
—–ನಾ ದಿವಾಕರ—-
ಜಾಗತಿಕ ಬಂಡವಾಳ ಹೂಡಿಕೆಯ (GIM) ಪ್ರಹಸನಗಳು ತಳಸಮಾಜಕ್ಕೆ ಸ್ಪಂದಿಸುತ್ತಿವೆಯೇ ?
ಬಂಡವಾಳಶಾಹಿಯು ಜಾಗತಿಕ ಸ್ತರದಲ್ಲಿ ತನ್ನ ಅವಸಾನ ಕಾಣತೊಡಗಿದ್ದು 1990ರ ದಶಕದ ನಂತರದಲ್ಲಿ. ಆರ್ಥಿಕ ಪರಿಭಾಷೆಯಲ್ಲಿ Capitalism ಅಥವಾ ಬಂಡವಾಳಶಾಹಿ ಎಂಬ ಕಲ್ಪನೆಯನ್ನು ಔದ್ಯಮಿಕ-ಔದ್ಯೋಗಿಕ ಬಂಡವಾಳ ಹೂಡಿಕೆಯ ಕೇಂದ್ರ ಬಿಂದುವಾಗಿ ನಿರ್ವಚಿಸಲಾಗುವುದಾದರೂ, ವಾಸ್ತವವಾಗಿ ನವ ಉದಾರವಾದ ಪೋಷಿಸಿಕೊಂಡು ಬಂದಿರುವ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಿರುವುದು ತಂತ್ರಜ್ಞಾನಾಧಾರಿತ ಬಂಡವಾಳವೇ ಆಗಿದೆ ಎಂದು ಗ್ರೀಸ್ನ ಅರ್ಥಶಾಸ್ತ್ರಜ್ಞ ಯಾನಿಸ್ ವರೌಫಾಕಿಸ್ ಪ್ರತಿಪಾದಿಸುತ್ತಾರೆ. ಬಂಡವಾಳಶಾಹಿಯಲ್ಲಿ ಊಳಿಗಮಾನ್ಯ ಸಂಬಂಧಗಳು ಇಂದಿಗೂ ಮುಂದುವರೆಯುತ್ತಿದ್ದರೂ, ತಂತ್ರಜ್ಞಾನದ ಮಾರುಕಟ್ಟೆಯ ಊಳಿಗಮಾನ್ಯ ಸಂಬಂಧಗಳು ಇದನ್ನು ಹಿಂದಿಕ್ಕಲು ಆರಂಭಿಸಿವೆ. ಹಾಗಾಗಿ ಸಾಂಪ್ರದಾಯಿಕ ಬಂಡವಾಳಶಾಹಿಗಳು ʼ ಸಾಮಂತ ಶಕ್ತಿಗಳಂತೆ ʼ (Vassal form) ರೂಪಾಂತರಗೊಂಡಿವೆ ಎಂದು ವಾದಿಸುತ್ತಾರೆ.
ತಂತ್ರಜ್ಞಾನವನ್ನು ಅದರ ಎಲ್ಲ ಸ್ವರೂಪಗಳಲ್ಲೂ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು, ದೊಡ್ಡ ತಂತ್ರಜ್ಞಾನ ಉದ್ಯಮಗಳು (Big Tech firms) ಇಂದು ಪ್ರಧಾನ ಪಾತ್ರ ವಹಿಸುತ್ತಿವೆ ಎಂದು ಹೇಳುವ ವರೌಫಾಕಿಸ್, ಈ ಪ್ರಕ್ರಿಯೆಯನ್ನು ಕ್ಲೌಡ್ ಕ್ಯಾಪಿಟಲಿಸಂ ಎಂದು ನಿರ್ವಚಿಸುತ್ತಾ, ಇದು ಬಂಡವಾಳಶಾಹಿಯ ಎರಡು ಆಧಾರ ಸ್ತಂಭಗಳಾದ ಮಾರುಕಟ್ಟೆ ಮತ್ತು ಲಾಭಗಳನ್ನು ಆಕ್ರಮಿಸಿದೆ ಎಂದು ಹೇಳುತ್ತಾರೆ. ಭಾರತದ ಬೌದ್ಧಿಕ ವಲಯದಲ್ಲಿ ಈ ಪ್ರಕ್ರಿಯೆ ಮತ್ತು ಅದರ ಪರಿಣಾಮಗಳನ್ನು ಕುರಿತ ಚರ್ಚೆಗಳು ಅರ್ಥಶಾಸ್ತ್ರಜ್ಞರ ನಡುವೆ ನಡೆಯುತ್ತಿರಬಹುದಾದರೂ, ಆರ್ಥಿಕತೆಯನ್ನೇ ಕೇಂದ್ರಿಕರಿಸುವ ಎಡಪಕ್ಷಗಳ ಬೌದ್ಧಿಕ ವಲಯಗಳಲ್ಲಿ ಸಾರ್ವಜನಿಕ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿಲ್ಲ ಎನ್ನುವುದು ವಾಸ್ತವ. ಈ ವೈರುಧ್ಯದ ನಡುವೆಯೇ ಹತ್ತು ವರ್ಷಗಳಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ (Global Investment Meet-GIM) ಎಂಬ ವಿದ್ಯಮಾನವೂ ಭಾರತದಲ್ಲಿ ಚಾಲನೆ ಪಡೆದಿದೆ.
ಬಂಡವಾಳ ಹೂಡಿಕೆಯ ಹಪಹಪಿ

ಬಂಡವಾಳ ಹೂಡಿಕೆದಾರರನ್ನು ವಿಶ್ವದೆಲ್ಲೆಡೆಯಿಂದ ಕೆಂಪುಗಂಬಳಿ ಹಾಸಿ ಸ್ವಾಗತಿಸುವುದೇ ಅಲ್ಲದೆ, ಅವರ ಔದ್ಯಮಿಕ ಬೆಳವಣಿಗೆಗೆ ಅಗತ್ಯವಾದ ಮೂಲ ಪರಿಕರಗಳನ್ನು (Logistics) ಒದಗಿಸುವುದು, ಔದ್ಯೋಗಿಕ-ಔದ್ಯಮಿಕ ಘಟಕ/ಸ್ಥಾವರಗಳನ್ನು ನಿರ್ಮಿಸಲು ಭೂಮಿಯನ್ನು ಒದಗಿಸುವುದು ಮತ್ತು ಕಾನೂನಾತ್ಮಕವಾಗಿ ಈ ಉದ್ಯಮಗಳು ಸರಾಗವಾಗಿ ನಡೆಯುವ ರೀತಿಯಲ್ಲಿ ಅಗ್ಗದ ಶ್ರಮವನ್ನು ಪೂರೈಸುವುದೇ ಅಲ್ಲದೆ, ಕಾರ್ಮಿಕರನ್ನು ನಿರ್ಬಂಧಿಸುವ ಕಾನೂನು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದು ಈ ಪ್ರಕ್ರಿಯೆಯ ಒಂದು ಪ್ರಧಾನ ಅಂಶ. ಬಂಡವಾಳ ಸದಾ ಕಾಲವೂ ಜಾಗತಿಕ ಸ್ವರೂಪವನ್ನೇ ಹೊಂದಿದ್ದು, ಔದ್ಯೋಗಿಕ ಬಂಡವಾಳ ಯುಗದಲ್ಲೂ ವಿಶ್ವದ ಯಾವುದೇ ದೇಶದೊಳಗೆ ಪ್ರವೇಶಿಸುವ ಅವಕಾಶವನ್ನು ಪಡೆದಿತ್ತು. ಆದರೆ ಕೆಲವು ದೇಶಗಳ ರಕ್ಷಣಾತ್ಮಕ ನೀತಿಗಳು ಬಂಡವಾಳದ ಒಳಹರಿವನ್ನು ನಿರ್ಬಂಧಿಸುತ್ತಿದ್ದವು. ಈ ಬೇಲಿಗಳನ್ನು ತೊಡೆದುಹಾಕಿದ್ದು ನವ ಉದಾರವಾದದ ಒಂದು ಕೊಡುಗೆ.
ಆದರೆ ಈ ಬಂಡವಾಳದ ಹೂಡಿಕೆ, ಉತ್ಪಾದನೆ ಮತ್ತು ಮರುಉತ್ಪಾದನೆಯ ಮೂಲ ಉತ್ಪಾದಕೀಯ ಶಕ್ತಿಗಳು, ಅಂದರೆ ಶ್ರಮಜೀವಿ ವರ್ಗದ ದೃಷ್ಟಿಯಿಂದ ನೋಡಿದಾಗ, ಜಾಗತೀಕರಣ ನೀತಿಗಳ ಉಗಮದ ನಂತರ ಇಡೀ ಜಗತ್ತು ಒಂದು ಪುಟ್ಟ ಹಳ್ಳಿಯಂತಾಗುತ್ತದೆ (Global Village), ಹಾಗಾಗಿ ಬಂಡವಾಳದೊಡನೆಯೇ ಶ್ರಮವನ್ನೂ ಸುಗಮವಾಗಿ ಗಡಿದಾಟಿಸಬಹುದು ಎಂಬ ಪರಿಕಲ್ಪನೆಯೂ ಉಗಮಿಸಿತ್ತು. ಆದರೆ 2008ರ ಜಾಗತಿಕ ಬಿಕ್ಕಟ್ಟು ಎಲ್ಲವನ್ನೂ ಪಲ್ಲಟಗೊಳಿಸಿದ್ದು, ಇಂದು ಬಂಡವಾಳಶಾಹಿ ಜಗತ್ತು ಪುನಃ ʼ ನನ್ನ ದೇಶ ನನ್ನ ಆದ್ಯತೆ ʼ ಎಂಬ ರಕ್ಷಣಾತ್ಮಕ ನೀತಿಗೆ ಮರಳಿದೆ. ಅಮೆರಿಕದ MAGA ನೀತಿ (Make Americal Great Again) ಇದರ ಸ್ಪಷ್ಟ ಸುಳಿವು ನೀಡಿದ್ದು, ಇದರ ಪರಿಣಾಮ ಶ್ರಮಿಕ ಜಗತ್ತು ಪುನಃ ತನ್ನ ಮೂಲ ನೆಲೆಯೆಡೆಗೆ, ಅಂದರೆ ತಮ್ಮ ತವರು ದೇಶಗಳಿಗೆ, ಮರಳುವ ಪರಿಸ್ಥಿತಿ ಉದ್ಭವಿಸಿದೆ. ಅಮೆರಿಕ ಮತ್ತು ಬ್ರಿಟನ್ನಿನ ವಲಸೆ ಕಾರ್ಮಿಕ ನೀತಿಯಲ್ಲಿ ಇದನ್ನು ಗುರುತಿಸಬಹುದು.

2008ರ ಆರ್ಥಿಕ ಬಿಕ್ಕಟ್ಟು ಇಡೀ ಜಗತ್ತನ್ನು ತಲ್ಲಣಗೊಳಿಸಿರುವುದು ಟ್ರಂಪ್ 2.0 ಆಳ್ವಿಕೆಯ ಆರ್ಥಿಕ ನೀತಿಗಳಿಂದಲೇ ಸ್ಪಷ್ಟವಾಗುತ್ತದೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಅಮೆರಿಕ ಭಾರತವನ್ನು ತನ್ನಲ್ಲಿ ಬಂಡವಾಳ ಹೂಡಲು ಆಹ್ವಾನಿಸಿದೆ. ಹತ್ತು ವರ್ಷಗಳ ಹಿಂದೆ ಜಗತ್ತಿನ ಅಗ್ರಶ್ರೇಣಿ ಆರ್ಥಿಕತೆಯಾಗಿದ್ದ ಜಪಾನ್ ಈಗ ಆರ್ಥಿಕವಾಗಿ ಅಮೆರಿಕದ ಸಾಮಂತ ದೇಶ (Vassal state) ಆಗಿದ್ದು, ಸಂಪೂರ್ಣ ಪರಾವಲಂಬಿಯಾಗಿದೆ. ಆದಾಗ್ಯೂ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಭಾರತ ಪ್ರಶಸ್ತ ಭೂಮಿಯಾಗಿದೆ. ಕಾರಣವೆಂದರೆ ಇಲ್ಲಿ ಅಗ್ಗದ ಶ್ರಮ ಸುಲಭವಾಗಿ ದೊರೆಯುತ್ತದೆ, ಈ ಶ್ರಮ ಪೂರೈಕೆಗೆ (Labour supply) ಇರಬಹುದಾದ ಎಲ್ಲ ಅಡ್ಡಗೋಡೆಗಳನ್ನೂ ನೂತನ ಕಾರ್ಮಿಕ ಸಂಹಿತೆಗಳು ತೊಡೆದುಹಾಕಿವೆ. ಔದ್ಯೋಗಿಕ ಸ್ಥಾವರಕ್ಕೆ ಅಗತ್ಯವಾದ ಭೂಮಿಯನ್ನೂ ಸುಲಭವಾಗಿ ಸ್ವಾಧೀನಪಡಿಸಿಕೊಳ್ಳುವ ಕಾನೂನುಗಳನ್ನು ಎಲ್ಲ ರಾಜ್ಯಗಳಲ್ಲೂ ರೂಪಿಸಲಾಗಿದೆ.
GIM ಎಂಬ ಔದ್ಯಮಿಕ ಕಲ್ಪನೆ
ಈ ಹಿನ್ನೆಲೆಯಲ್ಲೇ ರಾಜ್ಯ ಸರ್ಕಾರಗಳು ನಡೆಸುವ GIM (ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ) ಗಳು ಆರ್ಥಿಕ ಅಭಿವೃದ್ಧಿಗೆ, ಅಂದರೆ ಜಿಡಿಪಿ ಆಧಾರಿತ ಅಭಿವೃದ್ಧಿಯ ಕಲ್ಪನೆಯಲ್ಲಿ, ಪೂರಕವಾದ ಅವಕಾಶಗಳೆಂದು ಭಾವಿಸಲಾಗುತ್ತದೆ. ಆಂತರಿಕವಾಗಿ ಲಭ್ಯವಿರುವ ಅಪಾರ ಸಂಖ್ಯೆಯ ಶ್ರಮಿಕರನ್ನು ಮತ್ತು ಅಗಾಧ ಪ್ರಮಾಣದ ಶ್ರಮಶಕ್ತಿಯನ್ನು ಜಾಗತಿಕ ಬಂಡವಾಳಗಾರರಿಗೆ ಅಗ್ಗದ ದರದಲ್ಲಿ, ಅಡ್ಡಿ ಆತಂಕಗಳಿಲ್ಲದೆ ಪೂರೈಸುವುದು ಮತ್ತು ಹೂಡಿಕೆಗೆ ಅಗತ್ಯವಾದ ಭೂಮಿ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳನ್ನೂ ಸಹ, ಅನಿರ್ಬಂಧಿತವಾಗಿ ಒದಗಿಸುವ ಆಶ್ವಾಸನೆಯನ್ನು ನೀಡಲಾಗುತ್ತದೆ. ಇದರ ಒಂದು ಆಯಾಮವನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಆಯೋಜಿಸಿದ್ದ GIM-2025 ನಲ್ಲಿ ಕಾಣಬಹುದು. ಈ ಸಮಾವೇಶಗಳ ಯಶಸ್ಸು ಅಥವಾ ಸಾಫಲ್ಯ ವೈಫಲ್ಯಗಳತ್ತ ಗಮನಹರಿಸುವ ಮುನ್ನ, ತಳಸಮಾಜದಲ್ಲಿ ಇರುವ ಅಸಂಖ್ಯಾತ ವಂಚಿತ ಜನತೆಯ ಬದುಕನ್ನು ಹಸನುಗೊಳಿಸುವುದರಲ್ಲಿ ಇದರ ಪಾತ್ರವನ್ನು ಪರಾಮರ್ಶಿಸುವುದು ವರ್ತಮಾನದ ತುರ್ತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕರ್ನಾಟಕ GIM-2022 ಸಮಾವೇಶಕ್ಕೆ ಸಾಕ್ಷಿಯಾಗಿತ್ತು. ಕೋಟ್ಯಂತರ ರೂಗಳ ವೆಚ್ಚದಲ್ಲಿ ನಡೆದ 2022ರ ನವಂಬರ್ 2 ರಿಂದ 4 ರವರೆಗೆ ನಡೆದ ಸಮಾವೇಶದಲ್ಲಿ 9.81 ಲಕ್ಷ ಕೋಟಿ ರೂಗಳ ಬಂಡವಾಳ ಹೂಡಿಕೆಯ ಭರವಸೆಯನ್ನು ನೀಡಲಾಗಿತ್ತು. ರಾಜ್ಯದಲ್ಲಿ ಔದ್ಯೋಗಿಕ ಅಭಿವೃದ್ಧಿಗಾಗಿ 5.41 ಲಕ್ಷ ಕೋಟಿ ರೂ ಮೌಲ್ಯದ 57 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ 2024ರಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯು ವಿಧಾನಸಭೆಗೆ ಸಲ್ಲಿಸಿದ ಮಾಹಿತಿಯ ಅನುಸಾರ, ಕಳೆದ ಎರಡು ವರ್ಷಗಳಲ್ಲಿ 2.81 ಲಕ್ಷ ಕೋಟಿ ರೂಗಳ ಬಂಡವಾಳವಷ್ಟೇ ಹೂಡಿಕೆಯಾಗಿತ್ತು. 57 ಒಡಂಬಡಿಕೆಗಳ ಪೈಕಿ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ (SHLCC) ಮತ್ತು ರಾಜ್ಯ ಮಟ್ಟದ ಏಕ ಗವಾಕ್ಷಿ ಕ್ಲಿಯರೆನ್ಸ್ ಸಮಿತಿ (SLSWCC)ಯ ಮೂಲಕ 22,000 ಕೋಟಿ ರೂಗಳ ಎರಡು ಯೋಜನೆಗಳಿಗೆ ಮಾತ್ರ ಮಂಜೂರಾತಿ ದೊರೆತಿದೆ. ಇದಕ್ಕೂ ಮುನ್ನ 2010ರಲ್ಲಿ ನಡೆದ GIMನಲ್ಲಿ 3.94 ಲಕ್ಷ ಕೋಟಿ ರೂಗಳ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲಾಗಿತ್ತು.
GIM 2025 ಸಮಾವೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ 7.50 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆಯ ಅಂದಾಜು ಮಾಡಲಾಗಿದ್ದು, ಇದರಿಂದ ರಾಜ್ಯದಲ್ಲಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಸರ್ಕಾರವು ಘೋಷಿಸಿದೆ. ಶೇಕಡಾ 75ರಷ್ಟು ಹೂಡಿಕೆಗಳು ಬೆಂಗಳೂರು ಜಿಲ್ಲೆಯಿಂದ ಹೊರಗಿನ ಪ್ರದೇಶಗಳಲ್ಲಿ ಹೂಡಲಾಗುತ್ತದೆ, ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರಾಶಸ್ತ್ಯ ಪಡೆಯಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉತ್ಪಾದನಾ ವಲಯದ ಕೈಗಾರಿಕೆಗಳಿಗೆ ಶೇಕಡಾ 30ರಷ್ಟು ಸಹಾಯಧನ ಒದಗಿಸುವುದಾಗಿ ಹೇಳಲಾಗಿದೆ. ಪ್ರಧಾನವಾಗಿ ಆನಂದ್ ಮಹೀಂದ್ರಾ ಕಂಪನಿಯಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 35 ಸಾವಿರ ಕೋಟಿ, ಜಿಂದಾಲ್ ಉಕ್ಕಿನ ಕಾರ್ಖಾನೆಯ ವಿಸ್ತರಣೆಗೆ 43 ಸಾವಿರ ಕೋಟಿ ಹಾಗೂ ಸೌರ ವಿದ್ಯುತ್-ಹಸಿರು ಜಲಜನಕ ಉತ್ಪಾದನೆಗೆ 56 ಸಾವಿರ ಕೋಟಿ, ವೋಲ್ವೋ ಕಂಪನಿಯಿಂದ ಹೊಸಕೋಟೆಯ ಘಟಕದ ವಿಸ್ತರಣೆಗಾಗಿ 1400 ಕೋಟಿ ರೂ ಹೂಡಿಕೆ ಮಾಡಲಿದ್ದು 20 ಸಾವಿರ ಬಸ್ ಮತ್ತು ಟ್ರಕ್ ತಯಾರಿಸುವುದಾಗಿ ಘೋಷಿಸಲಾಗಿದೆ. ಇದರಿಂದ 2000 ಉದ್ಯೋಗಗಳು ಸೃಷ್ಟಿಯಾಗಲಿವೆ ಎನ್ನಲಾಗಿದೆ.

ಎಮ್ವಿ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸೋಲಾರ್ ಫೋಟೋವೋಲ್ಟಾಯಿಕ್ ಸೆಲ್ ಮತ್ತು ಅದರ ಮಾದರಿಗಳನ್ನು ಉತ್ಪಾದಿಸಲು 15 ಸಾವಿರ ಕೋಟಿ ರೂ ಬಂಡವಾಳ ಹೂಡಿಕೆ ಮಾಡಲಿದೆ. RSOLEC ಕಂಪನಿಯು ಸೋಲಾರ್ ಇನ್ಗಾಟ್ ವೇಫರ್ಸ್ ತಯಾರಿಕೆಗಾಗಿ 5 ಸಾವಿರ ಕೋಟಿ ರೂ, ಟಿಎಎಸ್ಎಲ್ ಕಂಪನಿಯು ಹೆಲಿಕಾಪ್ಟರ್ ಅಸೆಂಬ್ಲಿ ಲೈನ್ ಘಟಕ ಸ್ಥಾಪಿಸಲು 1530 ಕೋಟಿ ರೂ ಬಂಡವಾಳ ಹೂಡಲು ಒಪ್ಪಿಕೊಂಡಿವೆ. ಈ ಬೃಹತ್ ಬಂಡವಾಳ ಹೂಡಿಕೆಯ ನಿರ್ವಹಣೆ ಮತ್ತು ಮಂಜೂರಾತಿ ಪ್ರಕ್ರಿಯೆಗೆ ಅನುಕೂಲವಾಗಲು 150 ಸೇವೆಗಳನ್ನು ಒದಗಿಸುವ ಪೋರ್ಟಲ್ಗಳನ್ನು 30 ಇಲಾಖೆಗಳಲ್ಲಿ ಸರ್ಕಾರ ತೆರೆಯಲಿದ್ದು, ರಾಜ್ಯದಲ್ಲಿರುವ 200ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳ ಜೊತೆಗೆ 30 ಸಾವಿರ ಎಕರೆ ಪ್ರದೇಶದಲ್ಲಿ 12 ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸುವುದಾಗಿ ಕೈಗಾರಿಕಾ ಸಚಿವರು ಘೋಷಿಸಿದ್ದಾರೆ. ಇಲ್ಲಿ ಜಾಗತಿಕ ಎಂಬ ನಾಮವಿಶೇಷ ಇದ್ದರೂ ಬಹುತೇಕ ಬಂಡವಾಳಿಗರು ನಮ್ಮ ದೇಶದವರೇ ಆಗಿರುವುದನ್ನೂ ಗಮನಿಸಬೇಕಿದೆ.
ಉದ್ಯೋಗಾವಕಾಶಗಳ ನೆಲೆಯಲ್ಲಿ
ಈ ಬಂಡವಾಳ ಹೂಡಿಕೆಗಳಿಗೂ, ರಾಜ್ಯದಲ್ಲಿ ಸೃಷ್ಟಿಯಾಗಲಿರುವ ಉದ್ಯೋಗಾವಕಾಶಗಳಿಗೂ ತುಲನೆ ಮಾಡಿ ನೋಡಿದಾಗ, ಕರ್ನಾಟಕದ ಸ್ಥಿತಿಗತಿಗಳು ನಕಾರಾತ್ಮಕವಾಗೇನೂ ಕಾಣುವುದಿಲ್ಲ. 2021-22ರ ಆರ್ಥಿಕ ಸಮೀಕ್ಷೆಯ ಪ್ರಕಾರ 6.66 ಕೋಟಿ ಜನರ ಪೈಕಿ ಶೇಕಡಾ 45ರಷ್ಟು ಅಂದರೆ 2.99 ಕೋಟಿ ಜನರು ದುಡಿಯುವ ವಲಯಕ್ಕೆ ಸೇರಿದವರಾಗಿದ್ದಾರೆ. ಇವರ ಪೈಕಿ ಬಹುಪಾಲು ಅನೌಪಚಾರಿಕ ವಲಯದಲ್ಲಿ ದುಡಿಮೆ ಮಾಡುತ್ತಿದ್ದು ಕೃಷಿ ವಲಯದಲ್ಲಿ ಶೇಕಡಾ 46.6 ಮತ್ತು ಕೃಷಿಯೇತರ ವಲಯದಲ್ಲಿ ಶೇಕಡಾ 53.4ರಷ್ಟು ದುಡಿಮೆಗಾರರಿದ್ದಾರೆ. ಈ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಭವಿಷ್ಯ ನಿಧಿ ಸೌಲಭ್ಯ, ವೈದ್ಯಕೀಯ ವಿಮೆ, ಗ್ರಾಚುಯಿಟಿ, ಹೆರಿಗೆ ರಜೆ ಇದಾವುದೂ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಔಪಚಾರಿಕ ವಲಯದ ಉದ್ಯೋಗಗಳು ಕರ್ನಾಟಕದಲ್ಲಿ ತಕ್ಕಮಟ್ಟಿಗೆ ಸುಧಾರಿಸಿದ್ದು, 2017-21ರ ಅವಧಿಯಲ್ಲಿ 24 ಉದ್ಯೋಗಗಳು ಸೃಷ್ಟಿಯಾಗಿವೆ.
ಸಮಾಧಾನಕರ ಅಂಶವೆಂದರೆ ಕರ್ನಾಟಕದ ನಿರುದ್ಯೋಗ ಪ್ರಮಾಣವು ಶೇಕಡಾ 2.7ರಷ್ಟಿದ್ದು ರಾಷ್ಟ್ರೀಯ ಸರಾಸರಿಗಿಂತಲೂ (ಶೇಕಡಾ 4.2) ಕಡಿಮೆ ಇದೆ ಎಂದು ಪಿಎಲ್ಎಫ್ಎಸ್ ವರದಿಯಲ್ಲಿ ಹೇಳಲಾಗಿದೆ. ಆರ್ಥಿಕತೆಯ ದೃಷ್ಟಿಯಿಂದ ನೋಡಿದಾಗ ರಾಜ್ಯದಲ್ಲಿ ಸೇವಾವಲಯದಲ್ಲಿ ಶೇಕಡಾ 66.1, ಕೈಗಾರಿಕೆಗಳಲ್ಲಿ ಶೇಕಡಾ 19.8, ಕೃಷಿ ವಲಯದಲ್ಲಿ ಶೇಕಡಾ 14.1 ದುಡಿಮೆಗಾರರಿರುವುದನ್ನು ಈ ವರದಿ ಉಲ್ಲೇಖಿಸುತ್ತದೆ. ಈ ಆಶಾದಾಯಕ ಚಿತ್ರಣದ ಹೊರತಾಗಿಯೂ ಕರ್ನಾಟಕವು ಅನುಸರಿಸುತ್ತಿರುವ ಪೂರೈಕೆ ಬದಿಯ ಆರ್ಥಿಕ ನೀತಿಗಳ ( Supplyside Economic Policies). ಪರಿಣಾಮ ರಾಜ್ಯದಲ್ಲಿ ಉತ್ಪಾದನಾ ವಲಯದ ವೃದ್ಧಿಯಾಗುತ್ತಿಲ್ಲ. GIM 2025ರಲ್ಲಿ ಕಾಣಲಾಗುವ ಹೂಡಿಕೆಗಳಲ್ಲೂ ಬಹುತೇಕ ಘಟಕಗಳು ಇದರಿಂದ ಹೊರತಾಗಿಯೇ ಇರುವುದನ್ನು ಗಮನಿಸಬಹುದು.

2021-22ರ ದತ್ತಾಂಶಗಳ ಅನುಸಾರ ರಾಜ್ಯದ ಜಿಡಿಪಿಯಲ್ಲಿ ತಯಾರಿಕೆ ಅಥವಾ ಉತ್ಪಾದನಾ ವಲಯದ (Manufacturing Sector) ಪಾಲು ಶೇಕಡಾ 13.3ರಷ್ಟಿದ್ದು, ಕೈಗಾರಿಕಾ ವಲಯದ ಪಾಲು ರಾಷ್ಟ್ರೀಯ ಸರಾಸರಿಗಿಂತಲೂ (ಶೇಕಡಾ 27.7) ಕಡಿಮೆ ಇದೆ ಶೇಕಡಾ 19) . ತಳಸಮಾಜದಲ್ಲಿ ಜನಜೀವನ ಮತ್ತು ದುಡಿಯುವ ವರ್ಗಗಳ ಜೀವನೋಪಾಯ ಮಾರ್ಗಗಳು ಸುಗಮವಾಗಬೇಕಾದರೆ, ತಯಾರಿಕಾ ವಲಯದಲ್ಲಿ ಉತ್ಪಾದನೆ ಹೆಚ್ಚಾಗುವುದು ಅತ್ಯವಶ್ಯ. ಕೇಂದ್ರದ ಆರ್ಥಿಕ ನೀತಿಗಳಲ್ಲೂ ಈ ಲೋಪವನ್ನು ಗುರುತಿಸಲಾಗುತ್ತಿದೆ. ಈ ಲೋಪವೇ ತಳಸಮಾಜದ ಜನಸಾಮಾನ್ಯರ ಬಳಿ ನಗದು ಇಲ್ಲದಂತೆ ಮಾಡುತ್ತದೆ, ಅವರ ಖರ್ಚು ಮಾಡುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಮತ್ತು ಆರ್ಥಿಕತೆಯಲ್ಲಿ ಬೇಡಿಕೆಯನ್ನು ತಗ್ಗಿಸುತ್ತದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯ ಜನಪ್ರಿಯತೆ ಮತ್ತು ಸಕಾರಾತ್ಮಕ ಕೊಡುಗೆಯನ್ನು ಈ ದೃಷ್ಟಿಯಿಂದಲೇ ವಿವೇಚಿಸಬೇಕಿದೆ.
ಸುಸ್ಥಿರ ಬದುಕು ಮತ್ತು ಭವಿಷ್ಯದತ್ತ
ಆದರೆ ಈ ಗ್ಯಾರಂಟಿ ಯೋಜನೆಗಳು ತಳಸಮಾಜದಲ್ಲಿ ಸುಸ್ಥಿರ ಬದುಕು ರೂಪಿಸಲು ನೆರವಾಗುವುದಿಲ್ಲ. ದುಡಿಯುವ ಜನರ ನಿತ್ಯ ಜೀವನದ ಅವಶ್ಯಕತೆಗಳನ್ನು ತಕ್ಕ ಮಟ್ಟಿಗೆ ಪೂರೈಸುವ ಮೂಲಕ ಬಡತನ, ಹಸಿವು ಮತ್ತು ವಸತಿ ಸಮಸ್ಯೆಗಳನ್ನು ಸರಿದೂಗಿಸುತ್ತವೆ. ರಾಜ್ಯದ ಪ್ರಮುಖ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಗಿಗ್ ಕಾರ್ಮಿಕರ ಸಂಖ್ಯೆ ಇದನ್ನೇ ಸೂಚಿಸುತ್ತದೆ. ಓಲಾ, ಊಬರ್, ರಾಪಿಡೋ, ಅಮೆಜಾನ್ ಮೊದಲಾದ ಉದ್ಯಮಗಳಲ್ಲಿ ಚಾಲನೆ ಮತ್ತು ಸರಕು ವಿತರಣೆಯ ಕಾಯಕವನ್ನು (Delivery jobs) ನಿರ್ವಹಿಸುವ ಯುವ ಸಮುದಾಯ , ಉನ್ನತ ಪದವಿ ಶಿಕ್ಷಣ ಪಡೆದಿದ್ದರೂ, ನಿಶ್ಚಿತ ಉದ್ಯೋಗ ಮತ್ತು ಸುಸ್ಥಿರ ಭವಿಷ್ಯದ ಸಾಧ್ಯತೆಗಳೇ ಇಲ್ಲದೆ ತಮ್ಮ ಜೀವನ ಸಾಗಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಔಪಚಾರಿಕ ವಲಯದಲ್ಲೂ ಶಿಕ್ಷಣ ಕ್ಷೇತ್ರದ ಬೋಧಕ ಮತ್ತು ಬೋಧಕೇತರ ಕೆಲಸಗಳು ಗುತ್ತಿಗೆ ಆಧಾರದಲ್ಲಿ ಒದಗಿಸಲಾಗುತ್ತಿದ್ದು, ಲಕ್ಷಾಂತರ ಸಂಖ್ಯೆಯ ಅತಿಥಿ ಉಪನ್ಯಾಸಕ/ಶಿಕ್ಷಕರು ಖಾಯಮಾತಿಗಾಗಿ ಹೋರಾಡುತ್ತಿದ್ದಾರೆ.

ಆರೋಗ್ಯ ವಲಯದಲ್ಲಿ ದುಡಿಯುವ ಲಕ್ಷಾಂತರ ಆಶಾ ಕಾರ್ಯಕರ್ತೆಯರು, ಸಾಮಾಜಿಕ ವಲಯದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಲ್ಪ ಆದಾಯ ಮತ್ತು ಗುತ್ತಿಗೆ ಪದ್ಧತಿಯಿಂದ ಉಂಟಾಗುವ ಅನಿಶ್ಚಿತ ಭವಿಷ್ಯದ ಪರಿಣಾಮವಾಗಿ, ಸುಸ್ಥಿರ ಬದುಕಿನಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಕೃಷಿ ಕಾರ್ಮಿಕರು, ಕುಶಲ ಕರ್ಮಿಗಳು ಮತ್ತು ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ನಗರಗಳಿಗೆ ನಿರಂತರ ವಲಸೆ ಹೋಗುವ ಅನೌಪಚಾರಿಕ ವಲಯದ ಕಾರ್ಮಿಕರು, ಅಂತಿಮವಾಗಿ ರಸ್ತೆ ಹೆದ್ದಾರಿ, ಮೇಲ್ಸೇತುವೆ, ಮೆಟ್ರೋ ಮತ್ತಿತರ ನಿರ್ಮಾಣ ಕಾಮಗಾರಿಗಳನ್ನು ಆಶ್ರಯಿಸುವುದು ಅನಿವಾರ್ಯವಾಗುತ್ತದೆ. ಈ ಬೃಹತ್ ಶ್ರಮಜೀವಿ ವರ್ಗಗಳಿಗೆ ಅಗತ್ಯವಾದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸುರಕ್ಷತೆಯನ್ನು ಕಾನೂನಾತ್ಮಕವಾಗಿ ಒದಗಿಸುವಲ್ಲಿ ಸರ್ಕಾರವು ಹೆಚ್ಚು ಕ್ರಿಯಾಶೀಲವಾಗಿ ಯೋಚಿಸಬೇಕಿದೆ.
GIM ಸೃಷ್ಟಿಸುವ ಬಂಡವಾಳ ಹೂಡಿಕೆಯ ಭ್ರಮಾಲೋಕದಲ್ಲಿ ಸಾರ್ವಜನಿಕ ಗಣನೆಗೂ ಬರದೆ ಹೋಗುವ ಮತ್ತೊಂದು ಅಂಶ ಎಂದರೆ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಔದ್ಯಮಿಕ ಸ್ಥಾವರಗಳಿಗಾಗಿ ತಮ್ಮ ಭೂಮಿ ಕಳೆದುಕೊಳ್ಳುವ ಸಣ್ಣ-ಅತಿ ಸಣ್ಣ ರೈತರ ಬವಣೆ. ಕೈಗಾರಿಕಾ/ಔದ್ಯಮಿಕ ವಲಯಗಳನ್ನು ಸ್ಥಾಪಿಸಲು ರಾಜ್ಯದ ಸರ್ಕಾರಿ ಸಂಸ್ಥೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಲಿ (KIADB) ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡದೆ ಸತಾಯಿಸುವುದು ಸಾಮಾನ್ಯ ಸಂಗತಿ. ಮೈಸೂರು ಬಳಿಯ ಕೋಚನಹಳ್ಳಿ, ಅಳಗಂಚಿ ಮೊದಲಾದ ಗ್ರಾಮಗಳ ರೈತರು ವರ್ಷಗಳಿಂದ ತಾವು ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಹೋರಾಡುತ್ತಲೇ ಇದ್ದಾರೆ. ಔದ್ಯಮಿಕ/ಕೈಗಾರಿಕಾ ನೀತಿಯನ್ನು ರೂಪಿಸುವ ಸರ್ಕಾರಗಳು ಇಲ್ಲಿ ಅಭಿವೃದ್ಧಿಯ ಸಾಮಾಜಿಕ ವೆಚ್ಚವನ್ನು (Social Costs) ಪರಿಗಣಿಸದೆ ಇರುವುದು ನವ ಉದಾರವಾದದ ಒಂದು ಲಕ್ಷಣ.

ಹಾಗಾಗಿ ಭೂಮಿ ಕಳೆದುಕೊಂಡ ರೈತಾಪಿ ವಲಸೆ ಕಾರ್ಮಿಕರಾಗಿ ಪರಿವರ್ತನೆಯಾದರೆ, ಅವರ ಕುಟುಂಬಗಳು ತಮ್ಮ ಆರ್ಥಿಕ ನೆಲೆಯನ್ನೇ ಕಳೆದುಕೊಳ್ಳುತ್ತವೆ. ಇದರಿಂದ ಮಕ್ಕಳ ಶಿಕ್ಷಣ, ಆರೋಗ್ಯ ಪಾಲನೆ, ಪೌಷ್ಟಿಕತೆ ಮತ್ತು ಇತರ ಸಾಮಾಜಿಕ ಬೆಳವಣಿಗೆಗಳು ಕುಂಠಿತವಾಗುತ್ತವೆ. ಹೆದ್ದಾರಿ/ಸೇತುವೆ/ಮೆಟ್ರೋ ಇತ್ಯಾದಿಗಳಿಗಾಗಿ ರಸ್ತೆ ಬದಿಯ ಭೂಮಿಯನ್ನು ಮತ್ತು ಗಣಿಗಾರಿಕೆಯಂತಹ ಉದ್ಯಮಗಳಿಗೆ ಅರಣ್ಯ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರಗಳು ಇಲ್ಲಿಯೂ ಸಹ ತಮ್ಮ ಮೂಲ ಆದಾಯ ಮತ್ತು ಭೌತಿಕ ನೆಲೆ ಕಳೆದುಕೊಳ್ಳುವ ಬಡ ಕುಟುಂಬಗಳ ಭವಿಷ್ಯದ ಬಗ್ಗೆ ಚಿಂತಿಸುವುದು ಕಡಿಮೆ. ಇಲ್ಲಿ ಸಾಮಾಜಿಕ ವೆಚ್ಚಗಳ (Social Costs) ಬಗ್ಗೆ ಆಲೋಚನೆಯನ್ನೇ ಮಾಡದ ಸರ್ಕಾರಗಳು, ಕೇವಲ ಪರಿಹಾರ ಮತ್ತು ಪುನರ್ವಸತಿಯನ್ನೇ ಅಂತಿಮ ನ್ಯಾಯ ಎಂದು ಭಾವಿಸುತ್ತವೆ. ಇದರ ನೇರ ಪರಿಣಾಮವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಅರಣ್ಯಗಳಿಂದ ಹೊರಹಾಕಲ್ಪಟ್ಟಿರುವ ಸಾವಿರಾರು ಆದಿವಾಸಿ ಕುಟುಂಬಗಳ ನಡುವೆ ಸ್ಪಷ್ಟವಾಗಿ ಗುರುತಿಸಬಹುದು.
ತಳಸಮಾಜದ ದೃಷ್ಟಿಯಿಂದ ನೋಡಿದಾಗ
ಈ ದೃಷ್ಟಿಯಿಂದ ನೋಡಿದಾಗ ಸರ್ಕಾರಗಳು ಕಾಲಕಾಲಕ್ಕೆ ನಡೆಸುವ GIMಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಂಡವಾಳ ಹೂಡಿಕೆಯನ್ನು ಗಳಿಸಬಹುದಾದರೂ, ಈ ಹೂಡಿಕೆಯಿಂದ ತಳಸಮಾಜದ ಜನಜೀವನ ಮತ್ತು ಅಲ್ಲಿನ ಶ್ರಮಜೀವಿಗಳ ಜೀವನೋಪಾಯ ಉತ್ತಮವಾಗುತ್ತದೆಯೇ ಎಂಬ ಪ್ರಶ್ನೆ ಕಾಡಲೇಬೇಕಿದೆ. ಉದ್ಯೋಗ ಮತ್ತು ಕೂಲಿಯನ್ನು ದುಡಿಮೆ ಮಾಡುವ ವ್ಯಕ್ತಿಯ ದೃಷ್ಟಿಯಿಂದ ಮಾತ್ರ ನೋಡದೆ ಆತನ/ಆಕೆಯ ಮೇಲೆ ಅವಲಂಬಿಸಿರುವ ಕುಟುಂಬ, ಮಕ್ಕಳು, ಹಿರಿಯ ನಾಗರಿಕರ ಭವಿಷ್ಯದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಮಾನವೀಯ ಅಂಶಗಳಿಗೆ ಸ್ಥಾನವೇ ಇರುವುದಿಲ್ಲ. ನವ ಉದಾರವಾದ ಬಂಡವಾಳದ ಈ ಕ್ರೌರ್ಯಕ್ಕೆ ಹೊಸ ಆಯಾಮಗಳನ್ನು ನೀಡುತ್ತಿರುವುದು ಕಣ್ಣಿಗೆ ಕಾಣುವ ವಾಸ್ತವ.

GIM ಗಳು ಮೇಲ್ನೋಟಕ್ಕೆ ಕೋಟ್ಯಂತರ ರೂಗಳ ಬಂಡವಾಳ ಹೂಡಿಕೆಯ ರೋಚಕ ಜಗತ್ತನ್ನು ಜನಸಾಮಾನ್ಯರ ಮುಂದಿರಿಸುತ್ತವೆ. ಆದರೆ ಭವಿಷ್ಯದಲ್ಲಿ ಈ ಭ್ರಮೆಯೆಲ್ಲವೂ ಕಳಚುತ್ತಾ, ತಳಸಮಾಜದ ಶ್ರಮಜೀವಿಗಳ ಬದುಕು ಮತ್ತು ಜೀವನೋಪಾಯಗಳು ದುಸ್ತರವಾಗುತ್ತಲೇ ಸಾಗುತ್ತದೆ. ಬಂಡವಾಳ ಹೂಡಿಕೆಯಂತೆಯೇ ಈ ಪ್ರಕ್ರಿಯೆಯೂ ಸಹ ಜಾಗತಿಕ ಲಕ್ಷಣವಾಗಿದ್ದು, ಟ್ರಂಪ್ 2 ಆಳ್ವಿಕೆಯಲ್ಲಿ ʼಅಮೆರಿಕನ್ನರಿಗಾಗಿ ಅಮೆರಿಕʼ ಘೋಷಣೆ ಜನಪ್ರಿಯವಾಗಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಜಾಗತೀಕರಣ ಪೂರ್ವದ ಚಿಂತನಾ ಲಹರಿ ಈಗ ಮತ್ತೊಮ್ಮೆ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಜಾಗತೀಕರಣ ಮತ್ತು ಬಂಡವಾಳಶಾಹಿಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಆದರೆ ಭಾರತ ಇದರಿಂದ ಪಾಠ ಕಲಿಯುತ್ತಿದೆಯೇ ? ದೇಶದಲ್ಲಿ ಸೃಷ್ಟಿಯಾಗುತ್ತಿರುವ ನಿರುದ್ಯೋಗ, ಮತ್ತು ಉದ್ಯೋಗವನ್ನು ಅರಸಿ ವಿದೇಶಗಳಿಗೆ ಅಕ್ರಮವಾಗಿ ವಲಸೆ ಹೋಗುತ್ತಿರುವ ಲಕ್ಷಾಂತರ ಜನರ ಸಂಖ್ಯೆಯನ್ನು ಗಮನಿಸಿದಾಗ, ನಾವು ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. GIM ಎಂಬ ಸುಂದರ ಲೋಕ ಈ ಸುಡು ವಾಸ್ತವಗಳಿಗೆ ಮುಂದಿನ ಐದು ವರ್ಷಗಳಲ್ಲಾದರೂ ಉತ್ತರ ನೀಡುತ್ತದೆಯೇ ? ಕಾದುನೋಡಬೇಕಿದೆ.

(ಕೃಪೆ : ಬಾರುಕೋಲು ಪ್ರಾಕ್ಷಿಕ )
-೦-೦-೦-೦-