ಬೆಂಗಳೂರು: ರಾಜ್ಯದಲ್ಲಿ ವಕ್ಪ್ ಆಸ್ತಿಯ ವಿಚಾರ ಮೇಲಿಂದ ಮೇಲೆ ಚರ್ಚೆಯಾಗುತ್ತಿರುತ್ತದೆ. ಆಸ್ತಿಗಳನ್ನು ಕಬಳಿಸಲಾಗಿದೆ, ಆಸ್ತಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ವಿಪಕ್ಷ ಬಿಜೆಪಿಯು ಈ ಬಗ್ಗೆ ಧ್ವನಿ ಎತ್ತಿತ್ತು.

ಆದರೆ ಇದೇ ವಕ್ಫ್ ಆಸ್ತಿಯ ವಿಚಾರಕ್ಕೆ ರಾಜ್ಯ ಸರ್ಕಾರ ಶಾಕಿಂಗ್ ಮಾಹಿತಿ ನೀಡಿದೆ. ರಾಜ್ಯದಲ್ಲಿ 1.12 ಲಕ್ಷ ವಕ್ಫ್ ಆಸ್ತಿಗಳಲ್ಲಿ ಕೇವಲ ಶೇ.17 ರಷ್ಟು ಮಾತ್ರ ಅತಿಕ್ರಮಣದಿಂದ ಹೊರಗುಳಿದಿವೆ. ಮುಸ್ಲಿಮರೇ ಈ ಧಾರ್ಮಿಕ ಆಸ್ತಿಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸದನಕ್ಕೆ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿ ಅಫ್ಜಲ್‌ಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ 1,12,860 ಎಕರೆ ವಕ್ಫ್ ಆಸ್ತಿಗಳಿವೆ. ಇದರಲ್ಲಿ ನಮ್ಮ ಬಳಿ ಕೇವಲ 20,054 ಎಕರೆ ಮಾತ್ರ ಇದೆ. 17,969 ಎಕರೆ ಆಸ್ತಿಯು ಒತ್ತುವರಿಯಾಗಿದೆ. ಇನಾಂ ನಿರ್ಮೂಲನ ಕಾಯ್ದೆಯಡಿಯಲ್ಲಿ 47,263 ಎಕರೆ ಮತ್ತು ಭೂ ಸುಧಾರಣಾ ಕಾಯ್ದೆಯಿಂದ 23,627 ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇವೆ ಎಂದು ಜಮೀರ್ ಅಹ್ಮದ್ ಖಾನ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಪಿಂಕ್ ಲೈನ್ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್
ನಾನು ಸಚಿವನಾದ ನಂತರ, ಈ ಅತಿಕ್ರಮಣಗಳನ್ನು ತೆರವುಗೊಳಿಸುವುದಕ್ಕಾಗಿ ವಕ್ಫ್ ಅದಾಲತ್‌ಗಳನ್ನು ಪ್ರಾರಂಭಿಸಿದೆ. ಆದರೆ ಇದೂ ಕೂಡ ಒಂದು ದೊಡ್ಡ ಸಮಸ್ಯೆಯಾಯಿತು. ಎಲ್ಲಾ ವಕ್ಫ್ ಆಸ್ತಿಗಳನ್ನು ಸರ್ಕಾರ ನೀಡಿಲ್ಲ, ಬದಲಾಗಿ ಖಾಸಗಿ ವ್ಯಕ್ತಿಗಳು ನೀಡಿದ್ದಾರೆ. ಅವುಗಳನ್ನು ಮುಸ್ಲಿಮರೇ ಅತಿಕ್ರಮಿಸಿಕೊಂಡಿದ್ದಾರೆ ಎಂಬ ಅಚ್ಚರಿಯ ಹೇಳಿಕೆಯನ್ನು ವಕ್ಫ್ ಸಚಿವರು ನೀಡಿರುವುದು ಸಂಚಲನಕ್ಕೆ ಕಾರಣವಾಗಿದೆ.
ಸಚಿವರ ಉತ್ತರದ ಮಧ್ಯಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಏಕಪಕ್ಷೀಯ” ಹಕ್ಕುಗಳಿಂದಾಗಿ ವಕ್ಫ್‌ಗಳ ಬಗ್ಗೆ ದೊಡ್ಡ ಸಮಸ್ಯೆ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರದಲ್ಲಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಅಧ್ಯಯನ ಮಾಡಿದ ಶಾಲೆಯ ಮೇಲೂ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ ಎಂದು ಅಶೋಕ್ ಹೇಳಿದ್ದಾರೆ.
ವಿಂಡ್ಸರ್ ಮ್ಯಾನರ್ ಹೋಟೆಲ್ ಬಗ್ಗೆ ಹೇಳಿ ? ನೀವು ಅದನ್ನು ಹೇಗೆ ಬಿಟ್ಟಿದ್ದೀರಿ? ನೀವೂ ಕೂಡ ವಿಂಡ್ಸರ್ ಮ್ಯಾನರ್ ಮೇಲೆ ಹಕ್ಕು ಸಾಧಿಸಿದ್ದೀರಾ? ಏಕೆಂದರೆ ನೀವು ಅಲ್ಲಿಗೆ ಹೋಗಿ ಆಹಾರ ಸೇವಿಸಿ ಕಾಫಿ ಕುಡಿಯುತ್ತೀರಿ ಎಂದು ಅಶೋಕ್ ಟೀಕಿಸಿದ್ದಾರೆ. ಆದರೆ ಯಾವುದೇ ದೇವಸ್ಥಾನ ಮತ್ತು ಶಿಕ್ಷಣ ಸಂಸ್ಥೆಯನ್ನು ವಕ್ಫ್ ಎಂದು ಹೇಳಿಕೊಳ್ಳುವುದಿಲ್ಲ. ಅದಕ್ಕೆ ಅವಕಾಶವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸದನಕ್ಕೆ ತಿಳಿಸಿದ್ದಾರೆ.






