
ಕರ್ನಾಟಕದಲ್ಲಿ ಭಾರೀ ಸದ್ದು ಮಡಿದ್ದ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸಯದ್ ಉಲ್ ಹುಸೇನಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗನಾಗಿರುವ ಸಯದ್ ಉಲ್ ಹುಸೇನಿಯನ್ನು ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಚಿತ್ರದುರ್ಗದ ಅನ್ವರ್ ಪಾಷಾ ಪರವಾಗಿ ಸಚಿವ ಜಮೀರ್ ಅಹಮ್ಮದ್ ಖಾನ್ ಲಾಬಿ ಮಾಡಿದ್ದರು. ಆದರೆ ಎರಡೂವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆ ಸೂತ್ರದಂತೆ ಅಧ್ಯಕ್ಷ ಸ್ಥಾನ ತನ್ನ ಬೆಂಬಲಿಗನಿಗೆ ಕೊಡಿಸಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಲಾಬಿ ಮಾಡಿದ್ದು, ಜಮೀರ್ ಬೇಡಿಕೆಗೆ ಒಪ್ಪದೆ ಖರ್ಗೆ ಬೆಂಬಲಿಗನನ್ನು ಬಹುಮತದೊಂದಿಗೆ ಆಯ್ಕೆ ಮಾಡಲಾಗಿದೆ.

ಕಡೇ ಕ್ಷಣದಲ್ಲೂ ಬದಲಾವಣೆ ಮಾಡಲು ಸಾಧ್ಯವಿದ್ಯಾ..? ಎಂದು ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದರು. ವಕ್ಫ್ ಬೋರ್ಡ್ ಅಧ್ಯಕ್ಷರ ಆಯ್ಕೆ ನಿನ್ನ ಸಮುದಾಯದ ವಿಚಾರ, ನಿಯಮದಂತೆ ಆಯ್ಕೆ ನಡೆಯಲಿ ಎಂದಿದ್ದರು ಸಿಎಂ ಸಿದ್ದರಾಮಯ್ಯ. ಇಂದು ಬೆಳಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಖರ್ಗೆ ಆಪ್ತನ ಆಯ್ಕೆ ಮಾಡಲಾಗಿದೆ.

ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸಯದ್ ಉಲ್ ಹುಸೇನಿ ಅವಿರೋಧ ಆಯ್ಕೆ ಮಾಡಲಾಗಿದ್ದು, ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಪ್ತ ನಾಸೀರ್ ಹುಸೇನ್ ಭಾಗಿಯಾಗಿದ್ದಾರೆ. ಆದರೆ ತನ್ನ ಬೆಂಬಲಿಗನಿಗೆ ಸ್ಥಾನ ಸಿಗಲಿಲ್ಲ ಎಂದು ಅಸಮದಾನಗೊಂಡು ವಕ್ಫ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಸಚಿವ ಜಮೀರ್ ಅಹಮ್ಮದ್

ಕಾಂಗ್ರೆಸ್ ಪಕ್ಷದಲ್ಲಿ ನಾನು ಪ್ರಶ್ನಾತೀತ ಮುಸ್ಲಿಂ ನಾಯಕ ಎಂದು ಬೀಗುತ್ತಿದ್ದ ಸಚಿವ ಜಮೀರ್ ನಾಗಾಲೋಟಕ್ಕೆ ಕಾಂಗ್ರೆಸ್ನಲ್ಲಿ ಬ್ರೇಕ್ ಬಿದ್ದಂತಾಗಿದೆ. ನಾಸೀರ್ ಹುಸೇನ್ ಬೆಂಬಲಿಗನಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಜಮೀರ್ ನಿರ್ಧಾರಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಕ್ಫ್ ವಿಚಾರ ಮತ್ತೊಂದು ರೀತಿಯಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ.