ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಕೆ. ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ.ಬಹುಸಮಯದ ಬಳಿಕ ಕರಾವಳಿ ನಗರಿ ಮಂಗಳೂರಿನಲ್ಲಿ ರಕ್ತದೋಕುಳಿ ಹರಿದಿದ್ದು, ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ, ಉಳ್ಳಾಲದ ರೌಡಿಶೀಟರ್ ಕಡಪ್ಪರ ಸಮೀರ್ ನನ್ನು ದುಷ್ಕರ್ಮಿಗಳ ಗ್ಯಾಂಗ್ ವೊಂದು ಕೊಲೆಗೈದು ಪರಾರಿಯಾಗಿದೆ.
ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕೆ ಫರ್ನಿಚರ್ ಬಳಿ ಘಟನೆ ನಡೆದಿದ್ದು, ಸಮೀರ್ ಭಾನುವಾರ ರಾತ್ರಿ ತಾಯಿ ಜೊತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟ್ ಫುಡ್ ವೊಂದಕ್ಕೆ ಊಟಕ್ಕಾಗಿ ತೆರಳಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ. ಸಮೀರ್ ಕಾರು ಇಳಿಯುತ್ತಿದ್ದಂತೆ ಆತನ ಕಾರ್ ಅನ್ನೇ ಮತ್ತೊಂದು ಕಾರು ಬೆನ್ನಟ್ಟಿ ಬಂದಿದ್ದು ಅಪಾಯವನ್ನು ಅರಿತ ಸಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದ್ದಾನೆ.
ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್ನಿಂದ 500 ಮೀಟರ್ ದೂರದಲ್ಲಿರುವ ವಿ.ಕೆ. ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿ, ಅಲ್ಲಿ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದೆ. 2018 ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ನನ್ನು ಜೆಪ್ಪುವಿನ ಫ್ಲಾಟ್ವೊಂದರಲ್ಲಿ ದಾವುದ್, ಸಮೀರ್, ರಿಯಾಝ್, ನಮೀರ್, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿಕೊಂಡು ಕೊಲೆ ಮಾಡಿದ್ದರು.
ಮಾರಣಾಂತಿಕ ಹಲ್ಲೆ ಘಟನೆಯ ಬೆನ್ನಲ್ಲೇ ಕಲ್ಲಾಪು ಜಂಕ್ಷನ್ ನಲ್ಲಿ ಜನಸ್ತೋಮವೇ ನೆರೆದಿದ್ದು ತಪ್ಪಿಸಿಕೊಂಡಿರುವ ರೌಡಿಶೀಟರ್ ಸಮೀರ್ ಗಾಗಿ ಹುಡುಕಾಟ ನಡೆಸಿದ್ದು, ತಡರಾತ್ರಿ ಸಮೀರ್ ಮೃತ ದೇಹವು ವಿಕೆ ಫರ್ನಿಚರ್ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ. ಕೊಲೆ ಸಂಬಂಧ ಜೈಲುಪಾಲಾಗಿದ್ದ ಸಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ. ಕಳೆದ ಜುಲೈ 1ರಂದು ಸಮೀರ್ ಹಾಗೂ ಆತನ ಸಹಚರ ಮೊಹ್ಮದ್ ಮನ್ಸೂರ್ ನನ್ನು ಕೊಡಿಯಾಲ್ ಬೈಲ್ ನ ಸಬ್ ಜೈಲಿನಲ್ಲಿ ಹತ್ತು ತಂಡವೊಂದು ಚಮಚ ಸೇರಿದಂತೆ ಇತರ ಕಿಚನ್ ಸಾಮಾಗ್ರಿಗಳಿಂದ ಕೊಲೆಗೆ ಯತ್ನಿಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ತಿಂಗಳು ಕಳೆದ ಬಳಿಕ ಸಮೀರ್ ಹೊರಬಂದಿದ್ದು, ಬೀದಿ ಹೆಣವಾಗಿದ್ದಾನೆ.