ಬೆಂಗಳೂರು : ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿರುವ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಸಂಬಂಧಕ್ಕೆ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮತ್ತು ಸುರೇಶ್ ಕುಮಾರ್ ಒಂದೇ ಕಾಲೇಜಲ್ಲಿ ಕಲಿತವರು ಎಂಬುದನ್ನು ಸುರೇಶ್ ಕುಮಾರ್ ಅವರೇ ನೆನಪಿಸಿದ್ದಾರೆ. ಎಂಇಎಸ್ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಲ್ಲಿ ಕಲಿತ ನಾನು ಗಾಂಧಿ-ಅಂಬೇಡ್ಕರ್-ನೆಹರೂ ಅವರ ಅನುಯಾಯಿ ಆದ್ರೆ, ಸುರೇಶ್ ಕುಮಾರ್ ಅವರು ಗಾಂಧಿ ಕೊಲೆಗಾರರ ಅನುಯಾಯಿ ಆದ್ರು. ಈಗಲಾದರೂ ಬದಲಾಗಿದ್ದಾರಾ ಎಂದರೆ, ಇನ್ನೂ ಕೊಲೆಗಾರರ ಜೊತೆಯೇ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
https://youtu.be/S3ryrFW3GIM?si=1Ns_coJKC_yG9RuF
‘ಜನಪ್ರತಿನಿಧಿಗಳ ಜೊತೆ ನಿತ್ಯ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರೆಲ್ಲರೂ ನೈತಿಕ ಹೊಣೆ ಹೊತ್ತುಕೊಳ್ಳೋದಿಕ್ಕೆ ಆಗುತ್ತಾ?’ ಎಂದು ಮಾಜಿ ಕಾನೂನು ಸಚಿವ ಸುರೇಶ್ಕುಮಾರ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಸುರೇಶ್ಕುಮಾರ್ ಅವರು ಇಂತಹ ನುಣುಚಿಕೊಳ್ಳುವಿಕೆಯ ಜಾಣತನ ತೋರಬಾರದು. ಕೊಲೆಗಾರ ಜ್ಯೋತಿಷಿ ಕಮಲಾಕರ ಭಟ್ಟನು ಸುರೇಶ್ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡಿಲ್ಲ. ಸುರೇಶ್ ಕುಮಾರ್ ಅವರೇ ಕಾರಿನಿಂದ ಇಳಿದು ಕಮಲಾಕರ ಭಟ್ ಎಂಬ ಮಹಾನುಭಾವನ ಕಾರಿನ ಬಳಿ ಹೋಗಿ ತನ್ನ ಸಹಾಯಕನ ಮೂಲಕ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಸುರೇಶ್ ಕುಮಾರ್ ಅವರು ಫೋಟೋ ತೆಗೆಸಿಕೊಳ್ಳುವಾಗ ಸ್ವಯಂಘೋಷಿತ ಮಹಾನುಭಾವ ಜೋತಿಷಿ ಸೌಜನ್ಯಕ್ಕಾದರೂ ಕಾರಿನಿಂದ ಇಳಿಯುವುದಿಲ್ಲ. ಆದರೂ ಯಾವುದೇ ಮುಜುಗರ ಪಡದ ಸುರೇಶ್ ಕುಮಾರ್ ಅವರು ತಮ್ಮ ಎಲ್ಲಾ ಆತ್ಮಗೌರವವನ್ನು ಬದಿಗಿಟ್ಟು ಕಮಲಾಕರ ಭಟ್ ಎಂಬ ಜೋತಿಷಿಯೊಂದಿಗೆ ಫೋಟೋ ತೆಗೆದುಕೊಂಡು ಅವರ ಸಾಮಾಜಿಕ ಜಾಲತಾಣದಲ್ಲಿ ಜೋತಿಷಿಯನ್ನೂ, ಆತನ ಕೆಲಸವನ್ನೂ ಹೊಗಳಿ ಫೋಸ್ಟ್ ಮಾಡಿದ್ದಾರೆ. ಮಾಜಿ ಸಚಿವರಾಗಿರುವ ಸುರೇಶ್ ಕುಮಾರ್ ಅವರು ನೀಡಿದ ಪ್ರಚಾರವನ್ನೇ ಬಳಸಿಕೊಂಡು ಆ ಜೋತಿಷಿ ಎಷ್ಟು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿರಬಹುದು ? ಎಷ್ಟು ಮನೆಹಾಳು ಮಾಡಿರಬಹುದು ಎಂಬುದು ಚರ್ಚೆಯ ವಿಷಯವಲ್ಲವೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸುರೇಶ್ ಕುಮಾರ್ ಅವರ ಕೊಳೆತ ಮನಸ್ಥಿತಿ ಹೇಗಿದೆಯೆಂದರೆ, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನನ್ನ ಅಂಗಿಯನ್ನು ಹರಿದಾಗ ನಿರಂತರ ಮೂರು ದಿನ ಪುಂಡು ಪೋಕರಿಗಳ ರೀತಿಯಲ್ಲಿ ಸುರೇಶ್ ಕುಮಾರ್ ಅವರು ನನ್ನನ್ನು ಟ್ರೋಲ್ ಮಾಡಿದ್ದರು. ನನ್ನ ಹೆಸರಿನ ಮೇಲೆಯೇ ಅವರು ವ್ಯಂಗ್ಯಗಳನ್ನು ಮಾಡಿದ್ದರು. ನನ್ನ ವಿರುದ್ಧ ಮಾನಹಾನಿಕರವಾಗಿ ಬರೆದ ಟ್ರೋಲರ್ಗಳ ಎಲ್ಲಾ ಪೋಸ್ಟ್ ಗಳನ್ನು ಶೇರ್ ಮಾಡಿ ಬೆಂಬಲಿಸಿದ್ದ ಕೊಳೆತ ಮನಸ್ಥಿತಿಯ ಸುರೇಶ್ ಕುಮಾರ್ ಅವರಿಗೆ ಇದೀಗ ಕೊಲೆಗಾರನ ಸಖ್ಯದ ಬಗ್ಗೆ ಪ್ರಶ್ನೆ ಕೇಳಿದಾಗ ದಿಗ್ಭ್ರಾಂತರಾಗಿ ಮಾತನಾಡುತ್ತಿದ್ದಾರೆ ಎಂದು ಜರಿದಿದ್ದಾರೆ.
ನೀವು ಜನಪ್ರತಿನಿದಿಯಾದ ಮೇಲೆ ನೀವು ಸಂವಿಧಾನವನ್ನು ಪಾಲಿಸಲೇಬೇಕು ಮಿಸ್ಟರ್ ಸುರೇಶ್ ಕುಮಾರ್. ಜೋತಿಷಿ ನಿಮ್ಮ ಬಳಿ ಬಂದು ಫೋಟೋ ತೆಗೆದುಕೊಂಡರೆ ಅದು ನಿಮ್ಮ ತಪ್ಪಲ್ಲ. ನೀವೇ ಹೋಗಿ ಜೋತಿಷಿ ಬಳಿ ಫೋಟೋ ತೆಗೆದುಕೊಂಡರೂ ಅದು ನಿಮ್ಮ ವೈಯಕ್ತಿಕ. ಆದರೇ, ನೀವೇ ಹೋಗಿ ಜೋತಿಷಿ ಬಳಿ ಫೋಟೋ ತೆಗೆದುಕೊಂಡು ಆ ಜ್ಯೋತಿಷಿಯನ್ನು ಅಮಾಯಕ ಜನರಿಗೆ ಜಾಹೀರಾತು/ಪ್ರಮೋಟ್ ಮಾಡಿದರೆ ಅದು ಸಂವಿಧಾನದ ಆರ್ಟಿಕಲ್ 51A(h) ಉಲ್ಲಂಘನೆಯಾಗುತ್ತದೆ. ಹಾಗಾಗಿ ಆ ಜೋತಿಷಿ ಇನ್ನೆಷ್ಟು ಹುಡುಗಿಯರನ್ನು ಲೈಂಗಿಕವಾಗಿ ಬಳಸಿದ್ದಾನೆ ? ಇನ್ನೆಷ್ಟು ಕೊಲೆಗಳಿಗೆ ಕಾರಣವಾಗಿದ್ದಾನೆ ? ಇನ್ನೆಷ್ಟು ಮನೆ ಹಾಳು ಮಾಡಿದ್ದಾನೆ ಎಂದು ಪರಿಶೀಲಿಸಿದರೆ ಅದರಲ್ಲಿ ಸುರೇಶ್ ಕುಮಾರ್ ಭಾಗಿಧಾರಿಕೆ ಅರಿವಾಗುತ್ತದೆ ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಸುರೇಶ್ ಕುಮಾರ್ ಅವರು ‘ಅಪರಾಧವನ್ನು ಅಪರಾಧವಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ’ ಎಂದು ನನಗೆ ಉಪದೇಶ ಮಾಡಿದ್ದಾರೆ. ಇದು ಸುರೇಶ್ ಕುಮಾರ್ ಅವರ ನೈತಿಕ ಅದಃಪತನವನ್ನು ಸೂಚಿಸುತ್ತದೆ. ಕರಾವಳಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಣ ಬಿದ್ದ ತಕ್ಷಣ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ನೀವುಗಳು ನಮಗೆ ಉಪದೇಶ ಮಾಡುವುದು ಬೇಕಾಗಿಲ್ಲ. ಕಮಲಾಕರ ಭಟ್ ಬದಲು ಬೇರೆ ಧರ್ಮದ ವ್ಯಕ್ತಿ ಆರೋಪಿಯಾಗಿದ್ದರೆ ಸುರೇಶ್ ಕುಮಾರ್ ಮತ್ತವರ ಪಟಾಲಂ ‘ಅಪರಾಧವನ್ನು ಅಪರಾಧವನ್ನಾಗಿ ನೋಡಿ’ಕೊಳ್ಳುತ್ತಿತ್ತೇ ? ಕೋಮುಗಲಭೆ, ಕೋಮು ಹಿಂಸಾಚಾರದಲ್ಲಿ ಹೆಣ ಬಿದ್ದಾಕ್ಷಣ ರಣಹದ್ದುಗಳಂತಾಗುವ ಸುರೇಶ್ ಕುಮಾರ್ ಅಂತವರ ಉಪದೇಶ ನಮಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ ಇದೆ ಎಂದು ಸಾರಾಸಗಾಟಾಗಿ ಹೇಳಿದ್ದರ ಬಗ್ಗೆ ಸುರೇಶ್ ಕುಮಾರ್ ಆಕ್ಷೇಪಿಸಿದ್ದಾರೆ. ಸಿದ್ದಾಪುರದ ಕೊಲೆಗಡುಕ ಕಮಲಾಕರ ಗುರೂಜಿಯಿಂದ ಹಿಡಿದು, ಅಂತರರಾಷ್ಟ್ರೀಯ ಮಕ್ಕಳ ಲೈಂಗಿಕ ಪೀಡಕ ಎಪ್‌ಸ್ಟೀನ್ ತನಕ ತಮ್ಮ ಪಕ್ಷದ ಕೈವಾಡ ಇಲ್ಲವೇ ? ಆಸಾರಾಂ ಬಾಪೂ, ಡೇರೇ ಸಚ್ಚಾ ಸೌದಾ ಗುರೂಜಿಯಿಂದ ಹಿಡಿದು ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳವರೆಗೆ ಕ್ರಿಮಿನಲ್ಗಳ ಜೊತೆ ಗುರುತಿಸಿಕೊಂಡಿರುವವರು ಯಾರು ? ರಾಜ್ಯದಲ್ಲೇ ಬಿಜೆಪಿಯ ಎಷ್ಟು ನಾಯಕರ ಮೇಲೆ ಲೈಂಗಿಕ ಹಗರಣ, ಪೋಕ್ಸೋ ಪ್ರಕರಣಗಳಿವೆ ಎಂಬ ಬಗ್ಗೆ ಸುರೇಶ್ಕುಮಾರ್ ಅವರು ಬಹಿರಂಗ ಚರ್ಚೆಗೆ ಸಿದ್ದರಿದ್ದಾರೆಯೇ ? ಎಂದು ಹರಿಪ್ರಸಾದ್ ಸವಾಲು ಹಾಕಿದ್ದಾರೆ.
https://youtu.be/PEo85t-0aEQ?si=ItUhju1cNT87dAsD
ಸುರೇಶ್ ಕುಮಾರ್ ಅವರು ಜೋತಿಷ್ಯವನ್ನು ನಂಬುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಅವರು ನಂಬದೇ ಇರುವುದನ್ನು ಜನರಿಗೆ ನಂಬಿಸುವುದು ನೈತಿಕವಾಗಿ ಅಪರಾಧವಲ್ಲವೇ ? ನೀವು ಮತ್ತು ನಿಮ್ಮ ಕುಟುಂಬ ಎಲ್ಲಾ ರೀತಿಯಲ್ಲೂ ವಿಜ್ಞಾನದ ಲಾಭ ಪಡೆದು, ಅಮಾಯಕ ಬಡ ಜನರನ್ನು ಜೋತಿಷಿಗಳತ್ತಾ/ಸನಾತನವಾದದತ್ತಾ ಕಳುಹಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರ ಬಗ್ಗೆಯೇ ನನಗೆ ಮೂಲ ತಕರಾರು ಇರುವುದು. ಮಾಜಿ ಕಾನೂನು ಸಚಿವರಿಗೆ ಈ ಸಂದರ್ಭದಲ್ಲಿ ನಾನು Drugs & Magic Remedies (Objectionable Advertisements) Act, 1954 ಅನ್ನು ನೆನಪಿಸಲು ಬಯಸುತ್ತೇನೆ. ಜೋತಿಷ್ಯವನ್ನು ಜಾಹೀರಾತು ಮಾಡುವುದು ಈ ಕಾನೂನಿನ ಪ್ರಕಾರವೂ ಅಪರಾಧವಾಗುತ್ತದೆ ಎಂದು ಕುಟುಕಿದ್ದಾರೆ.
ನೀವು ಎಂಇಎಸ್ ನಂತಹ ಉತ್ತಮವಾದ ಕಾಲೇಜಿನಲ್ಲಿ ನನ್ನೊಂದಿಗೆ ಕಲಿತಿದ್ದರೂ ತಾವು ಸಂವಿಧಾನ ವಿರೋಧಿ, ಕೊಲೆಗಡುಕರ ಜೊತೆ ಸೇರಿದ್ದೀರಲ್ವಾ ಎಂಬ ಬೇಸರ ನನಗೂ ಇದೆ. ಕಾಲೇಜು ದಿನಗಳ ಕತೆಗಳನ್ನು ಹೇಳಿ ಸಾರ್ವಜನಿಕ ಬದುಕಿನಲ್ಲಿರುವ ತಮ್ಮನ್ನು ತಮ್ಮ ಈ ವಯಸ್ಸಿನಲ್ಲಿ ಇನ್ನಷ್ಟೂ ಮುಜಗರಕ್ಕೀಡು ಮಾಡುವ ಉದ್ದೇಶ ನನಗಿಲ್ಲ. ಸುರೇಶ್ ಕುಮಾರ್ ಅವರೇ, ಇನ್ನಾದರೂ ಸಜ್ಜನ ಶಾಸಕ ಎಂಬ ಸ್ವಯಂ ಭ್ರಮೆಗಳಿಂದ ಹೊರ ಬಂದು ಸಂವಿಧಾನಬದ್ಧ, ವೈಚಾರಿಕವಾದ ಮಾನವೀಯ ಬದುಕು ಸಾಗಿಸಿ ಎಂದು ಹರಿಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸುರೇಶ್ ಕುಮಾರ್ ಗುಡುಗಿದ್ದಾರೆ.






