ಬೆಳಗಾವಿ : ವಕೀಲರೊಬ್ಬರ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಆರೋಪದಡಿ ಜಿಲ್ಲೆಯ ಅಥಣಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಥಣಿ ವಕೀಲರ ಸಂಘ ಸಿಡಿದೆದ್ದಿದ್ದು, ಪಟ್ಟಣದ ಹಲ್ಯಾಳ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.

ಹಲ್ಲೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ದೂರು ನೀಡಿ 24 ಗಂಟೆಗಳು ಕಳೆದರೂ ಎಫ್ಐಆರ್ ದಾಖಲಿಸದ ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿದ ವಕೀಲರು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೇ 30 ರಂದು ತಾಲೂಕಿನ ಸತ್ತಿ ಗ್ರಾಮದ ನಿವಾಸಿ ಹಾಗೂ ವಕೀಲಮಲ್ಲಿಕಾರ್ಜುನ ಕೋರಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ಮೂರು ದಿನದ ಹಿಂದೆ ಸತ್ತಿ ಗ್ರಾಮದಲ್ಲಿ ನಡೆದ ಜಾತ್ರೆಯ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿತ್ತು. ಗಾಯಾಳುಗಳು ವಕೀಲ ಮಲ್ಲಿಕಾರ್ಜುನ ಮನೆಯ ಎದುರಿನ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ವೇಳೆ ರಾತ್ರಿ ಸುಮಾರು 8:40ಕ್ಕೆ ಸ್ಥಳಕ್ಕೆ ಬಂದ ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಪೇದೆ ವಿಷ್ಣು ಗಾಯಕವಾಡ ಹಾಗೂ ಸಮವಸ್ತ್ರದಲ್ಲಿರದ ಇತರ ಇಬ್ಬರು ಸಿಬ್ಬಂದಿ, ಜನರನ್ನು ಚದುರಿಸುವ ಭರದಲ್ಲಿ ಲಾಠಿ ಪ್ರಹಾರ ನಡೆಸಿದ್ದರು.
ಈ ಸಂದರ್ಭದಲ್ಲಿ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ವಕೀಲ ಮಲ್ಲಿಕಾರ್ಜುನ ಬಳಿ ಬಂದ ಪೊಲೀಸರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದು. ನಾನು ವಕೀಲನಿದ್ದೇನೆ ಎಂದು ಹೇಳಿದರೂ ಲೆಕ್ಕಿಸದೆ, ಕೋರ್ಟ್ನಲ್ಲಿ ಹೇಳಿಕೋ ಎಂದು ವೃತ್ತಿಗೆ ಅವಮಾನಿಸಿದ್ದಾರೆ. ಅಲ್ಲದೇ ಪೇದೆ ವಿಷ್ಣು ಗಾಯಕವಾಡ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ ಎಂದು ಮಲ್ಲಿಕಾರ್ಜುನ್ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ : ರಾಜೀವ್ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್
ಇನ್ನೂ ಹಲ್ಲೆ ನಡೆಸಿರುವ ಆರೋಪಿತ ಪೊಲೀಸರ ವಿರುದ್ಧ ದೂರು ನೀಡಿದರೂ, ಪೊಲೀಸರು ತಮ್ಮ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಇಂದು ವಕೀಲ ಸಂಘದಿಂದ ಹಲ್ಯಾಳ ವೃತ್ತದಲ್ಲಿ ಜಮಾಯಿಸಿ ಪಿಎಸ್ಐ ದೌರ್ಜನ್ಯವನ್ನು ಖಂಡಿದ್ದಲ್ಲದೆ, ಗೂಂಡಾ ಪೊಲೀಸರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ರಸ್ತೆ ತಡೆದು ಖಾಕಿ ನಡೆಯನ್ನು ಟೀಕಿಸಿದ್ದಾರೆ.
ಹಲ್ಲೆ ನಡೆಸಿದ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಇತರ ಮೂವರು ಸಿಬ್ಬಂದಿಗಳ ಮೇಲೆ ತಕ್ಷಣವೇ ಎಫ್ಐಆರ್ ದಾಖಲಾಗಬೇಕು. ಇವತ್ತೇ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಕೋರ್ಟ್ ಕಲಾಪಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ವಕೀಲರು ಎಚ್ಚರಿಸಿದ್ದಾರೆ
ಠಾಣೆಗೆ ಬರುವ ಕಕ್ಷಿದಾರರ (ಸಾರ್ವಜನಿಕರ) ಮುಂದೆಯೇ ಪೊಲೀಸರು ವಕೀಲರನ್ನು ಕೀಳಾಗಿ ಕಾಣುತ್ತಿದ್ದಾರೆ. ವಕೀಲರ ಹೆಸರಿಗೆ ಮಸಿ ಬಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಇದೆ ಸಂದರ್ಭದಲ್ಲಿ ಸಂಘದ ಸದಸ್ಯರು ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ..
ಇನ್ನೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ಗೆ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಈ ಗಂಭೀರ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಗಮನಕ್ಕೆ ತಂದು ನೊಂದ ವಕೀಲರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಬಳಿಕ ಮನವಿ ಸ್ವೀಕರಿಸಿದ ತಹಶೀಲ್ದಾರ್ , ಮೇಲಾಧಿಕಾರಿಗಳಿಗೆ ಈ ವಿಷಯ ಮುಟ್ಟಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ವೇಳೆಯೂ ನಮಗೆ ಮೊದಲು ರಕ್ಷಣೆ ಬೇಕು, ಆಮೇಲೆ ನಾವು ಜನಸಾಮಾನ್ಯರ ರಕ್ಷಣೆ ಮಾಡುತ್ತೇವೆ. ಈ ಅನ್ಯಾಯದ ವಿರುದ್ಧ ಕೇವಲ ಅಥಣಿಯಲ್ಲಿ ಮಾತ್ರವಲ್ಲದೇ, ಕರ್ನಾಟಕದಾದ್ಯಂತ ವಕೀಲರು ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾ ನಿರತ ವಕೀಲರು ಎಚ್ಚರಿಸಿದ್ದಾರೆ.






