2026ರ ಐಪಿಎಲ್‌ನಲ್ಲಿ ಈಗಾಗಲೇ 47 ಪಂದ್ಯಗಳು ಪೂರ್ಣಗೊಂಡಿದ್ದು, ಟೂರ್ನಿಯ ಅರ್ಧ ಹಂತ ಮುಗಿದಂತಾಗಿದೆ. ಆರಂಭದಲ್ಲಿ ಕಂಡುಬಂದ ಭರ್ಜರಿ ಉತ್ಸಾಹ ಪಂದ್ಯಗಳು ಮುಂದುವರಿದಂತೆ ಕಡಿಮೆಯಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣವಾಗಿ ಈ ಆವೃತ್ತಿಯಲ್ಲೂ ಬ್ಯಾಟರ್‌ಗಳ ಏಕಪಕ್ಷೀಯ ಪ್ರಾಬಲ್ಯ ಹೆಚ್ಚಿರುವುದನ್ನು ಹೇಳಲಾಗುತ್ತಿದೆ.

ಇದಕ್ಕು ಇನ್ನೂ ಹಲವು ಅಂಶಗಳು ಅಭಿಮಾನಿಗಳ ಆಸಕ್ತಿ ಕುಗ್ಗಲು ಕಾರಣವಾಗಿವೆ. ಇತ್ತೀಚೆಗೆ ಹೊರಬಂದ ವರದಿಯ ಪ್ರಕಾರ, ಐಪಿಎಲ್ ಜನಪ್ರಿಯತೆಯಲ್ಲೂ ಇಳಿಮುಖ ಕಂಡುಬಂದಿದೆ.ವಿಶೇಷವಾಗಿ ಟಿಆರ್‌ಪಿ ಹಾಗೂ ವೀಕ್ಷಕರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಇದರ ಪರಿಣಾಮವಾಗಿ ಜಾಹೀರಾತುದಾರರ ಸಂಖ್ಯೆಯೂ ಇಳಿಕೆಯಾಗಿರುವುದು ಗಮನಸೆಳೆಯುತ್ತಿದೆ.

ಟಿಆರ್‌ಪಿ ದೃಷ್ಟಿಯಿಂದ ನೋಡಿದರೆ, TAM Sports ಮತ್ತು BARC India ವರದಿಯ ಪ್ರಕಾರ ಐಪಿಎಲ್ 2026ರ ಟಿಆರ್‌ಪಿ ಶೇಕಡಾ 18.8ರಷ್ಟು ಕುಸಿದು 4.57ರಿಂದ 3.71ಕ್ಕೆ ಇಳಿದಿದೆ. ಅದೇ ವೇಳೆ ವೀಕ್ಷಕರ ಸಂಖ್ಯೆಯೂ ಶೇಕಡಾ 26ರಷ್ಟು ಕಡಿಮೆಯಾಗಿದ್ದು, 124 ಮಿಲಿಯನ್‌ನಿಂದ 113.6 ಮಿಲಿಯನ್‌ಗೆ ಇಳಿಕೆಯಾಗಿದೆ.
ವೀಕ್ಷಕರ ಸಂಖ್ಯೆ ಕಡಿಮೆಯಾಗಿರುವುದು ಜಾಹೀರಾತು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಜಾಹೀರಾತುದಾರರ ಸಂಖ್ಯೆಯಲ್ಲಿ ಶೇಕಡಾ 31ರಷ್ಟು ಕುಸಿತ ಕಂಡುಬಂದಿದ್ದು, ಹಿಂದಿನ 65ರಷ್ಟಿದ್ದ ಸಂಖ್ಯೆ ಈಗ ಸುಮಾರು 45ಕ್ಕೆ ಇಳಿದಿದೆ.

ಈ ಇಳಿಕೆಗೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಟೂರ್ನಿಯ ದೀರ್ಘಾವಧಿ, ಫ್ಲಾಟ್ ಪಿಚ್‌ಗಳಲ್ಲಿ ನಡೆಯುತ್ತಿರುವ ಪಂದ್ಯಗಳು ಹಾಗೂ ಆಟದ ಸಮತೋಲನ ಕಳೆದುಹೋಗಿರುವುದು ಪ್ರಮುಖ ಕಾರಣಗಳಾಗಿವೆ.ಬ್ಯಾಟರ್‌ಗಳ ಮೇಲುಗೈ ಹೆಚ್ಚಿದಂತೆ ಬೌಲರ್‌ಗಳಿಗೆ ಅವಕಾಶ ಕಡಿಮೆಯಾಗಿದ್ದು, ಪಂದ್ಯಗಳ ರೋಚಕತೆ ಕುಗ್ಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಇದಕ್ಕೆ ಜೊತೆಗೆ ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿರ್ಬಂಧ ಹಾಗೂ ವೀಕ್ಷಕರ ಅಭ್ಯಾಸದಲ್ಲಿ ಆಗಿರುವ ಬದಲಾವಣೆಗಳೂ ಪರಿಣಾಮ ಬೀರಿವೆ. ಅನೇಕರು ಈಗ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನಷ್ಟೇ ವೀಕ್ಷಿಸುತ್ತಿದ್ದು, ಉಳಿದ ಪಂದ್ಯಗಳತ್ತ ಆಸಕ್ತಿ ತೋರುತ್ತಿಲ್ಲ. ಈ ಎಲ್ಲ ಅಂಶಗಳು ಸೇರಿ ಐಪಿಎಲ್‌ನ ಒಟ್ಟು ಜನಪ್ರಿಯತೆಯ ಮೇಲೆ ಪ್ರಭಾವ ಬೀರಿವೆ ಎನ್ನಲಾಗುತ್ತಿದೆ.






