ವಿಜಯಪುರದ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಜಮೀನಿನಲ್ಲಿ ಎರಡು ವರ್ಷದ ಮಗು ಸಾತ್ವಿಕ್ ಕೊಳವೇ ಬಾವಿಗೆ ಬಿದ್ದ ಘಟನೆ ನಡೆದಿದೆ. ಸಂಜೆ ೫ ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಈಗಾಗಲೇ ಮಗುವನ್ನ ರಕ್ಷಿಸುವ ಕಾರ್ಯಾಚರಣೆ ಆರಂಭವಾಗಿದೆ. ತಮ್ಮದೇ ಜಮೀನಿನಲ್ಲಿ ಕೊರೆಸಲಾಗಿದ್ದ ಸುಮಾರು ೨೫೦ ಅಡಿ ಆಳದ ಬಾವಿಗೆ ಮಗು ಬಿದ್ದಿದ್ದು ೧೫ ರಿಂದ ೨೦ ಅಡಿ ಆಳದಲ್ಲಿ ಮಗು ಸಿಲುಕಿದೆ ಎನ್ನಲಾಗ್ತಿದೆ.

ನಿನ್ನೆಯಷ್ಟೇ ಶಂಕರಪ್ಪ ಈ ಮಗುವಿನ ಅಜ್ಜ ಈ ಕೊಳವೆ ಬಾವಿಯನ್ನ ಕೊರೆಸಿದ್ದರು . ನೀರು ಸಿಗದ ಕಾರಣ ಕೊಳವೆ ಬಾವಿಯನ್ನ ಮುಚ್ಚದೆ ಹಾಗೇ ಬಿಡಲಾಗಿತ್ತು. ಇಂದು ಆಟ ಆಡಲು ಜಮೀನಿಗೆ ತೆರಳಿದ್ದ ಮಗು ಸಾತ್ವಿಕ್ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದು ಈ ಅವಘಡ ಸಂಭವಿಸಿದೆ. ಮಾಹಿತಿ ಲಭ್ಯವಾಗ್ತಿದ್ದಂತೆ ಸ್ಥಳಕ್ಕೆ ಧೌಡಾಯಿಸಿದ ಅಧಿಕಾರಿಗಳ ತಂಡ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಗು ಸದ್ಯಕ್ಕೆ ಸುರಕ್ಷಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು , ಆಕ್ಸಿಜನ್ ಪೂರೈಕೆ ಸೇರಿದ ಹಾಗೇ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾರ್ಯಾಚರಣೆ ಆರಂಭಿಸಿದ್ದಾರೆ. ೨ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗ್ತಿದ್ದು ಈಗಾಗಲೇ 10 ಅಡಿಗಳ ವರೆಗೆ ತಲುಪಲಾಗಿದ್ದು , ಬಂಡೆ ಅಡ್ಡಿಯಾಗಿದೆ. ಬಂಡೆಯನ್ನು ಕೊರೆದು ಕಾರ್ಯಾಚರಣೆ ಮುಂದುವರೆಸಲಾಗ್ತಿದೆ. ಕ್ಯಾಮೆರಾದಲ್ಲಿ ಮಗುವಿನ ಚಲನವಲನ ಕಂಡುಬಂದಿದ್ದು , ಮಗು ಸಾತ್ವಿಕ್ ಬದುಕಿ ಬರಲಿ ಎಂದು ಎಲ್ಲೆಡೆ ಪ್ರಾರ್ಥಿಸಲಾಗಿದೆ.