ಬೆಂಗಳೂರು:
ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಮೀಸಲಾತಿ ಹಂಚಿಕೆ ಅಂತಿಮಗೊಳಿಸಲಾಗಿದೆ.ಸಂಪುಟ ತೀರ್ಮಾನದಂತೆ, ಎಡಗೈ (SC-Left) ಸಮುದಾಯಕ್ಕೆ 5.25 ಶೇಕಡಾ, ಬಲಗೈ (SC-Right) ಸಮುದಾಯಕ್ಕೆ 5.25 ಶೇಕಡಾ ಹಾಗೂ ಇತರ ಪರಿಶಿಷ್ಟ ಜಾತಿಗಳಿಗೆ 4.5 ಶೇಕಡಾ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.

ಈ ನಿರ್ಧಾರವು ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡುವಂತೆ ಎಡಗೈ ಸಮುದಾಯವು ವ್ಯಕ್ತಪಡಿಸಿದ್ದ ಬೇಡಿಕೆಗೆ ಇದು ಸ್ಪಂದಿಸಿದಂತಾಗಿದೆ.ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂದು ನೀಡಿದ ತೀರ್ಪಿನ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನೊಂದೆಡೆ, ರಾಜ್ಯದಲ್ಲಿ ಬಾಕಿ ಉಳಿದಿರುವ ಸುಮಾರು 56,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಈ ತೀರ್ಮಾನದಿಂದ ವೇಗ ಸಿಗುವ ನಿರೀಕ್ಷೆಯಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ತಾಂತ್ರಿಕ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ಅಂತಿಮ ಮೀಸಲಾತಿ ಮಾದರಿಯನ್ನು ರೂಪಿಸಲಾಗಿದೆ. ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮವೆಂದು ಈ ನಿರ್ಧಾರವನ್ನು ವಿಶ್ಲೇಷಿಸಲಾಗುತ್ತಿದೆ.






