ಹುಬ್ಬಳ್ಳಿ: ನಗರದಲ್ಲಿ ನೇಹಾ ಹಿರೇಮಠ (Neha Hiremath Murder Case) ಕೊಲೆ ಇತ್ತೀಚೆಗಷ್ಟೇ ನಡೆದಿತ್ತು. ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಕೊಲೆಯ ನೆನಪು ಮಾಸುವ ಮುನ್ನವೇ ಮತ್ತೆ ಅಂತಹ ಕೊಲೆಯೊಂದು ಬೆಳಕಿಗೆ ಬಂದಿದೆ.
ಇಂದು ಬೆಳಗಿನ ಜಾವ ಪಾಪಿಯೊಬ್ಬ ಯುವತಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಅಂಜಲಿ ಅಂಬಿಗೇರ (Anjali Ambigera) ಎಂದು ಗುರುತಿಸಲಾಗಿದೆ. ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಈ ಕೃತ್ಯ ಎಸಗಿದ ಪಾಪಿ. ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ.
ನೀನು ನಾನು ಕರೆದಾಗಲೆಲ್ಲ ಬರಬೇಕು. ಇಲ್ಲವಾದರೆ ನೇಹಾ ಮಾದರಿಯಲ್ಲಿಯೇ ಕೊಲೆ ಮಾಡುತ್ತೇನೆ ಎಂದು ಆರೋಪಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಅದರಂತೆಯೇ ಬುಧವಾರ ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ, ಮನೆಯವರ ಎದುರೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ವಿಶ್ವ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ಮೇಲೆ ಹಲವಾರು ಕಳ್ಳತನದ ಆರೋಪಗಳಿವೆ. ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ. ಅಂಜಲಿಗೆ ಆತ ಧಮ್ಕಿ ಹಾಕುತ್ತಿದ್ದ ವಿಚಾರವನ್ನು ಅಜ್ಜಿ ಗಂಗಮ್ಮ ಪೊಲೀಸರಿಗೆ ಹೇಳಿದ್ದರು. ಆದರೆ, ಪೊಲೀಸರು ಈ ವಿಷಯವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಈ ನಿರ್ಲಕ್ಷ್ಯ ಸದ್ಯ ಕೊಲೆಯಾಗುವಂತಾಗಿದೆ. ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದಾರೆ .