ಆರ್ಯವರ್ಧನ್ ಗುರೂಜಿ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ಅವರು ಮಾಡಿದರೆಂದು ಹೇಳಲಾಗುತ್ತಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಅವರ ವಿರುದ್ಧ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಹೇಳಿಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಮಹಿಳೆಯರ ಗೌರವಕ್ಕೂ ಅವಮಾನವಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಗೋವು ರಕ್ಷಕರ ಸೇನೆ, ಆರ್ಯವರ್ಧನ್ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದರ್ಶನದ ವಿಡಿಯೊದಲ್ಲಿ, ಲಕ್ಷ್ಮೀ ದೇವಿ ಕುರಿತು ವಿವಾದಾತ್ಮಕ ಅರ್ಥ ಬರುವ ರೀತಿಯಲ್ಲಿ ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಾನವ ದೇಹದ ಒಂದು ಅಂಗವನ್ನು ಉಲ್ಲೇಖಿಸಿ ಪೂಜೆಯ ಬಗ್ಗೆ ಮಾತನಾಡಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ಗೋವು ರಕ್ಷಕರ ಸೇನೆ ಪರ ಸುಮನ್ ಅವರು ಶಂಕರಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಆರ್ಯವರ್ಧನ್ ಗುರೂಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣವನ್ನು ಪರಿಶೀಲಿಸುತ್ತಿದ್ದು, ಆರ್ಯವರ್ಧನ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಪ್ರಕರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.






