ಜಸ್ಟೀಸ್ ಮೈಕಲ್ ಡಿ. ಕುನ್ಹಾ ವಿರುದ್ದ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ ಕಾಂಗ್ರೆಸ್ ನಾಯಕರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣಭೈರೆಗೌಡ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಅನ್ನೋ ವಿಚಾರದ ಬಗ್ಗೆ ಮಾತನಾಡುವಾಗ ಪೊಲಿಟಿಕಲ್ ಏಜೆಂಟ್ ಎಂದಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪ.
ರಾಜ್ಯಪಾಲರಿಗೆ ದೂರು ಸಲ್ಲಿಕೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದೇವೆ. ನ್ಯಾಯಾಂಗ ತನಿಖಾ ಆಯೋಗದ ಬಗ್ಗೆ , ಕುನ್ಹಾ ಬಗ್ಗೆ ನಿಂದಿಸಿ ಕೆಟ್ಟದಾಗಿ ಮಾತನಾಡಿದ್ದಾರೆ. ಕುನ್ಹಾ ನ್ಯಾಯಾಧೀಶರಲ್ಲ, ಪೊಲಿಟಿಕಲ್ ಏಜೆಂಟ್ ಅಂದಿದ್ಧಾರೆ. ದುರುದ್ದೇಶದಿಂದ, ಚುನಾವಣಾ ದೃಷ್ಟಿಯಿಂದ ವರದಿ ನೀಡಿದ್ದಾರೆ ಎಂಬುದು ಘೋರ ಅಪರಾಧ. ಅದರಲ್ಲೂ ಜೋಷಿ ಸಾಮಾನ್ಯ ವ್ಯಕ್ತಿಯಲ್ಲ, ಕೇಂದ್ರ ಸಚಿವರು ಎಂದಿದ್ದಾರೆ.
ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು, ಆಯೋಗಗಳ ಬಗ್ಗೆ ವೈಯುಕ್ತಿಕ ಟೀಕೆ ಸರಿಯಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ದ, ಕಾನೂನು ಬಾಹಿರ ಎಂದಿರುವ ದಿನೇಶ್ ಗುಂಡೂರಾವ್, ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಮೂಡಿಸುವಂತಿಲ್ಲ. ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿ ಆದರೆ ನ್ಯಾಯಾಧೀಶರ ಬಗ್ಗೆ ಟೀಕಿಸಬಾರದು. ಆಗಸ್ಟ್‌ನಲ್ಲಿ ಮಧ್ಯಂತರ ವರದಿ ಕೊಟ್ಟಿದ್ದಾರೆ, ಈಗ ಉಪಚುನಾವಣೆ ನಡೆಯುತ್ತಿದೆ. ಅದಕ್ಕೂ ಚುನಾವಣೆಗೂ ಏನ್ ಸಂಬಂಧ..? ಎಂದು ಪ್ರಶ್ನಿಸಿದ್ದಾರೆ.
ನ್ಯಾ. ಕುನ್ನಾ ನಿಂದನೆ, ಗೌರವಕ್ಕೆ ಚ್ಯುತಿ ಬರುವ ಹೇಳಿಕೆ ನೀಡುವುದು ಒತ್ತಡ ಹೇರುವ ಕೆಲಸ.ಆಯೋಗಕ್ಕೆ ಭಯ ಹುಟ್ಟಿಸುವ ಕೆಲಸ ಇದು.ತನಿಖಾ ಹಂತದಲ್ಲಿ ಯಾರೂ ಈ ರೀತಿ ಮಾತನಾಡಬಾರದು. ರಾಜ್ಯಪಾಲರಿಗೆ ಇವೆಲ್ಲ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದ್ದೇವೆ.ನ್ಯಾಯಾಧೀಶರ ಮಾನಹರಣ ಮಾಡಿದ ಜೋಷಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಮೂಲಕ ಒಂದು ಸಂದೇಶ ಕೊಡಬೇಕು.
ಹೀಗೆ ಆದರೆ ಯಾವ ಸ್ವಾಯತ್ತ ಸಂಸ್ಥೆಗಳು ಉಳಿಯಲ್ಲ. ಉನ್ನತ ಸ್ಥಾನದಲ್ಲಿರುವ ನಾವು, ಇಂತಹ ಸಂಸ್ಥೆಗಳ, ಆಯೋಗಗಳ ಗೌರವ ಕಾಪಾಡಬೇಕು. ರಾಷ್ಟಪತಿಗಳ ಗಮನಕ್ಕೂ ಇದನ್ನ ತರಬೇಕು. ಕೇಂದ್ರ ಸರ್ಕಾರ ನಮ್ಮದೇ ಇದೆ ಅಂತ ಏನ್ ಬೇಕಾದ್ರು ಮಾಡಬಹುದು ಅಂದುಕೊಂಡಿದ್ದಾರೆ.ಕೂಡಲೇ ಕ್ಷಮೆಯಾಚಿಸಿ ಮುಂದೆ ಆ ರೀತಿ ಹೇಳಲ್ಲ ಅಂತ ಕ್ಷಮೆ ಯಾಚಿಸಬೇಕು ಅಂತಾ ಒತ್ತಾಯಿಸಿದ್ದಾರೆ.