ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬಳಿಕ ಇದೀಗ ಹೊಸ ರಾಜಕೀಯ ಚರ್ಚೆ ಶುರುವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಆ ಸಮಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರೆ, ಇಂದು ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗುವ ಅವಕಾಶ ಪಡೆಯುತ್ತಿದ್ರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಆಡಳಿತ ಹಿಡಿಯುವ ಉದ್ದೇಶದಿಂದ ಬಿಜೆಪಿ ಕಳೆದ ಕೆಲವು ವರ್ಷಗಳಿಂದಲೇ ಭಾರಿ ತಂತ್ರ ರೂಪಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ರಾಜ್ಯ ಚುನಾವಣೆಯ ಹೊಣೆ ಹೊತ್ತುಕೊಂಡು ನಿರಂತರ ಸಭೆಗಳು, ಪ್ರವಾಸಗಳು ಮತ್ತು ಸಂಘಟನಾ ಚಟುವಟಿಕೆಗಳನ್ನು ನಡೆಸಿದ್ದರು. ಇದೇ ಅವಧಿಯಲ್ಲಿ ಅಮಿತ್ ಶಾ ಕೋಲ್ಕತ್ತಾದಲ್ಲಿರುವ ಸೌರವ್ ಗಂಗೂಲಿ ನಿವಾಸಕ್ಕೆ ಭೇಟಿ ನೀಡಿದ್ದ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.
ಅಧಿಕೃತವಾಗಿ ಅದು ಸೌಹಾರ್ದಯುತ ಭೇಟಿ ಎಂದು ಹೇಳಲಾಗಿದ್ದರೂ, ರಾಜಕೀಯ ವಲಯದಲ್ಲಿ ಮಾತ್ರ ಬೇರೆ ರೀತಿಯ ಚರ್ಚೆ ನಡೆದಿತ್ತು. ಬಿಜೆಪಿ ನಾಯಕತ್ವ ಗಂಗೂಲಿಯನ್ನು ಪಕ್ಷಕ್ಕೆ ಕರೆತಂದು, ಮಮತಾ ಬ್ಯಾನರ್ಜಿ ವಿರುದ್ಧ ಸ್ವಚ್ಛ ಇಮೇಜ್ ಹೊಂದಿರುವ ಜನಪ್ರಿಯ ಬೆಂಗಾಲಿ ಮುಖವಾಗಿ ಪ್ರೋಜೆಕ್ಟ್ ಮಾಡಲು ಯತ್ನಿಸಿತ್ತು ಎನ್ನಲಾಗಿದೆ.ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಜನಬೆಂಬಲ ಹೊಂದಿರುವ ಗಂಗೂಲಿ ಯುವಕರು ಹಾಗೂ ಮಧ್ಯಮ ವರ್ಗದ ಮತದಾರರನ್ನು ಸೆಳೆಯಬಲ್ಲ ನಾಯಕ ಎಂದು ಬಿಜೆಪಿ ಅಂದಾಜಿಸಿತ್ತು.
ವಿಶೇಷವಾಗಿ ಬೆಂಗಾಲಿ ಅಸ್ಮಿತೆ, ಸ್ಥಳೀಯ ನಾಯಕತ್ವ ಮತ್ತು ರಾಷ್ಟ್ರೀಯ ರಾಜಕೀಯದ ಸಮನ್ವಯ ಸಾಧಿಸಲು ಗಂಗೂಲಿ ಸೂಕ್ತ ಆಯ್ಕೆ ಎಂದು ಪಕ್ಷದ ಒಳವಲಯದಲ್ಲಿ ಚರ್ಚೆಯಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.ಆದರೆ ಆ ಸಂದರ್ಭದಲ್ಲಿ ಸೌರವ್ ಗಂಗೂಲಿ ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿ ತೋರಲಿಲ್ಲ ಎಂದು ಹೇಳಲಾಗುತ್ತಿದೆ. ರಾಜಕೀಯಕ್ಕಿಂತ ಕ್ರಿಕೆಟ್ ಆಡಳಿತ ಮತ್ತು ವೈಯಕ್ತಿಕ ಬದುಕಿನತ್ತ ಹೆಚ್ಚು ಗಮನಹರಿಸಲು ಅವರು ಮುಂದಾಗಿದ್ದರು ಎನ್ನಲಾಗಿದೆ.
ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದೊಡ್ಡ ಮಟ್ಟದ ರಾಜಕೀಯ ಯಶಸ್ಸು ಸಾಧಿಸಿರುವ ಬೆನ್ನಲ್ಲೇ, “ಗಂಗೂಲಿ ಅಂದು ಬಿಜೆಪಿ ಸೇರಿದ್ದರೆ ಇಂದು ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಮುಖವಾಗುತ್ತಿದ್ರಾ?” ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ.ಇತ್ತ ಕೆಲ ರಾಜಕೀಯ ವಿಶ್ಲೇಷಕರು, ಗಂಗೂಲಿ ಅವರಂತಹ ಜನಪ್ರಿಯ ವ್ಯಕ್ತಿತ್ವ ಬಿಜೆಪಿ ಪರ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ರಾಜಕೀಯ ಮತ್ತು ಕ್ರಿಕೆಟ್ ಎರಡೂ ವಿಭಿನ್ನ ಕ್ಷೇತ್ರಗಳು. ಜನಪ್ರಿಯತೆ ಮಾತ್ರ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಸೌರವ್ ಗಂಗೂಲಿ ರಾಜಕೀಯಕ್ಕೆ ಬರದ ನಿರ್ಧಾರ ಸರಿಯಿತ್ತಾ ಅಥವಾ ಅವರು ಒಂದು ದೊಡ್ಡ ರಾಜಕೀಯ ಅವಕಾಶ ಮಿಸ್ ಮಾಡಿಕೊಂಡರಾ ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.






