ಮಹಾತ್ಮ ಗಾಂಧಿ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಕೂಡ ಹಾಜರಿದ್ದರು. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಗೈರು ಹಾಜರಾಗಿದ್ದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಜನವರಿ 30 ರಂದು 1948ರಲ್ಲಿ ಮಹಾತ್ಮ ಗಾಂಧಿಯನ್ನ ಹತ್ಯೆ ಮಾಡಿದ ದಿನ. ಮತಾಂಧ ನಾತೂರಾಮ್ ಗೋಡ್ಸೆ ಗಾಂಧೀಜಿಯನ್ನ ಗುಂಡಿಕ್ಕಿ ಕೊಲ್ತಾರೆ ಸಾಯಂಕಾಲ. ಗೋಡ್ಸೆ ಗಾಂಧಿಯನ್ನ ಗುಂಡಿಕ್ಕಿ ಕೊಂದಿರಬಹದು. ಆದರೆ ಮಹಾತ್ಮ ಗಾಂಧಿ ಮೌಲ್ಯವನ್ನ ಕೊಲ್ಲಲು ಯಾರಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಇವತ್ತು ಗಾಂಧಿ ವಿಚಾರ ಮೌಲ್ಯ ಜಗತ್ತಿನಲ್ಲೇ ಪ್ರಸ್ತುತವಾಗಿದೆ. ಮಹಾತ್ಮ ಗಾಂಧಿಯವರು ತನ್ನ ಜೀವನವೇ ಸಂದೇಶ ಎಂದಿದ್ದರು. ಅವರ ಹೋರಾಟದ ಬದುಕು ನಮಗೆ ಪ್ರೇರಣೆ. ಬಹಶಃ ಜಗತ್ತಿನಲ್ಲಿ ಸತ್ಯ ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಬೇರೆಲ್ಲೂ ಸಾಧ್ಯವಿಲ್ಲ. ಬಹಳ ದೀರ್ಘಕಾಲ ಹೋರಾಟ ನಡೆದಿದೆ, ಗಾಂಧೀಜಿ ನೇತ್ರತ್ವ ವಹಿಸಿದ್ದರು. ಹೋರಾಟ ಸತ್ಯ ಅಹಿಂಸೆಗಳಿಂದ ಕೂಡಿತ್ತು. ಸಾವಿರಾರು ಜನ ಹೋರಾಟದಲ್ಲಿ ಭಾಗಿಯಾಗಿದ್ದರು. ಮಹಾತ್ಮ ಗಾಂಧಿ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು, ಬ್ರಿಟಿಷ್ ದಾರ್ಷ್ಯದಿಂದ ಭಾರತ ಬಿಡುಗಡೆಯಾಗಿತ್ತು ಎಂದು ಮೆಲುಕು ಹಾಕಿದ್ದಾರೆ.
ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಅವರ ನೆನಪಿನಲ್ಲಿ ನಾವು ಡಿಸೆಂಬರ್ 26-27 ಎರಡು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನ ಡಿಸೆಂಬರ್ 26ರಂದು ಮಾಡಿದ್ದೆವು. ಖರ್ಗೆಯವರು ರಾಹುಲ್ ಗಾಂಧಿಯವರು ಭಾಗಿಯಾಗಿದ್ದರು. ಮನಮೋಹನ್ ಸಿಂಗ್ ಅವರ ನಿಧನದಿಂದ ಮುಂದೂಡಿದ್ದೆವು. ನಂತರ ಜನವರಿಯಲ್ಲಿ ಗಾಂಧಿ ಭಾರತ್ ಕಾರ್ಯಕ್ರಮ ಮಾಡಿದ್ದೆವು. ಅವತ್ತಿನ ಸಮಾವೇಶದ ಘೋಷವಾಕ್ಯ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಮಾಡಿದೆವು. ಗಾಂಧಿಜಿಯವರ ಪ್ರತಿಮೆಯನ್ನ ಸುವರ್ಣ ಸೌಧದಲ್ಲಿ ಅನಾವರಣ ಮಾಡಿದ್ದೆವು. ಸುರ್ಜೇವಾಲ, ಪ್ರಿಯಾಂಕಾ ಗಾಂಧಿ, ನಾನು ಎಐಸಿಸಿ ಅಧ್ಯಕ್ಷರು ಸಚಿವರು ಶಾಸಕರು ಭಾಗಿಯಾಗಿದ್ದು, ಶತಮಾನೋತ್ಸವ ಸವಿನೆನೆಪಿಗಾಗಿ ನಾವು ಇದನ್ನೆಲ್ಲಾ ಮಾಡಿದ್ದೆವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ದೇಶ ಹೇಗಿರಬೇಕು ಎಂದು ಅಂದೇ ಹೇಳಿದ್ದರು. ಗ್ರಾಮ ಸ್ವರಾಜ್ಯ ಹಳ್ಳಿ ಸ್ವಾವಲಂಬನೆ ಬಗ್ಗೆ ಅವರ ಕಲ್ಪನೆ ಆಗಿತ್ತು. ಸಣ್ಣ ಅತಿ ಸಣ್ಡ ಕೈಗಾರಿಕೆ ದೇಶದ ಆರ್ಥಿಕ ತಳಹದಿ, ಅದಕ್ಕೆ ಉತ್ತೇಜನ ಕೊಡಬೇಕೆಂದಿದ್ದರು. ಗಾಂಧಿ ಭಾರತವನ್ನ ಕಟ್ಟುವುದಕ್ಕೆ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡ್ಬೇಕು ಎಂದಿದ್ದಾರೆ
ವಿಧಾನಸೌಧದ ಎದುರು ನೆಡೆದ ಕಾರ್ಯಕ್ರಮಕ್ಕೆ ಗೈರಾಗಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಡಿ.ಕೆ ಶಿವಕುಮಾರ್, ಗಾಂಧಿ ಟೋಪಿ ಧರಿಸಿ ಹುತಾತ್ಮ ದಿನಾಚರಣೆಯಲ್ಲಿ ಭಾಗಿಯಾದರು. ಆ ಬಳಿಕ ಮಾತನಾಡಿ ಗಾಂಧಿ ಕೊಟ್ಟ ಕೊಡುಗೆ ಸ್ಮರಿಸುತ್ತಾ ಅವರ ಆದರ್ಶಗಳನ್ನ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಎರಡು ದಿನಗಳ ಐತಿಹಾಸಿಕ ಕಾರ್ಯಕ್ರಮ ಮಾಡಿದೆವು. ಗಾಂಧೀಜಿ ಉಸಿರುವ ಇಲ್ಲದಿದ್ದರೂ ಅವರ ನಡೆ ನುಡಿ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.