ನವದೆಹಲಿ: ಕೇಂದ್ರ ಸರ್ಕಾರವು ಶೇಕಡಾವಾರು ಹೆಚ್ಚಿನ ಅಂದರೆ ಶೇ.22 ರಿಂದ 30ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (E22-E30) ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಹಾಗೂ 2002 ಮತ್ತು 2017ರಲ್ಲಿ ಹೊರಡಿಸಲಾದ ಹಿಂದಿನ ಅಬಕಾರಿ ಸುಂಕ ನಿಯಮಗಳನ್ನು ನವೀಕರಿಸಿದೆ.

ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಪರಿಸರ ಸ್ನೇಹಿ ಇಂಧನ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಶೇ.22 ರಿಂದ 30ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಕಂದಾಯ ಇಲಾಖೆಯು ಈ ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.

ಗ್ರಾಹಕರಿಗೆ ದರ ಇಳಿಕೆಯ ಲಾಭ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದ್ದು, ಇತ್ತೀಚೆಗೆ ಕೇಂದ್ರ ಪೆಟ್ರೋಲಿಯಂ ಸಚಿವರು ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಸಾಮಾನ್ಯ ಪೆಟ್ರೋಲ್ಗಿಂತ ಲೀಟರ್ಗೆ ಸುಮಾರು ₹20 ಕಡಿಮೆ ದರದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಇಂಧನವನ್ನು ಪ್ಲೆಕ್ಸ್-ಫ್ಯುಯೆಲ್ ಎಂಜಿನ್ ಹೊಂದಿರುವ ವಾಹನಗಳಲ್ಲಿ ಮಾತ್ರ ಬಳಸಬಹುದಾಗಿದೆ. ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ ಬಳಕೆಯಿಂದ ಹಳೆಯ ವಾಹನಗಳ ಎಂಜಿನ್ ಕಾರ್ಯಕ್ಷಮತೆ ಹಾಗೂ ಮೈಲೇಜ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಆತಂಕ ಕೆಲವು ಗ್ರಾಹಕರಲ್ಲಿ ವ್ಯಕ್ತವಾಗಿದೆ.






