ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೊದಲ ಆರೋಪಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನವೆಂಬರ್ 6ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಆರೋಪಿಯಾಗಿ ವಿಚಾರಣೆ ಎದುರಿಸಬೇಕಾಗಿ ಬಂದಿದೆ.
ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್ ಬಗ್ಗೆ ಹಾವೇರಿ ಜಿಲ್ಲೆ ಶಿಗ್ಗಾವಿ ಪ್ರಚಾರಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಹುರುಳಿಕೊಪ್ಪಿ ಗ್ರಾಮದಲ್ಲಿ ಪ್ರತಿಕ್ರಿಯಿಸಿದ್ದು, ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ಏನ್ ಮೂಡಾ ರೀ.. ಎಂದ ಸಿಎಂ ಸಿದ್ದರಾಮಯ್ಯ, ಆಯ್ತು ರೀ, ನೋಟಿಸ್ ಕೊಟ್ಟರೆ ವಿಚಾರಣೆಗೆ ಹೋಗ್ತೇನೆ ಅಂತ ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡ ಇದೆ ಅಂತಾ ದೂರು ಸಲ್ಲಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಮಾತನಾಡಿ, ನಾನು ಆರಂಭದಿಂದಲೂ ಈ ಪ್ರಕರಣ ಸಂಬಂಧ ಒತ್ತಾಯ ಮಾಡಿಕೊಂಡು ಬಂದಿದ್ದೇನೆ. ಕೊನೆಗೂ ಸಿದ್ದರಾಮಯ್ಯ ಅವರ ವಿಚಾರಣೆ ನಡೆಸುತ್ತಿರುವುದು ಖುಷಿ ತಂದಿದೆ.ಕಾನೂನಿ ಮುಂದೆ ಎಲ್ಲರೂ ಸಮಾನರು.. ಲೋಕಾಯುಕ್ತ ಅಧಿಕಾರಿಗಳಿಗೆ ನಾನು 50 ಪ್ರಶ್ನೆಗಳ ಮನವಿ ಪತ್ರ ಕೊಟ್ಟಿದ್ದೇನೆ.. ಅದೇ ಪ್ರಶ್ನೆಗಳು ತನಿಖೆಗೆ ಸಹಕಾರಿ ಆಗಲಿವೆ ಅಂತ ಹೇಳಿದ್ದಾರೆ.
ಇನ್ನು ಮುಡಾ ಹಗರಣದ ವಿಚಾರಣೆಗಾಗಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಎಸ್‌ಪಿ ನೋಟಿಸ್ ಕೊಟ್ಟ ಬೆನ್ನಲ್ಲೇ ಮಂಗಳವಾರ ಹೈಕೋರ್ಟ್‌ನಲ್ಲೂ ಮುಡಾ ಅರ್ಜಿ ವಿಚಾರಣೆಗೆ ಬರಲಿದೆ. ಮುಡಾ ಪ್ರಕರಣವನ್ನು ಲೋಕಾಯುಕ್ತರ ಬದಲು ಸಿಬಿಐ ನಡೆಸಬೇಕು ಎಂದು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಲಿದೆ.. ಸ್ನೇಹಮಯಿ ಕೃಷ್ಣ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ.