲಿ ಉತ್ತರ ದೊರೆಯುವುದಿಲ್ಲ. ನ್ಯಾಯಶಾಸ್ತ್ರದ ಚೌಕಟ್ಟಿನಲ್ಲಿ ನ್ಯಾಯಾಂಗ ಸಾಮಾನ್ಯ ಸಾರ್ವಜನಿಕರ ನಾಗರಿಕ ಹಕ್ಕು (Civil Rights) ಮತ್ತು ದುಡಿಯುವ ಜನರ ಬದುಕುವ ಹಕ್ಕು (Right to Live) ಇವೆರಡನ್ನು ಸಮತೋಲನಗೊಳಿಸಿ ತನ್ನ ತೀರ್ಪು ನೀಡುತ್ತದೆ. ಸಾಂವಿಧಾನಿಕ ಚೌಕಟ್ಟಿನಲ್ಲಿ ಇದನ್ನು ಗೌರವಿಸಲೇಬೇಕಾಗುತ್ತದೆ. ಆದರೆ ಜನರಿಂದಲೇ ಚುನಾಯಿತರಾಗುವ ಸರ್ಕಾರ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ, ಅಧಿಕಾರಶಾಹಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಈ ಶ್ರಮಜೀವಿಗಳ ಜೀವನ, ಜೀವನೋಪಾಯ ಹಾಗೂ ಭವಿಷ್ಯದ ಕಾಳಜಿ ಇರಬೇಕಲ್ಲವೇ ? ನ್ಯಾಯಾಂಗದ ಆದೇಶಗಳನ್ನು ಪಾಲಿಸುತ್ತಲೇ, ಪ್ರತಿಯೊಂದು ಪಟ್ಟಣ/ನಗರಗಳಲ್ಲೂ ಆತಂಕದ ದಿನಗಳನ್ನು ಎದುರಿಸುತ್ತಿರುವ ಸಣ್ಣ ವ್ಯಾಪಾರಿಗಳು, ಬೀದಿಬದಿ-ತಳ್ಳುಗಾಡಿ ವ್ಯಾಪಾರಿಗಳ ಬದುಕು ದುಸ್ತರವಾಗದಂತೆ ಕಾಪಾಡುವುದು ಚುನಾಯಿತ ಸಂಸ್ಥೆಗಳ ಕರ್ತವ್ಯ ಅಲ್ಲವೇ ?
ಅಭಿವೃದ್ಧಿಯ ಕ್ರೌರ್ಯ -ನಾಗರಿಕತೆ
ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಎಂದಾಕ್ಷಣ ಭಯಭೀತರಾಗುವ ಆದಿವಾಸಿಗಳ ಹಾಗೆ ನಗರೀಕರಣ-ನಗರಾಭಿವೃದ್ಧಿ-ನಗರ ಸೌಂದರ್ಯೀಕರಣ-ರಸ್ತೆ ಅಗಲೀಕರಣ ಎಂದ ಕೂಡಲೇ ಈ ಸಣ್ಣ ವ್ಯಾಪಾರಿ ವರ್ಗಗಳು ಆತಂಕಕ್ಕೊಳಗಾಗುತ್ತವೆ. ಸಾರ್ವಜನಿಕರ ನಡಿಗೆಯ ಹಕ್ಕು ಸಾಂವಿಧಾನಿಕ ಹಕ್ಕು, ದುಡಿಮೆಯ ಜನರ ಬದುಕುವ ಹಕ್ಕು ಮೂಲಭೂತ ಹಕ್ಕು. ಈ ವ್ಯತ್ಯಾಸವನ್ನು ಸಮಾಜದ ಗಣ್ಯ ವರ್ಗಗಳೂ, ಹಿತವಲಯದ ನಾಗರಿಕರೂ ಅರ್ಥಮಾಡಿಕೊಳ್ಳಬೇಕಿದೆ. ರಸ್ತೆ ಬದಿಯ ಅಂಗಡಿ-ಗಾಡಿಗಳನ್ನು ತೆರವುಗೊಳಿಸುವುದನ್ನು ಸಂಭ್ರಮಿಸುವ ಈ ವಿಕೃತ ಮನಸ್ಸುಗಳಿಗೆ ಉದ್ಯಾನಗಳನ್ನು ಆಕ್ರಮಿಸಿ ಅದಕ್ಕೆ ಹೊಂದಿಕೊಂಡಂತಹ ಮಂದಿರ, ದರ್ಗಾ ಇನ್ನಿತರ ಪೂಜಾಸ್ಥಳಗಳು ಗೋಚರಿಸುವುದಿಲ್ಲವೇ ? ಇದನ್ನು ಪ್ರಶ್ನಿಸಿದ ಕೂಡಲೇ ಧಾರ್ಮಿಕ ಅಸ್ಮಿತೆ-ಸಾಮುದಾಯಿಕ ಹಕ್ಕು ಎದುರಾಗುತ್ತದೆ. ಆದರೆ ತಮ್ಮ ನಿತ್ಯ ವ್ಯಾಪಾರದಿಂದಲೇ ಬದುಕುವ ಸಣ್ಣ ವ್ಯಾಪಾರಿಗಳಿಗೆ ಸ್ವಂತ ಅಸ್ಮಿತೆಯಾಗಲೀ, ಹಕ್ಕುಗಳಾಗಲೀ ಇಲ್ಲವೇ ?

ಇದು ನಾಗರಿಕತೆಯ ವಾರಸುದಾರರಾಗಿ, ಸಂವಿಧಾನದ ಪ್ರತಿಪಾದಕರಾಗಿ, ಪ್ರಜಾಪ್ರಭುತ್ವದ ಸಮರ್ಥಕರಾಗಿ ಸಾರ್ವಜನಿಕರನ್ನು ಕಾಡಬೇಕಿರುವ ಪ್ರಶ್ನೆ. ಬೀದಿಬದಿ-ತಳ್ಳುಗಾಡಿ ವ್ಯಾಪಾರಿಗಳ ತೆರವಿಗಾಗಿ, ಎತ್ತಂಗಡಿಗಾಗಿ ಆಗ್ರಹಿಸುವ ಸಂಘಟನೆಗಳು/ವ್ಯಕ್ತಿಗಳು, ಹೀಗೆ ಸ್ಥಳಾಂತರಿಸಲ್ಪಟ್ಟ ಜನರ ಭವಿಷ್ಯದ ಸಂಕಟಗಳ ಕಡೆಗೆ ತಿರುಗಿಯೂ ನೋಡುವುದಿಲ್ಲ ಎನ್ನುವುದು ಕಟು ವಾಸ್ತವ. ಆಡಳಿತ ವ್ಯವಸ್ಥೆ ಬಳಸುವ ಸ್ಥಳಾಂತರ ಎಂಬ ಪದ, ಎತ್ತಂಗಡಿ ಎಂಬ ಕ್ರೂರ ಕ್ರಮದ ಸೌಮ್ಯ ರೂಪವಷ್ಟೇ. ಅಂತಿಮವಾಗಿ ಅನಾಥರಾಗುವುದು ಈ ದುಡಿಮೆಯ ವರ್ಗಗಳು. ಭೌತಿಕ ಸ್ವಚ್ಛತೆ, ಸೌಂದರ್ಯ ಮತ್ತು ನೈರ್ಮಲ್ಯದ ಓಟದಲ್ಲಿ, ಸ್ವಂತ ಶ್ರಮವನ್ನೇ ಅವಲಂಬಿಸಿ ಬದುಕುವ ಕುಟುಂಬಗಳನ್ನು ಬೀದಿ ಪಾಲು ಮಾಡುವುದು ಅಮಾನುಷವಷ್ಟೇ ಅಲ್ಲ, ಅನಾಗರಿಕ ಕ್ರಮವೂ ಹೌದು.
ಪ್ರಜಾಪ್ರಭುತ್ವವನ್ನು ಸಾಮಾನ್ಯ ಜನತೆಯ ನಡುವೆ ನಿಂತು ನಿರ್ವಚಿಸುವ, ಪ್ರಗತಿಪರ ಎನಿಸಿಕೊಳ್ಳುವ ಸಾರ್ವಜನಿಕ ಸಂಘಟನೆಗಳು, ಸಾಮಾಜಿಕ ಹೋರಾಟ ಸಂಸ್ಥೆಗಳು, ಎಡಪಕ್ಷಗಳು ಮತ್ತು ಅಂಬೇಡ್ಕರ್ ಅನುಯಾಯಿಗಳು ಈ ಜಟಿಲ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲವಾದರೆ ಮುಂಬರುವ ವಿಕಸಿತ ಭಾರತದ ದಿನಗಳಲ್ಲಿ ನಾವು ಆನಂದಿಸುವ (Enjoy) ಸುಂದರ ನಗರಿಗಳು, ಸಾವಿರಾರು ದುಡಿಮೆಯ ಜೀವಗಳ ಸಮಾಧಿಗಳ ಮೇಲೆ ನಿರ್ಮಾಣವಾಗುತ್ತಾ ಹೋಗುತ್ತವೆ. ನಿಕೃಷ್ಟವಾಗಿ ಕಾಣಲ್ಪಡುವ ಈ ತಳಸಮಾಜದ ಜನರ ನೋವು ಸಂಕಟಗಳನ್ನು ಅರಿತು ಮುನ್ನಡೆಯುವ ಜವಾಬ್ದಾರಿ ನಾಗರಿಕ (Civilised) ಎನಿಸಿಕೊಳ್ಳುವ ಸಮಾಜಗಳ ಮೇಲಿದೆ. ವರ್ತಮಾನ ನಮ್ಮ ಕೈಯ್ಯಲ್ಲಿದೆ. ಭವಿಷ್ಯ ನಮ್ಮ ಹೆಜ್ಜೆಗಳನ್ನು ಗಮನಿಸುತ್ತಲೇ ಇರುತ್ತದೆ. ಆತ್ಮವಂಚಕರಾಗಿ ದಾಖಲಾಗುವುದು ಬೇಡ.
-೦-೦-೦-೦-೦-






