ಬೆಂಗಳೂರು : ಆರ್‌ಎಸ್‌ಎಸ್ ಒಂದು ರೀತಿಯ ದೆವ್ವ ಇದ್ದಂತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ಕೇಸರಿ ನಾಯಕರು ಸಿಡಿದೆದ್ದಿದ್ದಾರೆ. ಭಾನುವಾರ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಮೂಲಕ ಕಾಂಗ್ರೆಸ್ ಸಚಿವ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆದರೆ ಇದೇ ವಿಚಾರಕ್ಕೆ ಸಚಿವ ಖರ್ಗೆ ಮೇಲೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹೋದರ ಶ್ರೀ ಪ್ರಿಯಾಂಕ್ ಖರ್ಗೆ ಅವರೇ, ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ಮಾತನಾಡುವ ಮೊದಲು ಜನವಿರೋಧಿ ನೀತಿಗಳಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಎಂಬ ‘ಭ್ರಷ್ಟಾಚಾರದ ದೆವ್ವ’ವನ್ನು ಕನ್ನಡಿಯ ಮುಂದೆ ಒಮ್ಮೆ ನಿಲ್ಲಿಸಿ ನೋಡಿ! ಸಮಾಜಮುಖಿ ಕಾರ್ಯಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಪವಿತ್ರ ಸಂಘಟನೆ ಆರ್‌ಎಸ್‌ಎಸ್ ಅನ್ನು ‘ದೆವ್ವ’ಕ್ಕೆ ಹೋಲಿಸಿರುವ ನಿಮ್ಮ ನಡೆ ಅತ್ಯಂತ ಹೀನಾಯ ಮತ್ತು ಖಂಡನೀಯ. ನಿಮ್ಮ ಈ ಹೇಳಿಕೆ ದೈವತ್ವದ ಸಂಘಟನೆಯ ಮುಂದೆ ದೆವ್ವದ ಮನಸ್ಥಿತಿಯ ಪ್ರದರ್ಶನ ಮಾಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರಭಕ್ತಿಯ ಪವಿತ್ರತೆಯನ್ನು ಮೈಗೂಡಿಸಿಕೊಂಡಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ‘ದೆವ್ವ’ಕ್ಕೆ ಹೋಲಿಸಿರುವ ನಿಮ್ಮ ಅಹಂಕಾರಿ ಹೇಳಿಕೆಯು ನಿಮ್ಮ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಭಾರತೀಯರ ಹೃದಯದಲ್ಲಿರುವ ಸಂಘಟನೆಯನ್ನು ಟೀಕಿಸುವ ಮೊದಲು, ಕಾಂಗ್ರೆಸ್ ಎಂಬ ‘ಭ್ರಷ್ಟಾಚಾರದ ರಕ್ತಪಿಶಾಚಿ’ಯ ಕರಾಳ ಮುಖವನ್ನು ಒಮ್ಮೆ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಹಾಸ್ಯ ನಟ ರಾಜ್ ಪಾಲ್ ಯಾದವ್ ಗೆ ಮಧ್ಯಂತರ ಜಾಮೀನು: ಕೊಟ್ಟ ಕಾರಣವೇನು?
ಕಾಂಗ್ರೆಸ್ ಎಂಬ ಮಹಾ ದೆವ್ವ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸಿ, ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ ಕಾಂಗ್ರೆಸ್ ನಿಜವಾದ ದೆವ್ವ. ದೇಶಕ್ಕೆ “ಭ್ರಷ್ಟಾಚಾರದ ಕ್ಯಾನ್ಸರ್” ಹಬ್ಬಿಸಿ, ಇತಿಹಾಸದುದ್ದಕ್ಕೂ ಲೂಟಿ ಹೊಡೆದ ಕಾಂಗ್ರೆಸ್ಸಿಗರಿಗೆ ಆರ್‌ಎಸ್‌ಎಸ್‌ನ ದೇಶಭಕ್ತಿ ಅರ್ಥವಾಗಲು ಸಾಧ್ಯವಿಲ್ಲ. ಇದು 39,000 ಕೋಟಿ ದಲಿತರ ಹಣ ನುಂಗಿದ ‘ಹಣಬಾಕ’ ಸರ್ಕಾರ. ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದ SCSP/TSP ಯೋಜನೆಯ 39,000 ಕೋಟಿ ಹಣವನ್ನು ಗ್ಯಾರಂಟಿಗಳ ಹೆಸರಿನಲ್ಲಿ ನುಂಗಿ ನೀರು ಕುಡಿದ ನಿಮ್ಮ ಸರ್ಕಾರವೇ ಅತಿದೊಡ್ಡ ‘ಹಣ ನುಂಗುವ ದೆವ್ವ ಎಂದು ಟೀಕಿಸಿದ್ದಾರೆ.

ಒಳಮೀಸಲಾತಿ ವರ್ಗೀಕರಣದ ಪ್ರಸ್ತುತ ನಿರ್ಧಾರದಿಂದ ಹಲವು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಅನ್ಯಾಯಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂಬ ಆರೋಪಗಳಿದ್ದು, ಬೀದಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ, ನೀವು ಮೌನವಾಗಿರುವುದು ಸರಿಯೇ? ಈ ಗೊಂದಲಗಳಿಗೆ ಮತ್ತು ಸಮುದಾಯಗಳ ಆತಂಕಕ್ಕೆ ನಿಮ್ಮ ಸ್ಪಷ್ಟ ಉತ್ತರವೇನು? ಈ ವಿಷಯದಲ್ಲಿ ನಿಮ್ಮ ಬಾಯಿಗೆ ಯಾಕೆ ಬೀಗ ಜಡಿದಿದ್ದೀರಿ? ಎಂದು ಛಲವಾದಿ ನಾರಾಯಣಸ್ವಾಮಿ ತೀಕ್ಷ್ಣ ಮಾತಿನ ಚಾಟಿ ಬೀಸಿದ್ದಾರೆ.
ಬಡವರ ತಟ್ಟೆಯ ಅನ್ನವನ್ನು ಕಸಿದುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಿಮಗೆ ಆರ್‌ಎಸ್‌ಎಸ್ (Rashtriya Swayamsevak Sangh)ನ ಸೇವಾ ಮನೋಭಾವದ ಬಗ್ಗೆ ಮಾತನಾಡುವ ಅರ್ಹತೆಯಾದರೂ ಎಲ್ಲಿದೆ? ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಒಂದು ದೊಡ್ಡ ‘ಶಾಪ’: ದಶಕಗಳ ಕಾಲ ಅಧಿಕಾರ ಅನುಭವಿಸಿದ್ದರೂ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಶೂನ್ಯವನ್ನಾಗಿ ಮಾಡಿ, ಆ ಭಾಗದ ಜನರನ್ನು ಬಡತನದಲ್ಲೇ ಇಟ್ಟ ಕಾಂಗ್ರೆಸ್‌ನ ಸಾಧನೆ ಶೂನ್ಯ ಎಂದು ಹರಿಹಾಯ್ದಿದ್ದಾರೆ.

ಮರಿ ಚೇಳಿನ’ ಚೇಷ್ಟೆಯಂತೆ ಆರ್‌ಎಸ್‌ಎಸ್ ಅನ್ನು ಕುಟುಕಲು ಬರುವ ನಿಮ್ಮ ಇಂತಹ ರಾಕ್ಷಸಿ ಕೃತ್ಯಗಳು ಆ ಮಹಾ ವೃಕ್ಷವನ್ನು ಅಲ್ಲಾಡಿಸಲೂ ಸಾಧ್ಯವಿಲ್ಲ. ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರಭಕ್ತ ಸಂಘಟನೆಯನ್ನು ಗುರಿಯಾಗಿಸಿಕೊಳ್ಳುವ ಪ್ರಯತ್ನ ನಿಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಉದಾಹರಣೆಯಾಗಿದೆ. ನೋಂದಣಿ ಚಿಂತೆ ನಿಮಗಿರಲಿ: ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ನೋಂದಣಿ ದೇಶದ ಜನರ ಮನಸ್ಸಿನಿಂದ ರದ್ದಾಗದಂತೆ ಮೊದಲು ನೋಡಿಕೊಳ್ಳಿ. ಆಮೇಲೆ ಬೇರೆಯವರ ಬಗ್ಗೆ ಚಿಂತಿಸಿ ಎಂದು ಸಚಿವ ಖರ್ಗೆ ಕೌಂಟರ್ ನೀಡಿದ್ದಾರೆ.
ಕಾಂಗ್ರೆಸ್ ಎಂಬ ‘ಪ್ರಾರ್ಥೇನಿಯಂ’ ಕಳೆ ನಿರ್ಮೂಲನೆ ಖಚಿತ! ದೇಶಕ್ಕೆ ಭ್ರಷ್ಟಾಚಾರದ ಕ್ಯಾನ್ಸರ್ ಹಬ್ಬಿಸಿ, ಹಿಂದೂ ವಿರೋಧಿ ನೀತಿಗಳನ್ನೇ ಉಸಿರಾಗಿಸಿಕೊಂಡಿರುವ ಕಾಂಗ್ರೆಸ್ ಎಂಬ ‘ವಿಷಜಂತು’ಗಳನ್ನು ದೇಶದ ಜನ ಈಗಾಗಲೇ ಕಿತ್ತೆಸೆದಿದ್ದಾರೆ. ಇನ್ನೇನಿದ್ದರೂ ಕರ್ನಾಟಕದ ಸರದಿ. 2028ರಲ್ಲಿ ರಾಜ್ಯದ ಜನತೆ ಈ ‘ಕಾಂಗ್ರೆಸ್ ಕಳೆ’ಯನ್ನು ಬುಡಸಮೇತ ಕಿತ್ತೆಸೆಯುವುದು ಗ್ಯಾರಂಟಿ. ಅಂದು ನಿಮ್ಮ ಕಾಂಗ್ರೆಸ್ ಅಸ್ತಿತ್ವವೇ ಇಲ್ಲದಿದ್ದಾಗ ನೀವು ಯಾವ ನೋಂದಣಿ ಕಚೇರಿಯ ಮುಂದೆ ನಿಲ್ಲುತ್ತೀರೋ ಕಾದು ನೋಡುತ್ತೇವೆ! ಎಂದು ವಾಗ್ದಾಳಿ ನಡೆಸಿದ್ದಾರೆ.
ನೆನಪಿರಲಿ, ನನ್ನ ಸಹೋದರ ಪ್ರಿಯಾಂಕ್ ಖರ್ಗೆ ಅವರಿಗೊಂದು ಕಿವಿಮಾತು— “ಧರ್ಮದ ಹಾದಿಯಲ್ಲಿ ನಡೆಯುವವರನ್ನು ಸೋಲಿಸಲು ಬಂದ ಯಾವ ದುಷ್ಟ/ದೈತ್ಯ ಶಕ್ತಿಗಳೂ ಇತಿಹಾಸದಲ್ಲಿ ಉಳಿದಿಲ್ಲ.” ನಿಮ್ಮ ವಿನಾಶಕಾಲದ ಬುದ್ಧಿಯೇ ನಿಮ್ಮ ಕಾಂಗ್ರೆಸ್ ಪಕ್ಷದ ಅಂತ್ಯಕ್ಕೆ ಮುನ್ನುಡಿಯಾಗಲಿದೆ! “ಧರ್ಮ ಎಂದೂ ಸೋತಿಲ್ಲ, ಸೋಲಿಸಲು ಬಂದವರು ಉಳಿದಿಲ್ಲ.” ಎಚ್ಚರ!! ಎಂದು ಛಲವಾದಿ ನಾರಾಯಣಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಖಂಡಿಸಿದ್ದಾರೆ.






