ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. ಟೆಹರಾನ್‌ನ ಮೊಸಲ್ಲಾ ಸಂಕೀರ್ಣದಲ್ಲಿ ಆರಂಭವಾದ ಖಾಮಿನೈ ಹಾಗೂ ಅವರ ಕುಟುಂಬ ಸದಸ್ಯರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಹತ್ಯೆಯ ಸೇಡನ್ನು ತೀರಿಸಿಕೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ಅಮೀರ್ ಹಟಾಮಿ ಅವರ ಈ ಹೇಳಿಕೆ, ಕೆಲವೇ ದಿನಗಳ ಹಿಂದೆ ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿ (Supreme National Security Council) ನೀಡಿದ್ದ ಅಧಿಕೃತ ಹೇಳಿಕೆಯನ್ನು ಮತ್ತೊಮ್ಮೆ ಪುಷ್ಟೀಕರಿಸಿದೆ. ಮಂಡಳಿಯು, “ಖಾಮಿನೈ ಹಾಗೂ ಇತರ ಹುತಾತ್ಮರ ರಕ್ತಕ್ಕೆ ನ್ಯಾಯ ದೊರಕಿಸುವ ಕಡತ ಇನ್ನೂ ಮುಚ್ಚಿಲ್ಲ. ಪ್ರತೀಕಾರದ ನಿರ್ಧಾರದಿಂದ ಇರಾನ್ ಹಿಂದೆ ಸರಿದಿಲ್ಲ” ಎಂದು ಸ್ಪಷ್ಟಪಡಿಸಿತ್ತು.ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಟಾಮಿ, “ಈ ಅಪರಾಧದ ಹಿಂದೆ ಇರುವ ಸೂತ್ರಧಾರಿಗಳು ಮತ್ತು ಅದನ್ನು ಕಾರ್ಯಗತಗೊಳಿಸಿದವರು ಸೂಕ್ತ ಸಮಯದಲ್ಲಿ ತಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನ್ಯಾಯದ ಕೈಗಳಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ದಿನವೂ ದೂರದಲ್ಲಿಲ್ಲ” ಎಂದು ಕಠಿಣ ಸಂದೇಶ ರವಾನಿಸಿದರು.

ಖಾಮಿನೈ ಅವರ ಅಂತಿಮ ಯಾತ್ರೆ ಜುಲೈ 4ರಿಂದ ಆರಂಭವಾಗಿದ್ದು, ಜುಲೈ 9ರವರೆಗೆ ವಿವಿಧ ನಗರಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಟೆಹರಾನ್‌ನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಕೋಮ್, ನಜಾಫ್, ಕರ್ಬಲಾ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಕೊಂಡೊಯ್ಯಲಾಗುತ್ತದೆ. ಅಂತಿಮವಾಗಿ ಮಶ್ಹಾದ್‌ನ ಇಮಾಮ್ ರೆಜಾ ದರ್ಗಾ ಸಮೀಪ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಇದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಇರಾನ್‌ನ ಈ ಪ್ರತೀಕಾರದ ಘೋಷಣೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಬೆಳವಣಿಗೆಗಳ ಮೇಲೆ ವಿಶ್ವದ ಗಮನ ಕೇಂದ್ರೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಿದೆ.






