• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, February 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಾತಿ ಪ್ರಜ್ಞೆಯನ್ನು ಅಣಕಿಸುವ ಮರಕುಂಬಿ ತೀರ್ಪು ಭವಿಷ್ಯದಲ್ಲಿ ಭರವಸೆ ಹುಟ್ಟಿಸಬಹುದೇ ?

ನಾ ದಿವಾಕರ by ನಾ ದಿವಾಕರ
October 27, 2024
in Top Story, ಕರ್ನಾಟಕ, ಜೀವನದ ಶೈಲಿ, ರಾಜಕೀಯ, ವಿಶೇಷ, ಶೋಧ
0
ಜಾತಿ ಪ್ರಜ್ಞೆಯನ್ನು ಅಣಕಿಸುವ ಮರಕುಂಬಿ ತೀರ್ಪು ಭವಿಷ್ಯದಲ್ಲಿ ಭರವಸೆ ಹುಟ್ಟಿಸಬಹುದೇ ?
Share on WhatsAppShare on FacebookShare on Telegram

—-ನಾ ದಿವಾಕರ—-

ADVERTISEMENT

ಕಂಬಾಲಪಲ್ಲಿಯ ಕತ್ತಲು ಕೊಪ್ಪಳದಲ್ಲಿ ನೀಗಲಿದೆಯೇ ?

=====

 ಕೊಪ್ಪಳದ ಮರಕುಂಬಿ ಪ್ರಕರಣದ ಚಾರಿತ್ರಿಕ ತೀರ್ಪು ದಲಿತ ಸಮುದಾಯದಲ್ಲಿ ಸಂಚಲನ ಉಂಟುಮಾಡಿದೆ. ಯಾವುದೇ ಘಟನೆಯೊಂದರಲ್ಲಿ ನ್ಯಾಯಾಂಗದ ಒಂದೇ ತೀರ್ಪಿನಲ್ಲಿ 101 ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಉದಾಹರಣೆಗಳು ನಮ್ಮ ನಡುವೆ ಇಲ್ಲ. ಈ ಪ್ರಕರಣದಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಕೇವಲ ಚಾರಿತ್ರಿಕವಷ್ಟೇ ಅಲ್ಲ, ಇಂದಿಗೂ ಜಾತಿ ದೌರ್ಜನ್ಯದಿಂದ ನಲುಗುತ್ತಿರುವ ವಿಕಸಿತ ಭಾರತದಲ್ಲಿ ಇದೊಂದು ಮೈಲಿಗಲ್ಲು ಸಹ ಆಗಬಹುದು.  ಪ್ರತಿ ಅರು ನಿಮಿಷಕ್ಕೊಂದು ದೌರ್ಜನ್ಯ ಎದುರಿಸುತ್ತಿರುವ ದಲಿತ ಸಮುದಾಯಕ್ಕೆ ಈ ತೀರ್ಪಿನಲ್ಲಿ ಒಂದು ಪರಿವರ್ತಕ ಭವಿಷ್ಯದ ಹೊಳಹು ಕಂಡರೂ ಅಚ್ಚರಿಯೇನಿಲ್ಲ. ಏಕೆಂದರೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯೊಬ್ಬಳನ್ನು ನಡುರಾತ್ರಿ ಸುಟ್ಟುಹಾಕಿ, ಅಪರಾಧಿಗಳನ್ನು ರಕ್ಷಿಸಿದ ಸಮಾಜ ನಮ್ಮದು.

 ಮರಕುಂಬಿ ಪ್ರಕರಣದ ಚಾರಿತ್ರಿಕ ತೀರ್ಪು ನೀಡಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನಿತ್ಯ ದೌರ್ಜನ್ಯಕ್ಕೊಳಗಾಗುತ್ತಿರುವ ತಳಸಮುದಾಯಗಳಿಗೆ ಒಂದು ಸಣ್ಣ ಕಿಟಕಿಯನ್ನಂತೂ ತೆರೆದಿದೆ. ಈ ಕಿಟಕಿಯಿಂದ ಒಳಬರುವ ನ್ಯಾಯದ ಹೊಂಗಿರಣಗಳು ಭವಿಷ್ಯದ ಸಮಾಜದ ಮೇಲೆ ಬೆಳಕು ಚೆಲ್ಲುವುದೋ ಅಥವಾ ಇದೂ ಒಂದು ಮರೆತುಹೋಗಬಹುದಾದ ಪ್ರಸಂಗವಾಗಿ ಪರ್ಯವಸಾನ ಹೊಂದುವುದೋ ಕಾದು ನೋಡಬೇಕಿದೆ. ಈ ಪ್ರಕರಣದ ಮೂಲ ಇರುವುದು ಜಾತಿ ವ್ಯವಸ್ಥೆ ಇಂದಿಗೂ ಕಾಪಾಡಿಕೊಂಡು ಬಂದಿರುವ ಸಾಮಾಜಿಕ ಬಹಿಷ್ಕಾರ ಮತ್ತು ಊಳಿಗಮಾನ್ಯ ಪದ್ಧತಿಯ ಅಮಾನುಷ ಆಚರಣೆಯಲ್ಲಿ.  ಚಿತ್ರಮಂದಿರವೊಂದರಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕಲಹದಲ್ಲಿ 150ಕ್ಕೂ ಹೆಚ್ಚು ಸವರ್ಣೀಯರಿಂದ ಬೆಂಕಿಗೆ ಆಹುತಿಯಾಗಿದ್ದು ಮರಕುಂಬಿ ಗ್ರಾಮದ ದಲಿತ ಕೇರಿಯ ಗುಡಿಸಲುಗಳು. ಇದಕ್ಕೂ ಮುನ್ನ ದಲಿತರಿಗೆ ಕ್ಷೌರದಂಗಡಿಯಲ್ಲಿ ಮತ್ತು ಹೋಟೆಲುಗಳಲ್ಲಿ ಪ್ರವೇಶವನ್ನು ನಿಷೇಧಿಸಿದ್ದ ಘಟನೆಯೂ ನಡೆದಿತ್ತು.

 ಭರವಸೆಯ ಬೆಳಕು ಕಂಡಾಗ

 ಸಹಜವಾಗಿಯೇ ದಲಿತ ಸಮುದಾಯದಲ್ಲಿ ಕೊಪ್ಪಳದ ಮರಕುಂಬಿ ತೀರ್ಪು ಒಂದು ಹೊಸ ಸಾಮಾಜಿಕ ನ್ಯಾಯದ ಭರವಸೆಯ ಕಿರಣಗಳನ್ನು ಮೂಡಿಸಿದೆ, ಉತ್ಸಾಹವನ್ನು ಉಕ್ಕಿಸಿದೆ. ತೀರ್ಪು ನೀಡಿದ ನ್ಯಾಯಾಧೀಶರನ್ನು ವೈಯುಕ್ತಿಕವಾಗಿ ಆರಾಧಿಸುವ ಮಟ್ಟಿಗೆ ಈ ತೀರ್ಪು ದಲಿತರಲ್ಲಿ ಒಂದು ಹುರುಪು ಮೂಡಿಸಿರುವುದನ್ನೂ ಸಹ ಅತಿರೇಕ ಎನ್ನಲಾಗುವುದಿಲ್ಲ. ಆದರೆ ದಲಿತ ಸಮುದಾಯ ಏಕೆ ಹೀಗೆ ಸಂಭ್ರಮಿಸುತ್ತದೆ ಎಂದು ಯೋಚಿಸಿದಾಗ ವರ್ತಮಾನದ ನ್ಯಾಯ ವ್ಯವಸ್ಥೆ ಮತ್ತು ರಾಜಕೀಯ ಪರಿಸರದತ್ತ ಗಮನಹರಿಯುತ್ತದೆ. ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಸಂವಿಧಾನದ ಹಾಳೆಗಳಲ್ಲಿ, ಕಾಯ್ದೆ ಕಾನೂನು ಚೌಕಟ್ಟುಗಳಲ್ಲಿ ಕಳೆದುಹೋಗುತ್ತಿರುವ ವಿಕಸಿತ  ಭಾರತದ ಸಮಾಜದಲ್ಲಿ ಮಹಿಳೆಯರ ಮೇಲೆ, ಅಸ್ಪೃಶ್ಯರ-ದಲಿತರ ಮೇಲೆ-ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗುವುದೇ ಒಂದು ಸಂಭ್ರಮಿಸುವ ವಾತಾವರಣ ಮಾಡಿಸುವುದು ಸಹಜ.

 ಕಣ್ಣೆದುರಿನಲ್ಲೇ ನಡೆಯುವ ಅಮಾನುಷ ದೌರ್ಜನ್ಯಗಳಿಗೆ ಶಿಕ್ಷೆಯಾಗುವುದು ಅನ್ಯಾಯಕ್ಕೊಳಗಾದವರಲ್ಲಿ ಸಮಾಧಾನದ ನಿಟ್ಟುಸಿರು ಮೂಡಿಸುವುದು ಸ್ವಾಭಾವಿಕ ಎನ್ನಬಹುದು. ಆದರೆ ಅದು ಅಪರೂಪದ ಘಟನೆಯಂತೆ ಸಂಭ್ರಮಿಸುವಂತಾದರೆ ನಮ್ಮ ನಾಗರಿಕತೆಯಲ್ಲಿ ಏನೋ ದೋ಼ಷವಿದೆ ಎಂದೇ ಅರ್ಥ ಅಲ್ಲವೇ ? ಸಾಮಾಜಿಕ ತಾಣಗಳಲ್ಲಿ ಕಾಣುವ ಈ ಸಂವೇದನಾಶೀಲ ಸಂಭ್ರಮಾಭಿವ್ಯಕ್ತಿಗಳ ಹಿಂದೆ ನಮ್ಮ ಜಾತಿಗ್ರಸ್ತ ಸಮಾಜ ಕಟ್ಟಿಕೊಟ್ಟಿರುವ ಅಮಾನುಷತೆ ಮತ್ತು ಸಾಂಸ್ಕೃತಿಕ ಜಡತ್ವವನ್ನು ಕಾಣಬೇಕಿದೆ. ದಲಿತ ಸಂತ್ರಸ್ತರು ದೇಶಾದ್ಯಂತ ನ್ಯಾಯಕ್ಕಾಗಿ ಎಷ್ಟು ಹಂಬಲಿಸುತ್ತಿದ್ದಾರೆ ಎನ್ನುವುದರ ಸಂಕೇತವಾಗಿ ಈ ಬೆಳವಣಿಗೆಯನ್ನು ನೋಡಬೇಕಿದೆ. ಮತ್ತೊಂದೆಡೆ ಮರಕುಂಬಿ ತೀರ್ಪು ಹೊರಬಿದ್ದ ಕೂಡಲೇ ಸಮಾಜದ ಮೇಲ್ವರ್ಗದಲ್ಲಿ ಮೂಡಿರುವ ಪ್ರಶ್ನೆ ಈ ಅಮಾನುಷ ದಾಳಿ ಮಾಡಿದವರು ಯಾರು ಎನ್ನುವುದು. ಸವರ್ಣೀಯರಿಂದ ನಡೆದಿದೆ ಎನ್ನಲಾದ ಈ ಪಾಶವೀಕೃತ್ಯದಲ್ಲಿ ತಳಸಮುದಾಯಗಳ ಒಂದು ವರ್ಗವೂ ಇರುವುದು ಅಚ್ಚರಿ ಮೂಡಿಸದಿದ್ದರೂ, ಚಿಂತೆಗೆ ಹಚ್ಚಬೇಕಲ್ಲವೇ ? ಅಥವಾ ಈ ದಾಳಿಕೋರ ಸವರ್ಣೀಯರ ಪೈಕಿ ʼ ನಮ್ಮವರಿಲ್ಲ ʼ ಎಂಬ ಸಮಾಧಾನ ಇರಬೇಕೇ ?

ಇದು ವರ್ತಮಾನದ ಭಾರತದಲ್ಲಿ ನಮ್ಮನ್ನು ಕಾಡಬೇಕಾದ ಗಹನವಾದ ಪ್ರಶ್ನೆ. ಏಕೆಂದರೆ 77 ವರ್ಷಗಳ ಶೈಕ್ಷಣಿಕ-ತಂತ್ರಜ್ಞಾನ-ವೈಜ್ಞಾನಿಕ-ಬೌದ್ಧಿಕ ಮುನ್ನಡೆಯ ಹೊರತಾಗಿಯೂ ಇಂದಿಗೂ ಸಹ ಪ್ರಾಚೀನ ಕಾಲದ ಅಮಾನುಷ ದೌರ್ಜನ್ಯಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಭಾರತೀಯ ಸಮಾಜ ಪಡೆದಿರುವ ಅತ್ಯುನ್ನತ ಶಿಕ್ಷಣವಾಗಲೀ, ಸಾಂಸ್ಕೃತಿಕ ಅರಿವು ಅಥವಾ ಪ್ರಜ್ಞೆಯಾಗಲೀ ತಳಸಮುದಾಯಗಳ-ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆ, ದಹನ, ತಾರತಮ್ಯ, ದೌರ್ಜನ್ಯಗಳನ್ನು ತಪ್ಪಿಸಲು ನೆರವಾಗಿಲ್ಲ. ಇದನ್ನು ತಡೆಗಟ್ಟಲೆಂದೇ ರೂಪಿಸಲಾಗಿರುವ ಅಸಂಖ್ಯಾತ ಕಾನೂನುಗಳು ಅನೇಕ ಸಂದರ್ಭಗಳಲ್ಲಿ ನಿಷ್ಕ್ರಿಯವಾಗಿರುವುದನ್ನು ಸಹ ನಾವು ಗಮನಿಸುತ್ತಲೇ ಬಂದಿದ್ದೇವೆ. ಇಂತಹ ನಿದರ್ಶನಗಳು ಹೇರಳ. 20 ವರ್ಷಗಳ ಹಿಂದೆ ನಡೆದ ಕಂಬಾಲಪಲ್ಲಿ ಘಟನೆ ಇದಕ್ಕೊಂದು ಚಾರಿತ್ರಿಕ ನಿದರ್ಶನ.

 ಹಾಥ್ರಸ್‌, ಉನ್ನಾವೋ, ಭವಾರಿ ದೇವಿ, ಆಂಧ್ರದ ಕರಮಚೇಡು, ಚುಂಡೂರು, ಬಿಹಾರ ಲಕ್ಷ್ಮಣಪುರ ಬಾತೆ, ಬತಾನಿತೊಲ, ಬೆಲ್ಚಿ, ಪಾರಸ್‌ಬಿಗಾ ಹೀಗೆ ಶೋಷಿತ ತಳಸಮುದಾಯಗಳ ಮೇಲೆ ನಡೆದ ಪೈಶಾಚಿಕ ದಾಳಿಗಳಲ್ಲಿ ಸಂತ್ರಸ್ತರಿಗೆ ದೊರೆತ ನ್ಯಾಯ ಅಂತಿಮ ನ್ಯಾಯವೇನಲ್ಲ. ಗುಜರಾತ್‌ನ ಬೆಸ್ಟ್‌ ಬೇಕರಿ ಪ್ರಕರಣವನ್ನೂ ಇಲ್ಲಿ ಉಲ್ಲೇಖಿಸಬಹುದು. ಈ ಬಹುತೇಕ ಘಟನೆಗಳಲ್ಲಿ ಕೆಳಹಂತದ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಉನ್ನತ ನ್ಯಾಯಾಲಯಗಳು ಕಡಿಮೆಗೊಳಿಸಿವೆ ಅಥವಾ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಿವೆ. ಈ ದೃಷ್ಟಿಯಿಂದ ನೋಡಿದಾಗ ಕೊಪ್ಪಳದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಈ ತೀರ್ಪು ಅಂತಿಮ ನ್ಯಾಯ ಅಲ್ಲ ಎಂದೇ ಹೇಳಬಹುದು. ಕೆಳಹಂತದಿಂದ ಮೇಲಿನವರೆಗೆ ಪ್ರಯಾಣಿಸುವ ಹಾದಿಯಲ್ಲಿ ಈ ಪ್ರಕರಣವೂ ಇತಿಹಾಸದ ವಿಸ್ಮೃತಿಗೆ ಜಾರಿಬಿಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ನ್ಯಾಯಾಂಗವನ್ನು ದೂಷಿಸಲಾಗುವುದಿಲ್ಲ. ಇಂತಹ ಪ್ರಕರಣಗಳನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವ ಜವಾಬ್ದಾರಿ ಹೊರುವ ಸರ್ಕಾರಿ ಪ್ರಾಸಿಕ್ಯೂಷನ್‌ಗಳ ಕಾರ್ಯನಿರ್ವಹಣೆ ಇಲ್ಲಿ ಮುಖ್ಯವಾಗುತ್ತದೆ.

 ಜಾತಿ ಕೂಪದ ಅಪಸವ್ಯಗಳ ನಡುವೆ

 ಕೊಪ್ಪಳದ ತೀರ್ಪು ನಾಗರಿಕ ಸಮಾಜದ ಮುಂದೆ ಮತ್ತೊಂದು ವಾಸ್ತವವನ್ನೂ ತೆರೆದಿಟ್ಟಿದೆ. ದಲಿತರ, ಅಸ್ಪೃಶ್ಯರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನ್ಯಾಯ ದೊರೆಯಬೇಕಾದರೆ ಸಂತ್ರಸ್ತರ ಪರವಾಗಿ ನಿರಂತರವಾಗಿ ಹೋರಾಡುವ ಒಂದು ರಾಜಕೀಯ ಕ್ರಿಯಾಶೀಲತೆ ಬಹಳ ಮುಖ್ಯವಾಗುತ್ತದೆ. ತಮಿಳುನಾಡಿನ ಕೀಲ್ವನ್‌ಮಣಿ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಅಲ್ಲಿಯೂ ಸಿಪಿಎಂ ಪಕ್ಷದ ಮುಂದಾಳತ್ವದಲ್ಲಿ ನಡೆದ ಹೋರಾಟ ಅಂತಿಮ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಕೊಪ್ಪಳದಲ್ಲೂ ಸಹ ಇದೇ ಹೋರಾಟದ‍ ಛಾಯೆ ಧ್ವನಿಸಿದೆ. ಇಂತಹ ಸಾಮೂಹಿಕ ಅತ್ಯಾಚಾರ, ಹಿಂಸೆಯ ಪ್ರಕರಣಗಳಲ್ಲಿ ಇಡೀ ಒಂದು ಸಮಾಜವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಬೇಕಾದರೆ, ಆ ಸಮಾಜವನ್ನು ಎದುರಿಸುವ ತಳಮಟ್ಟದ ಐಕಮತ್ಯ ಮುಖ್ಯವಾಗಬೇಕಾಗುತ್ತದೆ. ಮತ್ತೊಂದೆಡೆ ಈ ಸಮಾಜವು ಹೊಂದಿರಬಹುದಾದ ರಾಜಕೀಯ ಪ್ರಾಬಲ್ಯ ಮತ್ತು ಸಾಮಾಜಿಕ ಆಧಿಪತ್ಯದ ಗೋಡೆಗಳನ್ನು ಭೇದಿಸುವ ಕ್ಷಮತೆಯನ್ನೂ ಹೊಂದಿರಬೇಕಾಗುತ್ತದೆ.

 ಮರಕುಂಬಿ ತೀರ್ಪನ್ನು ಜಾತಿ ಕ್ರೌರ್ಯದ ವಿರುದ್ಧದ ಒಂದು ಚಾರಿತ್ರಿಕ ಘಟ್ಟ ಎಂದು ಸ್ವಾಗತಿಸುತ್ತಲೇ, ಸಾಮಾಜಿಕ ನ್ಯಾಯದ ಪರ ದೊರೆತ ಒಂದು ವಿಜಯ ಎಂದು ಭಾವಿಸುತ್ತಲೇ, ನಾವು ಯೋಚಿಸಬೇಕಾದ್ದು ಒಂದು ಸಣ್ಣ ಗ್ರಾಮದ ತಳಮಟ್ಟದ ಸಮಾಜದಿಂದ ಇಷ್ಟು ದೊಡ್ಡ ಸಂಖ್ಯೆಯ ಅಪರಾಧಿಗಳನ್ನು ಸೃಷ್ಟಿಸಿದ ಆ ಒಂದು ಸಾಮಾಜಿಕ ಪರಿಸರದ ಬಗ್ಗೆ. ಸುಮಾರು 200 ಕುಟುಂಬಗಳನ್ನೊಳಗೊಂಡ ಮರಕುಂಬಿಯಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,  ಇಂದು ಅರ್ಧದಷ್ಟು ಸವರ್ಣೀಯರ ಸಂಸಾರಗಳು ಅಪರಾಧದ ಕಳಂಕ ಹೊತ್ತು ತಿರುಗಬೇಕಿದೆ. ಈಗ ವಿಧಿಸಿರುವ ಶಿಕ್ಷೆ ಊರ್ಜಿತವಾಗದೆ ಇದ್ದರೂ, ಈ ಸಂಸಾರಗಳಿದೆ ಅಂಟಿದ ಕಳಂಕವನ್ನು ತೊಡೆದುಹಾಕಲಾಗುವುದಿಲ್ಲ. ಇಲ್ಲಿ ಶಿಕ್ಷೆಗೊಳಗಾಗಿರುವರ ಪ್ರೊಫೈಲ್‌ ಗಮನಿಸಿದಾಗ, ಈ ಕಳಂಕಿತ ಅಪರಾಧಿಗಳು ನಮ್ಮ ಸಮಾಜ ಮತ್ತು ಸಂಸ್ಕೃತಿ ಸೃಷ್ಟಿಸಿರುವ ಶ್ರೇಣೀಕೃತ ಜಾತಿ ಕೂಪದ ಶಿಶುಗಳಾಗಿ ಕಾಣುತ್ತಾರಲ್ಲವೇ ?

ಶಿಕ್ಷೆಗೊಳಗಾದ ವ್ಯಕ್ತಿಗಳನ್ನೇ ಅವಲಂಬಿಸಿ ಬದುಕು ಸವೆಸುತ್ತಿರುವ ಹತ್ತಾರು ಕುಟುಂಬಗಳು ಬೀದಿಪಾಲಾಗಬಹುದು. ತಮ್ಮ ಮಕ್ಕಳ ಆಸರೆಯನ್ನು ಕಳೆದುಕೊಳ್ಳುವ ತಂದೆ ತಾಯಿಯರ ಬದುಕು ಮತ್ತಷ್ಟು ದುಸ್ತರವಾಗಬಹುದು. ವ್ಯಕ್ತಿಗತವಾಗಿ ಇವರಲ್ಲಿ ಹತ್ತು ವರ್ಷಗಳ ನಂತರ ಪಶ್ಚಾತ್ತಾಪವೂ ಮೂಡಿರುವ ಸಾಧ್ಯತೆಗಳಿರಬಹುದು. ಆದರೆ ಕೊಪ್ಪಳದ ಸಾಮಾಜಿಕ ವಾತಾವರಣದಲ್ಲಿ ಈ ಪರಿತಾಪದ ಸೋಂಕು ಸಹ ಇಲ್ಲದಿರುವುದು 2022ರಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಕೂಸು ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿ, 25000 ರೂ ದಂಡ ವಿಧಿಸಿದ ಘಟನೆ ಇನ್ನೂ ಮಾಸಿಲ್ಲ. ಮರಕುಂಬಿ ಘಟನೆಯಲ್ಲಿ ದಲಿತರ ಗುಡಿಸಲುಗಳನ್ನು ಸುಟ್ಟುಹಾಕಿದ ಮನಸ್ಸುಗಳೂ ಇದೇ ಕ್ರೂರ ಮನಸ್ಥಿತಿಯ ಒಂದು ಭಾಗ. ಇಂದು ಶಿಕ್ಷೆಗೊಳಗಾಗಿರುವ ಅಪರಾಧಿಗಳಲ್ಲಿ ವೈಯುಕ್ತಿಕವಾಗಿ ಈ ಪಾಶವೀ ಕ್ರೌರ್ಯವನ್ನು ಹುಡುಕುವ ಬದಲು, ಇಂತಹ ಒಂದು ಪ್ರಾಚೀನ ಮನಸ್ಥಿತಿಯ ಸಾಮಾಜಿಕ ಕ್ರೌರ್ಯವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿರುವ ಜಾತಿ ಸಮಾಜ ಮತ್ತು ಸಾಮುದಾಯಿಕ ಪ್ರಜ್ಞೆಯಲ್ಲಿ ಈ ಅಮಾನುಷತೆಯನ್ನು ಕಾಣಬೇಕಿದೆ. ಇಂತಹ ಒಂದು ಸಮಾಜದ ಪ್ರಚೋದನೆಗೊಳಗಾದ ಯುವಕರು ಇಂದು ಜೈಲುಕಂಬಿ ಎಣಿಸುವಂತಾಗಿದೆ, ಅವರ ಕುಟುಂಬಗಳು ಬೀದಿಪಾಲಾಗುವಂತಾಗಿದೆ.

 ವ್ಯಷ್ಟಿ ಸಮಷ್ಟಿ ಪ್ರಜ್ಞೆಗಳ ನಡುವೆ

 ಒಬ್ಬ ವ್ಯಕ್ತಿಯೊಳಗಿನ ಜಾತಿ ಶ್ರೇಷ್ಠತೆ ಮತ್ತು ದ್ವೇಷ ಎರಡನ್ನೂ ವ್ಯಕ್ತಿನಿಷ್ಠ ನೆಲೆಯಲ್ಲಿ ನೋಡದೆ, ಆತ ಅಥವಾ ಆಕೆ ಅನುಕರಿಸುವ ಜಾತಿ-ಧರ್ಮದ ಸಂಹಿತೆಗಳು, ಅನುಸರಿಸುವ ಧಾರ್ಮಿಕ ಗ್ರಂಥಗಳಲ್ಲಿ ನೋಡಿದಾಗ ಅಲ್ಲಿ ಇಂತಹ ಒಂದು ಜಾತಿದ್ವೇಷದ ಅಮಾನುಷತೆಯನ್ನು ಸಮಷ್ಟಿ ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ಡಾ. ಬಿ.ಆರ್.‌ ಅಂಬೇಡ್ಕರ್‌ ಸಹ ಒಂದು ಸಂದರ್ಭದಲ್ಲಿ ಇದನ್ನೇ ಹೇಳುತ್ತಾರೆ. ಮರಕುಂಬಿಯ ಘಟನೆಯನ್ನೂ ಈ ದೃಷ್ಟಿಯಿಂದಲೇ ನೋಡಬೇಕಿದೆ. ಆ ವಾತಾವರಣದಲ್ಲಿ ಇಂದಿಗೂ ಊಳಿಗಮಾನ್ಯತೆ, ಮೇಲ್ಜಾತಿ ಅಥವಾ ಸವರ್ಣೀಯ ಶ್ರೇಷ್ಠತೆಯ ಧೋರಣೆ, ಅಸ್ಪೃಶ್ಯತೆಯ ಆಚರಣೆ ಮತ್ತು ತಾರತಮ್ಯದ ಮನಸ್ಥಿತಿಗಳು ಜೀವಂತವಾಗಿದೆ ಎಂದರೆ, ಅದನ್ನು ಪೋಷಿಸುವ ರಾಜಕೀಯ-ಸಾಂಸ್ಕೃತಿಕ-ಧಾರ್ಮಿಕ ಹಾಗೂ ಜಾತೀಯ‍ ಶಕ್ತಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ. ತಳಸಮುದಾಯಗಳ ಒಳಗೇ ಜಾತಿ ತಾರತಮ್ಯದ ಬೀಜಗಳು ಇನ್ನೂ ಬೇಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಡಾ. ಬಿ.ಆರ್.‌ ಅಂಬೇಡ್ಕರ್‌ ಅವರಿಂದ ನಾವು ಕಲಿತಿರುವುದೇನು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

 ಇಂದು ಶಿಕ್ಷೆಗೊಳಗಾಗಿರುವುದು ಕೇವಲ 101 ವ್ಯಕ್ತಿಗಳಲ್ಲ. ಸ್ಮಶಾನ ಸದೃಶ ಗ್ರಾಮದಲ್ಲಿ ಶಾಶ್ವತ ಕಳಂಕದೊಂದಿಗೆ ಬದುಕುತ್ತಿರುವ ಆ ಅಪರಾಧಿಗಳ ಕುಟುಂಬಗಳ ನೂರಾರು ಸದಸ್ಯರು. ಇತ್ತ ಈಗಾಗಲೇ ದಾಳಿಗೊಳಗಾಗಿರುವ ದಲಿತ ಕುಟುಂಬಗಳೂ ಸಹ ನಾಳೆ ಏನಾಗಬಹುದು ಎಂಬ ಆತಂಕದಲ್ಲಿರುತ್ತವೆ. ಏಕೆಂದರೆ ಈ ಶಿಕ್ಷೆಗೊಳಗಾದವರು ಮುಂದೆ ಬಿಡುಗಡೆಯಾದರೆ ಮತ್ತೊಮ್ಮೆ ದಾಳಿ ಮಾಡಬಹುದೇನೋ ಎಂಬ ಭೀತಿಯೂ ದಲಿತ ಸಮುದಾಯಗಳಲ್ಲಿ ಮನೆ ಮಾಡಿರುತ್ತದೆ. ಹಂತಕರನ್ನು, ಅತ್ಯಾಚಾರಿಗಳನ್ನು, ಪಾತಕಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಸಂಸ್ಕೃತಿಯೊಂದು ಗುಜರಾತ್‌ನಿಂದ ಕರ್ನಾಟಕಕ್ಕೆ ಆಮದಾಗಿ ಬಂದಿದೆ.  ಈ ಪ್ರಕರಣದ ಅಪರಾಧಿಗಳೂ ನಾಳೆ ನಿರಪರಾಧಿಗಳಾದರೆ ಸನ್ಮಾನಿಸಲ್ಪಡಬಹುದು. ಏಕೆಂದರೆ ದಲಿತರ ಮೇಲೆ ದೌರ್ಜನ್ಯ ನಡೆಸುವುದು, ಮಹಿಳೆಯರ ಮೇಲೆ ಅತ್ಯಾಚಾರದಂತಹ ದಬ್ಬಾಳಿಕೆ ನಡೆಸುವುದು ತಮ್ಮ ಜನ್ಮ ಹಕ್ಕು ಎಂದು ಭಾವಿಸಿರುವ ಒಂದು ವಿಕೃತ ಸಮಾಜ ನಮ್ಮ ನಡುವೆ ಇನ್ನೂ ಜೀವಂತವಾಗಿದೆ.

 ಈ ಸಮಾಜಕ್ಕೆ ಅಂತಹ ಅಮಾನುಷ ಹಕ್ಕು ನೀಡಿರುವುದು ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅದನ್ನು ಇಂದಿಗೂ ನಿರ್ದೇಶಿಸಿ, ಪೋಷಿಸುವ ಧರ್ಮ ಸಂಹಿತೆಗಳು ಹಾಗೂ ಅದನ್ನು ಸಂರಕ್ಷಿಸುವ ಸಾಂಸ್ಕೃತಿಕ ಜಗತ್ತು. ಕೊಪ್ಪಳದ-ಮರಕುಂಬಿಯ ದಲಿತರು ಏಕಾಂಗಿಗಳಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಭಾರತದ ಉದ್ದಗಲಕ್ಕೂ ನಡೆಯುತ್ತಿರುವ ಜಾತಿ-ಮಹಿಳಾ ದೌರ್ಜನ್ಯಗಳು ಮತ್ತು ಅಸ್ಪೃಶ್ಯತೆಯ ಪ್ರಕರಣಗಳು ಇದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇವೆ. ʼ ಹೀಗಾಗಬಾರದಿತ್ತು ʼ ಎಂದು ಪರಿತಪಿಸುವ ಮೇಲ್ಜಾತಿ ಸಮಾಜವೂ ನಮ್ಮ ನಡುವೆ ಇದೆ, ಇಂತಹ ದೌರ್ಜನ್ಯಗಳನ್ನು ಖಂಡಿಸುವ ಧ್ವನಿಗಳೂ ಈ ಸಮಾಜದಿಂದಲೇ ಕೇಳಿಬರುತ್ತವೆ ಆದರೆ ತಳಪಾಯದಿಂದಲೇ ಹರಿಯುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕ್ರೂರ ಮನಸ್ಥಿತಿಗೆ ಈ ಸಣ್ಣ ಸಮಾಜ ಭಂಗ ಉಂಟುಮಾಡುವುದಿಲ್ಲ. ಏಕೆಂದರೆ ಈ ಕ್ರೌರ್ಯ ಮತ್ತು ಅಮಾನುಷ ಅನಾಚಾರವನ್ನು ಕಾಪಾಡುವ ವಿಶಾಲ ಸಮಾಜವೊಂದು ಸಕ್ರಿಯವಾಗಿದೆ. ಇದನ್ನು ಸಾಂಸ್ಕೃತಿಕ ರಾಜಕಾರಣದ ಶಕ್ತಿಗಳು ನಿರ್ದೇಶಿಸುತ್ತವೆ.

ಚರಿತ್ರೆಯನ್ನು ಮರೆಯದಿರೋಣ

 ಮರಕುಂಬಿ ತೀರ್ಪನ್ನು ಸ್ವಾಗತಿಸಿ, ಸಂಭ್ರಮಿಸುತ್ತಲೇ ಒಂದು ಕ್ಷಣ ಕಣ್ಮುಚ್ಚಿದರೆ ನಮ್ಮ ಮುಂದೆ ಕೈಮುಗಿದು ನಿಂತ ಕಂಬಾಲಪಲ್ಲಿಯ ಅಸಹಾಯಕ ಅಜ್ಜ ಪ್ರತ್ಯಕ್ಷವಾಗುತ್ತಾನೆ. ಖೈರ್ಲಾಂಜಿಯ ಭೂತಮಾಂಗೆ ಕುಟುಂಬ ಎದುರಾಗುತ್ತದೆ. ಹಾಥ್ರಸ್‌ನಲ್ಲಿ ಸುಟ್ಟುಹೋದ ಅಮಾಯಕ ಬಾಲೆ ನೆನಪಾಗುತ್ತಾಳೆ. ಈ ಘಟನೆಗಳಲ್ಲಿ ಆವರಿಸಿದ್ದ ಕಾರ್ಗತ್ತಲ ಮಾರ್ಗದಲ್ಲಿ ಬೆಳಕಿನ ಒಂದು ಸೀಳುಹಾದಿ ಕಾಣಿಸುವ ಹಾಗೆ ಮರಕುಂಬಿ ತೀರ್ಪು ನಮಗೆ ಕಾಣಬೇಕಿದೆ. ತುಳಿತಕ್ಕೊಳಗಾದ ಶೋಷಿತ ಸಮುದಾಯಗಳಿಗೆ ಸಂವಿಧಾನದ ರಕ್ಷಣೆ ಮತ್ತು ಸಾಂತ್ವನ ಇರುವುದನ್ನು ಭಾರತದ ನ್ಯಾಯಾಂಗ ಪದೇಪದೇ ಖಚಿತಪಡಿಸುತ್ತಲೇ ಇದೆ. ಆದರೆ ಈ ಸಾಂತ್ವನದ ವಾತಾವರಣವನ್ನು ಕಲುಷಿತಗೊಳಿಸುವ ಒಂದು ವಿಕೃತ ಸಮಾಜವೂ ತನ್ನ ಅಮಾನುಷತೆಯನ್ನು ಮತ್ತೆಮತ್ತೆ ಪ್ರದರ್ಶಿಸುತ್ತಲೇ ಇದೆ.

 ಇದೊಂದು ಸಾಮಾಜಿಕ ವ್ಯಾಧಿ, ಸಾಂಸ್ಕೃತಿಕ ವ್ಯಸನ. ಅಂಬೇಡ್ಕರ್‌ ಅವರಂತಹ ಚಿಕಿತ್ಸಕ ಗುಣದ ವ್ಯಕ್ತಿತ್ವಗಳಿಂದ ವಂಚಿತವಾಗಿರುವ 21ನೆಯ ಶತಮಾನದ ಭಾರತ ಈ ವ್ಯಸನದ ವಿರುದ್ಧ ಹೋರಾಡಲು ಅದೇ ಸಾಮಾಜಿಕ ವೈದ್ಯನನ್ನೇ ಮತ್ತೆಮತ್ತೆ ಆಶ್ರಯಿಸಬೇಕಿದೆ. ಈ ಹಾದಿಯನ್ನು ಸುಗಮಗೊಳಿಸಬೇಕಾದ ಜವಾಬ್ದಾರಿ ನಾಗರಿಕರ ಮೇಲಿದೆ. ಈ ನೊಗವನ್ನು ಹೊರಬೇಕಾದ ನೈತಿಕ ಹೊಣೆಗಾರಿಕೆ ಮಾರ್ಕ್ಸ್‌, ಅಂಬೇಡ್ಕರ್‌, ಲೋಹಿಯಾ, ಗಾಂಧಿ , ಫುಲೆ ಮುಂತಾದವರನ್ನು ಅನುಸರಿಸುವ ಪ್ರಜ್ಞಾವಂತ ನಾಗರಿಕರ ಮೇಲಿದೆ. ಮರಕುಂಬಿಯನ ತೀರ್ಪನ್ನು ಸ್ವಾಗತಿಸೋಣ, ಕೊಪ್ಪಳವನ್ನು ಸ್ಮರಿಸುತ್ತಿರೋಣ ಆದರೆ ಕಂಬಾಲಪಲ್ಲಿಯನ್ನು ಮರೆಯದಿರೋಣ.

-೦-೦-೦-೦

Tags: #koppaldr rajah v koppalaKoppalkoppal 98 aaropi newskoppal arson incidentkoppal dckoppal district newskoppal latest newskoppal newskoppal today newskoppal violenceKoppalakoppala courtkoppala court judgementkoppala districtkoppala gangavathi marakumbi casekoppala latest newskoppala marakumbikoppala newskoppala news todaykoppala news updateskoppala today newskoppala townlegal action koppallife sentence koppal
Previous Post

ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3ಎ ಸೇರಿಸಿದ್ದು ಸರಿಯಲ್ಲ:ಸಿಎಂ

Next Post

ಬಿಗ್ ಮನೆಯಿಂದ ಮಾನಸ ಔಟ್ ? ನಾಲ್ಕನೇ ವಾರಕ್ಕೆ ಹೊರಬಂದ್ರ ತುಕಾಲಿ ಪತ್ನಿ?

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
ಪಂಜಾಬ್ ನ ಕಾನೂನು ಕಾಲೇಜಿನಲ್ಲಿ ಭಯಂಕರ ದುರ್ಘಟನೆ

ಪಂಜಾಬ್ ನ ಕಾನೂನು ಕಾಲೇಜಿನಲ್ಲಿ ಭಯಂಕರ ದುರ್ಘಟನೆ

February 10, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ಬಿಗ್ ಮನೆಯಿಂದ ಮಾನಸ ಔಟ್ ? ನಾಲ್ಕನೇ ವಾರಕ್ಕೆ ಹೊರಬಂದ್ರ ತುಕಾಲಿ ಪತ್ನಿ?

ಬಿಗ್ ಮನೆಯಿಂದ ಮಾನಸ ಔಟ್ ? ನಾಲ್ಕನೇ ವಾರಕ್ಕೆ ಹೊರಬಂದ್ರ ತುಕಾಲಿ ಪತ್ನಿ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada