ದೇಶದ ಪ್ರತಿಷ್ಠಿತ ಇಂಡಿಗೋ (Indigo) ಸಂಸ್ಥೆಯಲ್ಲಿ ಎದುರಾಗಿರುವ ಸಮಸ್ಯೆಯಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಇಂದು ಕೂಡ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸತತವಾಗಿ ಮುಂದುವರಿದಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಇಂದು 102 ವಿಮಾನಗಳ ಸಂಚಾರ ರದ್ದಾಗಿದೆ.

ಸಿಬ್ಬಂದಿ ಕೊರತೆಯಿಂದ 550ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಸಂಚಾರ ವ್ಯತ್ಯಯವಾಗಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪ್ರಯಾಣಿಕರು ಇಂಡಿಗೋ ಕೌಂಟರ್ ಬಳಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂಡಿಗೋ ಸಂಸ್ಥೆಯ ಈ ಅವ್ಯವಸ್ಥೆಯಿಂದ ಅನೇಕ ಉದ್ಯಮಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ನಡೆದಿದೆ.

ವಧು-ವರರಿಲ್ಲದೇ ನಡೆದ ಅಪರೂಪದ ಆರತಕ್ಷತೆ
ಭುವನೇಶ್ವರದಲ್ಲಿ ಮುವೆಯಾಗಿ ಹುಬ್ಬಳ್ಳಿಯ ಆರತಕ್ಷತೆಯಲ್ಲಿ ಭಾಗಿಯಾಗಬೇಕಾದ ಜೋಡಿಯೊಂದು ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದ ತಮ್ಮ ಆರತಕ್ಷತೆಗೆ ಬರಲಾಗದೇ ಆನ್ಲೈನ್ ಮೂಲಕ ಭಾಗವಹಿಸಿದ್ದಾರೆ. ಮೇಧಾ-ಸಂಗಮ ದಾಸ್ ಜೋಡಿಯ ಆರತಕ್ಷತೆಗೆ ಹುಬ್ಬಳ್ಳಿಯಲ್ಲಿ ಸಕಲ ಸಿದ್ಧತೆಗಳು ನಡೆದ ಕಾರಣ ಆರತಕ್ಷತೆಯನ್ನು ರದ್ದು ಮಾಡದೇ ವಧುವಿನ ಪೋಷಕರು ವಧು-ವರರ ಸ್ಥಾನದಲ್ಲಿ ಕುಳಿತಿದ್ದು, ನವ ಜೋಡಿ ತಮ್ಮದೇ ಆರತಕ್ಷತೆ ವಿಡಿಯೋ ಕಾಲ್ ಮೂಲಕ ಭಾಗಿಯಾಗಿದ್ದಾರೆ.

ಇಂಡಿಗೋ ವಿರುದ್ಧ ಉದ್ಯಮಿ ಆಕ್ರೋಶ
ಇಂಡಿಗೋ ವಿಮಾನ ವ್ಯತ್ಯಯದಿಂದ ಬ್ಯುಸಿನೆಸ್ ಮೀಟಿಂಗ್‌ಗೆ ಗೈರಾದ ಉದ್ಯಮಿಯೊಬ್ಬರು ಇಂಡಿಗೋ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಇಂಡಿಗೋದಲ್ಲಿ ಪ್ರಯಾಣಿಸುವ ಮೊದಲು ಎರಡು ಬಾರಿ ಯೋಚಿಸಿ. ಜೊತೆಗೆ ಬೇರೆ ಪ್ಲಾನ್ ಸಹ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.











