ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠದ ಪೀಠಾಧಿಪತಿ ದಾನೇಶ್ವರ ಸ್ವಾಮೀಜಿ (75) ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅನ್ನದಾಸೋಹ ಚಕ್ರವರ್ತಿ ಎಂದೇ ಖ್ಯಾತಿಯಾಗಿದ್ದ ದಾನೇಶ್ವರರು ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಅಪಾರ ಭಕ್ತರ ಬಳಗವನ್ನು ಹೊಂದಿದ್ದಾರೆ. ಸ್ವಾಮೀಜಿಯನ್ನು ಕಳೆದುಕೊಂಡು ಇಡೀ ಭಕ್ತ ಸಮೂಹ ಅನಾಥವಾದಂತಾಗಿದೆ.

ಇಂದು ಮಧ್ಯಾಹ್ನ 2ಗಂಟೆಗೆ ಸ್ವಾಮೀಜಿಯವರ ಪಾರ್ಥೀವ ಶರೀರ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮಕ್ಕೆ ಆಗಮಿಸಲಿದೆ. ಬಳಿಕ ರಾತ್ರಿ ಅಲ್ಲಿಂದ ನೇರವಾಗಿ ಬಂಡಿಗಣಿ ಮಠಕ್ಕೆ ಕೊಂಡೊಯ್ದು ಭಕ್ತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ಅನ್ನದಾಸೋಹ ಚಕ್ರವರ್ತಿಯ ಅಂತ್ಯಸಂಸ್ಕಾರ ನಡೆಯಲಿದೆ.

ಇನ್ನು ಕಳೆದ ಅಕ್ಟೋಬರ್ 13ರಂದು ಬಂಡಿಗಣಿ ಮಠದಲ್ಲಿ ದಾನೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದ್ದ ವಿಶ್ವ ಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಸ್ವಾಮೀಜಿಗಳ ಸಮಾಜ ಸೇವೆ ಹಾಗೂ ಅನ್ನದಾಸೋಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಂದು ವರ್ಷದಲ್ಲಿ 187 ಬಾರಿ ಅನ್ನದಾನ ಮಾಡಿದ್ದಾರೆ ಎಂದು ಸಿಎಂ ಹಾಡಿ ಹೊಗಳಿದ್ದರು. ಅಲ್ಲದೇ ಸ್ವಾಮೀಜಿ ಅವರ ವಯಸ್ಸನ್ನು ಕೇಳಿ ‘ನಿಮಗೆ 75 ವಯಸ್ಸಲ್ವಾ, ನೀವು ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಲಿ. ನಿಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ದೇವರು ಕೊಡಲಿ’ ಎಂದು ಸಿದ್ದರಾಮಯ್ಯನವರು ಶುಭ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.












