ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಜಯ್ ಘೋಷಿಸಿರುವ ಉಚಿತ ಯೋಜನೆಗಳ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ವಿಜಯ್ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, “ಜನರಿಗೆ ಉಚಿತ ಗ್ಯಾರಂಟಿಗಳನ್ನು ಘೋಷಿಸುವುದು ಸುಲಭ. ಆದರೆ ಅದನ್ನು ಜಾರಿಗೆ ತರಲು ಬೇಕಾಗುವ ಹಣ ಎಲ್ಲಿಂದ ಬರುತ್ತದೆ ಎಂಬುದೇ ದೊಡ್ಡ ಪ್ರಶ್ನೆ” ಎಂದು ಹೇಳಿದ್ದಾರೆ.

ವಿಜಯ್ ಪಕ್ಷ ಘೋಷಿಸಿರುವ ಉಚಿತ ಯೋಜನೆಗಳ ಕುರಿತು ಲೆಕ್ಕಾಚಾರ ನೀಡಿದ ಅವರು, “ತಮಿಳುನಾಡಿನ ವಾರ್ಷಿಕ ಬಜೆಟ್ ಸುಮಾರು 3.30 ರಿಂದ 3.40 ಲಕ್ಷ ಕೋಟಿ ರೂಪಾಯಿ ಇದೆ. ಆದರೆ ವಿಜಯ್ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ವರ್ಷಕ್ಕೆ ಕನಿಷ್ಠ 6 ರಿಂದ 7 ಲಕ್ಷ ಕೋಟಿ ರೂಪಾಯಿ ಅಗತ್ಯವಾಗಬಹುದು” ಎಂದು ಅಭಿಪ್ರಾಯಪಟ್ಟರು.“ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಜನರಿಗೆ ಭರವಸೆ ಕೊಡುವುದು ಒಂದು ವಿಷಯ, ಅದನ್ನು ಆರ್ಥಿಕವಾಗಿ ನಿಭಾಯಿಸುವುದು ಮತ್ತೊಂದು ವಿಷಯ” ಎಂದು ಕುಮಾರಸ್ವಾಮಿ ಹೇಳಿದರು.

ಇದೇ ವೇಳೆ ಅವರು ವ್ಯಂಗ್ಯಭರಿತವಾಗಿ, “ವಿಜಯ್ ಅವರನ್ನು ದೇವರೇ ಕಾಪಾಡಬೇಕು” ಎಂದು ಟೀಕಿಸಿದರು. ಈ ಹೇಳಿಕೆ ಇದೀಗ ತಮಿಳುನಾಡು ಹಾಗೂ ಕರ್ನಾಟಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ವಿಜಯ್ ಅವರ ಟಿವಿಕೆ ಪಕ್ಷ ಮೊದಲ ಚುನಾವಣೆಯಲ್ಲೇ ದೊಡ್ಡ ಮಟ್ಟದ ಬೆಂಬಲ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ, ಉಚಿತ ಯೋಜನೆಗಳು, ಮಹಿಳೆಯರಿಗೆ ನೆರವು, ಯುವಕರಿಗೆ ಉದ್ಯೋಗ, ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ. ಆದರೆ ಈ ಯೋಜನೆಗಳ ಹಣಕಾಸು ನಿರ್ವಹಣೆ ಕುರಿತು ಈಗ ಪ್ರಶ್ನೆಗಳು ಕೇಳಿಬರುತ್ತಿವೆ.

ವಿಜಯ್ ಬೆಂಬಲಿಗರು ಮಾತ್ರ, “ಜನಪರ ಯೋಜನೆಗಳನ್ನು ಖರ್ಚು ಎಂದು ನೋಡಬಾರದು, ಅದು ಹೂಡಿಕೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕುಮಾರಸ್ವಾಮಿ ಹೇಳಿಕೆ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ವಿಜಯ್ ರಾಜಕೀಯ ಭರವಸೆಗಳು ಈಗ ಜನರ ಗಮನ ಸೆಳೆಯುತ್ತಿದ್ದರೆ, ಅವುಗಳ ಆರ್ಥಿಕ ಸಾಧ್ಯತೆಗಳ ಬಗ್ಗೆ ರಾಜಕೀಯ ನಾಯಕರು ಪ್ರಶ್ನೆ ಎತ್ತತೊಡಗಿದ್ದಾರೆ.






