ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಏಕೆ? ಹೀಗೆ ಪ್ರಶ್ನಿಸಿದ್ದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, “ಕಾಕಾ ಪಾಟೀಲ್ ನಿಂಗೂ ಫ್ರೀ, ಜಮೀರ್ ಅಹ್ಮದ್, ಮಹದೇವಪ್ಪ ನಿಂಗೂ ಫ್ರೀ ಎಂದು ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದರು. 10 ಕೆಜಿ ಅಕ್ಕಿ ಕೊಟ್ಟಿದ್ದೀರಾ? ಮೋದಿಯವರು 10 ಕೆಜಿ ಅಕ್ಕಿ ಕೊಡದೇ ಇದ್ದರೆ, ಜನರು ನಿಮ್ಮನ್ನೇ ನಂಬಿದ್ದರೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ಮಲಗಬೇಕಿತ್ತು. ನಿಮ್ಮ ಕಂಡಿಷನ್ ಯಾಕೆ, ಖಜಾನೆ ಖಾಲಿ ಎಂಬುದು ಜನರಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ.
ಫಲಾನುಭವಿ ಜನರನ್ನು ಕಡಿಮೆ ಮಾಡಲು ಕಂಡಿಷನ್ ಹಾಕುತ್ತೀರಿ. ನಿಮ್ಮ ಹಿಂದಿನ ಭಾಷಣವನ್ನು ಜನರು ಕೇಳಿಸಿಕೊಳ್ಳುತ್ತಾರೆ ಎಂದರು. ಇದಕ್ಕೆ ಸೂಕ್ತ ಸಮಯದಲ್ಲಿ ಜನರು ಉತ್ತರ ಕೊಡುತ್ತಾರೆ. ನಮಗೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರೆ, ನಾವು ಪ್ರಶ್ನೆಗಳನ್ನೇ ಮಾಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿಯಲ್ಲಿ ರಹಸ್ಯ ಕಾರ್ಯಾಚರಣೆ ಯಶಸ್ವಿ; ಟ್ರಂಪ್‌ನಿಂದ ದೊಡ್ಡ ಬಹಿರಂಗ
ಗೃಹಲಕ್ಷ್ಮಿ ಕೊಡಬೇಕಾಗುತ್ತದೆ ಎಂದು ಹೊಸ ಬಿಪಿಎಲ್ ಕಾರ್ಡ್ ಕೊಡುವುದನ್ನೂ ನಿಲ್ಲಿಸಿದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡ್‌ನಿಂದಲೂ ವಂಚಿತರಾಗಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನ ಹಂಚಿಕೆ ಕುರಿತು ಪ್ರತಿಕ್ರಿಯಿಸಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಜಾತ್ಯಾತೀತವೇ? ಅಹಿಂದದೊಳಗೆ ಒಂದು ಜಾತಿ ಮಾತ್ರ ಇದೆಯೇ ಎಂದು ಕೇಳಿದರು. ಎಲ್ಲ ಜಾತಿಯವರಿಗೂ ಸಮಾನ ಅವಕಾಶ ಎಂಬುದು ಜಾತ್ಯಾತೀತತೆ ಅಂತ ನಾನು ಭಾವಿಸಿದ್ದೇನೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.






