ಬೆಂಗಳೂರು : “ಕುಣಿಯಲಾರದವನಿಗೆ ನೆಲ ಡೊಂಕು” ಎಂಬ ಮಾತು ಸಿಎಂ ಸಿಎಂ ಸಿದ್ದರಾಮಯ್ಯನವರಿಗೆ ಅನ್ವಯವಾಗುತ್ತದೆ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ನೇಮಕಾತಿಯತ್ತ ಗಮನಹರಿಸದೆ, ಯುವಕರಿಗೆ ದ್ರೋಹ ಬಗೆದಿರುವ ಮಹಾ ಸುಳ್ಳುಗಾರ ಸಿದ್ದರಾಮಯ್ಯನವರೇ, ಬಿಜೆಪಿಯತ್ತ ಬೆರಳು ಮಾಡುವ ಮುನ್ನ ಬಿಜೆಪಿ ಅವಧಿಯಲ್ಲಿ ಆಗಿರುವ ನೇಮಕಾತಿ ವಿವರ ನಿಮ್ಮ ಗಮನಕ್ಕೆ ತರುತ್ತೇವೆ ಎಂದು ಕಿಡಿಕಾರಿದೆ.
ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 15 ಸಾವಿರ ಶಿಕ್ಷಕರ ನೇಮಕ, ಆರೋಗ್ಯ ಇಲಾಖೆಯಲ್ಲಿ 2022ರಲ್ಲಿ 1048 ಹುದ್ದೆಗಳು ಭರ್ತಿ, ಅಬಕಾರಿ ಇಲಾಖೆಯಲ್ಲಿ 2022ರಲ್ಲಿ 1100 ಹುದ್ದೆಗಳು ಭರ್ತಿ, ಕೆಎಂಎಫ್ ನಲ್ಲಿ 2022ರಲ್ಲಿ 487 ಹುದ್ದೆಗಳ ಭರ್ತಿ, ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 778 ಪಿಯು ಉಪನ್ಯಾಸಕರ ಭರ್ತಿಗೆ ಕ್ರಮವಹಿಸಲಾಗಿದೆ ಎಂದು ತಿರುಗೇಟು ನೀಡಿದೆ.
ಇದನ್ನೂ ಓದಿ : ಉದ್ಯೋಗ ನೇಮಕಾತಿಯ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು ?
ಇಂಧನ ಇಲಾಖೆಯಲ್ಲಿ 2022ರಲ್ಲಿ 1492 ಇಂಜಿನಿಯರ್ ಹುದ್ದೆಗಳ ಭರ್ತಿ, ಆರೋಗ್ಯ/ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2022ರಲ್ಲಿ 320 ಹುದ್ದೆಗಳ ಭರ್ತಿ, ಗೃಹ ಇಲಾಖೆಯಲ್ಲಿ 2022ರಲ್ಲಿ 3484 ಕಾನ್ಸ್ಟೆಬಲ್ ಹುದ್ದೆ ಭರ್ತಿ, 2021ರಲ್ಲಿ ರಾಜ್ಯದ ಮೀಸಲು ಪೊಲೀಸ್ ಪಡೆಗೆ 250 ಹುದ್ದೆಗಳ ನೇಮಕ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ 5465 ಹುದ್ದೆಗಳ ಭರ್ತಿಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಯುವಕರಿಗೆ ಸುಳ್ಳು ಹೇಳುವುದು, ವಂಚಿಸುವುದು, ಯಾಮಾರಿಸುವುದು ಕಾಂಗ್ರೆಸ್ ಸರ್ಕಾರದ ಜಾಯಮಾನ.! ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ತ್ವರಿತವಾಗಿ ಭರ್ತಿ ಆಗುತ್ತಿವೆ ಆದರೆ ಸರ್ಕಾರಿ ಖಾಲಿ ಹುದ್ದೆಗಳು ಭರ್ತಿ ಆಗುವುದಿಲ್ಲ.! ಎಂದು ಆಕ್ರೋಶ ಹೊರಹಾಕಿದೆ.
ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿರುವ ಲೂಟಿಕೋರ ಸರ್ಕಾರಕ್ಕೆ ಯುವಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಸಮಯವಿಲ್ಲ!. ಸಿದ್ದರಾಮಯ್ಯನವರೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ಒಂದು ವರ್ಷದಲ್ಲೇ 30,000 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ, ನೀವು ಈ ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಿ, ಇಲ್ಲವಾದರೆ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದೆ.






