ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹ ಲಕ್ಷ್ಮಿಯಲ್ಲಿನ ಪರಿಷ್ಕರಣೆಯನ್ನು ವಿಪಕ್ಷಗಳು ತೀವ್ರ ಟೀಕಿಸುತ್ತಿವೆ. ಕೊಟ್ಟ ಮಾತನ್ನು ತಪ್ಪಿದರೆ ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿದೆ.

ವಚನಭ್ರಷ್ಟ ಕಾಂಗ್ರೆಸ್‌ನ ಗ್ಯಾರಂಟಿಗಳ ಅಸಲಿ ಬಣ್ಣ ಬಯಲಲಾಗಿದೆ! ಚುನಾವಣೆಗೂ ಮುನ್ನ “ಯಾವ ಷರತ್ತೂ ಇಲ್ಲ, ಪ್ರತಿ ಮನೆಯೊಡತಿಗೆ 2,000 ರೂಪಾಯಿ ಎಂದು ರಾಜ್ಯದ ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್ಸರ್ಕಾರ, ಇದೀಗ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ‘ಗೃಹಲಕ್ಷ್ಮಿ’ ಯೋಜನೆಯಿಂದ ಕಿತ್ತುಹಾಕಿದೆ. ಈ ಮೂಲಕ ತನ್ನ ನೈಜ ಮುಖವಾಡವನ್ನು ಕಳಚಿಕೊಂಡಿದೆ. ಬಯೋಮೆಟ್ರಿಕ್, ಸರ್ವರ್ ಪ್ರಾಬ್ಲಮ್ ಎಂದು ಒಂದಿಲ್ಲೊಂದು ನೆಪ ಹೇಳಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ ‘ಕೈ’ ಸರ್ಕಾರದ ದ್ರೋಹವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ, ಗೃಹಲಕ್ಷ್ಮಿ ಕಡಿತದ ಬಗ್ಗೆ ಸಾಕ್ಷಾತ್ ಮುಖ್ಯಮಂತ್ರಿಗಳನ್ನೇ ಕೇಳಿದರೆ, “ನನಗೆ ಗೊತ್ತಿಲ್ಲ” ಎಂಬ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ! ಹಾಗಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಯಾರು? ಸಿಎಂ ಅವರಿಗೆ ಗೊತ್ತಿಲ್ಲದೆ ಇಲಾಖೆಗಳಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯೇ ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಇದನ್ನೂ ಓದಿ : ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು: ಕೇಂದ್ರದ ಮಹತ್ವದ ನಿರ್ಧಾರ
5,000 ಕೋಟಿ ರೂಪಾಯಿ ಗೃಹಲಕ್ಷ್ಮಿ ಹಣವನ್ನು ತಿಂದು ತೇಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತಕ್ಕಾಗಿ ಮಹಿಳೆಯರನ್ನು ಯಾಮಾರಿಸಿದೆ. ಅಧಿಕಾರ ಸಿಕ್ಕ ಮೇಲೆ ಅವರನ್ನು ‘ಅನರ್ಹರು’ ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ? ಇದು ಕೇವಲ ವೋಟ್ ಬ್ಯಾಂಕ್ ಗಾಗಿ ಮಾಡಿದ ವಂಚನೆ! ಎಂದು ಜರಿದಿದೆ.
ಈ ಕೂಡಲೇ ಕಾಂಗ್ರೆಸ್ ಸರ್ಕಾರ ತಾಯಂದಿರ ಕ್ಷಮೆ ಕೇಳಬೇಕು. ಕೊಟ್ಟ ಮಾತಿಗೆ ತಪ್ಪಿದವರನ್ನು ಈ ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಜ್ಯ ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.






