ಬೆಂಗಳೂರು : ಹಿರಿಯ ಪತ್ರಕರ್ತ ಎನ್.ಎಸ್. ಶಿವಶಂಕರ್ ನಿಧನಕ್ಕೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಪತ್ರಕರ್ತನ ಪ್ರಗತಿಪರ ನಡೆಯನ್ನು ನೆನಪಿಸಿಕೊಂಡಿದ್ದಾರೆ.

ಹಿರಿಯ ಪತ್ರಕರ್ತ ಮತ್ತು ಪ್ರತಿಭಾವಂತ ಚಿತ್ರ ನಿರ್ದೇಶಕ ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದ ಎನ್.ಎಸ್.ಶಂಕರ್ ಅವರ ಸಾವಿನ ಸುದ್ದಿ ಕೇಳಿ ದು:ಖವಾಯಿತು. ಪ್ರಜಾವಾಣಿ, ಮುಂಗಾರು, ಸುದ್ದಿಸಂಗಾತಿ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಶಂಕರ್, ಹಲವು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು ಎಂದು ಸ್ಮರಿಸಿದ್ದಾರೆ.

ಶಿವಶಂಕರ್ ಒಬ್ಬ ಕನ್ನಡದ ಬಹುಮುಖ ಪ್ರತಿಭೆ. ಇನ್ನಷ್ಟು ಕಾಲ ನಮ್ಮ ಜೊತೆ ಇದ್ದು, ನಮಗೆಲ್ಲ ಮಾರ್ಗದರ್ಶನ ನೀಡಬೇಕಾಗಿತ್ತು. ಅವರ ಕುಟುಂಬವರ್ಗಕ್ಕೆ ಸಂತಾಪಗಳು, ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಭಾವುಕರಾಗಿದ್ದಾರೆ.






