• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸೂಕ್ಷ್ಮ ಸಂವೇದನೆ ಅಸ್ಮಿತೆ ಮತ್ತು ಅಭಿವ್ಯಕ್ತಿ-ಸ್ವಾತಂತ್ರ್ಯ

ನಾ ದಿವಾಕರ by ನಾ ದಿವಾಕರ
May 2, 2025
in Top Story, ಜೀವನದ ಶೈಲಿ, ದೇಶ
0
ಸೂಕ್ಷ್ಮ ಸಂವೇದನೆ ಅಸ್ಮಿತೆ ಮತ್ತು ಅಭಿವ್ಯಕ್ತಿ-ಸ್ವಾತಂತ್ರ್ಯ
Share on WhatsAppShare on FacebookShare on Telegram

—–ನಾ ದಿವಾಕರ—–

ADVERTISEMENT

ಆಧುನಿಕತೆಗೆ ಮುನ್ನಡೆಯುತ್ತಿರುವಂತೆಯೇ ಭಾರತ ಪ್ರಾಚೀನತೆಯೆಡೆಗೆ ಮುಖ ಮಾಡುತ್ತಿರುವ ಹೊತ್ತಿನಲ್ಲಿ ,,,

ಇತ್ತೀಚೆಗೆ ಕರ್ನಾಟಕದಲ್ಲಿ ಎರಡು ಘಟನೆಗಳು ಸಾರ್ವಜನಿಕ ವಲಯ-ಸಾಮಾಜಿಕ ತಾಣಗಳಲ್ಲಿ ಗಂಭೀರ ಚರ್ಚೆ, ಪ್ರತಿರೋಧ, ಪ್ರತಿಭಟನೆ ಮತ್ತು ಆಕ್ರೋಶಗಳನ್ನು ಹುಟ್ಟುಹಾಕಿದ್ದವು. ಈ ಎರಡೂ ಪ್ರಸಂಗಗಳ ನಡುವೆ ಕಾಣಬಹುದಾದ ಸಮಾನ ಎಳೆ ಎಂದರೆ ನಮ್ಮ ಆಧುನಿಕ ಸಮಾಜದಲ್ಲಿ ಇಂದಿಗೂ ಗಟ್ಟಿಯಾಗಿರುವ ಮಧ್ಯಕಾಲೀನ ಅಥವಾ ಪ್ರಾಚೀನ ಎನ್ನಬಹುದಾದ ಮನಸ್ಥಿತಿಗಳು ಮತ್ತು ಅಸೂಕ್ಷ್ಮತೆ. ಭಿನ್ನ ನೆಲೆಗಳಲ್ಲಿಟ್ಟು ನೋಡಿದಾಗ ಒಂದು ʼ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ʼ ಪ್ರಸಂಗವಾದರೆ, ಮತ್ತೊಂದು ʼ ಆಳದಲ್ಲಿ ಮಡುಗಟ್ಟಿರುವ ಮನಸ್ಥಿತಿಗೆ ಘಾಸಿ ಮಾಡುವ ʼ ಪ್ರಸಂಗ. ಆದರೆ ಈ ಎರಡೂ ಪ್ರಸಂಗಗಳು ಹೊರಹಾಕಿದ್ದು, ನಮ್ಮ ಸಮಾಜದಲ್ಲಿ ಅಡಗಿರಬಹುದಾದ ಅಸ್ಮಿತೆಯಾಧಾರಿತ ಸಂಕುಚಿತತೆ , ಅಸೂಕ್ಷ್ಮತೆ ಮತ್ತು ಇದನ್ನೇ ಪೋಷಿಸುವಂತಹ ಯಜಮಾನಿಕೆಯ ಮನಸ್ಥಿತಿ. ಆದರೆ ಈ ಘಟನೆ ಮತ್ತು ಪ್ರತಿಕ್ರಿಯೆಗಳನ್ನು ನಗಣ್ಯ ಎಂದು ಪರಿಗಣಿಸುವಂತಿಲ್ಲ. ಏಕೆಂದರೆ ಅಲ್ಲಿ ನಮಗೆ ಸಾಮಾಜಿಕ ಒಳಸುಳಿಗಳು, ಸಿಕ್ಕುಗಳು ಕಾಣುತ್ತವೆ.

ಧಾರ್ಮಿಕ ಚಿಹ್ನೆ ಮತ್ತು  ಅಸ್ಮಿತೆ

ಮೊದಲನೆಯ ಘಟನೆ ಸಿಇಟಿ ಪರೀಕ್ಷೆಗಳಿಗೆ ಸಂಬಂಧಿಸಿದ್ದು. ಏಪ್ರಿಲ್‌ 17ರಂದು ನಡೆದ ಸಿಇಟಿ ಗಣಿತ ಪರೀಕ್ಷೆಗಳ ಸಂದರ್ಭದಲ್ಲಿ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ತೆಗೆಸಿದ, ಬಲವಂತವಾಗಿ ಕತ್ತರಿಸಿದ ಘಟನೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ರಾಜ್ಯಾದ್ಯಂತ ಬ್ರಾಹ್ಮಣ ಸಂಘಗಳು, ಬಿಜೆಪಿ ನಾಯಕರು ಈ ಕ್ರಮವನ್ನು ಬ್ರಾಹ್ಮಣರ ಪವಿತ್ರ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂಬ ಕಾರಣಕ್ಕೆ ತೀವ್ರ ತೆರನಾದ ಪ್ರತಿಭಟನೆಗಳನ್ನು ಹಮ್ಮಿಕೊಂಡವು. ಬಿಜೆಪಿ ನಾಯಕರಿಗೆ ಈ ಘಟನೆಯಲ್ಲಿ  ಹಿಂದೂ ಧರ್ಮಕ್ಕೆ, ಧಾರ್ಮಿಕ ಚಿಹ್ನೆ-ಲಾಂಛನಗಳಿಗೆ ಮತ್ತು ಆಚರಣೆಗಳಿಗೆ ಅಪಮಾನ ಮಾಡಿದಂತೆ ಬಿಂಬಿಸಲಾಯಿತು. ಹಿಂದೂ ಸಮಾಜದಲ್ಲಿ ಮೇಲ್ಜಾತಿಯವರು ಮಾತ್ರ ಧರಿಸುವುದಾದರೂ, ವಿಶಾಲ ಹಿಂದೂ ಧರ್ಮಕ್ಕೆ ಸಮೀಕರಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದಿತ್ತು. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸದಾ ಮೇಲ್ಪಂಕ್ತಿಯನ್ನೇ ಹೊಂದಿರುವ ಈ ಸಮುದಾಯ ಇಡೀ ಹಿಂದೂ ಅಸ್ಮಿತೆಯನ್ನು ಪ್ರತಿನಿಧಿಸುತ್ತದೆ ಎಂಬ ಸೂಕ್ಷ್ಮ ಸಂದೇಶವನ್ನು ಈ ಘಟನೆಯ ಸುತ್ತ ನಡೆದ ಪ್ರತಿಭಟನೆಗಳು ಸಾರಿ ಹೇಳಿದ್ದವು.

ಸಿಇಟಿ ಮತ್ತು ನೀಟ್‌ ಪರೀಕ್ಷಾ ನಿಯಮಗಳ ಅನುಸಾರ ಪರೀಕ್ಷಾರ್ಥಿಗಳು ಯಾವುದೇ ಬಾಹ್ಯ ಆಭರಣಗಳನ್ನಾಗಲೀ, ವಸ್ತುಗಳನ್ನಾಗಲೀ ತಮ್ಮ ಬಳಿ ಇಟ್ಟುಕೊಳ್ಳಲು ಅಥವಾ ಶರೀರದ ಮೇಲೆ ಧರಿಸಲು ಅವಕಾಶ ಇರುವುದಿಲ್ಲ. ಹೆಣ್ಣುಮಕ್ಕಳ ಓಲೆ, ಉಂಗುರ, ಸರ ಎಲ್ಲವನ್ನೂ ಹೀಗೆ ತೆಗೆಸಲಾಗುತ್ತದೆ. ಇದಕ್ಕೆ ಕಾರಣ ಆಧುನಿಕ ತಂತ್ರಜ್ಞಾನದ ಸಂವಹನ ಸಾಧನಗಳಾದ ಬ್ಲೂ ಟೂತ್‌ ಮುಂತಾದುವನ್ನು ಈ ಬಾಹ್ಯ ವಸ್ತುಗಳಲ್ಲಿ ಅಳವಡಿಸುವುದು ಸುಲಭವಾಗಿರುತ್ತದೆ. ಇದರ ಮೂಲಕ ಪರೀಕ್ಷಾರ್ಥಿಗಳು ತಮಗೆ ಬೇಕಾದ ಉತ್ತರಗಳನ್ನು ಸದ್ದಿಲ್ಲದೆ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಆದರೆ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸುವ ಜನಿವಾರದಲ್ಲಿ ಇಂತಹ ಸಂವಹನ ಸಾಧನಗಳನ್ನು ಅಳವಡಿಸಲು ಸಾಧ್ಯವೇ ಎನ್ನುವುದು ತಾಂತ್ರಿಕ ಪ್ರಶ್ನೆ. ಅದಕ್ಕೆ ಜೋಡಿಸಿದಂತೆ ಯಾವುದೇ ಸಾಧನಗಳು ಇದ್ದರೂ ಅದನ್ನು ಮಾತ್ರ ತೆಗೆಸಿ ಪರೀಕ್ಷಾರ್ಥಿಗಳಿಗೆ ಪ್ರವೇಶ ನೀಡಬಹುದಿತ್ತು. ಈ ಪರಿಶೀಲನೆಯ ಕೊರತೆಯ ಪರಿಣಾಮವೂ ಇರಬಹುದು, ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಮನಸ್ಸಿಗೆ ಘಾಸಿ ಉಂಟುಮಾಡುವ ರೀತಿಯಲ್ಲಿ ಜನಿವಾರವನ್ನು ತೆಗೆಸಲಾಗಿದೆ, ಕೆಲವೆಡೆ ಬಲವಂತವಾಗಿ ಕತ್ತರಿಸಿದ ಪ್ರಸಂಗಗಳೂ ನಡೆದಿವೆ. ಇದು ಪ್ರಮಾದವೇ ಸರಿ.

ಸಹಜವಾಗಿಯೇ ಬ್ರಾಹ್ಮಣಿಕೆಯ ಸಂಕೇತವಾಗಿ ಪವಿತ್ರ ಎಂದೇ ಪರಿಗಣಿಸಲಾಗುವ ಯಜ್ಞೋಪವೀತವನ್ನು ಕತ್ತರಿಸಿರುವುದು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಇದರಲ್ಲಿ ಪರೀಕ್ಷಾ ಕೇಂದ್ರಗಳ ನಿರ್ವಾಹಕರು, ಭದ್ರತಾ ಸಿಬ್ಬಂದಿಯೂ ತಪ್ಪು ಮಾಡಿರುವ ಸಾಧ್ಯತೆಗಳಿವೆ. ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶವನ್ನೇ ಕಳೆದುಕೊಂಡಿರುವುದು, ಆಕ್ರೋಶಕ್ಕೂ ಕಾರಣವಾಗಿದೆ. ಈಗ ವಿವಾದ ಕೋರ್ಟ್‌ ಮೆಟ್ಟಿಲೇರಿದ್ದು, ತನಿಖೆ ಜಾರಿಯಲ್ಲಿದೆ. ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್‌ಗೆ ತಮ್ಮದೇ ತಾಂತ್ರಿಕ ವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ. ಸರ್ಕಾರ ಈ ವಿವಾದವನ್ನು ಕೂಡಲೇ ಬಗೆಹರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು, ಅಧ್ಯಾಪಕರನ್ನು ಅಮಾನತುಗೊಳಿಸಿದ್ದಾರೆ.

Siddaramaiah :ರಾಹುಲ್ ಗಾಂಧಿ ಮತ್ತು ಮೋದಿ ಬಗ್ಗೆ ಸಿದ್ದರಾಮಯ್ಯ ಅಚ್ಚರಿ ಹೇಳಿದರು #pratidhvani #siddaramaiah

ಈ ನಡುವೆ ರೈಲ್ವೆ ಮಂಡಲಿಯ ಪ್ರವೇಶ ಪರೀಕ್ಷೆಗಳಿಗೂ ಇದೇ ರೀತಿಯಲ್ಲಿ ಪರೀಕ್ಷಾರ್ಥಿಗಳು ಯಾವುದೇ ರೀತಿಯ ಧಾರ್ಮಿಕ ಚಿಹ್ನೆ-ಲಾಂಛನಗಳನ್ನು ಧರಿಸುವಂತಿಲ್ಲ ಎಂಬ ಆದೇಶ ಹೊರಡಿಸಿದ್ದು, ಬಿಜೆಪಿಯ ವಿರೋಧದ ನಂತರ ಕೇಂದ್ರ ಸಚಿವ ಸೋಮಣ್ಣ ಆದೇಶ ಹಿಂಪಡೆಯುವಂತೆ ಆದೇಶಿಸಿದ್ದಾರೆ. ಈ ತಾಳಿ, ಮಾಂಗಲ್ಯ ಸರ, ಬ್ರೇಸ್‌ಲೆಟ್‌, ಉಂಗುರ, ಕಡಗ, ಜನಿವಾರ ಮುಂತಾದ ವಸ್ತುಗಳಲ್ಲಿ ಅತ್ಯಾಧುನಿಕ ಸಂವಹನ ತಂತ್ರಜ್ಞಾನದ ಸಾಧನಗಳನ್ನು ಅಳವಡಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ನಿಯಮವನ್ನು  ಜಾರಿಗೊಳಿಸಲಾಗಿದೆ. ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶ ಎಂದರೆ ಭಾರತದ ಶಿಕ್ಷಣ ವ್ಯವಸ್ಥೆ ಉದ್ಯೋಗ ಬಯಸುವ ವಿದ್ಯಾವಂತರಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಬೆಳೆಸಲು ವಿಫಲವಾಗಿದೆ ಅಥವಾ ಯುವ ಸಮೂಹ ಆ ವಿಶ್ವಾಸವನ್ನು ಕಳೆದುಕೊಂಡಿದೆ.

ಸೂಕ್ಷ್ಮತೆ ಇಲ್ಲದ ಭಾವನೆಗಳು

ಈ ಇಡೀ ಘಟನೆಯಲ್ಲಿ ಎದ್ದುಕಾಣುವ ಅಂಶ ಎಂದರೆ, ರಾಜ್ಯಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ತಪ್ಪಿತು ಎಂಬ ಕಾರಣಕ್ಕಿಂತಲೂ ಪ್ರಧಾನವಾಗಿ ಕಂಡಿದ್ದು, ಜನಿವಾರ ತೆಗೆಸುವ ಮೂಲಕ ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂಬ ಕಾರಣ. ಧಾರ್ಮಿಕ ಆಚರಣೆಗಳ ಚಿಹ್ನೆ, ಲಾಂಛನ ಮತ್ತು ಕೆಲವೊಮ್ಮೆ ವಸ್ತ್ರವೂ ಸಹ ಹೇಗೆ ಮನುಷ್ಯನ ಅಸ್ಮಿತೆಯನ್ನು ನಿರ್ಧರಿಸುತ್ತದೆ ಎನ್ನಲು ಇದೊಂದು ಸ್ಪಷ್ಟ ನಿದರ್ಶನ. ಆದರೆ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರು ಎದುರಿಸಿರಬಹುದಾದ ಮಾನಸಿಕ ತಲ್ಲಣ, ತುಮುಲಗಳು ಮುಖ್ಯ ಚರ್ಚೆಯ ವಿಷಯ ಆಗಲೇ ಇಲ್ಲ. ಅಧಿಕಾರಿಗಳ ಅಚಾತುರ್ಯ ಕ್ರಮದಿಂದ ಈ ವಿದ್ಯಾರ್ಥಿಗಳಿಗೆ ಉಂಟಾದ ನಷ್ಟದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಲೇ ಇಲ್ಲ.

ಈ ಚರ್ಚೆ ಮಾಡುವ ನೈತಿಕತೆಯನ್ನೂ ನಮ್ಮ ಸಮಾಜ ಕಳೆದುಕೊಂಡಿದೆ ಎನ್ನುವುದು ಸ್ಪಷ್ಟ. ಏಕೆಂದರೆ ಎರಡು ವರ್ಷಗಳ ಹಿಂದೆ ಹಿಜಾಬ್‌ ಧರಿಸಿದ ಮುಸ್ಲಿಂ ಹೆಣ್ಣುಮಕ್ಕಳನ್ನು ನಿರ್ದಾಕ್ಷೀಣ್ಯವಾಗಿ ಕಾಲೇಜಿಗೆ, ಪರೀಕ್ಷೆಗೆ ಬರದ ಹಾಗೆ ತಡೆಹಿಡಿದಿದ್ದು ಇದೇ ಸಮಾಜವೇ ಅಲ್ಲವೇ ? ಕರ್ನಾಟಕ ಹೈಕೋರ್ಟ್‌ ಅಂದಿನ ಶಾಲಾಡಳಿತ ಹಾಗೂ ಸರ್ಕಾರದ ಈ ನೀತಿಯನ್ನು ಎತ್ತಿಹಿಡಿದ ನಂತರ, ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ಅಲ್ಲಿಯೂ ದ್ವಿಸದಸ್ಯ ಪೀಠದ ತೀರ್ಪು ಒಮ್ಮತ ಇಲ್ಲದಿದ್ದ ಕಾರಣ ಈಗ ವಿಸ್ತೃತ ಪೀಠದ ಮುಂದೆ ಉಳಿದಿದೆ. ನ್ಯಾಯಾಂಗದ ಅಂತಿಮ ತೀರ್ಮಾನ ಏನೇ ಇರಲಿ, ಹಿಜಾಬ್‌ ಒಂದು ಧಾರ್ಮಿಕ ಚಿಹ್ನೆಯೋ ಅಲ್ಲವೋ ಎನ್ನುವುದು ಇಲ್ಲಿ ಪ್ರಶ್ನೆಯಾಗಲಾರದು. ಬದಲಾಗಿ ಒಂದು ವಸ್ತ್ರ ಧಾರಣೆಯ ಕಾರಣಕ್ಕಾಗಿ ಸಾವಿರಾರು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸರಿಯೇ ಎನ್ನುವುದು ಮೂರ್ತ ಪ್ರಶ್ನೆ. ಆ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆಯೂ ಯೋಚಿಸದೆ, ಕಾಲೇಜಿನ ಗೇಟಿನೊಳಗೂ ಪ್ರವೇಶಿಸಲು ಅವಕಾಶ ನೀಡದ ಸಮಾಜ ಇದಕ್ಕೆ ಉತ್ತರಿಸಬೇಕಿದೆ.

ಭಾರತ ಹೀಗಿರಲಿಲ್ಲ ಅಲ್ಲವೇ ? ಮತ-ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಸಮಸ್ತ ಭಾರತೀಯ ಜನತೆಯ ಸಾಂವಿಧಾನಿಕ ಹಕ್ಕು ಎಂದು ನಾವೇ ಒಪ್ಪಿಕೊಂಡು 77 ವರ್ಷಗಳ ಆಳ್ವಿಕೆ ನಡೆಸಿದ್ದೇವೆ. ಹೀಗೆ ಹಿಜಾಬ್‌ ಕಾರಣಕ್ಕಾಗಿ ಕಾಲೇಜು ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳ ಭವಿಷ್ಯ ನಮ್ಮ ಆಧುನಿಕ ಸಮಾಜಕ್ಕೆ ಹೊಳೆಯಲೂ ಇಲ್ಲವೇಕೆ ? ಇಂದು ಇದೇ ದುರವಸ್ಥೆಯನ್ನು ಬ್ರಾಹ್ಮಣ ವಿದ್ಯಾರ್ಥಿಗಳು ಅನುಭವಿಸಿದ್ದಾರೆ. ಈ ಘಟನೆಗಳಿಗೆ ಸರ್ಕಾರವೇ ನೇರ ಹೊಣೆ, ಮುಖ್ಯಮಂತ್ರಿಗಳೇ ಖುದ್ದಾಗಿ ಗೋಪ್ಯ ಆದೇಶ ನೀಡಿದ್ದಾರೆ ಎಂಬ ಹಲವು ಅತಿರೇಕದ ಸಂಪಾದಕೀಯ ಬರಹಗಳೂ ಸಹ ಪ್ರಕಟವಾಗಿದ್ದಾಯಿತು. ಈ ಅವಸರದ ತೀರ್ಮಾನ ಮತ್ತು ಅತಿರೇಕದ ರಾಜಕೀಕರಣವನ್ನು ಬದಿಗಿಟ್ಟು ನೋಡಿದಾಗಲೂ, ವಿದ್ಯಾರ್ಥಿಗಳ ದೃಷ್ಟಿಯಿಂದ ಈ ಪ್ರಮಾದ ನಡೆಯಕೂಡದಿತ್ತು.

Caste Census: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಚಿವರಿಗೆ ಹೆದರಿಸಿದ್ನಂತೆ ಎಂದ CM Siddaramaiah #pratidhvani

ಆದರೆ ಇದೇ ರೀತಿ ಹಿಜಾಬ್‌ ಪ್ರಕರಣವನ್ನೂ ತೀರ್ಮಾನಿಸಬಹುದಿತ್ತು. ಸಮುದಾಯದ ಸದಸ್ಯರೊಡನೆ ಸಮಾಲೋಚನೆ ನಡೆಸುವ ಮೂಲಕ, ಧಾರ್ಮಿಕ ಮುಖಂಡರೊಡನೆ ಚರ್ಚಿಸುವ ಮೂಲಕ, ಶಿಕ್ಷಣ ತಜ್ಞರು ಮತ್ತು ಹಿರಿಯ ನಾಗರಿಕರೊಡನೆ ಮಾತುಕತೆ ನಡೆಸುವ ಮೂಲಕ ಬಗೆಹರಿಸಬಹುದಿತ್ತು. ಆದರೆ ತಮ್ಮ ಮತೀಯ ದೃಷ್ಟಿಕೋನದಿಂದ ನೂರಾರು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ  ಮಾಡಲಾಯಿತು. ಇದರ ನೈತಿಕ ಹೊಣೆ ಹೊರುವವರು ಯಾರು ? ಶಿಕ್ಷಣದ ಅವಕಾಶದಿಂದಲೇ ವಂಚಿತರಾದ ಈ ಮಕ್ಕಳು ಅನಾಥರಂತೆ ಬಹಿಷ್ಕರಿಸಿದಾಗ ಸಂಭ್ರಮಿಸಿದ ಸಮಾಜವೂ ನಮ್ಮ ನಡುವೆ ಇತ್ತು/ಇದೆ ಅಲ್ಲವೇ ? ಧಾರ್ಮಿಕ ಚಿಹ್ನೆ-ಲಾಂಛನ ಮತ್ತು ಅವುಗಳ ಹಿಂದಿನ ಭಾವನೆಗಳು ಯುವ ಸಮೂಹದ ಭವಿಷ್ಯಕ್ಕಿಂತಲೂ ಮುಖ್ಯವಾಗುವುದು ಒಂದು ರೋಗಗ್ರಸ್ತ ಸಮಾಜದ ಲಕ್ಷಣ.

ಲಿಂಗ ಸೂಕ್ಷ್ಮತೆಯ ತೀಕ್ಷ್ಣ ಧ್ವನಿ

ಈ ಘಟನೆಗಳ ಹೊರತಾಗಿ ಮತ್ತೊಂದು ಸೂಕ್ಷ್ಮ ಪ್ರಸಂಗವೂ ರಾಜ್ಯದಲ್ಲಿ ನಡೆದಿದೆ. ಅದು ಲೇಖಕಿಯರ ಸಂಘದ ಸಮಾವೇಶದಲ್ಲಿ ಕವಿ ಮಮತಾ ಸಾಗರ್‌ ವಾಚಿಸಿದ ಆರು ಪದಗಳ ಒಂದು ಪುಟ್ಟ ಕವಿತೆ.

 “ ನಾನು..

ನಾನು ಅಂದರೆ

ಒಂದು ಜೊತೆ

ಮೆತ್ತಗಿನ‌ ಮೊಲೆ

ತೊಡೆ ಸಂದಲ್ಲಿ ಅಡಗಿದ

ಕತ್ತಲ ಕೋಶ “

ಈ ಒಂದು ಪುಟ್ಟ ಪದ್ಯ ಪುರುಷ ಸಮಾಜವನ್ನು ತಲ್ಲಣಗೊಳಿಸಿರುವುದಷ್ಟೇ ಅಲ್ಲ, ಕವಿ ಈ ಆರು ಪದಗಳ ಮೂಲಕ ಎತ್ತಿರುವ ಜಿಜ್ಞಾಸೆಗಳು ಪುರುಷ ಸಮಾಜದ ಅಂತರ್‌ಪ್ರಜ್ಞೆಯನ್ನು ವಿಚಲಿತಗೊಳಿಸಿವೆ. ಒಂದು ಸೂಕ್ಷ್ಮಗ್ರಾಹಿ ಸಮಾಜವೇ ಆಗಿದ್ದರೆ, ಈ ಕವಿತೆ ಪುರುಷಾಧಿಪತ್ಯದ ಅಹಮಿಕೆಗಳನ್ನು ಬೇರುಸಹಿತ ಅಲುಗಾಡಿಸುತ್ತಿತ್ತು. ಆದರೆ ಭಾರತದ ಪುರುಷ ಸಮಾಜ ಇಂದಿಗೂ ಸಹ ಆ ಲಿಂಗ ಸೂಕ್ಷ್ಮತೆಯನ್ನಾಗಲೀ, ದೇಹ ಸೂಕ್ಷ್ಮತೆಯನ್ನಾಗಲೀ, ಸಂವೇದನೆಯನ್ನಾಗಲೀ ರೂಢಿಸಿಕೊಂಡಿಲ್ಲ. ಹೆಣ್ಣೆಂದರೆ ಲೈಂಗಿಕ ಬಳಕೆಯ ಮಾಧ್ಯಮ ಅಥವಾ ಅವಳ ಶರೀರದ ಅಂಗಾಂಗಗಳು ಪುರುಷ ಸಮಾಜದ ಕಾಮತೃಷೆಯನ್ನು, ಮನದಣಿವನ್ನು ತಂಪಾಗಿಸುವ ಸಾಧನಗಳು ಮಾತ್ರ ಎಂದು ಭಾವಿಸುವ ಸಮಾಜದಲ್ಲಿ ನಾವಿದ್ದೇವೆ. ಈ ವಿಕೃತಿಯನ್ನು ಮಮತಾ ಸಾಗರ್‌ ಬಲವಾಗಿ ಪ್ರಶ್ನಿಸಿಬಿಟ್ಟಿದ್ದಾರೆ.

ಮೊಲೆ ಎಂಬ ಪದಬಳಕೆ ಪುರುಷ ಸಮಾಜಕ್ಕೆ ಅಶ್ಲೀಲವಾಗಿ ಕಾಣುವುದೇನೋ, ಆದರೆ ಸಿನಿಮಾ ಪರದೆಗಳ ಮೇಲೆ, ಜಾಹೀರಾತುಗಳಲ್ಲಿ ಮಹಿಳೆಯರ  ಇದೇ ಅಂಗ ದರ್ಶನಕ್ಕಾಗಿ ಹಾತೊರೆಯುವ ಪುರುಷ ಸಮಾಜಕ್ಕೆ, ಈ ಪದದ ಬಳಕೆ ಏಕೆ ಅಶ್ಲೀಲವಾಗಬೇಕು. ಸಿನೆಮಾ ಪರದೆಗಳ ಮೇಲೆ ಬಿತ್ತರಿಸುವ ಅತ್ಯಾಚಾರದ ದೃಶ್ಯಗಳಲ್ಲಿ, ಹಳೆಯ ಕ್ಯಾಬರೆಟ್‌,  ಇತ್ತೀಚಿನ ಸಿನೆಮಾದ ಐಟಂ ಸಾಂಗ್‌ಗಳಲ್ಲಿ ಹೆಣ್ಣಿನ ಅಂಗಾಂಗಗಳನ್ನು ಪ್ರಧಾನವಾಗಿ ಬಿಂಬಿಸುವ ಒಂದು ಸಾಂಸ್ಕೃತಿಕ ವಾತಾವರಣವನ್ನು ಇದೇ ಸಮಾಜವೇ ಸ್ವಾಗತಿಸುತ್ತದೆ. ಭಾರತದ ಪ್ರಾಚೀನ-ಮಧ್ಯಕಾಲೀನ ಶಿಲ್ಪಕಲೆಗಳಲ್ಲೂ ಹೆಣ್ಣು ಎಂದರೆ ಆಕೆಯ ಅಂಗಸೌಷ್ಟವವನ್ನು, ಪ್ರಧಾನವಾಗಿ ಸ್ತನ ಮತ್ತು ನಿತಂಬಗಳನ್ನು ಎದ್ದುಕಾಣುವಂತೆ  ಸೃಷ್ಟಿಸುವುದನ್ನು ಕಾಣಬಹುದು.  ಇದು ಪಾಶ್ಚಿಮಾತ್ಯ ಮತ್ತು ಭಾರತೀಯ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದಾದ ಲಕ್ಷಣ.

ಭಾರತದಲ್ಲೂ ಸೇರಿದಂತೆ, ಎಲ್ಲ ದೇಶಗಳಲ್ಲೂ ಬುಡಕಟ್ಟು ಸಮಾಜಗಳನ್ನು ಗಮನಿಸಿದಾಗ, ಅಲ್ಲಿ ಹೆಣ್ಣಿನ ಸೂಕ್ಷ್ಮಾಂಗಗಳು ಆಕರ್ಷಣೆಯ ವಸ್ತುವಾಗಿರುವುದಿಲ್ಲ. ಚೀನಾ, ಜಪಾನ್‌ ಮತ್ತಿತರ ದೇಶಗಳಲ್ಲಿ ಹೆಣ್ಣಿನ  ಸೌಂದರ್ಯೋಪಾಸನೆಯನ್ನು ಕೇವಲ ಚಹರೆಯಲ್ಲಿ ಕಾಣಲಾಗುತ್ತದೆ. ಆ ದೇಶಗಳ ಪ್ರಾಚೀನ ಶಿಲ್ಪಕಲೆಗಳಲ್ಲೂ ಇದೇ ಲಕ್ಷಣವನ್ನು ಗುರುತಿಸಬಹುದು. ಪಾಶ್ಚಿಮಾತ್ಯ ಸಮಾಜದ ಪ್ರಭಾವದಿಂದ ಭಾರತೀಯ ಶಿಲ್ಪಕಲೆ ಮತ್ತು ಚಿತ್ರಕಲೆಯ  ಮೇಲೆ ಆದ ಮತ್ತೊಂದು ಬದಲಾವಣೆ ಎಂದರೆ ಹೆಣ್ಣಿನ ಚರ್ಮದ ಬಣ್ಣದ ವರ್ಣನೆ ಮತ್ತು ವ್ಯಾಖ್ಯಾನ. ಇದು ಆಧುನಿಕ ಮಾರುಕಟ್ಟೆ ಜಗತ್ತಿನ ಜಾಹೀರಾತುಗಳಲ್ಲೂ ಗಮನಿಸಬಹುದು. ಗೌರವರ್ಣ ಎನ್ನುವುದೇ ಅತಿ ದೊಡ್ಡ ಸೌಂದರ್ಯವರ್ಧಕ ಸರಕುಗಳ ಮಾರುಕಟ್ಟೆಯ ಅಡಿಪಾಯವಾಗಿರುವುದನ್ನು ಗಮನಿಸಬಹುದು. ಅರುಣಾ ರಾಯ್‌ ಅವರು ತಮ್ಮ Personal is Political ಆತ್ಮಕತೆಯಲ್ಲಿ ಒಂದು ಪ್ರಸಂಗವನ್ನು ಹೀಗೆ ವಿವರಿಸುತ್ತಾರೆ :

“ 1950ರ ದಶಕದ ಆರಂಭದಲ್ಲಿ ನನ್ನ ಸೋದರಿ ಮತ್ತು ನಾನು ದೆಹಲಿಯ ಶಾಲೆಗೆ ಸೇರಿದಾಗ, ನಮ್ಮ ಚರ್ಮ ಕಪ್ಪಗಿದೆ ಎಂಬ ಕಾರಣಕ್ಕೆ ಚೇಡಿಸಲಾಗುತ್ತಿತ್ತು, ನೋಯಿಸಲಾಗುತ್ತಿತ್ತು, ನನ್ನನ್ನು ʼಕಾಲಿಕಲುಟಿʼ ಎಂದೇ ಕರೆಯಲಾಗುತ್ತಿತ್ತು ”.(ಪುಟ 197-198 Personal is Political – Aruna Roy)

ಸೌಂದರ್ಯೋಪಾಸನೆಯ ನೆಲೆಯಲ್ಲಿ ಹೆಣ್ಣಿನ ಸೌಂದರ್ಯವನ್ನು ಬಿಂಬಿಸಲು ಮತ್ತು ಬಣ್ಣಿಸಲು ಪಾರಂಪರಿಕವಾಗಿ ಅವಲಂಬಿಸುತ್ತಿರುವ ಅಂಗಗಳನ್ನು ಕವಿತೆಯೊಂದರಲ್ಲಿ ಅದರ ಉಲ್ಲೇಖದ ಮೂಲಕ, ಪ್ರತಿರೋಧದ ನೆಲೆಯಲ್ಲಿ ಬಳಸುವುದೇಕೆ ಅಶ್ಲೀಲವಾಗಿ ಕಾಣಬೇಕು ? ಮೂಲತಃ ಮಮತಾ ಸಾಗರ್‌ ಅವರ ಕವಿತೆಯಲ್ಲಿ ಪ್ರತಿರೋಧದ ದನಿ ಇದೆ. ಇದು ಭಾರತದಲ್ಲಿ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಹಿನ್ನೆಲೆಯಲ್ಲಿ ಸಹಜವಾದ ಹೆಣ್ಣೊಡಲಿನ ಅಂತರಾಳದ ನೋವು ಮತ್ತು ಆಕ್ರೋಶವನ್ನು ಬಿಂಬಿಸುತ್ತದೆ. ಸಾಮಾಜಿಕ ತಾಣಗಳಲ್ಲಿ ಇದಕ್ಕೆ ಹೀನಾಮಾನವಾಗಿ ಪ್ರತಿಕ್ರಿಯಿಸಿದ ಪುರುಷ ಸಮಾಜವನ್ನು ಘಾಸಿಗೊಳಿಸಿರುವುದು ಈ ಮಡುಗಟ್ಟಿದ ಆಕ್ರೋಶ. ಹಾಗಾಗಿ ಈ ಪದಬಳಕೆಯನ್ನೇ ಹೀಗಳೆಯುವ ಅಥವಾ ಅಶ್ಲೀಲ-ಅಸಭ್ಯ ಎನ್ನುವ ಮೂಲಕ, ಪ್ರತಿರೋಧಿಸುವ ದನಿಗಳು ಕೇಳಿಬಂದಿವೆ.

ಅಂತಿಮವಾಗಿ

ಮೇಲಿನ ಎರಡೂ ಪ್ರಕರಣಗಳಲ್ಲಿ ಗಮನಿಸಬೇಕಾದ ಸಮಾನ ಎಳೆ ಎಂದರೆ ಭಾರತೀಯ ಸಮಾಜದಲ್ಲಿ ʼ ಅಸ್ಮಿತೆ ʼ (Identity) ಪಡೆದುಕೊಂಡಿರುವ ಪ್ರಾಶಸ್ತ್ಯ ಮತ್ತು ಪ್ರಧಾನ ಸ್ಥಾನ.  ಮೊದಲನೆಯ ಪ್ರಸಂಗದಲ್ಲಿ ಜಾತಿ ಅಸ್ಮಿತೆ ಮುನ್ನಲೆಗೆ ಬಂದರೆ ಎರಡನೆ ಪ್ರಸಂಗದಲ್ಲಿ ಪುರುಷತ್ವದ ಅಸ್ಮಿತೆ ಮುಖ್ಯವಾಗಿದೆ. ಎರಡೂ ಪ್ರಸಂಗಗಳಲ್ಲಿ ಗುರುತಿಸಬಹುದಾದ ಮತ್ತೊಂದು ಸಮಾನ ಎಳೆ ಎಂದರೆ ಆಧುನಿಕ ಭಾರತೀಯ ಸಮಾಜದಲ್ಲಿ ಕೇವಲ ಮನುಜ ಸೂಕ್ಷ್ಮತೆ ಮಾತ್ರವೇ ಅಲ್ಲದೆ ಲಿಂಗ ಸೂಕ್ಷ್ಮತೆಯೂ ಇಲ್ಲದಿರುವುದು. ಎರಡೂ ಪ್ರಸಂಗಗಳನ್ನು ನಿರ್ದೇಶಿಸುವುದು ಪಿತೃಪ್ರಧಾನ-ಊಳಿಗಮಾನ್ಯ ಮನಸ್ಥಿತಿಯೇ ಎನ್ನುವುದು ಗಮನಿಸಬೇಕಾದ ಅಂಶ. ಅಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಗಣ್ಯವಾದರೆ ಇಲ್ಲಿ ಹೆಣ್ತನದ ಘನತೆ ನಗಣ್ಯವಾಗುತ್ತದೆ. ಈ ಅಸೂಕ್ಷ್ಮತೆಯಿಂದ ಹೊರಬರುವುದು ವರ್ತಮಾನ ಭಾರತದ ಇಡೀ ಸಮಾಜಕ್ಕೆ ಅತ್ಯವಶ್ಯವಾಗಿದೆ. ಆಗಲಾದರೂ ಅಪ್ರಾಪ್ತ ಬಾಲಕಿಯರು ಅತ್ಯಾಚಾರಕ್ಕೊಳಗಾದಾಗ, ಹರೆಯದ ಮಕ್ಕಳು ಶಿಕ್ಷಣವಂಚಿತರಾದಾಗ, ಅಸ್ಮಿತೆಗಳ ಬೇಲಿಗಳಿಂದಾಚೆಗೆ ಪ್ರತಿಸ್ಪಂದನೆ ವ್ಯಕ್ತವಾಗುವುದು ಸಾಧ್ಯವಾಗಬಹುದು.

-೦-೦-೦-೦-

Tags: diversity and inclusiondiversity equity and inclusionexpressionexpressionsfeminine identityfemininity and masculinityFreedomfreedom of expressionfreedom of speechfreedom of speech (quotation subject)gender identitygender identity and expressionidentity politicsidentity revolutionmasculinity and femininitypersonal freedomredefining identitytransgender identitytwitter sensitive content settingworld press freedom day
Previous Post

ಒಳಮೀಸಲಾತಿ ಕೊಡುವಾಗ ಭೋವಿಗಳಿಗೆ ಅನ್ಯಾಯ ಮಾಡಬೇಡಿ

Next Post

ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

Related Posts

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
0

ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ: ಡಿಸಿಎಂ ಡಿ.ಕೆ. ಶಿವಕುಮಾರ್ ದೇವನಹಳ್ಳಿಗೆ ಕಾವೇರಿ, ಎತ್ತಿನಹೊಳೆ ನೀರು *ಯೋಜನಾ ಪ್ರಾಧಿಕಾರದಿಂದ 30-40 ಮೀಟರ್ ರಸ್ತೆ...

Read moreDetails
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

December 13, 2025
Next Post
ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada