ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ ನೆಡಲಾಗಿದ್ದ ಗಿಡಗಳನ್ನು ಸೂಕ್ತ ನಿರ್ವಹಣೆಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಸೌಂದರ್ಯ ಹೆಚ್ಚಿಸಲು ನೆಡಲಾಗಿರುವ ಅಲಂಕಾರಿಕ ಗಿಡಗಳು ಸರಿಯಾಗಿ ಪೋಷಣೆಯಾಗದೇ ಒಣಗಿದ್ದು, ಬಹಳ ಕೆಟ್ಟದಾಗಿ ಕಾಣುತ್ತಿವೆ. ಹೀಗಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಎಲ್ಲಾ ರಸ್ತೆಬದಿ ಹಾಗೂ ರಸ್ತೆ ವಿಭಜಕಗಳಲ್ಲಿನ ಗಿಡಗಳನ್ನು ಸರಿಯಾಗಿ ಪೋಷಣೆ ಮಾಡಬೇಕು, ಒಣಗಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು. ಈ ಪ್ರಕ್ರಿಯೆಯನ್ನು ನಿರಂತರ ಪರಿಶೀಲಿಸಬೇಕು ಎಂದು ಶಿವಕುಮಾರ್ ಇತ್ತೀಚೆಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ದಿನಾಂಕ 02.03.2026 ರಂದು ಆದೇಶ ಹೊರಡಿಸಿದ್ದು, “ರಸ್ತೆ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ ಬೆಳಸಲಾಗಿರುವ ಅಲಂಕಾರಿಕ ಗಿಡಗಳನ್ನು ಸರಿಯಾಗಿ ಪೋಷಣೆ ಮಾಡಿ, ಅವಕಾಶವಿರುವ ಕಡೆ ಹೊಸದಾಗಿ ಅಲಂಕಾರಿಕ ಗಿಡ, ಮರಗಳನ್ನು ಬೆಳೆಸಬೇಕು, ಈಗಾಗಲೇ ಒಣಗಿ ಬಿದ್ದಿರುವ ಕಸವನ್ನು ತೆಗೆದು ಸ್ವಚ್ಛಗೊಳಿಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ ಪಾಲಿಕೆಗಳಲ್ಲಿ ಸೂಕ್ತ ಕ್ರಮ ಕೈಗೊಂಡಿರುವ ಬಗ್ಗೆ ಮುಖ್ಯ ಆಯುಕ್ತರು, ಜಿಬಿಎ ಹಾಗೂ ಅವರ ಮುಖ್ಯ ಕಾರ್ಯದರ್ಶಿಗಳು ನಿಯಮಿತವಾಗಿ ಸಭೆ ನಡೆಸಿ ಪರಿಶೀಲನೆ ಮಾಡಬೇಕು” ಎಂದು ಆದೇಶದಲ್ಲಿ ಸೂಚಿಸಲಾಗಿದೆ.






